ಆಡಳಿತ ವೈಫಲ್ಯ ಮರೆಮಾಚಲು ಸುಳ್ಳು ಅಂಕಿ-ಅಂಶಗಳ ಮೊರೆಹೋದ ಮೋದಿ ಸರ್ಕಾರ: ಸಿನ್ಹಾ

ಮೋದಿ ಸರ್ಕಾರದ ನೀತಿಗಳಿಂದಾಗಿ ಅರ್ಥವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ, ಪ್ರಜಾತಾಂತ್ರಿಕ ಸಂಸ್ಥೆಗಳಿಗೂ ಗಂಡಾಂತರ ಎದುರಾಗಿದೆ, ತುರ್ತು ಪರಿಸ್ಥಿತಿ ನಂತರ ಭಾರತ ಕೆಟ್ಟ ದಿನಗಳತ್ತ ಸಾಗಿದ್ದು, ನೈಜ ಭಾರತ ಉಳಿಸಿಕೊಳ್ಳಲು ಎಲ್ಲ ಒಂದಾಗಬೇಕಿದೆ ಎಂದು ಮಾಜಿ ಸಚಿವ ಯಶವಂತ್‌ ಸಿನ್ಹಾ ಸಲಹೆ ನೀಡಿದ್ದಾರೆ

“ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಅಂಕಿ-ಅಂಶಗಳನ್ನು ರಾಜಕೀಯಗೊಳಿಸುವ ಕೆಲಸ ಮಾಡುತ್ತಿದೆ. ಭಾರತದ ಇತಿಹಾಸದಲ್ಲೇ ಇಂಥ ಕೆಲಸವನ್ನು ಬೇರಾವುದೇ ಸರ್ಕಾರ ಮಾಡಿಲ್ಲ. ಇದು ಅತ್ಯಂತ ಅಪಾಯಕಾರಿ ನಡೆ. ಸುಳ್ಳು, ಪೊಳ್ಳು ಭರವಸೆಗಳ ಮೂಲಕ ಅಸತ್ಯವನ್ನು ಗಟ್ಟಿಗೊಳಿಸಲಾಗುತ್ತಿದ್ದು, ಸತ್ಯಕ್ಕೆ ಅಪಾಯ ಎದುರಾಗಿದೆ,” ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಆತಂಕ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ೨೦೧೪ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ದೇಶದ ಅರ್ಥವ್ಯವಸ್ಥೆಗೆ ಆಗಿರುವ ಹಾನಿ, ಅದರಿಂದ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ಹಾಗೂ ಅವುಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರವು ಸರ್ಕಾರಿ ಸಂಸ್ಥೆಗಳ ಮೇಲೆ ಇನ್ನಿಲ್ಲದ ಒತ್ತಡ ಹೇರಿರುವುದನ್ನು ಎಳೆಎಳೆಯಾಗಿ ಸಿನ್ಹಾ ಅವರು ಬಿಚ್ಚಿಟ್ಟರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ೯೨ನೇ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯು ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, 'ಭಾರತದ ಇಂದಿನ ಆರ್ಥಿಕ ಸ್ಥಿತಿಗತಿ' ಕುರಿತು ಮೋದಿ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಜನರು ತೆರಬೇಕಾಗಿರುವ ಬೆಲೆಯನ್ನು ಅವರು ಪಟ್ಟಿ ಮಾಡಿದರು. ಇದೇ ವೇಳೆ ಅವರು, ಕೋರೆಗಾಂವ್ ಸಂಘರ್ಷ ಸಂಬಂಧ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌, ಕವಿ ವರವರ ರಾವ್‌ ಮತ್ತಿತರರ ಬಂಧನವನ್ನು ತೀವ್ರವಾಗಿ ಖಂಡಿಸಿದರು. “೨೦೧೪ರಲ್ಲಿ ದೊರೆತ ಐತಿಹಾಸಿಕ ಜನಾದೇಶವನ್ನು ಮಣ್ಣುಪಾಲು ಮಾಡಿ, ಇಡೀ ಅರ್ಥವ್ಯವಸ್ಥೆಯನ್ನು ಹಾಳುಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸತ್ಯ ಹೇಳುವ, ತುಳಿತಕ್ಕೊಳಗಾದ ಜನರ ಕೆಲಸ ಮಾಡುತ್ತಿರುವ ಐವರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ೧೯೭೭ರ ನಂತರ ದೇಶದ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಗಂಡಾಂತರ ತಪ್ಪಿಸಲು ಎಲ್ಲರೂ ಕಟಿಬದ್ಧರಾಗಬೇಕಿದೆ,” ಎಂದು ಎಚ್ಚರಿಸಿದರು.

“ಮೋದಿಯವರ ಮಹತ್ವಕಾಂಕ್ಷಿ ಹಾಗೂ ಪ್ರಚಾರಪ್ರಿಯ ಯೋಜನೆಗಳಾದ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಅಸಂಘಟಿತ ಮತ್ತು ಸಣ್ಣ ಕೈಗಾರಿಕಾ ವಲಯಕ್ಕೆ ಮರ್ಮಾಘಾತ ನೀಡಿವೆ. ಅಪನಗದೀಕರಣದ ನಂತರ ಶೇ.೯೯.೩ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ಹೇಳಿದೆ. ಆರ್‌ಬಿಐ ಸರಿಯಾಗಿ ಲೆಕ್ಕ ಹಾಕಿದರೆ ಶೇ.೧೦೦ಕ್ಕಿಂತಲೂ ಹೆಚ್ಚು ಅಪನಗದೀಕರಣಗೊಂಡ ಹಣ ಬ್ಯಾಂಕುಗಳಿಗೆ ವಾಪಸಾಗುವ ಸಾಧ್ಯತೆ ಇದೆ,” ಎನ್ನುವ ಮೂಲಕ ಮೋದಿಯವರ ನಿರ್ಣಯವನ್ನು ಲೇವಡಿ ಮಾಡಿದರು. “ಕೇಂದ್ರೀಯ ಸಹಕಾರಿ ಬ್ಯಾಂಕ್‌, ಬಿಜೆಪಿ ಅಧ್ಯಕ್ಷ ಅಮಿತ್ ಅವರು ಅಧ್ಯಕ್ಷರಾಗಿರುವ ಗುಜರಾತಿನ ಅಹಮದಾಬಾದ್‌ ಸಹಕಾರಿ ಬ್ಯಾಂಕ್‌ ಹಾಗೂ ನೇಪಾಳದಲ್ಲಿ ಚಲಾವಣೆಯಲ್ಲಿರುವ ನೋಟುಗಳನ್ನು ಲೆಕ್ಕ ಹಾಕಿಲ್ಲ. ವಾಸ್ತವದಲ್ಲಿ ಎಷ್ಟು ಮೊತ್ತದ ಹಣ ಬ್ಯಾಂಕ್‌ಗಳಿಗೆ ವಾಪಸಾಗಿದೆ ಎಂಬುದನ್ನು ಆರ್‌ಬಿಐ ಹೇಳಿಲ್ಲ. ಇದಕ್ಕೆ ಮುಂದಾಗದಂತೆ ಆರ್‌ಬಿಐ ಅನ್ನು ತಡೆಯಲಾಗುತ್ತಿದೆ. ಇದನ್ನು ಮುಂದಿನ ಲೋಕಸಭಾ ಚುನಾವಣೆಯ ನಂತರ ರಚನೆಯಾಗುವ ಹೊಸ ಸರ್ಕಾರ ಹೇಳಬಹುದು,” ಎನ್ನುವ ಮೂಲಕ ಮೋದಿಯವರ ನಿರ್ಧಾರ ವಿಶ್ವಾಸಕ್ಕೆ ಅನರ್ಹ ಎಂದು ಪ್ರತಿಪಾದಿಸಿದರು. “ಅಪನಗದೀಕರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹವಾಗಲಿದೆ, ನಕಲಿ ನೋಟುಗಳ ಹಾವಳಿಗೆ ತಡೆ ಬೀಳಲಿದೆ ಎಂಬ ಮೋದಿಯವರ ಭರವಸೆಗಳೇನಾದವು? ಮೋದಿಯುವರು ತಮ್ಮ ಮಾತಿನಂತೆ ನಡೆಯುವುದಾದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಹೊರನಡೆಯಬೇಕಿತ್ತು. ಆದರೆ, ತಾನು ಮಾಡಿದ್ದೇ ಸರಿ, ಮಾಡಿದ್ದೆಲ್ಲವೂ ಸರಿ ಎಂಬ ಸರ್ವಾಧಿಕಾರಿ ಧೋರಣೆ ಹೊಂದಿರುವ ವ್ಯಕ್ತಿಯಿಂದ ಈ ನಡೆ ನಿರೀಕ್ಷಿಸಲು ಸಾಧ್ಯವೇ?” ಎಂದು ಕುಟುಕಿದರು.

“ಜಗತ್ತಿನಲ್ಲಿ ಅತ್ಯಂತ ಹೆಚ್ಚು ನಿಷ್ಕ್ರಿಯ ಸಾಲ (ಶೇ.೧೪.೨) ಹೊಂದಿರುವ ಇಟಲಿ ಆರ್ಥಿಕವಾಗಿ ಅಧಃಪತನದತ್ತ ಸಾಗಿದೆ. ಭಾರತದ ಸಾರ್ವಜನಿಕ ಬ್ಯಾಂಕ್‌ಗಳು ಶೇ.೧೨.೨ರಷ್ಟು ನಿಷ್ಕ್ರಿಯ ಸಾಲ ಹೊಂದುವ ಮೂಲಕ ವಿಶ್ವದಲ್ಲಿ ಎರಡನೇ ಅತ್ಯಂತ ಕೆಟ್ಟ ಅರ್ಥವ್ಯವಸ್ಥೆ ಎನ್ನುವ ‘ಹಿರಿಮೆ’ಗೆ ಪಾತ್ರವಾಗಿವೆ. ಇದು ಮೋದಿಯವರ ಸರ್ಕಾರದ ಸಾಧನೆ,” ಎಂದು ವಾಗ್ದಾಳಿ ನಡೆಸಿದರು. “ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಅಂಕಿ-ಅಂಶಗಳಿಗೆ ಕಾರ್ಮಿಕ ಇಲಾಖೆಯನ್ನು ಬದಿಗೆ ಸರಿಸಿ ಇಪಿಎಫ್‌ಒ ಸಂಸ್ಥೆಯ ದಾಖಲೆಗಳನ್ನು ಪರಿಗಣಿಸಲಾಗುತ್ತಿದೆ. ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಎನ್‌ಡಿಎ ಜಿಡಿಪಿ ಸಾಧನೆಯಲ್ಲಿ ಹಿನ್ನಡೆ ಅನುಭವಿಸಿದೆ ಎಂಬ ರಾಷ್ಟ್ರೀಯ ಸಾಂಖ್ಯಿಕ ಆಯೋಗ ರಚಿಸಿದ್ದ ಉನ್ನತ ಮಟ್ಟದ ಸಮಿತಿ ನೀಡಿದ್ದ ವರದಿಯನ್ನು ಕೇಂದ್ರ ಸಾಂಖ್ಯಿಕ ಇಲಾಖೆಯ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಆ ಮೂಲಕ, ಕೇಂದ್ರ ಸರ್ಕಾರವು ಸುದ್ದಿದೂತರನ್ನು ಮುಗಿಸುವ ಕೆಲಸಕ್ಕೆ ಇಳಿದಿದೆ,” ಎಂದು ಗಂಭೀರ ಆರೋಪ ಮಾಡಿದರು.

“ಅಪನಗದೀಕರಣದ ನಂತರ ಆತುರಾತುರವಾಗಿ ಜಾರಿಗೊಳಿಸಲಾದ ಜಿಎಸ್‌ಟಿಯಿಂದ ದೇಶದ ಆರ್ಥಿಕತೆಗೆ ಸರಿಪಡಿಸಲಾರದ ಹೊಡೆತ ಬಿದ್ದಿದೆ. ಅಸಂಘಟಿತ ಮತ್ತು ಸಣ್ಣ ಕೈಗಾರಿಕಾ ವಲಯಗಳು ಜಿಎಸ್‌ಟಿ ನಂತರ ನೆಲಕಚ್ಚಿವೆ. ಜಿಎಸ್‌ಟಿ ಜಾರಿಯಾದ ಬಳಿಕ ೧೦ ತಿಂಗಳ ಅವಧಿಯಲ್ಲಿ ೩೫೭ ಬಾರಿ ತಿದ್ದುಪಡಿ ಮಾಡಲಾಗಿದೆ. ದೇಶದ ಹಲವೆಡೆ ವಿದ್ಯುತ್‌ ಲಭ್ಯವಿಲ್ಲ. ಇಂಥ ಸ್ಥಿತಿಯಲ್ಲಿ ಆನ್‌ಲೈನ್‌ ಮೂಲಕ ಜಿಎಸ್‌ಟಿ ಪಾವತಿಸಬೇಕು ಎನ್ನುವ ನಿರ್ಣಯ ಮಾಡಲಾಗಿದೆ. ನೂರಾರು ಬಾರಿ ಪರಿಷ್ಕರಣೆಗೆ ಒಳಗಾಗಿರುವ ಜಿಎಸ್‌ಟಿಯನ್ನು, ಮಾಜಿ ಪ್ರಧಾನಿ ಜವಹರಲಾಲ್‌ ನೆಹರು ಅವರು ಸ್ವಾತಂತ್ರ್ಯ ದಿನದ ಮಧ್ಯರಾತ್ರಿಯಲ್ಲಿ ಸಂಸತ್‌ನಲ್ಲಿ ಮಾಡಿದ ‘ಟ್ರಿಸ್ಟ್‌‌ ವಿತ್‌ ಡೆಸ್ಟಿನಿ’ ಮಾದರಿಯಲ್ಲಿ ಭಾಷಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲು ಹೊರಟ ಮೋದಿಯವರು ಸಾಧಿಸಿರುವುದು ಏನು?” ಎಂದು ಪ್ರಶ್ನಿಸಿದರು.

“ಮೂರು ದಶಕಗಳ ಬಳಿಕ ಐತಿಹಾಸಿಕ ಬಹುಮತ ಪಡೆದು ಅಧಿಕಾರಕ್ಕೆ ಬಂದ ಮೋದಿಯವರಿಗೆ ವಿಶ್ವಮಟ್ಟದಲ್ಲಿ ಆರ್ಥಿಕ ಸ್ಥಿತಿಯೂ ಅನುಕೂಲಕಾರಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಒಂದು ಬ್ಯಾರಲ್‌ಗೆ ೧೦೫ ಡಾಲರ್‌ನಿಂದ ೨೫ ಡಾಲರ್‌ಗೆ ಇಳಿದಿತ್ತು. ಕಠಿಣ ನಿರ್ಧಾರ ಕೈಗೊಳ್ಳಲು ಅಗತ್ಯವಾದ ಸಂಖ್ಯಾಬಲವೂ ಇತ್ತು. ಆದರೆ, ಇದ್ಯಾವುದನ್ನೂ ಮಾಡದ ಮೋದಿಯವರು ದೇಶದ ಅರ್ಥವ್ಯವಸ್ಥೆಯನ್ನು ದಿವಾಳಿಯತ್ತ ಕೊಂಡೊಯ್ದಿದ್ದಾರೆ. ಪ್ರತಿಯೊಂದರಲ್ಲೂ ಪ್ರಾಸ ಹುಡುಕುವ ಮೂಲಕ ‘ಒಂದು ದೇಶ-ಒಂದು ತೆರಿಗೆ, ‘ಒಂದು ರಾಷ್ಟ್ರ-ಒಂದು ಚುನಾವಣೆ’ಯಂಥ ಸ್ಲೋಗನ್‌ಗಳನ್ನು ಹುಟ್ಟುಹಾಕಲಾಗಿದೆ. ಇದು ಅತ್ಯಂತ ಅಪಾಯಕಾರಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ

ಮೋದಿ ಸರ್ಕಾರ ಸಮಗ್ರ ಅಭಿವೃದ್ಧಿಯ ಪರವಾಗಿಲ್ಲ ಎಂದು ವಾದಿಸಿದ ಸಿನ್ಹಾ ಅವರು, ೨೦೦೪ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ತಮ್ಮದೇ ಸರ್ಕಾರ ಸೋಲನುಭವಿಸಿದ ಪರಿಯನ್ನು ವೈಯಕ್ತಿಕ ಉದಾಹರಣೆಯೊಂದಿಗೆ ಮಾರ್ಮಿಕವಾಗಿ ವಿವರಿಸಿದ ಪರಿ ಹೀಗಿತ್ತು: “ಜಾರ್ಖಂಡ್‌ ರಾಜ್ಯದ ನಾನು ೨೦೦೪ರ ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಗ್ರಾಮವೊಂದಕ್ಕೆ ಮತ ಯಾಚಿಸಲು ತೆರಳಿದ್ದೆ. ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರವು ಹೆದ್ದಾರಿಗಳನ್ನು ನಿರ್ಮಾಣ ಮಾಡಿದ ವಿಚಾರವನ್ನು ಗ್ರಾಮಸ್ಥರಿಗೆ ವಿವರಿಸಿ ಮತ ನೀಡುವಂತೆ ಮನವಿ ಮಾಡಿದೆ. ಆದರೆ, ಜನರು ಹೆದ್ದಾರಿಯಿಂದ ನಮಗೇನು ಪ್ರಯೋಜನ? ನಮ್ಮ ಗ್ರಾಮದಲ್ಲಿಯೇ ರಸ್ತೆಗಳಾಗಿಲ್ಲ, ಹೀಗಾಗಿ ನಿಮಗೆ ಮತ ಹಾಕುವುದಿಲ್ಲ ಎಂದಿದ್ದರು. ಚುನಾವಣೆಯ ಬಳಿಕ ನನ್ನ ಕ್ಷೇತ್ರವನ್ನೂ ಒಳಗೊಂಡಂತೆ ಪಶ್ಚಿಮ ಬಂಗಾಳದಿಂದ ಪಂಜಾಬ್‌ವರೆಗೆ ನಿರ್ಮಾಣ ಮಾಡಿದ್ದ ರಸ್ತೆಯ ಹಾದಿಯಲ್ಲಿ ಬರುವ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಸೋತುಹೋಗಿದ್ದರು! ಹೆದ್ದಾರಿಯ ಜೊತೆಗೆ ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದ್ದರೆ ನಮಗೆ ಆ ಸ್ಥಿತಿ ಬರುತ್ತಿರಲಿಲ್ಲವೇನೋ. ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡದಿದ್ದರ ಪರಿಣಾಮ ಇದು. ಅಂದಿಗೂ ಇಂದಿಗೂ ಹೆಚ್ಚಿನ ವ್ಯತ್ಯಾಸವೇನು ಕಾಣುತ್ತಿಲ್ಲ."

ಇದಕ್ಕೂ ಮುನ್ನ 'ದಿ ಸ್ಟೇಟ್' ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಅವರು, “ಇತಿಹಾಸ ಎನ್ನುವುದು ಸರಪಳಿಯ ರೀತಿಯಲ್ಲಿ ಸಾತತ್ಯವನ್ನು ಹೊಂದಿರುತ್ತದೆ. ಕೆಲವೊಮ್ಮೆ ನಮಗೆ ಇಂದಿನ ಪ್ರಕಾಶಮಾನ ಬೆಳಕು ಹಿಂದಿನದನ್ನು ಮರೆಯುವಂತೆ ಮಾಡುತ್ತದೆ. ನಾವು ಇಂದಿನ ಬೆಳಗಲ್ಲಿ ಹಿಂದಿನ ಕಠಿಣ ಸನ್ನಿವೇಶಗಳನ್ನು, ಸಂಕೀರ್ಣ ಪರಿಸ್ಥಿತಿಗಳನ್ನು ಮರೆತುಬಿಡುತ್ತೇವೆ. ಪ್ರಸಕ್ತ ನಮ್ಮ ಆರ್ಥಿಕತೆ ಕಂಡಿರುವ ಬೆಳವಣಿಗೆಯ ಹಿಂದೆ ಈ ಹಿಂದಿನ ದಶಕಗಳಲ್ಲಿ ನೆಲೆಸಿದ್ದ ಸಾಮರಸ್ಯಪೂರ್ಣ ಸಮಾಜದ ಕೊಡುಗೆ ಇದೆ. ಪ್ರಸಕ್ತ ಸನ್ನಿವೇಶದಲ್ಲಿ ನಾವು ಈ ಅಂಶವನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ. ಸುಸ್ಥಿರ ಪ್ರಗತಿಗೆ ಮತೀಯ ಸಾಮರಸ್ಯವುಳ್ಳ ಸಮಾಜದ ಅಗತ್ಯವನ್ನು ನಾವು ಎಂದಿಗೂ ಮರೆಯಬಾರದು,” ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ಮೈಸೂರು ಅರಸರ ಕಾಲದಿಂದ ರಾಮಕೃಷ್ಣ ಹೆಗಡೆ ಅವರ ಕಾಲಘಟ್ಟದವರೆಗಿನ ವಿವಿಧ ಹಂತದಲ್ಲಿ ಕೈಗೊಂಡ ಸಕಾರಾತ್ಮಕ ಅಡಳಿತ ನೀತಿನಿರೂಪಣೆಗಳು ಕರ್ನಾಟಕದ ಪ್ರಗತಿಗೆ ಹೇಗೆ ಕಾರಣವಾದವು ಎನ್ನುವುದನ್ನು ವಿವರಿಸಿದರು.

ಕಂದಾಯ ಸಚಿವ ಆರ್‌ ವಿ ದೇಶಪಾಂಡೆ ಹಾಗೂ ಹಂಗಾಮಿ ಸಭಾಪತಿ ಬಸವರಾಜ್‌ ಹೊರಟ್ಟಿ ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗಿನ ಒಡನಾಟ ಮೆಲುಕು ಹಾಕಿದರು. ಹೆಗಡೆ ಅವರ ಪುತ್ರಿ ಮಮತಾ ನಿಚ್ಚಾನಿ ವೇದಿಕೆಯಲ್ಲಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More