ಕಾಂಗ್ರೆಸ್‌ ಖಜಾಂಚಿಯಾಗಿ ಅಹಮದ್ ಪಟೇಲ್‌ ನೇಮಕದ ಹಿಂದಿನ ಸಂದೇಶವೇನು?

ಅಹಮದ್ ಪಟೇಲ್‌ ಅವರನ್ನು ಕಾಂಗ್ರೆಸ್‌ ಖಜಾಂಚಿಯಾಗಿ ಆಯ್ಕೆ ಮಾಡಿದ ಬೆನ್ನಿಗೇ, ರಾಜಕೀಯ ವಲಯದಲ್ಲಿ ಹಲವು ಅಭಿಪ್ರಾಯ ಹರಿದಾಡುತ್ತಿವೆ. ಪಕ್ಷದೊಳಗಿನ ಹಿರಿಯ ತಲೆಗಳಿಗೆ ರಾಹುಲ್‌ ಗಾಂಧಿ ಶರಣಾದರು ಎಂಬ ಮಾತೂ ಕೇಳಿಬಂದಿದೆ. ಹಾಗಾದರೆ, ಪಕ್ಷದೊಳಗೆ ನಡೆಯುತ್ತಿರುವುದೇನು?

ಕಾಂಗ್ರೆಸ್‌ನ ಹಿರಿಯ ನಾಯಕ ಅಹಮದ್‌ ಪಟೇಲ್‌ ಅವರು ಪಕ್ಷದ ಖಜಾಂಚಿಯಾಗಿ ನಿಯುಕ್ತಿಗೊಂಡ ಬೆನ್ನಿಗೇ ಹಲವು ಬಗೆಯ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಸುಮಾರು ಎರಡು ದಶಕಗಳ ಕಾಲ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅಹಮದ್ ಪಟೇಲ್‌ ಅವರನ್ನು ಇಷ್ಟೇ ಅವಧಿಗೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ನಾಯಕ ಮೋತಿಲಾಲ್‌ ವೋರಾ ಅವರ ಜಾಗಕ್ಕೆ ತರಲಾಗಿದೆ. ೯೦ರ ವಯೋಮಾನದ ವೋರಾ ಅವರ ಜಾಗಕ್ಕೆ ೬೯ ವರ್ಷದ ಅಹಮದ್‌ ಪಟೇಲ್‌ ನಿಯುಕ್ತಿಗೊಂಡಿದ್ದಾರೆ. ವೋರಾ ಅವರ ಈವರೆಗಿನ ಸೇವೆಯನ್ನು ಪ್ರಶಂಸಿಸಿರುವ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಹುದ್ದೆಗೆ ಅವರನ್ನು ನೇಮಿಸುವ ಮೂಲಕ ಅವರ ಅನುಭವವನ್ನು ಪಕ್ಷದ ದೈನಂದಿನ ಆಡಳಿತ ನಿರ್ವಹಣೆಯಲ್ಲಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ರಾಜಸ್ಥಾನ, ಚತ್ತೀಸ್‌ಗಢ, ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಹತ್ತಿರದಲ್ಲಿಯೇ ಇದ್ದು, ಇದರ ಬೆನ್ನಿಗೇ ಲೋಕಸಭಾ ಚುನಾವಣೆಯೂ ಬರಲಿದೆ. ತದನಂತರ ಮತ್ತೆ ಸಾಲು-ಸಾಲು ವಿಧಾನಸಭಾ ಚುನಾವಣೆಗಳನ್ನು ಪಕ್ಷ ಎದುರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಖಜಾನೆ ಬರಿದಾಗಿದ್ದು, ಬರಲಿರುವ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸ್ಪರ್ಧೆ ಒಡ್ಡಬೇಕೆಂದರೆ ಸಂಪನ್ಮೂಲ ಸಂಗ್ರಹಣೆಯ ವಿಚಾರದಲ್ಲಿ ಹಿಂದೆ ಬೀಳುವಂತಿಲ್ಲ. ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವುದು, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷ ಅಧಿಕಾರದಲ್ಲಿರುವುದನ್ನು ಹೊರತುಪಡಿಸಿದರೆ ಬೇರಾವುದೇ ದೊಡ್ಡ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿಲ್ಲ. ಮಿಝೋರಾಂ ಹಾಗೂ ಪಾಂಡಿಚೇರಿಯಲ್ಲಿ ಪಕ್ಷದ ಅಧಿಕಾರದಲ್ಲಿದ್ದರೂ ಚಿಕ್ಕ ರಾಜ್ಯಗಳಿಂದ ಹೆಚ್ಚಿನ ಸಹಾಯ ನಿರೀಕ್ಷಿಸಲಾಗದು. ಪರಿಸ್ಥಿತಿ ಇಷ್ಟು ಗಂಭೀರವಾಗಿರುವುದರಿಂದಲೇ, ಪಕ್ಷದ ಖಜಾಂಚಿ ಸ್ಥಾನದ ಹೊಣೆಗಾರಿಕೆಯನ್ನು ಹೊರುವುದು, ನಿರ್ವಹಿಸುವುದು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದಿದೆ.

ಸುದೀರ್ಘ ಅವಧಿಗೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅಹಮದ್‌ ಪಟೇಲ್‌, ಕಳೆದ ವರ್ಷ ಗುಜರಾತ್‌ನ ರಾಜ್ಯಸಭಾ ಚುನಾವಣೆಯ ವೇಳೆ ದೇಶದ ಕುತೂಹಲವನ್ನು ಕೆರಳಿಸಿದ್ದ, ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಅಮಿತ್‌ ಶಾ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು. ಪಕ್ಷದೊಳಗೆ ಹಾಗೂ ಹೊರಗೆ ಉತ್ತಮ ಸಂಪರ್ಕ ಹೊಂದಿರುವ ಪಟೇಲ್‌, ವ್ಯಾಪಾರಿ ಸಮುದಾಯಗಳು, ಉದ್ಯಮಿಗಳು, ಕಾರ್ಪೊರೆಟ್‌ ಸಂಸ್ಥೆಗಳೊಂದಿಗೆ ಉತ್ತಮ ಒಡನಾಟವಿರಿಸಿಕೊಂಡಿದ್ದಾರೆ. ಮೋದಿ-ಶಾ ಜೋಡಿಯನ್ನು ಸಮೀಪದಿಂದ ಬಲ್ಲ, ಅವರ ತಂತ್ರಗಾರಿಕೆ, ಸಂಪನ್ಮೂಲ ಕ್ರೋಢೀಕರಣದ ಕುರಿತು ಒಳನೋಟಗಳುಳ್ಳ ಪಟೇಲ್‌ ಸಹಜವಾಗಿಯೇ ಈ ಸಂದಿಗ್ಧ ಸನ್ನಿವೇಶದಲ್ಲಿ ಸೂಕ್ತ ಆಯ್ಕೆ ಎನಿಸಿದ್ದಾರೆ.

ಕಳೆದೆರಡು ದಶಕಗಳಿಂದ ಪಕ್ಷದ ಮಹತ್ವದ ಹುದ್ದೆಯಲ್ಲಿದ್ದ ಅವರಿಗೆ ಸಹಜವಾಗಿಯೇ ಪಕ್ಷದೊಳಗೆ ಸಂಪನ್ಮೂಲ ಕ್ರೋಢೀಕರಿಸುವ ಶಕ್ತಿಯುಳ್ಳ ವಿವಿಧ ರಾಜ್ಯಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯವಿದೆ. ಅಲ್ಲದೆ, ಪಕ್ಷದೊಳಗೆ ಬಹಳಷ್ಟು ಮಂದಿ ಅವರನ್ನು ತಮ್ಮ ರಾಜಕೀಯ ಗುರುವೆಂದೋ, ಆಪತ್ಬಾಂಧವರೆಂದೋ ಭಾವಿಸಿದ್ದಾರೆ. ಇದು ಅವರಿಗೆ ನೂತನ ಹುದ್ದೆಯ ಜವಾಬ್ದಾರಿ ನಿರ್ವಹಿಸುವಲ್ಲಿ ಹೆಚ್ಚು ಸಹಕಾರಿ ಆಗಲಿದೆ ಎನ್ನಲಾಗುತ್ತಿದೆ. ಇದೇ ವೇಳೆ, ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಮೊದಲನೆಯದು, ಪಕ್ಷದ ನಾಯಕತ್ವವನ್ನು, ನಿರ್ದಿಷ್ಟವಾಗಿ ಹೇಳಬೇಕೆಂದರೆ, ರಾಹುಲ್‌ ಗಾಂಧಿಯವರ ವ್ಯಕ್ತಿತ್ವವನ್ನು ಉದ್ಯಮಸ್ನೇಹಿ ಎಂದು ಕಾರ್ಪೊರೆಟ್‌ ವಲಯ ಪರಿಗಣಿಸಿಲ್ಲ. ರಾಹುಲ್‌ ಅವರು ಮೋದಿ ಹಾಗೂ ಬಂಡವಾಳಶಾಹಿಗಳ ನಡುವೆ ಅಪವಿತ್ರ ಮೈತ್ರಿ ಇದೆ ಎಂದೂ, ಕಾರ್ಪೊರೆಟ್‌ ವಲಯದ ಹಿತಾಸಕ್ತಿಗೆ ಅನುಗುಣವಾಗಿ ಮೋದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪದೇಪದೇ ಆಪಾದನೆ ಮಾಡಿದ್ದಾರೆ. ರಾಹುಲ್‌ರ ಈ ನಡೆ ಕಾರ್ಪೊರೆಟ್‌ ವಲಯದಿಂದ ಪಕ್ಷಕ್ಕೆ ಹರಿದುಬರುವ ದೇಣಿಗೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ‌ಅನ್ನು ಬಿಜೆಪಿಗೆ ಪರ್ಯಾಯ ಎಂದು ಉದ್ಯಮ ವಲಯ ಪರಿಗಣಿಸಿಲ್ಲ. ಇದರಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ನೀಡುವ ದೇಣಿಗೆಯ ಮೊತ್ತ ವಿಶ್ವಾಸಕ್ಕಾಗಿ ನೀಡುವ ಮೊತ್ತವಾಗಿರುತ್ತದೆಯೇ ಹೊರತು, ಗೆಲ್ಲಿಸುವ ಇರಾದೆಯಿಂದ ನೀಡುವ‌ ಮೊತ್ತವಾಗಿರುವುದಿಲ್ಲ. ಈ ಎರಡರ ನಡುವಿನ ಅಂತರ ಬಹಳಷ್ಟಿರುತ್ತದೆ. ಎಷ್ಟೆಂದರೆ, ಎಡಿಆರ್ ಮಾಹಿತಿಯ ಪ್ರಕಾರ, ೨೦೧೬-೧೭ನೇ ಸಾಲಿನಲ್ಲಿ ಬಿಜೆಪಿಯ ಖಜಾನೆಗೆ ೧೧೯೪ ಕಾರ್ಪೊರೆಟ್‌ ಹಾಗೂ ವೈಯಕ್ತಿಕ ದಾನಿಗಳಿಂದ ೫೩೨ ಕೋಟಿ ರು. ಸಂಗ್ರಹವಾಗಿದ್ದರೆ, ಇದೇ ಅವಧಿಗೆ ಕಾಂಗ್ರೆಸ್‌ ೫೯೯ ಕಾರ್ಪೊರೆಟ್‌ ಹಾಗೂ ವೈಯಕ್ತಿಕ ದಾನಿಗಳಿಂದ ೪೨ ರು. ಕೋಟಿ ಹಣ ಸ್ವೀಕರಿಸಲಷ್ಟೇ ಶಕ್ಯವಾಗಿತ್ತು. ಬಿಜೆಪಿ, ಕಾಂಗ್ರೆಸ್‌ಗಿಂತ ಸುಮಾರು ಹನ್ನೆರಡು ಪಟ್ಟು ಹೆಚ್ಚು ಹಣ ಪಡೆಯುವಲ್ಲಿ ಸಫಲವಾಗಿತ್ತು. ಪರಿಸ್ಥಿತಿ ಹೀಗಿರುವಾಗ, ಸಹಜವಾಗಿಯೇ ಪಕ್ಷದೊಳಗಿರುವ ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚಿನ ಹಣವನ್ನು ಸಂಗ್ರಹಿಸುವ ಹಾಗೂ ವಿವಿಧ ವಲಯಗಳಿಂದ ಹೆಚ್ಚು ಹಣವನ್ನು ತರಬಲ್ಲವರನ್ನು ಗುರುತಿಸಿ ಅವರ ಮೂಲಕ ಅಗತ್ಯ ಹಣವನ್ನು ಹರಿಸುವ ಕ್ರಮಕ್ಕೆ ಮುಂದಾಗಬೇಕಿದೆ. ಅಹಮದ್‌ ಪಟೇಲ್‌ ಈ ಸವಾಲನ್ನು ಎದುರಿಸಬಲ್ಲರು ಎನ್ನುವುದು ಪಕ್ಷದೊಳಗಿರುವ ಅನಿಸಿಕೆ.

ಇದನ್ನೂ ಓದಿ : ಕಟು ಟೀಕೆಗೈದು, ಅಪ್ಪುಗೆಯ ದಾಳಿ ನಡೆಸಿ ಪ್ರಧಾನಿಯವರನ್ನು ತಬ್ಬಿಬ್ಬಾಗಿಸಿದ ರಾಹುಲ್‌

ರಾಹುಲ್‌ ಅವರು ಪಕ್ಷದ ನಾಯಕತ್ವ ವಹಿಸಿಕೊಂಡ ನಂತರ ಯುವ ಮುಖಗಳಿಗೆ ಹೆಚ್ಚಿನ ಸ್ಥಾನಮಾನ ಸಿಗುತ್ತದೆ ಎನ್ನುವ ಅನಿಸಿಕೆ ಬಲವಾಗಿತ್ತು. ಆದರೆ, ಅವರು ಇತ್ತೀಚೆಗೆ ಪಕ್ಷದೊಳಗೆ ಮಾಡಿರುವ ಬದಲಾವಣೆಗಳಲ್ಲಿ ಇದು ಗೋಚರಿಸುತ್ತಿಲ್ಲ ಎನ್ನುವ ಟೀಕೆಗಳು ಸಹ ಇದೇ ವೇಳೆ ಕೇಳಿಬಂದಿವೆ. ಅಹಮದ್ ಪಟೇಲ್‌ ಅವರ ನಿಯುಕ್ತಿ, ವೋರಾ ಅವರನ್ನು ಮುಂದುವರಿಸಿರುವುದು, ಮೀರಾ ಕುಮಾರ್‌ ಅವರನ್ನು ವಿಶೇಷ ಖಾಯಂ ಅತಿಥಿಯಾಗಿ ಪಕ್ಷದ ಕಾರ್ಯಕಾರಿ ಮಂಡಳಿಗೆ ನೇಮಿಸಿರುವುದು, ಇದೆಲ್ಲವೂ ರಾಹುಲ್‌ ಸಹ ತಮ್ಮ ತಾಯಿಯ ಸುತ್ತಲಿದ್ದ ನಾಯಕರಿಗೇ ಅಂಟಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎನ್ನುವ ಮಾತುಗಳಿವೆ. ಅದರೆ, ಈ ವಾದದಲ್ಲಿ ಹುರುಳಿಲ್ಲ. ಪಕ್ಷದ ಸದ್ಯದ ಸಂದಿಗ್ಧ ಸ್ಥಿತಿಯಲ್ಲಿ ಕೆಲವು ಪ್ರಮುಖ ಹುದ್ದೆಗಳಲ್ಲಿ, ಅನುಭವ, ವ್ಯಾಪಕ ಸಂಪರ್ಕಗಳಿರುವ ವ್ಯಕ್ತಿಗಳ ಅಗತ್ಯ ಬಹಳವಿದೆ. ರಾಹುಲ್‌ ತಮ್ಮ ಸುತ್ತ ಅನುಭವ ಹಾಗೂ ಸಂಪರ್ಕಗಳಿರುವ ಹಿರಿಯ ನಾಯಕರನ್ನೂ ಹಾಗೂ ಉತ್ಸಾಹ, ಶಕ್ತಿ ಮತ್ತು ಹೊಸ ಆಲೋಚನೆಗಳುಳ್ಳ ಯುವನಾಯಕರ ಸಮತೋಲಿತ ತಂಡವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಕಮಲ್‌ ನಾಥ್‌ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಪಕ್ಷವನ್ನು ಮುನ್ನೆಡೆಸುವ ಹೊಣೆ ನೀಡಿರುವ ಅವರು, ರಾಜಸ್ಥಾನದಲ್ಲಿ ಆಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಹಿರಿಯ ನಾಯಕರನ್ನು ಹಾಗೂ ಯುವ ನೇತಾರರನ್ನು ಒಗ್ಗೂಡಿಸಿ ಅನುಭವ, ಉತ್ಸಾಹಗಳ ಮಿಶ್ರಣವನ್ನು ಮುಂದುಮಾಡುವ ಈ ಪ್ರಯತ್ನದಲ್ಲಿ ಸಂಪನ್ಮೂಲ ಹಾಗೂ ಯುವಶಕ್ತಿಯನ್ನು ಬೆಸೆಯುವ ತಂತ್ರವೂ ಇದೆ ಎನ್ನಲಾಗಿದೆ. ಇದೆಲ್ಲ ಚುನಾವಣಾ ಫಲಿತಾಂಶಗಳಲ್ಲಿ ಹೇಗೆ ವ್ಯಕ್ತವಾಗಲಿದೆ ಎನ್ನುವುದನ್ನು ಕಾದುನೋಡಬೇಕು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More