ಸಿದ್ದರಾಮಯ್ಯ ಮಾತು ಕೇವಲ ವೈಯಕ್ತಿಕ ಆಕಾಂಕ್ಷೆ ಅಲ್ಲ ಎನ್ನುವವರು ಹೇಳುವುದೇನು?

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಅಭಿಲಾಷೆ ವ್ಯಕ್ತಪಡಿಸಿದ ನಂತರದ ಬೆಳವಣಿಗೆಗಳ ಸುತ್ತ ಹಲವು ರೀತಿಯ ಚರ್ಚೆ ನಡೆದಿವೆ. ಸಿದ್ದರಾಮಯ್ಯ ಅವರ ಮಾತು ಕೇವಲ ವೈಯಕ್ತಿಕ ಆಕಾಂಕ್ಷೆಯಲ್ಲ, ಅದರಾಚೆಗೂ ಒಂದು ಗಂಭೀರ ಅಂಶವಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾದರೆ ಅದೇನು?

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರು ತಿಂಗಳಿಂದಲೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿವೆ. ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿರುವುದು ಹಲವು ಬಗೆಯ ಚರ್ಚೆಗೆ ನಾಂದಿ ಹಾಡಿದೆ. ಸಿದ್ದರಾಮಯ್ಯ ಅವರ ಹೇಳಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ತಂತ್ರಗಾರಿಕೆಯಲ್ಲಿ ಸಿದ್ಧಹಸ್ತರೆನಿಸಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಗರಡಿಯಲ್ಲಿ ಪಳಗಿರುವ ಸಿದ್ದರಾಮಯ್ಯ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಕಳೆದ ಚುನಾವಣೆಯ ಸಂದರ್ಭದಲ್ಲೇ ಹೇಳಿದ್ದರು. ಇದೀಗ, ೨೦೧೯ರ ಲೋಕಸಭಾ ಚುನಾವಣೆಯ ನೇತೃತ್ವದಂಥ ಪ್ರಮುಖ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ವಹಿಸಿರುವುದರಿಂದ, ರಾಜಕೀಯ ತಂತ್ರಗಾರಿಕೆಯ ಭಾಗವಾಗಿಯೇ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಇರಾದೆಯನ್ನು ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿರಬಹುದು. ವೈಯಕ್ತಿಕ ಆಸೆ, ಆಕಾಂಕ್ಷೆಯಾಚೆಗೆ ಕಾಂಗ್ರೆಸ್‌ ಭವಿಷ್ಯದ ದೃಷ್ಟಿಯಿಂದ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವಿಶ್ಲೇಷಿಸಬೇಕಿದೆ ಎಂಬುದು ರಾಜಕೀಯ ತಜ್ಞರ ಅಭಿಮತ.

ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯಂತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಹಣಕಾಸು ಇಲಾಖೆಯನ್ನೂ ಬಿಟ್ಟುಕೊಡಲಾಗಿದೆ. ಈ ಮಧ್ಯೆ, ಮೈತ್ರಿಯಿಂದಾಗಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಎದುರಿಸುವ ಸಮಸ್ಯೆಗಳು ಅಷ್ಟಾಗಿ ಹೈಕಮಾಂಡ್‌ ತಲುಪುವುದಿಲ್ಲ. ಸರ್ಕಾರದ ನೇತೃತ್ವ ಜೆಡಿಎಸ್‌ ಕೈಯಲ್ಲಿ ಇರುವುದರಿಂದ ಕಾಂಗ್ರೆಸ್ ನಾಯಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ಸಿಗುವುದು ಕಡಿಮೆ. ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಆದ್ಯತೆ ಕಡಿಮೆ ಆಗುವುದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದು ಹಾಗೂ ಕಾಂಗ್ರೆಸ್‌ ಭವಿಷ್ಯದ ದೃಷ್ಟಿಯಿಂದ ಸಮ್ಮಿಶ್ರ ಸರ್ಕಾರವನ್ನು ಎಚ್ಚರಿಸಬೇಕಿದೆ. ಅದರಲ್ಲೂ, ಮಿತ್ರಪಕ್ಷವಾದ ಜೆಡಿಎಸ್‌ಗೆ ಅಗಾಗ್ಗೆ ಸಂದೇಶ ರವಾನಿಸುವುದು ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಸಿದ್ದರಾಮಯ್ಯ ಹೇಳಿಕೆ ನೀಡಿರಬಹುದು ಎನ್ನಲಾಗುತ್ತಿದೆ.

ಈ ಮಧ್ಯೆ, ಮುಂಬರುವ ಎಂಟು ತಿಂಗಳಲ್ಲಿ ನಡೆಯಲಿದೆ ಎನ್ನಲಾದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರಗಳಿದ್ದು, ಜೆಡಿಎಸ್‌ ೧೦ ಕ್ಷೇತ್ರಗಳಿಗೆ ಬೇಡಿಕೆ ಇಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವಾಸ್ತವದಲ್ಲಿ ಜೆಡಿಎಸ್‌ ಗೆಲ್ಲುವ ಸಾಮರ್ಥ್ಯ ಇರುವುದು ಹಾಸನ ಮತ್ತು ಮಂಡ್ಯದಲ್ಲಿ ಮಾತ್ರ. ಈ ಕ್ಷೇತ್ರಗಳಲ್ಲೂ ಜೆಡಿಎಸ್‌ಗೆ ಪ್ರಬಲ ಪೈಪೋಟಿ ಎದುರಾಗುವುದು ಕಾಂಗ್ರೆಸ್‌ ಅಭ್ಯರ್ಥಿಗಳಿಂದ. ಬಿಜೆಪಿ ಸೋಲಿಸುವ ಏಕೈಕ ಕಾರಣದಿಂದ ಜೆಡಿಎಸ್‌ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗದು ಎಂಬುದು ಕಾಂಗ್ರೆಸ್‌ ನಾಯಕರ ಅಭಿಮತ. ಇದರಾಚೆಗೆ ೧/೨ ಭಾಗ ನಿಗಮ-ಮಂಡಳಿ ಜೆಡಿಎಸ್‌ಗೆ ಹಾಗೂ ೨/೩ ಭಾಗ ನಿಗಮ-ಮಂಡಳಿ ಕಾಂಗ್ರೆಸ್‌ಗೆ ಎಂದು ನಿರ್ಧಾರವಾಗಿದೆ. ಈ ಪೈಕಿ, ಪ್ರಮುಖ ನಿಗಮ, ಮಂಡಗಳಿಗಳನ್ನು ಕಾಂಗ್ರೆಸ್‌ ಪಾಲಿಗೆ ಪಡೆದುಕೊಳ್ಳುವುದು ಸಿದ್ದರಾಮಯ್ಯ ಅವರ ತಂತ್ರಗಾರಿಕೆಯ ಭಾಗವಾಗಿದೆ. ಒತ್ತಡ ಸೃಷ್ಟಿಸುವ ಮೂಲಕ, ಈ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ಸೇ ದೊಡ್ಡಣ್ಣ ಎಂಬ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ : ಮತ್ತೆ ಮುಖ್ಯಮಂತ್ರಿ ಆಗುವ ಸಿದ್ದರಾಮಯ್ಯ ಹೇಳಿಕೆ ಹುಟ್ಟಿಸಿದ ಸಂಚಲನದ ಒಳಹೊರಗು

ಇದೆಲ್ಲದರ ಮಧ್ಯೆ, ದೇಶದ ಹಲವು ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ ಹೋರಾಟ ನಡೆಸುವ ಸ್ಥಿತಿ ಕಾಂಗ್ರೆಸ್ಸಿಗೆ ನಿರ್ಮಾಣವಾಗಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಶಕ್ತಿಗುಂದಿದೆ. ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ, ಬಿಹಾರದಲ್ಲಿ ಆರ್‌ಜೆಡಿ ಸಂಗಡದೊಂದಿಗೆ ಹೋರಾಟಕ್ಕೆ ಇಳಿಯುವ ಸ್ಥಿತಿಯಲ್ಲಿರುವ ಕಾಂಗ್ರೆಸ್‌; ಉತ್ತರ ಪ್ರದೇಶದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೇರುವುದು ದೂರದ ಮಾತು ಎನ್ನುವಂತಾಗಿದೆ.

ಇನ್ನು, ದೊಡ್ಡ ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಮಾತ್ರ ಅಧಿಕಾರದಲ್ಲಿರುವ ಕಾಂಗ್ರೆಸ್‌, ಕರ್ನಾಟಕದಲ್ಲಿ ಪಾಲುದಾರ ಪಕ್ಷವಾಗಿದೆ. “ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್‌ ನಾಯಕರು ಹಲವು ಸಂದರ್ಭಗಳಲ್ಲಿ ಕುಮಾರಸ್ವಾಮಿ ಪರವಾಗಿ ನಿಲ್ಲುವ ಮೂಲಕ ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್‌ ಓಟಕ್ಕೆ ಬ್ರೇಕ್‌ ಹಾಕದೆಹೋದರೆ ದೀರ್ಘಾವಧಿಯಲ್ಲಿ ಕಾಂಗ್ರೆಸ್‌ ಸ್ವಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟವಾಗಬಹುದು. ಪಕ್ಷದ ಅಸ್ತಿತ್ವ ಮತ್ತು ಭವಿಷ್ಯದ ದೃಷ್ಟಿಯಿಂದ ಜನನಾಯಕರಾದ ಸಿದ್ದರಾಮಯ್ಯ ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸ ಮಾಡುತ್ತಿದ್ದಾರೆಯೇ ವಿನಾ ಸರ್ಕಾರವನ್ನು ಉರುಳಿಸಲು ಅಲ್ಲ,” ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು.

ಈ ಮಧ್ಯೆ, ಹುಣಸೂರು ಶಾಸಕ ಎಚ್‌ ವಿಶ್ವನಾಥ್‌ ಅವರನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ದೇವೇಗೌಡರು ಅಂಕುಶ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ. ತಮ್ಮ ಇಷ್ಟದ ನಾಯಕರಿಗೆ ಜವಾಬ್ದಾರಿ ವಹಿಸುವ ಸ್ವಾತಂತ್ರ್ಯ ಜೆಡಿಎಸ್ ವರಿಷ್ಠರಿಗೆ ಖಂಡಿತವಾಗಿಯೂ ಇದೆ. ಮೈತ್ರಿಗೆ ಭಂಗವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ಕಾಂಗ್ರೆಸ್‌ನಷ್ಟೇ ಜೆಡಿಎಸ್‌ಗೂ ಇದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಸಿದ್ದರಾಮಯ್ಯ ಹಾಗೂ ವಿಶ್ವನಾಥ್‌ ಅವರ ಸಂಬಂಧ ಹಳಸಿರುವ ಸಂದರ್ಭದಲ್ಲಿ ಜೆಡಿಎಸ್‌ ನಾಯಕರು ಕೈಗೊಳ್ಳುವ ನಿರ್ಣಯಗಳು ರಾಜಕೀಯ ತಂತ್ರಗಾರಿಕೆಯ ಭಾಗ ಎಂದಾದರೆ, ಸಿದ್ದರಾಮಯ್ಯ ಅವರ ನಡೆ-ನುಡಿಗಳು ಅದೇ ರಾಜಕೀಯ ತಂತ್ರಗಾರಿಕೆಯ ಭಾಗ ಎಂದು ಏಕೆ ತಿಳಿಯಬಾರದು? ಅಷ್ಟಕ್ಕೂ, ಸಿದ್ದರಾಮಯ್ಯ ರಾಜಕಾರಣಿಯೇ ಹೊರತು ಸನ್ಯಾಸಿಯಲ್ಲ ಎಂಬುದನ್ನು ಅವರ ಮಾತುಗಳಲ್ಲಿ ಅರ್ಥ ಹುಡುಕುತ್ತಿರುವವರು ಅರಿಯಬೇಕಿದೆ ಎಂಬ ಮಾತುಗಳನ್ನು ಅಲ್ಲಗಳೆಯಬಹುದೇ?

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More