ಪ್ರವಾಹ ಪೀಡಿತರ ಬಗ್ಗೆ ಕೀಳಾಗಿ ಮಾತನಾಡುವ ಸುರೇಶ್ ಕೊಚ್ಚಟ್ಟಿಲ್ ಯಾರು?

೨೦೧೪ರ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ನೇಮಿಸಿದ್ದ ಸಾಮಾಜಿಕ ಜಾಲತಾಣ ಅಭಿಯಾನದ ಹೈದರಾಬಾದ್ ಮುಖ್ಯಸ್ಥ ಸುರೇಶ್ ಕೊಚ್ಚಾಟ್ಟಿಲ್ ಈಗ ಕೇರಳ ಪ್ರವಾಹಪೀಡಿತರ ಕುರಿತಂತೆ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಅವರು ಹಿಂದೆ ನಮೋ ಬ್ರಾಂಡ್ ಕಟ್ಟಿದ ಬಗ್ಗೆ ಹೇಳಿದ ಮಾತುಗಳು ಇಲ್ಲಿವೆ

ನರೇಂದ್ರ ಮೋದಿಯವರ ಜೀವನಗಾಥೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳುವ ಆಲೋಚನೆ ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ನಂತರ ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ಮೋದಿ ಪ್ರಧಾನಿಯಾದ ಯಶಸ್ಸಿನ ಕತೆ ಪಠ್ಯವಾಗಲಿಲ್ಲ. ಭಾರತದ ಪ್ರಮುಖ ವಾಣಿಜ್ಯ ಕಲಿಕಾ ಕೇಂದ್ರವಾಗಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಬಿಸ್ನೆಸ್ ಮ್ಯಾನೇಜ್‍ಮೆಂಟ್ (ಐಐಎಂ), ಇಂಡಿಯನ್ ಸ್ಕೂಲ್ ಆಫ್ ಬಿಸ್ನೆಸ್ (ಐಎಸ್‍ಬಿ), ಎಕ್ಸ್‌ಎಲ್‌ಆರ್‌ಐ ಮತ್ತು ಎಂಡಿಐ ಗುರುಗಾಂವ್ ಮುಂತಾದ ಶಿಕ್ಷಣ ಸಂಸ್ಥೆಗಳು ಪ್ರಧಾನಮಂತ್ರಿಗಳ ಭರ್ಜರಿ ಚುನಾವಣಾ ಯಶಸ್ಸನ್ನು ಅಧ್ಯಯನ ಮಾಡುವ ಅವಕಾಶ ಪಡೆದುಕೊಂಡಿದ್ದರು. ಹೀಗೆ, ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಬಿಜೆಪಿಯ ಉತ್ಪನ್ನವಾದ ‘ನಮೋ ಬ್ರಾಂಡ್‌’ ಹೇಗೆ ಸಿದ್ಧವಾಯಿತು ಎನ್ನುವುದು ವಿದ್ಯಾರ್ಥಿಗಳಿಗೆ ಓದಿನ ವಸ್ತುವಾಯಿತು.

ನಮೋ ಬ್ರಾಂಡ್ ನಿರ್ಮಾಣದಲ್ಲಿ ತೊಡಗಿದವರು ಇಂದಿಗೂ ತಮ್ಮ ಬ್ರಾಂಡ್ ಮೌಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ಮೋದಿಯವರ ವಿಶೇಷ ಸಾಮಾಜಿಕ ಮಾಧ್ಯಮ ಅಭಿಯಾನದ ಹೈದರಾಬಾದ್ ಘಟಕದ ಮುಖ್ಯಸ್ಥರಾದ ಸುರೇಶ್ ಕೊಚ್ಚಾಟ್ಟಿಲ್ ಇತ್ತೀಚೆಗೆ ಕೇರಳದ ಪ್ರವಾಹ ಪೀಡಿತರ ಬಗ್ಗೆ ತಾರತಮ್ಯದ ಮಾತುಗಳಿಂದ ಸುದ್ದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ನಾಲ್ಕು ವರ್ಷಗಳ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ವಿವರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚಾಲ್ತಿಗೆ ಬಂದಿವೆ. ಜಾಹಿರಾತು ಏಜೆನ್ಸಿಗಳಿಂದ, ಕಾಲೇಜುಗಳಿಂದ, ಕ್ಲಬ್ಬುಗಳಿಂದ ಮತ್ತು ಟೆಕ್ಕಿಗಳಿಂದ ನಮೋ ಬ್ರಾಂಡ್ ಹೇಗೆ ನಿರ್ಮಾಣವಾಯಿತು ಎಂದು ವಿವರಿಸುವ ಕಾರ್ಯದಲ್ಲಿ ತಾವು ತೊಡಗಿದ್ದೇವೆ ಎಂದು ಬಿಜೆಪಿ ಅಧಿಕಾರಕ್ಕೆ ಬಂದ ಕೆಲವು ತಿಂಗಳ ನಂತರ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು.

ನಮೋ ಬ್ರಾಂಡ್‌ ನಿರ್ಮಾಣ

ಸುರೇಶ್ ಅವರು ಜಾಹಿರಾತು ಮಂದಿಗೆ ಕೇಳಿದ್ದಿಷ್ಟು: "ಗುಜರಾತಿನ ಹೊರಗೆ ಪರಿಚಿತವಲ್ಲದ ಬ್ರಾಂಡ್ ಒಂದನ್ನು ರಾಷ್ಟ್ರೀಯ ಬ್ರಾಂಡ್ ಆಗಿ ಹೇಗೆ ಪರಿವರ್ತಿಸುತ್ತೀರಿ? ನರೇಂದ್ರ ಮೋದಿ ಒಂದು ಉತ್ಪನ್ನ ಎಂದು ಇಟ್ಟುಕೊಂಡರೆ ಆರಂಭದಲ್ಲಿ ಗುಜರಾತಿನಲ್ಲಿ ಹುಟ್ಟಿ ತದನಂತರದಲ್ಲಿ ಇಡೀ ದೇಶದ ಬ್ರಾಂಡ್ ಆಗಿ ಪರಿವರ್ತನೆಯಾದ ನಿರ್ಮಾ ವಾಷಿಂಗ್ ಡಿಟರ್ಜಂಟ್ ಉತ್ಪನ್ನದೊಂದಿಗೆ ಮೋದಿಯವರನ್ನು ಹೇಗೆ ಹೋಲಿಸುತ್ತೀರಿ?"

ಇದನ್ನು ಸಾಧ್ಯವಾಗಿಸಬೇಕಾದರೆ ಅತ್ಯುತ್ತಮವಾಗಿ ಜಾಹಿರಾತು ಮಾಡಬಲ್ಲ ವ್ಯಕ್ತಿಗಳನ್ನು ನೇಮಿಸಿಕೊಳ್ಳಬೇಕು. ಓಗಿಲ್ವಿ ಅಂಡ್ ಮ್ಯಾಥರ್ ಕಂಪನಿಯ ಪಿಯೂಶ್ ಪಾಂಡೆ, ಮ್ಯಾಕನ್ ವರ್ಲ್ಡ್‌ ಗ್ರೂಪ್‌ನ ಪ್ರಸೂನ್ ಜೋಶಿ ಮತ್ತು ಮ್ಯಾಡಿಸನ್ ವರ್ಲ್ಡ್‌ ಸಂಸ್ಥೆಯ ಸ್ಯಾಮ್ ಬಲ್ಸಾರಾ ಅಂಥವರನ್ನು ನೇಮಿಸಿಕೊಳ್ಳಬೇಕು. ಅಸಲಿಗೆ, ‘ಅಬ್ ಕಿ ಬಾರ್ ಮೋದಿ ಸರ್ಕಾರ್,’ ‘ಜನತಾ ಮಾಫ್ ನಹೀ ಕರೇಗಿ’ ಮತ್ತು ‘ಅಚ್ಛೇ ದಿನ್ ಆನೆವಾಲೆ ಹೈ’ ಮುಂತಾದ ಆಕರ್ಷಕ ಪದಪುಂಜಗಳ ಘೋಷವಾಕ್ಯಗಳನ್ನು ಸೃಷ್ಟಿಸಿದವರು ಇಂತಹ ಜಾಹೀರಾತು ಪ್ರಚಾರಗಳ ಪ್ರಮುಖರೇ ಎನ್ನುವುದು ವಿಶೇಷ.

ಈ ಪ್ರತಿಭೆಗಳು ಆಗ ಬಿಜೆಪಿಯ ನಾಯಕರಾದ ಪಿಯೂಶ್ ಗೋಯಲ್, ಅಜಯ್ ಸಿಂಗ್ ಅವರ ಪ್ರಭಾವದಲ್ಲಿದ್ದವು; ಅಷ್ಟೇ ಏಕೆ, "ಉದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರದಂತಹ ನೈಜ ಸಮಸ್ಯೆಗಳ ಮೇಲೆ ಗಮನ ಕೊಡಿ ಹಾಗೂ ಹೈದಿನೈದು ಕೋಟಿ ಹೊಸ ಮತದಾರರು ಮತದಾನ ಮಾಡುವಂತೆ ನೋಡಿಕೊಳ್ಳಿ," ಎಂದು ಸ್ಪಷ್ಟವಾಗಿ ಹೇಳುತ್ತಿದ್ದ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲೂ ಬ್ರಾಂಡ್ ನಿರ್ಮಾಣದ ಕೆಲಸವಾಗಿದೆ.

ಪ್ರಧಾನಿ ಮೋದಿ ಯೋಜನೆಯಂತೆ ಈ ಹೊಸ ಮತದಾರರ ಪೈಕಿ ಶೇಕಡ 70ರಷ್ಟು ಮಂದಿ ಮತದಾನ ಮಾಡಿದರು. "ಅದು ಸಾಧ್ಯವಾಗಿದ್ದು ಡಿಜಿಟಲ್ ಅಭಿಯಾನದ ಕಾರಣಕ್ಕೆ. ಈ ಹದಿನೈದು ಕೋಟಿ ಜನರಲ್ಲಿ ಬಹುತೇಕರು ಸಾಮಾಜಿಕ ಮಾಧ್ಯಮವನ್ನು ನಿರಂತರವಾಗಿ ಬಳಸುತ್ತಿರುವ ಜನರು. ಎಂಟು ಹೈದರಾಬಾದಿಗಳನ್ನೊಳಗೊಂಡ ಒಂದು ವಿಶೇಷ ತಂಡವನ್ನು ನಾವು ರಚಿಸಿದ್ದೆವು. ಹೈದರಾಬಾದ್, ಇಂಗ್ಲೆಂಡ್‌ ಮತ್ತು ಅಮೆರಿಕದಲ್ಲಿದ್ದ ಈ ತಂಡದ ಸದಸ್ಯರು ಮೋದಿ ವಿರೋಧಿ ಪೋಸ್ಟುಗಳನ್ನು ನಿಭಾಯಿಸುತ್ತಿದ್ದರು," ಎನ್ನುತ್ತಾರೆ ಸುರೇಶ್. ಹೀಗೆ, ಪ್ರಧಾನಿ ಮೋದಿಗಾಗಿ ಸುರೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ, ನೆಲಮಟ್ಟದಲ್ಲೂ ಪ್ರಚಾರ ಮಾಡಿದವರು.

ಹಣ ಮತ್ತು ಸಾಮಾಜಿಕ ಮಾಧ್ಯಮ ಮಾತ್ರ ಅಲ್ಲ!

ಬಿಜೆಪಿಯ ಮಾಧ್ಯಮ ಅಭಿಯಾನಕ್ಕೆ 500 ಕೋಟಿ ರೂಪಾಯಿಗಿಂತ ಕಡಿಮೆ ಖರ್ಚಾಗಿತ್ತು ಎಂದು ಮ್ಯಾಡಿಸನ್‍ನ ಸ್ಯಾಮ್ ಬಲ್ಸಾರಾ ಇತ್ತೀಚೆಗಷ್ಟೆ ಬಹಿರಂಗಪಡಿಸಿದ್ದರು. “ಬಿಜೆಪಿಯ ಚುನಾವಣೋತ್ತರ ವಿಶ್ಲೇಷಣೆಯನ್ನು ಮಾಡಿಲ್ಲವಾದರೂ ಖರ್ಚಾದ ಒಟ್ಟು ಹಣದಲ್ಲಿ ಶೇ.5ರಷ್ಟು ಸಾಮಾಜಿಕ ಮಾಧ್ಯಮ, ಶೇ.35ರಷ್ಟು ಟಿವಿ ಜಾಹಿರಾತು, ಶೇ.20ರಷ್ಟು ಬಹಿರಂಗ ಅಭಿಯಾನ ಹಾಗೂ ಶೇ.40ರಷ್ಟು ಮುದ್ರಣ ಮಾಧ್ಯಮ ಕಾರ್ಯತಂತ್ರಗಳಿಗೆ ಖರ್ಚು ಮಾಡಲಾಯಿತು,” ಎಂದು ಸಂದರ್ಶನದಲ್ಲಿ ಸುರೇಶ್ ವಿವರ ನೀಡಿದ್ದರು.

"ಸಿಎಜಿ (ಸಿಟಿಜೆನ್ಸ್ ಫಾರ್ ಅಕೌಂಟೇಬಲ್ ಗವರ್ನೆನ್ಸ್) ರೀತಿಯ ಹಲವು ಸ್ವಯಂಸೇವಕ ಸಂಘಟನೆಗಳು ಇಂಡಿಯಾ 272+, ಐಕ್ಯತಾ ಮೂರ್ತಿ, ದಿ ಇಂಡಿಯನ್ ರಿಪಬ್ಲಿಕ್, ಸನ್ವಾದ್, ಸಂಕಲ್ಪ್, ಶ್ರೇಷ್ಠ ಭಾರತ್, ಯಂಗ್ ಇಂಡಿಯನ್ ಲೀಡರ್ಸ್ ಕನ್‍ಕ್ಲೇವ್, ಮಂಥನ್, ವಿಜಯ್ ಸಂಕಲ್ಪ್ ದಿವಸ್ ಥರದ ಸಾವಿರಾರು ಪರಿಕಲ್ಪನೆಗಳನ್ನು ಹುಟ್ಟುಹಾಕಿದ್ದಲ್ಲದೆ, ತ್ರಿಡಿ ಹೋಲೋಗ್ರಾಮ್ ಅಭಿಯಾನವನ್ನೂ ನಡೆಸಿದವು," ಎಂದು ಸುರೇಶ್ ವಿವರ ನೀಡಿದ್ದರು. ‘ಚಾಯ್ ಪೆ ಚರ್ಚಾ’ ಪರಿಕಲ್ಪನೆಯನ್ನು ಹುಟ್ಟುಹಾಕಿ ಪ್ರೇಕ್ಷಕರಿಗೆ "ಸರಿಯಾದ ಅವಕಾಶಗಳನ್ನು ಗುರುತಿಸಿ," ಎಂದು ಹೇಳಿದ್ದು ಸುರೇಶ್ ಅವರೇ!

"ಕಾಂಗ್ರೆಸ್ ಅಧಿವೇಶನದಲ್ಲಿ ಮೋದಿಯವರು ಮುಕ್ತವಾಗಿ ಚಹಾ ಮಾರಬಹುದು,” ಎಂದು (ಕಾಂಗ್ರೆಸ್ಸಿನ) ಮಣಿಶಂಕರ್ ಅಯ್ಯರ್ ಹೇಳಿದ ತಕ್ಷಣ, ಯಾಕೆ ಈ ಅವಕಾಶವನ್ನು ಬಳಸಿಕೊಳ್ಳಬಾರದು ಎಂದು ಸಿಎಜಿ ಜನರು ಯೋಚಿಸಿದರು. ಎರಡೇ ದಿನದಲ್ಲಿ ಅವರು ಮೋದಿಯವರ ಜೊತೆ ಮೊದಲ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಆಯೋಜಿಸಿಯೇಬಿಟ್ಟರು. ಅಲ್ಲಿಂದ ಶುರುವಾಗಿ 4000 ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮಗಳು ನಡೆದವು. ಅದು ನೇರವಾಗಿ ಜನಸಾಮಾನ್ಯರ ಹೃದಯತಂತಿಯನ್ನು ಮೀಟಿತು. ನಿಜ ಹೇಳಬೇಕೆಂದರೆ, ಬಿಜೆಪಿ ಗೆಲುವಿನ ನಂತರ ಮಣಿಶಂಕರ್ ಅಯ್ಯರ್ ಅವರಿಗೆ ಹೂಬುಟ್ಟಿ ನೀಡಬೇಕಿತ್ತು," ಎಂದು ಸುರೇಶ್ ಸಂಭ್ರಮಿಸಿದ್ದಾರೆ. ಮೋದಿ ಅವರ ಬ್ರಾಂಡ್ ನಿರ್ಮಾಣದ ಪ್ರಚಾರ ಅಭಿಯಾನಕ್ಕೆ ಸುಮಾರು 15ರಿಂದ 20 ಲಕ್ಷ ಮಂದಿ ಸ್ವಯಂಸೇವಕರು ದುಡಿದಿದ್ದಾರೆ. ಅದನ್ನು ಹಣವಾಗಿ ನೋಡಿದರೆ ಕೋಟಿ ಕೋಟಿ ರೂಪಾಯಿ ವೇತನವಾಗಿ ನೀಡಬೇಕಿತ್ತು!

ಇದನ್ನೂ ಓದಿ : ಯುಪಿಎ ಅವಧಿಯಲ್ಲಿ ಜಿಡಿಪಿ ಹೆಚ್ಚಳ; ಮೋದಿ ಸರ್ಕಾರ ತಕರಾರು ಎತ್ತುತ್ತಿರುವುದೇಕೆ?

ಅನನ್ಯ ಮಾರಾಟ ಮಾದರಿ

ನಿಮ್ಮ ಅಭಿಯಾನದ ಯೋಜನೆ ಎಷ್ಟೇ ವಿಸ್ತಾರವಾಗಿದ್ದರೂ ಅದಕ್ಕೆ ಯುಎಸ್‍ಪಿ (ಯೂನಿಕ್ ಸೆಲ್ಲಿಂಗ್ ಪ್ರಪೋಜಿಷನ್) ಅಥವಾ ಜನಾಕರ್ಷಣೆ ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. "ಚುನಾವಣೆಗೆ ಮೊದಲು ಒಂಬತ್ತು ತಿಂಗಳಲ್ಲಿ ಮೋದಿಯವರು ಜನರೊಂದಿಗೆ ಮಾತಾಡುತ್ತ, ಅವರನ್ನು ಭೇಟಿಯಾಗಿ 25 ರಾಜ್ಯಗಳಲ್ಲಿ 3 ಲಕ್ಷ ಕಿಮೀ ಪ್ರಯಾಣ ಮಾಡಿದ್ದರು. ಪ್ರತಿದಿನ ಅವರು 6 ಭಾಷಣಗಳಲ್ಲಿ ಭಾಗವಹಿಸಿದ್ದರು. ಪ್ರತಿ ಸಭೆಯಲ್ಲೂ ಭಾಷಣ ಭಿನ್ನವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಮಾಧ್ಯಮಗಳೂ ಇವುಗಳನ್ನು ನೇರ ಪ್ರಸಾರ ಮಾಡಿ ನರೇಂದ್ರ ಮೋದಿಯವರಿಗೆ ಸಾಥ್ ನೀಡಿದ್ದವು” ಎಂದು ಸುರೇಶ್ ಬಿಜೆಪಿ ಗೆಲುವಿನ ನಂತರ ಹೆಮ್ಮೆಯಿಂದ ಹೇಳಿಕೊಂಡಿದ್ದರು.

"ದೇಶದ ಯಾವ ಭಾಗದಲ್ಲಿದ್ದರೂ ಸರಿ, ತ್ರಿಡಿ ಹೋಲೋಗ್ರಾಮ್ ಪ್ರೊಡಕ್ಷನ್ ಶುರುವಾಗುವ ಒಂದು ತಾಸು ಮುಂಚೆ ಅಹಮದಾಬಾದ್‌ನಲ್ಲಿ ಮೋದಿ ಸಿದ್ಧವಾಗುತ್ತಿದ್ದರು. ದೇಶಾದ್ಯಂತ ಒಟ್ಟು 1,350 ತ್ರಿಡಿ ಭಾಷಣ ಆಯೋಜಿಸಲಾಗಿತ್ತು," ಎನ್ನುತ್ತಾರೆ ಸುರೇಶ್.

"ಗೋಧ್ರಾ ಗಲಭೆಗಳ ನಂತರ ತಮ್ಮ ಬೆನ್ನುಬಿದ್ದಿದ್ದ ಸಿಎನ್‍ಎನ್-ಐಬಿಎನ್ ಅಥವಾ ಎನ್‍ಡಿಟಿವಿಗೆ ಮೋದಿ ಎಂದೂ ಸಂದರ್ಶನ ಕೊಡಲಿಲ್ಲ. ಇಂಗ್ಲಿಷ್ ಟಿವಿ ಚಾನೆಲ್‌ಗಳು ದೇಶದ ಕೇವಲ ಶೇ.ರಷ್ಟು ಜನರನ್ನು ಮಾತ್ರ ತಲುಪುತ್ತವೆ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಹೀಗಾಗಿ, ಮೋದಿ ಬ್ರಾಂಡ್ ನಿರ್ಮಾಣಕಾರರು ಹಿಂದಿ ಮತ್ತು ಸ್ಥಳೀಯ ಭಾಷೆಗಳ ಟಿವಿ ವಾಹಿನಿಗಳ ಕಡೆಗೆ ಗಮನ ಕೊಟ್ಟಿದ್ದರು," ಎಂದು ಸುರೇಶ್ ವಿವರ ನೀಡಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More