ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಮೈತ್ರಿಧರ್ಮವನ್ನು ಪೊರೆದೀತೇ?

ಮೈತ್ರಿ ಸರ್ಕಾರದ ಹಗ್ಗಾಜಗ್ಗಾಟದ ಮಧ್ಯೆಯೇ, ರಾಜ್ಯದ ೩ ಮಹಾನಗರ ಪಾಲಿಕೆ, 29 ನಗರಸಭೆ, 53 ಪುರಸಭೆ ಮತ್ತು 20 ಪಟ್ಟಣ ಪಂಚಾಯಿತಿ ಸೇರಿದಂತೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆ.೩೧ರಂದು ಮತದಾನ ನಡೆಯಲಿದ್ದು, ಸ್ಥಳೀಯ ಮಟ್ಟದ ಈ ಹಣಾಹಣಿ ಭಾರಿ ಕುತೂಹಲ ಕೆರಳಿಸಿದೆ

ಮೈತ್ರಿಧರ್ಮ ಪಾಲನೆಯ ಹಗ್ಗಜಗ್ಗಾಟ, ಮುಸುಕಿನ ಗುದ್ದಾಟ, ರಾಜಕೀಯ ಪ್ರತಿಷ್ಠೆಯ ಮೇಲಾಟಗಳ ನಡುವೆಯೇ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಶತದಿನ ಪೂರೈಸಿದ್ದು, 101ನೇ ದಿನ (ಆ.31) ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಕುತೂಹಲ ಕೆರಳಿಸಿದೆ.

“ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಐದು ವರ್ಷ ಈ ಸರ್ಕಾರ ಮುನ್ನಡೆಯುತ್ತದೆ,’’ ಎಂದು ಎರಡೂ ಪಕ್ಷಗಳ ನಾಯಕರು ಬಹಿರಂಗದಲ್ಲಿ ಪುನರುಚ್ಚರಿಸುವುದರ ಬೆನ್ನಿಗೇ, “ಎಲ್ಲವೂ ಸರಿ ಇಲ್ಲ,’’ ಎನ್ನುವ ಸಂದೇಶ ಅಂತರಂಗದಿಂದ ಪ್ರಕಟವಾಗುತ್ತಿದೆ. ಸಮನ್ವಯ ಸಮಿತಿಯ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಗ್ಗಿಸಿ, ನಿಯಂತ್ರಿಸಲು ದಳಪತಿಗಳು ದಾಳ ಉರುಳಿಸಿದರೆ, ಆ ಸೂಕ್ಷ್ಮವನ್ನರಿತು ಸಿಡಿದೆದ್ದ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಬಯಕೆಯನ್ನು ತೇಲಿಬಿಡುವ ಮೂಲಕ ನಡುಕ ಹುಟ್ಟಿಸುವುದು, ಅದರಿಂದಾಗುವ ‘ರಾಜಕೀಯ ಹಾನಿ’ಯನ್ನು ತಪ್ಪಿಸಲು ಮಾತಿಗೆ ತೇಪೆ ಹಚ್ಚುವ ಪ್ರಯತ್ನ ನಡೆಸುವುದು ನಡೆದೇ ಇದೆ. ಈ ಮಧ್ಯೆ, ಸಂಭವನೀಯ ಬಂಡಾಯದ ಲಾಭ ಪಡೆಯಲು ಬಿಜೆಪಿ ಹವಣಿಸಿ ಕುಳಿತಿದೆ.

ಇಂಥ ಹಲವು ಬಗೆಯ ಗೊಂದಲ, ಶಂಕೆ, ವದಂತಿಗಳು ರಾಜ್ಯ ರಾಜಕೀಯದಲ್ಲಿ ಜಾರಿಯಲ್ಲಿರುವ ಸಂದರ್ಭದಲ್ಲಿ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆಯ ಫಲಿತಾಂಶವು ಮೈತ್ರಿ ಸರ್ಕಾರ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಬೀರಬಹುದಾದ ಪರಿಣಾಮಗಳೇನು ಎನ್ನುವ ಕುತೂಹಲ ಗರಿಗೆದರಿದೆ. “ರಾಷ್ಟ್ರ, ರಾಜ್ಯ ಮಟ್ಟದಲ್ಲಿ ನಮ್ಮ ಮೈತ್ರಿ (ಕಾಂಗ್ರೆಸ್-ಜೆಡಿಎಸ್) ವಿಶ್ವಾಸ ಗಟ್ಟಿ ಇದೆ. ಸ್ಥಳೀಯವಾಗಿ ಅಲ್ಲಲ್ಲಿ ಸಮಸ್ಯೆಗಳಿದ್ದು, ಬಗೆಹರಿಸಲು ಪ್ರಯತ್ನಿಸಲಾಗುವುದು,’’ ಎಂದು ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ನೋಡಿದರೆ, ಈ ಚುನಾವಣಾ ಫಲಿತಾಂಶ ನಿರ್ಣಾಯಕವೇ ಹೌದು.

“ರಾಜ್ಯದ ಮೈತ್ರಿ ಸರ್ಕಾರವು ಹೆಚ್ಚೆಂದರೆ ಲೋಕಸಭಾ ಚುನಾವಣೆವರೆಗೆ ಉಳಿಯಬಹುದು,’’ ಎನ್ನುವುದು ರಾಜಕೀಯ ವಿಶ್ಲೇಷಕರ ಊಹೆ. ಲೋಕಸಭಾ ಚುನಾವಣೆಗೆ ಬೇರುಮಟ್ಟದಲ್ಲಿ ತಮ್ಮ ಪಕ್ಷಗಳನ್ನು ಗಟ್ಟಿ ಮಾಡಿಕೊಳ್ಳಲು ಎಲ್ಲ ಪಕ್ಷಗಳೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ತಕ್ಕ ವೇದಿಕೆಯನ್ನಾಗಿ ಮಾಡಿಕೊಂಡಿದ್ದು, ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಸ್ಥಾಪಿಸಲು ಶ್ರಮಿಸುತ್ತಿವೆ. ಕಾಂಗ್ರೆಸ್-ಜೆಡಿಎಸ್‌ ವರಿಷ್ಠರು ಈ ಚುನಾವಣೆಯಲ್ಲಿ ಮೈತ್ರಿಬಂಧವನ್ನು ಮುಂದುವರಿಸುವುದಕ್ಕಿಂತ ತಮ್ಮ ಪಕ್ಷಗಳ ಬಲವರ್ಧನೆಗೆ ಆಸ್ಥೆ ವಹಿಸಿದ್ದು ಎದ್ದುಕಂಡ ಅಂಶ. ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಹಾಸನ ಸೇರಿ ಹಲವೆಡೆ ಕಾಂಗ್ರೆಸ್-ಜೆಡಿಎಸ್ ಮಧ್ಯೆ ತುರುಸಿನ ಹಣಾಹಣಿ ನಡೆದಿದ್ದು, ವಿಧಾನಸಭಾ ಚುನಾವಣೆ ವೇಳೆ ನಡೆಸಿದ್ದ ಸೆಣಸಿನ ಗಾಯಗಳು ಮಾಯುವ ಮೊದಲೇ ಬಂದಿರುವ ಈ ಚುನಾವಣೆ ಹಳೆಯ ಗಾಯಗಳನ್ನು ‘ವ್ರಣ’ಕ್ಕೆ ತಿರುಗಿಸುವ ಅಪಾಯವನ್ನು ತಳ್ಳಿಹಾಕಲಾಗದು.

ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಅಭ್ಯರ್ಥಿಗಳಿದ್ದರು. ತಮ್ಮ ನಾಯಕರ ಭವಿಷ್ಯಕ್ಕಾಗಿ ಜಿದ್ದಾಜಿದ್ದಿ ಹೋರಾಡಿದ್ದ ಸ್ಥಳೀಯ ಮುಖಂಡರು, ರಾಜ್ಯಮಟ್ಟದಲ್ಲಿ ಮೈತ್ರಿ ನಿರ್ಧಾರ ತಳೆದಾಗ ಅಸಹನೆ ವ್ಯಕ್ತಪಡಿಸಿದ್ದೂ ಇದೆ. “ಮೈತ್ರಿಯ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡರೆ ಪಕ್ಷವನ್ನು ಉಳಿಸಿಕೊಳ್ಳುವುದು ಕಷ್ಟಸ್ಸಾಧ್ಯ,’’ ಎಂಬರ್ಥದ ಎಚ್ಚರಿಕೆಯನ್ನು ಮೈಸೂರು ಭಾಗದ ಕಾಂಗ್ರೆಸ್ ಮುಖಂಡರು ವರಿಷ್ಠರಿಗೆ ರವಾನಿಸಿದ್ದೂ ಆಗಿದೆ. ಈಗ, ಸ್ಥಳೀಯ ಸಂಸ್ಥೆಗಳ ಫಲಿತಾಂಶದ ನಂತರ ಸ್ಥಳೀಯ ಭಿನ್ನಾಭಿಪ್ರಾಯಗಳು ಶಮನಗೊಳ್ಳುತ್ತವೆಯೋ ಅಥವಾ ಪಕ್ಷ-ಪ್ರತಿಷ್ಠೆ ಕಾರಣವಾಗಿ ಕೆರಳುತ್ತವೋ ಎನ್ನುವುದನ್ನು ಕಾಯ್ದುನೋಡಬೇಕು. “ಚುನಾವಣೆಯಲ್ಲಿ ಮೈತ್ರಿ ಇಲ್ಲ. ಫಲಿತಾಂಶದ ಬಳಿಕ ಸ್ಥಳೀಯ ಸಾಧ್ಯಾಸಾಧ್ಯತೆಗಳನ್ನು ನೋಡಿಕೊಂಡು ಮೈತ್ರಿ ತೀರ್ಮಾನ ಮಾಡಲಾಗುವುದು,’’ ಎಂದು ನಾಯಕರು ಹೇಳುತ್ತಿದ್ದಾರೆ.

ಇದನ್ನೂ ಓದಿ : ಸಿಎಂ ಮಾತಿಗೆ ಕಿಮ್ಮತ್ತು ಕೊಡದ ಸಚಿವರು; ಲಕ್ಷಾಂತರ ರು. ಮೌಲ್ಯದ ಪೀಠೋಪಕರಣ ಖರೀದಿ!

ಆದರೆ, ಈಗಿರುವ ನೂರು ಚಿಲ್ಲರೆ (ಕಾಂಗ್ರೆಸ್, ಜೆಡಿಎಸ್‌ ಶಾಸಕರು ಮತ್ತು ಸಚಿವರ) ಮನಸ್ಥಿತಿಗಳನ್ನೇ ಒಂದು ತಕ್ಕಡಿಯಲ್ಲಿಟ್ಟು ಕಾಯ್ದುಕೊಳ್ಳುವುದು ದುಸ್ಸಾಧ್ಯ ಎನ್ನಿಸುತ್ತಿದೆ. ಇನ್ನು, ಸಾವಿರಾರು ಮನಸ್ಥಿತಿಗಳು, ಅಲ್ಲಲ್ಲಿನ ವ್ಯಕ್ತಿ ಪ್ರತಿಷ್ಠೆಗಳನ್ನು ಏಕಸೂತ್ರಕ್ಕೆ ತರುವುದು ಸರಳವಲ್ಲ. ಬಹುಮತ, ಬೆಂಬಲ, ಅಧಿಕಾರ ಸ್ಥಾಪನೆಯ ಯಾವುದೇ ಹಂತದಲ್ಲಿ ಸ್ಥಳೀಯವಾಗಿ ಭಿನ್ನಾಭಿಪ್ರಾಯ ಕೆರಳಿದರೆ ಅದು ಕ್ರಮೇಣ ರಾಜ್ಯದ ಮೈತ್ರಿ ರಾಜಕಾರಣದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಮತ್ತು ಮತ್ತಷ್ಟು ಮಾತಿನ ಮೇಲಾಟಗಳಿಗೆ ಆಸ್ಪದವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈ ಎಲ್ಲ ಕಾರಣಕ್ಕೆ ಶುಕ್ರವಾರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಹತ್ವದ್ದೆನಿಸಿದೆ. ಈ ಚುನಾವಣೆಯ ಸಂಕ್ಷಿಪ್ತ ಪ್ರವರ ಇಂತಿದೆ:

  • ಈ ಸೆಪ್ಟೆಂಬರ್‌ನಿಂದ ಮುಂದಿನ ಮಾರ್ಚ್ ವೇಳೆಗೆ ರಾಜ್ಯದ ಎಲ್ಲ 208 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯುತ್ತಿದ್ದು, ಎರಡು ಹಂತದಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಹೊರತು ಉಳಿದೆಲ್ಲ ಜಿಲ್ಲೆಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.
  • ರಾಜ್ಯದ ಮೂರು (ಮೈಸೂರು, ತುಮಕೂರು, ಶಿವಮೊಗ್ಗ) ಮಹಾನಗರ ಪಾಲಿಕೆಗಳು, ವಿವಿಧ ಜಿಲ್ಲೆಗಳ 29 ನಗರಸಭೆ, 53 ಪುರಸಭೆ ಮತ್ತು 20 ಪಟ್ಟಣ ಪಂಚಾಯಿತಿಗಳು ಸೇರಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ. ಒಟ್ಟು 2,634 ವಾರ್ಡ್‌ಗಳಲ್ಲಿ 9,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ, ನಗರಸಭೆಯ 12, ಪುರಸಭೆಯ 17 ವಾರ್ಡ್‌ಗಳಿಗೆ 29 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.
  • ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ 3 ಪಟ್ಟಣ ಪಂಚಾಯಿತಿಗಳ ಚುನಾವಣಾ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ಪುರಸಭೆಯ 19ನೇ ವಾರ್ಡ್‌ಗೆ ಸಲ್ಲಿಕೆಯಾಗಿದ್ದ ಎಲ್ಲ ನಾಮಪತ್ರಗಳು ತಿರಸ್ಕೃತವಾಗಿದ್ದರಿಂದ ಆ ವಾರ್ಡ್‌ ಚುನಾವಣೆ ನಡೆಯುತ್ತಿಲ್ಲ. ಬಿಎಸ್ಪಿ ಅಭ್ಯರ್ಥಿ ರಮೇಶ್ ನಿಧನದಿಂದಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ 9ನೇ ವಾರ್ಡ್ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸಿದೆ.
  • ಮೂರು ನಗರಪಾಲಿಕೆಗಳ ವ್ಯಾಪ್ತಿಯ 13.33 ಲಕ್ಷ ಮತದಾರರು ಸೇರಿ 49 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಸ್ಥಳೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಇದೇ ಮೊದಲ ಬಾರಿ ಆಯೋಗ ಇವಿಎಂಗಳನ್ನು ಬಳಸುತ್ತಿದೆ. ಇದರಿಂದ ಸೆ.3ರ ಸೋಮವಾರ ತ್ವರಿತ ಫಲಿತಾಂಶ ಲಭ್ಯವಾಗಲಿದೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More