ನೋಟು ಅಮಾನ್ಯ, ಜಿಎಸ್‌ಟಿ ಕುರಿತ ರಾಹುಲ್‌ ಟೀಕೆಗೆ ಬಿಜೆಪಿ ಅಸಮಾಧಾನ

ನಾಲ್ಕು ದಿನಗಳ ವಿದೇಶ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ಮೊದಲ ದಿನವೇ ಶಾಂತಿಮಂತ್ರ ಜಪಿಸುವ ಮೂಲಕ, ಮೋದಿ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ರಾಹುಲ್‌ ಮಾಡಿರುವ ಆರೋಪಗಳ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ

ನೋಟು ಅಮಾನ್ಯ ಹಾಗೂ ಜಿಎಸ್‌ಟಿಯಂತಹ ‌ನಿರ್ಧಾರಗಳಿಂದ ಸಣ್ಣ ವ್ಯಾಪಾರದ ಮೇಲೆ ಹೊಡೆತ ಬಿದ್ದ ಪರಿಣಾಮ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ.22 (ಬುಧುವಾರ) ರಂದು ಜರ್ಮನಿಯ ಹ್ಯಾಮ್‌ ಬರ್ಗ್‌ ಬುಸಿರಿಯಸ್‌ ಸಮ್ಮರ್‌ ಸ್ಕೂಲ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ರಾಹುಲ್‌, ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ನೋಟು ಅಮಾನ್ಯ ಹಾಗೂ ಜಿಎಸ್‌ಟಿ ನಿರ್ಧಾರಗಳು ಕಳಪೆಯಾಗಿ ಅನುಷ್ಠಾನಗೊಂಡಿವೆ. ಇದರಿಂದ ಕೋಟ್ಯಂತರ ಜನ ತೊಂದರೆಗೆ ಒಳಗಾಗಿದ್ದಾರೆ. ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ,” ಎಂದು ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ದೊಂಬಿಹತ್ಯೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ ಅವರು, “ನೋಟು ಅಮಾನ್ಯ ಹಾಗೂ ಜಿಎಸ್‌ಟಿ ನಿರ್ಧಾರಗಳಿಂದ ಹೆಚ್ಚುತ್ತಿರುವ ನಿರುದ್ಯೋಗದಿಂದ ದೊಂಬಿಹತ್ಯೆಗಳಂತಹ ಪ್ರಕರಣಗಳು ನಡೆಯುತ್ತಿವೆ,” ಎಂದು ಅಭಿಪ್ರಾಯಪಟ್ಟರು. “ಭಾರತದಲ್ಲಿ ಶ್ರೀಮಂತ ಮೇಲ್ಜಾತಿಯವರಿಗೆ ಸಿಗುವಂತಹ ಲಾಭದಾಯಕ ಸೌಲಭ್ಯಗಳು ಹಿಂದುಳಿದ ವರ್ಗದವರು, ದಲಿತರು, ಬಡ ಕೃಷಿಕರು ಹಾಗೂ ಅಲ್ಪಸಂಖ್ಯಾತರಿಗೆ ದೊರೆಯಬಾರದೆಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಯಸುತ್ತದೆ. ಶೋಷಿತರ ಶ್ರೇಯೋಭಿವೃದ್ಧಿಗೆ ಬೆಂಬಲವಾಗಿರುವ ವ್ಯವಸ್ಥೆಯ ಮೇಲೆ ಬಿಜೆಪಿ ಸರ್ಕಾರ ದಾಳಿ ಮಾಡುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಸಮಾಜದ ಮುಖ್ಯವಾಹಿನಿಯಿಂದ ನಿರ್ದಿಷ್ಟ ಸಮುದಾಯವೊಂದನ್ನು ದೂರವಿರಿಸುವುದರಿಂದ ಬಂಡಾಯ ಹುಟ್ಟುತ್ತದೆ ಎಂದ ರಾಹುಲ್‌, “2003ರಲ್ಲಿ ಅಮೆರಿಕವು ಇರಾಕ್‌ ಮೇಲೆ ದಾಳಿ ನಡೆಸಿತು. ನಂತರದಲ್ಲಿ ಒಂದು ಸಮುದಾಯದ ಜನರಿಗೆ ಸರ್ಕಾರ ಹಾಗೂ ಸೈನ್ಯದಲ್ಲಿ ಕೆಲಸ ನಿರಾಕರಿಸುವ ಕಾನೂನನ್ನೂ ತರಲಾಯಿತು. ಅದು ಅವತ್ತಿನ ಕಾಲಕ್ಕೆ ಕೆಟ್ಟ ನಿರ್ಧಾರವೆಂದು ಯಾರಿಗೂ ಅನ್ನಿಸಿರಲಿಲ್ಲ. ಆದರೆ, ಆ ನಿರ್ಧಾರದಿಂದ ಇರಾಕ್‌ನಲ್ಲಿ ಬಂಡಾಯ ಕಾಣಿಸಿಕೊಂಡಿತು. ಆ ಬಂಡಾಯ ನಿಧಾನವಾಗಿ ನಿರ್ಲಕ್ಷಿತರಿರುವ ಸ್ಥಳಗಳಿಗೆ ಪ್ರವೇಶ ಪಡೆಯಿತು. ಇರಾಕ್‌ ಹಾಗೂ ಸಿರಿಯಾ ದೇಶಗಳ ನಿರ್ಲಕ್ಷಿತರ ಪ್ರದೇಶಗಳನ್ನು ಪ್ರವೇಶಿಸಿತು. ಅದು ಐಸಿಸ್‌ ಎಂಬ ಭಯಾನಕ ಬಂಡಾಯಕ್ಕೆ ನಾಂದಿ ಹಾಡಿತು,” ಎಂದು ಆತಂಕ ವ್ಯಕ್ತಪಡಿಸಿದರು.

ಜಾಗತಿಕವಾಗಿ ಹೆಚ್ಚುತ್ತಿರುವ ದ್ವೇಷ ಹಾಗೂ ಹಿಂಸೆ ಬಗ್ಗೆ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ, “ವೈಯಕ್ತಿಕವಾಗಿ ನಾನು ದ್ವೇಷ-ಹಿಂಸೆಯ ಪರಿಣಾಮಗಳನ್ನು ಅನುಭವಿಸಿದ್ದೇನೆ. ನನ್ನ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್‌ ಗಾಂಧಿ ಹಿಂಸೆಗೆ ಬಲಿಯಾಗಿದ್ದಾರೆ. ಆದರೆ, ಹಿಂಸೆಯನ್ನು ಎದುರಿಸಲು ಕ್ಷಮೆಯೊಂದೇ ಮಾರ್ಗ. 1991ರಲ್ಲಿ ನನ್ನ ತಂದೆ ಎಲ್‌ಟಿಟಿಇ ಭಯೋತ್ಪಾದಕರಿಂದ ಹತ್ಯೆಯಾದರು. ನನ್ನ ತಂದೆಯ ಹತ್ಯೆಗೆ ಕಾರಣವಾಗಿದ್ದವರನ್ನು ಶ್ರೀಲಂಕಾ ಮಿಲಿಟರಿ ಪಡೆಗಳು ಕೊಂದುಹಾಕಿದವು. ಆದರೆ, ಅದರಿಂದ ನನಗೆ ಸಂತಸವಾಗಲಿಲ್ಲ. ಕಾರಣ, ಹತ್ಯೆಯಾದ ಭಯೋತ್ಪಾದಕರ ಮಕ್ಕಳಲ್ಲಿ ನನ್ನನ್ನು ಕಂಡಿದ್ದೆ. ಜನರ ದುಃಖ ಕೇಳಿಸಿಕೊಳ್ಳುವ ಮೂಲಕ ದ್ವೇಷದ ವಿರುದ್ಧ ಹೋರಾಡಲು ಸಾಧ್ಯ,” ಎಂದು ರಾಹುಲ್‌ ನುಡಿದಿದ್ದಾರೆ.

ಕಳೆದ ತಿಂಗಳು ಸಂಸತ್‌ನಲ್ಲಿ ನಡೆದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ, “ನರೇಂದ್ರ ಮೋದಿ ಅವರು ದ್ವೇಷದ ಮಾತುಗಳನ್ನಾಡುತ್ತಾರೆ. ಈ ಜಗತ್ತು ಕೆಟ್ಟ ಜಾಗವಲ್ಲವೆಂದು ಅವರಿಗೆ ನಾನು ತಿಳಿಸಲು ಬಯಸಿದ್ದೆ. ದ್ವೇಷಕ್ಕೆ ದ್ವೇಷವೇ ಮದ್ದಲ್ಲ, ದ್ವೇಷದಿಂದ ಯಾವುದೇ ಸಮಸ್ಯೆಗೆ ಪರಿಹಾರವಿಲ್ಲವೆಂದು ಅವರಿಗೆ ಹೇಳಲು ಬಯಸಿದ್ದೆ. ಆ ಕಾರಣ ನಾನು ಅವರನ್ನು ತಬ್ಬಿಕೊಂಡೆ. ನಾನು ಹಾಗೆ ಮಾಡಿದ್ದು ಮೋದಿ ಅವರಿಗೆ ಇಷ್ಟವಾಗಲಿಲ್ಲ,” ಎಂದರು.

ಇದನ್ನೂ ಓದಿ : ಬಿಜೆಪಿ ಹಿಂದುತ್ವ ವಾದದ ವಿರುದ್ಧ ಸಾಮರಸ್ಯ ದಿಕ್ಕಿನೆಡೆಗೆ ಹೆಜ್ಜೆಯಿಟ್ಟ ರಾಹುಲ್‌ ಗಾಂಧಿ

ನಾಲ್ಕು ದಿನಗಳ ವಿದೇಶ ಪ್ರವಾಸದಲ್ಲಿರುವ ರಾಹುಲ್‌, ಮೊದಲ ದಿನವೇ ಶಾಂತಿಮಂತ್ರ ಜಪಿಸುವ ಮೂಲಕ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ರಾಹುಲ್‌ ಮಾಡಿರುವ ಆರೋಪಗಳ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ರಾಹುಲ್‌ ಅವರು ವಿದೇಶದಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಬಗ್ಗೆ ಮಾತನಾಡುವ ಮೂಲಕ ದೇಶದ ಗೌರವ ಹಾಳು ಮಾಡುತ್ತಿದ್ದಾರೆ,” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್‌ ಪಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆಯನ್ನು ರಾಹುಲ್‌ ಗಾಂಧಿ ಸಮರ್ಥನೆ ಮಾಡಿಕೊಂಡಿದ್ದಾರೆಂದು ಆರೋಪಿಸಿದ ಬಿಜೆಪಿ, ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.

“ರಾಹುಲ್‌ ಗಾಂಧಿ ಅವರು ಸಿರಿಯಾದಲ್ಲಿ ಐಸಿಸ್‌ ರೂಪುಗೊಂಡಿದ್ದನ್ನು ಸಮರ್ಥಿಸಿಕೊಂಡಿದ್ದು ನಿಜವಾಗಿಯೂ ಭಯಾನಕವಾದದ್ದು. ಜನರಿಗೆ ಅಭಿವೃದ್ಧಿ ಗುರಿ ಸಾಧಿಸುವ ಮುನ್ನೋಟ ನೀಡದಿದ್ದರೆ ಬೇರೆಯವರು ಮುನ್ನೋಟ ನೀಡುತ್ತಾರೆ ಎಂದು ಮೋದಿ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿರುವುದು ಖಂಡನೀಯ,” ಎಂದು ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಹೇಳಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More