ಬಿಜೆಪಿಯ ಹೊಸ ತಂತ್ರ; ಚಾಯ್‌ ಪೆ ಚರ್ಚಾ ಬಳಿಕ ಈಗ ‘ಟಿಫನ್‌ ಪೆ ಚರ್ಚಾ’

ಬಿಜೆಪಿ ತನ್ನ ರಾಜಕೀಯ ಸಿದ್ಧಾಂತ ಹಾಗೂ ಕಾರ್ಯತಂತ್ರವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಮಾರುಕಟ್ಟೆ ತಂತ್ರವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಈಗ ನಾಯಕರು-ಕಾರ್ಯಕರ್ತರನ್ನು ಬೆಸೆಯಲು ಚಾಯ್‌ ಪೆ ಚರ್ಚಾ ಮಾದರಿಯಲ್ಲಿ ‘ಟಿಫನ್‌ ಪೆ ಚರ್ಚಾ’ ಎಂಬ ಹೊಸ ತಂತ್ರ ಹೊಸೆದಿದೆ. ಇದು ಫಲಿಸುವುದೇ?

ಇತ್ತೀಚೆಗೆ ನಡೆದ ಬಹುತೇಕ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಹಾಗಾಗಿ, ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸಂಘಟಿತವಾಗಬಹುದಾದ ವಿರೋಧ ಪಕ್ಷಗಳನ್ನು ಹಣಿಯಲು ರಣತಂತ್ರಗಳನ್ನು ಪ್ರಯೋಗಿಸಲು ಆರಂಭಿಸಿದೆ. ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ದೃಷ್ಟಿಯಿಂದ ಈಗಾಗಲೇ ದೇಶದ ಬಹುತೇಕ ಎಲ್ಲಾ ರಾಜ್ಯಗಳನ್ನೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಂದು ಸುತ್ತು ಹೊಡೆದಿದ್ದಾರೆ. ಹದಿನಾಲ್ಕು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದನ್ನು ಮುಂದೆ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ರೈತರ ಬಹುದಿನ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು, ೨೦೨೨ರ ವೇಳೆಗೆ ರೈತರ ಆದಾಯ ದ್ವಿಗೊಣಗೊಳ್ಳುವುದು” ಎಂದು ಪಶ್ಚಿಮ ಬಂಗಾಳ, ಪಂಜಾಬ್‌ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ಆಯೋಜಿಸಿದ್ದ ರೈತರ ಜಾಥಾಗಳಲ್ಲಿ ಹೇಳುವ ಮೂಲಕ ರೈತ ಸಮುದಾಯದ ಮನಗೆಲ್ಲುವ ಯತ್ನವನ್ನೂ ನಡೆಸಿದ್ದಾರೆ. ಮತ್ತೊಮ್ಮೆ ಅಧಿಕಾರ ಹಿಡಿದೇ ತೀರುವ ಹಠಕ್ಕೆ ಬಿದ್ದಿರುವ ಬಿಜೆಪಿಗೆ, ಗೆಲ್ಲಲು ಇಷ್ಟು ಸಾಲದು ಎಂಬ ಅರಿವಿದೆ. ಇದಕ್ಕಾಗಿ ದೇಶದ ಉದ್ದಗಲಕ್ಕೂ ಕಾರ್ಯಕರ್ತರು ಹಾಗೂ ಕೆಳಹಂತದ ನಾಯಕರ ವಿಶ್ವಾಸ ಭದ್ರಗೊಳಿಸುವ ಕೆಲಸ ಆರಂಭಿಸಿದೆ. ಇದಕ್ಕಾಗಿ ಬಿಜೆಪಿಯು ‘ಟಿಫನ್‌ ಪೆ ಚರ್ಚಾ’ (ಉಪಾಹಾರದ ಜೊತೆ ಚರ್ಚೆ) ಎಂಬ ಸುಧಾರಿತ ರಾಜಕೀಯ ತಂತ್ರ ಹೆಣೆದಿದ್ದು, ಪ್ರಾಯೋಗಿಕವಾಗಿ ಉತ್ತರ ಪ್ರದೇಶದಲ್ಲಿ ಅನುಷ್ಠಾನಕ್ಕೆ ಮುಂದಾಗಿದೆ.

ಆಗಸ್ಟ್ ಎರಡನೇ ವಾರದಲ್ಲಿ ಮೀರತ್‌ನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ‘ಟಿಫನ್‌ ಪೆ ಚರ್ಚಾ’ ನಡೆದಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್‌ ಮೌರ್ಯ, ದಿನೇಶ್‌ ಶರ್ಮಾ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಪಾಲ್ಗೊಂಡಿದ್ದರು. ಈ ನಾಯಕರು ಪಕ್ಷದ ತಳಮಟ್ಟದ ಕಾರ್ಯಕರ್ತರ ಜೊತೆ ಟಿಫನ್‌ ಸವಿದಿದ್ದಾರೆ. ಇದನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಯೋಜನೆಯನ್ನು ಬಿಜೆಪಿ ಹೊಂದಿದ್ದು, ಜಾತಿ, ಪಂಥಗಳನ್ನು ಮೀರಿ ಕಾರ್ಯಕರ್ತರ ಮನಗೆಲ್ಲುವ, ಆ ಮೂಲಕ ಮತಬುಟ್ಟಿ ಭದ್ರಪಡಿಸುವ ವ್ಯವಸ್ಥಿತ ಕಾರ್ಯಕ್ರಮಕ್ಕೆ ಬಿಜೆಪಿ ಮುಂದಾಗಿದೆ.

“ಮೀರತ್‌‌ ಸುತ್ತಮುತ್ತಲಿನ ಕಾರ್ಯಕಾರಿಣಿಗೆ ಆಗಮಿಸಿದ್ದ ಪಕ್ಷದ ಕಾರ್ಯಕರ್ತರಿಗೆ ಮನೆಯಿಂದ ಇಬ್ಬರಿಗೆ ಹಂಚಿಕೊಳ್ಳುವಷ್ಟು ಟಿಫನ್‌ ತರುವಂತೆ ಸೂಚಿಸಲಾಗಿತ್ತು, ಆದರೆ, ಟಿಫನ್ ಅನ್ನು ಯಾರ ಜೊತೆ ಹಂಚಿಕೊಳ್ಳಲಾಗುತ್ತದೆ ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಾಗೂ ನಾಯಕರನ್ನು ತಲಾ ೬ ಸದಸ್ಯರ ತಂಡವಾಗಿ ವಿಭಜಿಸಲಾಗಿತ್ತು. ಪ್ರತಿ ತಂಡಕ್ಕೆ ಎರಡು ಟಿಫನ್‌ ಬಾಕ್ಸ್ ಹಂಚಿಕೆ ಮಾಡಲಾಗಿತ್ತು. ಹಿರಿಯ ನಾಯಕರು ಕಾರ್ಯಕರ್ತರೊಂದಿಗೆ ಚರ್ಚಿಸುತ್ತಾ ಟಿಫನ್‌ ಸವಿದರು” ಎಂದು ಟಿಫನ್‌ ಪೆ ಚರ್ಚಾ ಕುರಿತು ಬಿಜೆಪಿ ನಾಯಕರೊಬ್ಬರು ವಿವರಿಸಿದ್ದಾರೆ.

ದೇಶದ ಅತಿದೊಡ್ಡ ರಾಜ್ಯ ಹಾಗೂ ಅತಿಹೆಚ್ಚು ೮೦ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ‘ಟಿಫನ್‌ ಪೆ ಚರ್ಚಾ’ ಕಾರ್ಯಕ್ರಮವನ್ನು ೭೫ ಜಿಲ್ಲೆಗಳಲ್ಲೂ ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಬದ್ಧವೈರಿಗಳು ಎಂದೇ ಪರಿಗಣಿತವಾದ ಅಖಿಲೇಶ್ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಮುಖಂಡತ್ವದ ಬಹುಜನ ಸಮಾಜವಾದಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವ ಮಾತುಗಳನ್ನಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗಾಗಲೇ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಹಾಗೂ ಕಾಂಗ್ರೆಸ್‌ ಒಟ್ಟಾಗಿ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಿವೆ.

೨೦೧೪ ಲೋಕಸಭಾ ಚುನಾವಣೆಯಲ್ಲಿ ೮೦ ಸ್ಥಾನಗಳ ಪೈಕಿ ೭೩ ಸ್ಥಾನ ಗೆಲ್ಲುವ ಮೂಲಕ ಐತಿಹಾಸಿಕ ನಿರ್ವಹಣೆ ತೋರಿದ್ದ ಬಿಜೆಪಿಗೆ ಎಸ್‌ಪಿ-ಬಿಎಸ್‌ಪಿ ಒಗ್ಗಟ್ಟು ಭಾರಿ ನಷ್ಟ ಉಂಟು ಮಾಡುವ ಸಾಧ್ಯತೆ ಇದೆ. ಪಕ್ಷದ ಪ್ರಮುಖ ಕಾರ್ಯಸೂಚಿಯಾದ ರಾಮ ಮಂದಿರ ನಿರ್ಮಾಣ ವಿಚಾರವನ್ನು ಪ್ರಸ್ತಾಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ, ವಿಶಿಷ್ಟ ಜಾತಿ ಸಮೀಕರಣ ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಬ್ರಾಹ್ಮಣ-ಬನಿಯಾ ಪಕ್ಷ ಎಂಬ ಅಪವಾದದಿಂದ ಸಾಧ್ಯವಾದಷ್ಟು ಪಾರಾಗಲು, ಎಲ್ಲಾ ಜಾತಿ-ಜನಾಂಗಗಳನ್ನು ಒಳಗೊಳ್ಳುವ ಪಕ್ಷ ಎಂದು ಬಿಂಬಿಸಲು ಹಾಗೂ ಕಾರ್ಯಕರ್ತರಲ್ಲಿ ತಾರತಮ್ಯ ಹೋಗಲಾಡಿಸುವ ಮೂಲಕ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ‘ಟಿಫನ್‌ ಪೆ ಚರ್ಚಾ’ ನೆರವಾಗಲಿದೆ ಎಂದು ಬಿಜೆಪಿ ನಂಬಿದೆ ಎನ್ನುವುದು ರಾಜಕೀಯ ಚಿಂತಕರ ಅಭಿಪ್ರಾಯ.

ಇದರಾಚೆಗೆ ಕಳೆದ ಏಪ್ರಿಲ್‌-ಜುಲೈನಲ್ಲಿ ಅಮಿತ್ ಶಾ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ತಮಗೆ ಆಹ್ವಾನ ನೀಡಿಲ್ಲ ಎಂದು ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದರು. ಅಲ್ಲದೇ ದಲಿತರ ಮನೆಯಲ್ಲಿ ಹೊರಗಿನಿಂದ ತಂದ ಭೋಜನ ಸವಿದ ವಿಚಾರ ಭಾರಿ ವಿವಾದ ಸೃಷ್ಟಿಸಿತ್ತು. ಹಲವು ದಲಿತ ಸಂಸದರು ಪಕ್ಷದ ನಾಯಕರ ವರ್ತನೆಯನ್ನು ಕಟುವಾಗಿ ಟೀಕಿಸಿದ್ದರು. ಇಂಥ ಅಸಮಾಧಾನಗಳನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೋಗಲಾಡಿಸಿ, ಅವರನ್ನು ಚುನಾವಣೆಗೆ ಸಜ್ಜುಗೊಳಿಸಲು ‘ಟಿಫನ್‌ ಪೆ ಚರ್ಚಾ’ ನೆರವಾಗುವ ವಿಶ್ವಾಸವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.

ದೇಶದಲ್ಲೆಡೆ ಬೂತ್‌ ಮಟ್ಟದಲ್ಲಿ ‘ಟಿಫನ್‌ ಪೆ ಚರ್ಚಾ’ ಹಮ್ಮಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಆರು ತಿಂಗಳ ಹಿಂದೆ ಬಿಜೆಪಿ ನಾಯಕರಿಗೆ ಸೂಚಿಸಿದ್ದರು. ರಾಜಸ್ಥಾನದ ಆಲ್ವಾರ್‌ ಹಾಗೂ ಅಜ್ಮೀರ್‌ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮೋದಿಯವರು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ದೃಷ್ಟಿಯಿಂದ ಅವರ ಜೊತೆ ‘ಟಿಫನ್‌ ಪೆ ಚರ್ಚಾ’ದಂಥ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ ಎಂದು ವಿವರಿಸಿದ್ದನ್ನು ಇಲ್ಲಿ ನೆನೆಯಬಹುದು.

ಇದನ್ನೂ ಓದಿ : ಮೋದಿ ಸರ್ಕಾರಕ್ಕೆ ಕಹಿಗುಳಿಗೆ ಆಗಿರುವ ಸಮೀಕ್ಷೆ ಹೇಳುತ್ತಿರುವ ಕಟುಸತ್ಯಗಳೇನು?

ಕಳೆದ ಲೋಕಸಭಾ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್ ಅವರು “ಮೋದಿ ಅವರಿಗೆ ದೇಶದ ಇತಿಹಾಸ, ಸಂವಿಧಾನ, ಕಾನೂನು, ಆರ್ಥಿಕತೆಯ ತಿಳಿವಳಿಕೆ ಇಲ್ಲ. ಜೊತೆಗೆ ಬಿಜೆಪಿಯದ್ದು ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ ಸಿದ್ಧಾಂತವಲ್ಲ. ಟೀ ಮಾರುತ್ತಿದ್ದವನು ನಾನು, ನನ್ನನ್ನು ಪ್ರಧಾನಿ ಮಾಡಿ ಎಂದು ಮೋದಿ ಮೊರೆ ಇಡುತ್ತಿದ್ದಾರೆ. ಅದುವೇ ಅವರ ನೈಜ ಅರ್ಹತೆ ಎಂದಾದರೆ ಅವರಿಗೆ ಟೀ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು” ಎಂದು ಟೀಕಿಸಿದ್ದರು. ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಕೆ ಮಾಡಿದ್ದ ಬಿಜೆಪಿಯು, “ಮೋದಿಯವರ ಹಿನ್ನೆಲೆಯನ್ನು ಕಾಂಗ್ರೆಸ್‌ ನಾಯಕರು ಅಪಹಾಸ್ಯ ಮಾಡುತ್ತಿದ್ದಾರೆ” ಎಂದು ದೇಶಾದ್ಯಂತ ಚಾಯ್‌ ಪೇ ಚರ್ಚಾ ಎಂಬ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾವನಾತ್ಮಕವಾಗಿ ಜನರನ್ನು ತಲುಪುವಲ್ಲಿ ಯಶಸ್ಸು ಸಾಧಿಸಿತ್ತು.

ಬ್ರಾಂಡಿಂಗ್‌, ಸಂಪರ್ಕ ಎಲ್ಲ ವಿಚಾರದಲ್ಲೂ ನಾಜೂಕಿನ ನಿರ್ವಹಣೆ ತೋರಿದ್ದ ಬಿಜೆಪಿಯು ಅಭಿಯಾನವನ್ನು ಜನರ ಬಾಯಿ ಮಾತಾಗಿಸುವಲ್ಲಿ ಯಶಸ್ವಿಯಾಗಿಸುವ ಮೂಲಕ ಚುನಾವಣೆಯಲ್ಲಿ ಗೆಲುವು ಕಂಡಿತ್ತು. ಈಗ ಚಾಯ್‌ ಪೆ ಚರ್ಚಾದಲ್ಲಿ ಟೀ ಬದಲಿಗೆ ಬಿಜೆಪಿ ಟಿಫನ್‌ ಸೇರಿಸಿದೆ. ಹಳೆಯ ಬಾಟಲಿಯಲ್ಲಿ ಹೊಸ ಮದ್ಯದಂತೆ ಭಾಸವಾಗುತ್ತಿರುವ ಸ್ಲೋಗನ್ ಎಷ್ಟರಮಟ್ಟಿಗೆ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರ ನಡುವೆ ಬೆಸುಗೆ ಹಾಕಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More