ನೆಹರು ಮ್ಯೂಸಿಯಂ ಕಾಳಜಿ ಮೂಲಕ ಅಟಲ್ ಮೇಲಿನ ಮೋದಿ ಅಭಿಮಾನ ಒರೆಗೆ ಹಚ್ಚಿದ ಸಿಂಗ್

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪ್ರಧಾನಿಗೆ ಬರೆದ ಪತ್ರ, ಕೇವಲ ನೆಹರೂ ಮ್ಯೂಸಿಯಂ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಮೋದಿ ಮತ್ತು ಅವರ ಪರಿವಾರ ವಾಜಪೇಯಿ ಆದರ್ಶಗಳನ್ನು ಎಷ್ಟರಮಟ್ಟಿಗೆ ನಿಜವಾಗಿಯೂ ಪಾಲಿಸುತ್ತಿದೆ ಎಂಬ ಸಮಕಾಲೀನ ಸವಾಲನ್ನೂ ಎಸೆದಿದೆ

“ತೀನ್‌ ಮೂರ್ತಿ ಭವನಕ್ಕೆ ಶೋಭೆ ತರುವ ಅಂತಹ ಮತ್ತೊಬ್ಬರು ಬರಲಾರರು. ಆ ವರ್ಣರಂಜಿತ ವ್ಯಕ್ತಿತ್ವ, ಪ್ರತಿಪಕ್ಷವನ್ನೂ ಜೊತೆಜೊತೆಗೆ ಕರೆದುಕೊಂಡು ಹೋಗುವ ವಿಶ್ವಾಸದ ನಡೆ, ಆ ಪುಟಕ್ಕಿಟ್ಟ ಚಿನ್ನದಂತಹ ಸಭ್ಯತೆ... ಅಂತಹ ಮೇರುವ್ಯಕ್ತಿತ್ವವನ್ನು ನಮ್ಮ ಸದ್ಯದ ಭವಿಷ್ಯದಲ್ಲಿ ನಾವು ಮತ್ತೊಮ್ಮೆ ಕಾಣಲಾರೆವು. ಅವರ ಮೇರು ಆದರ್ಶ, ಬದ್ಧತೆ, ದೇಶದ ಬಗೆಗಿನ ಅವರ ಅಪಾರ ಪ್ರೀತಿ ಮತ್ತು ಮಣಿಸಲಾಗದ ಅವರ ಸ್ಥೈರ್ಯಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅವರ ಆದರ್ಶದ ವ್ಯಕ್ತಿತ್ವದ ಬಗೆಗಿನ ಅಪಾರ ಗೌರವ ಮುಕ್ಕಾಗದೆ ಉಳಿದಿದೆ...”

-ಭಾರತದ ಪ್ರಥಮ ಪ್ರಧಾನಿ ಮತ್ತು ಆಧುನಿಕ ಭಾರತದ ನಿರ್ಮಾತ್ರು ಪಂಡಿತ್ ಜವಾಹರ ಲಾಲ್ ನೆಹರು ಅವರು ನಿಧನರಾದಾಗ, ಅವರಿಗೆ ಸಂತಾಪ ಸೂಚಿಸಿ ಸಂಸತ್ತಿನಲ್ಲಿ ಕೇಳಿಬಂದ ಮಾತುಗಳಿವು; ಈ ಮಾತುಗಳನ್ನು ಆಡಿದ್ದು ನೆಹರೂ ಅವರ ಪರಮಾಪ್ತ ಮಿತ್ರರಾಗಲೀ ಅಥವಾ ಅವರ ಸ್ವಪಕ್ಷೀಯರಾಗಲೀ ಅಲ್ಲ. ಬದಲಾಗಿ, ಸೈದ್ಧಾಂತಿಕವಾಗಿ ನೆಹರೂ ಅವರಿಗೆ ತದ್ವಿರುದ್ಧ ದಿಕ್ಕಿನಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳಿವು.

ಇತ್ತೀಚೆಗೆ ನಿಧನರಾದ ಭಾರತೀಯ ರಾಜಕಾರಣದ ಮುತ್ಸದ್ಧಿ ಮತ್ತು ಸಭ್ಯ ರಾಜಕಾರಣದ ಮಾದರಿಯಾಗಿದ್ದ ಅಟಲ್‌ ಅವರ ಈ ಮಾತುಗಳು, ಅವರ ಘನ ವ್ಯಕ್ತಿತ್ವ ಮತ್ತು ಉದಾತ್ತ ಮನೋಧರ್ಮವನ್ನಷ್ಟೇ ಅಲ್ಲದೆ, ಭಾರತೀಯ ರಾಜಕಾರಣದ ಘನತೆಯ ಪರಂಪರೆಗೂ ಉದಾಹರಣೆಯಾಗಿ ನಿಂತಿವೆ. ಆದರೆ, ಅದೇ ಅಟಲ್‌ ಅವರ ನಿಧನ ನಂತರ ಅವರ ಗುಣಗಾನ ಮಾಡುತ್ತ, ಅಖಂಡ ಸ್ತುತಿ ಮಾಡುತ್ತಿರುವ ಭಾರತೀಯ ಜನತಾ ಪಕ್ಷ ಮತ್ತು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಟಲ್ ಅವರ ಆ ಘನತೆಯ ವ್ಯಕ್ತಿತ್ವದಿಂದ ಏನಾದರೂ ಕಲಿತಿದೆಯೇ ಎಂಬ ಪ್ರಶ್ನೆಗೆ ತಾಜಾ ನಿದರ್ಶನ, ದೆಹಲಿಯ ನೆಹರೂ ಸ್ಮಾರಕ ತೀನ್ ಮೂರ್ತಿ ಭವನದ ವಿವಾದ.

ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ ಸಿಂಗ್ ಅವರು, ಇದೀಗ ಅಟಲ್ ಅವರು ನೆಹರು ಕುರಿತು ಅಂದು ಆಡಿದ್ದ ಅದೇ ಮಾತುಗಳನ್ನೇ ಉಲ್ಲೇಖಿಸಿ, ಮೊದಲ ಪ್ರಧಾನಿಯಾಗಿ ಈ ದೇಶವನ್ನು ಕಟ್ಟಿದ ನೆಹರೂ ಅವರ ಗೌರವಾರ್ಥ ಅವರ ಬದುಕು ಮತ್ತು ಸಾಧನೆಗಳನ್ನು ಹಾಗೂ ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಬಿಂಬಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ತೀನ್ ಮೂರ್ತಿ ಭವನದ ರೂಪಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ತೀನ್ ಮೂರ್ತಿ ಸಂಕೀರ್ಣದಲ್ಲಿರುವ ನೆಹರು ಮೆಮೋರಿಯಲ್ ಮ್ಯೂಸಿಯಂ ಅಂಡ್ ಲೈಬ್ರರಿಯ (ಎನ್‌ಎಂಎಂಎಲ್) ಚಹರೆಯನ್ನೆ ಬದಲಾಯಿಸುವ ಮೂಲಕ ದೇಶದ ಮೊದಲ ಪ್ರಧಾನಿಯ ವ್ಯಕ್ತಿತ್ವ ಮತ್ತು ಅದರ ಸುತ್ತಲ ಪರಂಪರೆಯನ್ನೇ ಬದಲಾಯಿಸುವ ಸರ್ಕಾರದ ‘ಅಜೆಂಡಾ’ ಒಳ್ಳೆಯ ನಡೆಯಲ್ಲ ಎಂದೂ ಮಾಜಿ ಪ್ರಧಾನಿ ತೀಕ್ಷ್ಣ ಮಾತುಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

“ನೆಹರು ಅವರು ಕೇವಲ ಕಾಂಗ್ರೆಸ್ಸಿನ ನಾಯಕರಲ್ಲ; ಅವರು ಈ ದೇಶದ ನಾಯಕರು. ಇಡೀ ದೇಶದ ವ್ಯಕ್ತಿ ಅವರು,” ಎಂದಿರುವ ಸಿಂಗ್, “ಆರು ವರ್ಷ ಕಾಲ ಪ್ರಧಾನಿಯಾಗಿದ್ದ ಅಟಲ್ ಜೀ ಕೂಡ ತೀನ್ ಮೂರ್ತಿ ಭವನದ ವಿಷಯದಲ್ಲಿ ಯಾವುದೇ ಬಗೆಯ ಇಂತಹ ಯತ್ನಕ್ಕೆ ಮುಂದಾಗಿರಲಿಲ್ಲ. ಆದರೆ, ಈಗಿನ ನಿಮ್ಮ ಸರ್ಕಾರಕ್ಕೆ ಅದರ ಬದಲಾವಣೆಯೇ ಒಂದು ಅಜೆಂಡಾ ಆಗಿರುವುದು ದುರದೃಷ್ಟಕರ,” ಎಂದು ಖಾರವಾಗಿ ನುಡಿದಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ತಮ್ಮ ದೊಡ್ಡ ಆದರ್ಶವೆಂದು ಇದೀಗ ದೇಶವ್ಯಾಪಿ ಸ್ತುತಿಸುತ್ತಿರುವ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಜವಾದ ಪ್ರಜಾಸತ್ತಾತ್ಮಕ ನಡೆ ಮತ್ತು ಘನತೆಯ ಬಗ್ಗೆ ಸ್ವತಃ ಮಾಜಿ ಪ್ರಧಾನಿ ಸಿಂಗ್ ಸರ್ಕಾರ ಮತ್ತು ಪ್ರಧಾನಿಯವರ ಗಮನ ಸೆಳೆದಿದ್ಧಾರೆ.

ಇದನ್ನೂ ಓದಿ : ಕುಸಿಯುತ್ತಿರುವ ನರೇಂದ್ರ ಮೋದಿ ವರ್ಚಸ್ಸಿಗೆ ಈಗ ಅಟಲ್ ರಂಗಿನ ಆಸರೆ!

ಅಷ್ಟಕ್ಕೂ ನೆಹರು ಅವರ ವ್ಯಕ್ತಿತ್ವ ಮತ್ತು ಕೊಡುಗೆಯನ್ನು ಬಿಂಬಿಸುವ ಮತ್ತು ಅವರ ವೈಯಕ್ತಿಕ ವಸ್ತುಗಳನ್ನು ಜತನ ಮಾಡುವ ಉದ್ದೇಶದಿಂದಲೇ ನಿರ್ಮಾಣವಾದ ಎನ್‌ಎಂಎಂಎಲ್ ಮತ್ತು ಆ ಮ್ಯೂಸಿಯಂ ಇರುವ ದೆಹಲಿಯ ತೀನ್ ಮೂರ್ತಿ ಭವನದ ವಿಷಯದಲ್ಲಿ ಮೋದಿ ಅವರ ಸರ್ಕಾರ ಆಸಕ್ತಿ ವಹಿಸಿದ್ದು ಮೂರು ವರ್ಷಗಳ ಹಿಂದೆಯೇ. ೨೦೧೫ರಲ್ಲೇ ಎನ್‌ಎಂಎಂಎಲ್ ಮುಖ್ಯಸ್ಥರ ನೇಮಕದ ವಿಷಯದಲ್ಲಿ ಸರ್ಕಾರ ಮತ್ತು ಆ ಸಂಸ್ಥೆಯ ನಡುವೆ ವಿವಾದ ಭುಗಿಲೆದ್ದಿತ್ತು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಮಹೇಶ್ ರಂಗರಾಜನ್ ಅವರ ನೇಮಕಾತಿಯನ್ನೇ ಪ್ರಶ್ನಿಸಿದ್ದ ಮೋದಿ ಅವರ ಸಂಪುಟದ ಸಂಸ್ಕೃತಿ ಸಚಿವರ ವರಸೆಯಿಂದಾಗಿ ಅಂತಿಮವಾಗಿ ಅವರು ರಾಜಿನಾಮೆ ನೀಡಿದ್ದರು. ಬಳಿಕ ತೆರವಾದ ಆ ಸ್ಥಾನಕ್ಕೆ ಆರ್‌ಎಸ್‌ಎಸ್ ಮತ್ತು ಸಂಘಪರಿವಾರ ಹಿನ್ನೆಲೆಯ ನಿವೃತ್ತ ಐಎಎಸ್ ಅಧಿಕಾರಿ ಶಕ್ತಿ ಸಿನ್ಹಾ ನೇಮಕಗೊಂಡಿದ್ದರು. ಅವರ ನೇಮಕ ವಿರೋಧಿಸಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರತಾಪ್ ಭಾನು ಮೆಹ್ತಾ ರಾಜಿನಾಮೆ ನೀಡಿದ್ದರು. ಮತ್ತೊಬ್ಬ ಸದಸ್ಯ ನಿತಿನ್ ದೇಸಾಯಿ ಕೂಡ ವಿರೋಧ ವ್ಯಕ್ತಪಡಿಸಿದ್ದರು.

ಭಾರತದ ದಾಸ್ಯಮುಕ್ತಿ ಮತ್ತು ನವ ಭಾರತ ನಿರ್ಮಾಣದಲ್ಲಿ ನೆಹರೂ ಕೊಡುಗೆ ಮತ್ತು ವ್ಯಕ್ತಿತ್ವನ್ನು ಅಳಿಸಿಹಾಕುವ ಬಿಜೆಪಿ ಮತ್ತು ಸಂಘಪರಿವಾರದ ಬೃಹತ್ ಅಜೆಂಡಾದ ಭಾಗವಾಗಿ, ಸಿನ್ಹಾ ಎನ್‌ಎಂಎಂಎಲ್ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ನೆಹರೂ ಅವರಿಗೆ ಮುಡಿಪಾಗಿದ್ದ ಈ ಮ್ಯೂಸಿಯಂನ ಚಹರೆ ಬದಲಾಯಿಸುವ ಕಾರ್ಯ ಕೂಡ ಆರಂಭವಾಗಿತ್ತು. ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾದ ಎನ್‌ಎಂಎಂಎಲ್, ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ತಿದ್ದುಪಡಿ ತರುವ ಮೂಲಕ, ಅದೇ ಜಾಗದಲ್ಲಿ ದೇಶದ ಎಲ್ಲ ಪ್ರಧಾನಿಗಳ ಕುರಿತ ‘ಮ್ಯೂಸಿಯಂ ಆಫ್ ಪ್ರೈಮಿನಿಸ್ಟರ್ಸ್’ ನಿರ್ಮಾಣಕ್ಕೆ ಕಾನೂನಾತ್ಮಕ ಅವಕಾಶ ಮಾಡಿಕೊಳ್ಳಲಾಯಿತು. ಆದರೆ, ಸಿನ್ಹಾ ಅವರ ಈ ಕ್ರಮವನ್ನು ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ವಿರೋಧಿಸಿದ್ದರು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಎನ್‌ಎಂಎಂಎಲ್ ನಿರ್ದೇಶಕ ಸಿನ್ಹಾ, ಎನ್‌ಎಂಎಂಎಲ್ನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಪ್ರಧಾನಿಗಳ ಕುರಿತ ಮ್ಯೂಸಿಯಂ ತೀನ್‌ ಮೂರ್ತಿ ಭವನದಲ್ಲಿಯೇ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ಈ ಸ್ಷಷ್ಟನೆಗೆ ವಿರೋಧ ವ್ಯಕ್ತಪಡಿಸಿದ್ದ ಜೈರಾಮ್ ರಮೇಶ್ ಅವರು, “ದೆಹಲಿಯ ಯಾವುದೇ ಭಾಗದಲ್ಲಿ ಬೇಕಾದರೂ ಪ್ರಧಾನಿಗಳ ಕುರಿತ ಮ್ಯೂಸಿಯಂ ನಿರ್ಮಾಣ ಮಾಡಬಹುದು. ಆದರೆ, ನೆಹರೂ ಮತ್ತು ಸ್ವಾತಂತ್ರ್ಯ ಹೋರಾಟದ ಸ್ಮರಣೆಯ ತೀನ್‌ ಮೂರ್ತಿ ಭವನದಲ್ಲಿ ಅಂತಹ ಯಾವ ನಿರ್ಮಾಣ ಪ್ರಯತ್ನ ನಡೆದರೂ ಅದು ನೆಹರೂ ಅವರ ವ್ಯಕ್ತಿತ್ವಕ್ಕೆ ಮಾಡುವ ಅವಮಾನ,” ಎಂದು ಕಿಡಿಕಾರಿದ್ದರು.

ಈ ನಡುವೆ, ಸ್ವತಃ ಪ್ರಧಾನಿ ಮೋದಿಯವರು ಕೂಡ ಪ್ರಧಾನಿಗಳ ಮ್ಯೂಸಿಯಂ ನಿರ್ಮಾಣದ ಬಗ್ಗೆ ೨೦೧೬ರ ಎನ್‌ಎಂಎಂಎಲ್ ಸಭೆಯಲ್ಲಿ ಘೋಷಣೆ ಮಾಡಿ, ಬರೋಬ್ಬರಿ ೨೦೦ ಕೋಟಿ ರು. ಅನುದಾನ ನೀಡುವುದಾಗಿ ಹೇಳಿದ್ದರು. ಅಲ್ಲದೆ, ತೀನ್‌ ಮೂರ್ತಿ ಭವನದಲ್ಲೇ ನಿರ್ಮಾಣವಾದರೂ, ಆ ಮ್ಯೂಸಿಯಂ ನೆಹರೂ ಅವರ ಸ್ಮಾರಕ ಮ್ಯೂಸಿಯಂಗೆ ಯಾವುದೇ ಧಕ್ಕೆ ಮಾಡುವುದಿಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿತ್ತು.

ಆದರೆ, ದೇಶವ್ಯಾಪಿ ನೆಹರು ಮತ್ತು ಗಾಂಧಿ ಮನೆತನದ ವಿರುದ್ಧ ಬಿಜೆಪಿ ಮತ್ತು ಸಂಘಪರಿವಾರ ನಡೆಸುತ್ತಿರುವ ದಾಳಿ ಮತ್ತು ಸ್ವತಃ ಪ್ರಧಾನಿಯವರು ಪ್ರತಿ ಚುನಾವಣೆ, ಪ್ರತಿ ಸಾರ್ವಜನಿಕ ಸಭೆಯಲ್ಲಿ ನೆಹರು ಅವರ ವ್ಯಕ್ತಿತ್ವದ ಮೇಲೆ ನಡೆಸುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತು ಸರ್ಕಾರದ ಅಂತಹ ಸ್ಪಷ್ಟನೆಗಳು ಕಾಂಗ್ರೆಸ್ ನಾಯಕರಲ್ಲಾಗಲೀ, ಸಂಸ್ಥೆಯ ಇತರ ವ್ಯಕ್ತಿಗಳಲ್ಲಾಗಲೀ ವಿಶ್ವಾಸ ಹುಟ್ಟಿಸುವಲ್ಲಿ ಯಶಸ್ವಿಯಾಗಲಿಲ್ಲ. ಇದೀಗ ಸ್ವತಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಅವರದೇ ಆದರ್ಶ ವ್ಯಕ್ತಿಯ (ಅಟಲ್) ಮಾತುಗಳನ್ನೇ ಉಲ್ಲೇಖಿಸಿ ನೆಹರೂ ಸ್ಮಾರಕ ಮ್ಯೂಸಿಯಂ ಧಕ್ಕೆ ತರುವ ಮತ್ತು ನೆಹರೂ ಅವರ ಒಟ್ಟು ವ್ಯಕ್ತಿತ್ವ ಮತ್ತು ಕೊಡುಗೆಯನ್ನೇ ತಿರುಚುವ ಯತ್ನಗಳನ್ನು ಕೈಬಿಡಿ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿಯ ಈ ಪತ್ರ, ಕೇವಲ ನೆಹರೂ ಮ್ಯೂಸಿಯಂ ವಿಷಯಕ್ಕೆ ಮಾತ್ರ ಸೀಮಿತವಾಗಿ ಅಲ್ಲದೆ, ಪ್ರಧಾನಿ ಮೋದಿ ಮತ್ತು ಅವರ ಪರಿವಾರ ಅಟಲ್ ಬಿಹಾರಿ ವಾಜಪೇಯಿ ಎಂಬ ಮೇರುನಾಯಕನ ಆದರ್ಶಗಳನ್ನು ಎಷ್ಟರಮಟ್ಟಿಗೆ ನಿಜವಾಗಿಯೂ ಪಾಲಿಸುತ್ತಿದೆ ಎಂಬ ಸಮಕಾಲೀನ ಮಹತ್ವದ ದೊಡ್ಡ ಸವಾಲನ್ನೂ ಎಸೆದಿದೆ ಎಂಬುದು ಆ ಪತ್ರದ ಮಹತ್ವವನ್ನು ಹೆಚ್ಚಿಸಿದೆ. ಹಾಗಾಗಿ, ಇದೀಗ ನೆಹರೂ ಕುರಿತ ಮೋದಿ ಸರ್ಕಾರದ ದ್ವೇಷ ಮತ್ತು ಅಸಹನೆಯ ಧೋರಣೆಯಷ್ಟೇ ಅಲ್ಲ, ಅಟಲ್‌ ಜೀ ಕುರಿತ ಅವರ ಅಭಿಮಾನದ, ಆರಾಧನೆಯ ಹಿಂದಿನ ಅಸಲಿಯತ್ತು ಕೂಡ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More