ಟ್ವಿಟರ್ ಸ್ಟೇಟ್ | ಸುಪ್ರೀಂ ಕೋರ್ಟ್‌ನಲ್ಲೇಕೆ ಮೋದಿ ಹತ್ಯೆ ಸಂಚಿನ ವಿಚಾರ ಬರಲಿಲ್ಲ?

ಕನ್ನಡದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಹಾಗೂ ಕೆಲ ಇಂಗ್ಲಿಷ್ ವಾಹಿನಿಗಳು ಸಾಮಾಜಿಕ ಕಾರ್ಯಕರ್ತರನ್ನು ಮೋದಿ ಹತ್ಯೆ ಸಂಚಿಗಾಗಿ ಬಂಧಿಸಲಾಗಿದೆ ಎಂದಿವೆ. ಆದರೆ, ಪೊಲೀಸರು ಅಂಥ ಯಾವುದೇ ಆರೋಪ ಹೊರಿಸಿಯೂ ಇಲ್ಲ, ಕೋರ್ಟ್‌ನಲ್ಲಿ ಆ ಬಗ್ಗೆ ಚಕಾರ ಕೂಡ ಎತ್ತಿಲ್ಲ! 

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಚರ್ಚೆಯ ವಿಚಾರವಾಗಿರುವುದು ಪೊಲೀಸರು ಸರಣಿ ದಾಳಿಗಳಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ, ಅವರ ಮೇಲೆ ದಿನಕ್ಕೊಂದು ಆರೋಪಗಳನ್ನು ಹೊರಿಸುತ್ತಿರುವ ವಿಚಾರ. ಆರಂಭದಲ್ಲಿ ಬಹುತೇಕ ಎಲ್ಲ ಮಾಧ್ಯಮಗಳೂ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚಿನಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹೇಳಿದ್ದವು. ನಂತರ ಭೀಮಾ ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸಮಜಾಯಿಶಿ ನೀಡಲಾಯಿತು. ಆದರೆ, ಎಫ್‌ಐಆರ್‌ನಲ್ಲಾಗಲೀ ಅಥವಾ ನ್ಯಾಯಾಲಯದಲ್ಲಾಗಲೀ ಮೋದಿ ಹತ್ಯೆ ಸಂಚಿನ ಕುರಿತು ಯಾವುದೇ ಪ್ರಸ್ತಾಪ ಮಾಡದೆ ಇರುವುದು ಟ್ವಿಟರ್‌ನಲ್ಲಿ ಚರ್ಚೆಯಾಗಿದೆ.

ಕನ್ನಡದ ಬಹುತೇಕ ಮುಖ್ಯವಾಹಿನಿಯ ಪತ್ರಿಕೆಗಳು ಮತ್ತು ಚಾನಲ್‌ಗಳು ಹಾಗೂ ಕೆಲವು ಇಂಗ್ಲಿಷ್ ಚಾನೆಲ್‌ಗಳೂ ತಮ್ಮ ಹೆಡ್‌ಲೈನ್‌ಗಳಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಮೋದಿಯ ಕೊಲೆ ಸಂಚು ನಡೆಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಬರೆದಿದ್ದವು. ಆದರೆ, ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ಕಾರ್ಯಕರ್ತರ ಮೇಲೆ ಇಂತಹ ಯಾವುದೇ ಆರೋಪ ಹೊರಿಸದೆ ಇರುವಾಗ ಈ ಮಾಧ್ಯಮಗಳು ಕ್ಷಮೆ ಯಾಚಿಸಬೇಕಲ್ಲವೇ? ವ್ಯಕ್ತಿಗಳ ಮೇಲೆ ಸಾಮೂಹಿಕವಾಗಿ ಸುಳ್ಳು ಆರೋಪ ಹೊರಿಸುವುದು ತಪ್ಪಲ್ಲವೇ? ಸಾಮಾನ್ಯವಾಗಿ ಬಹುತೇಕ ಕನ್ನಡದ ಪತ್ರಿಕೆಗಳು ರಾಷ್ಟ್ರೀಯ ಸುದ್ದಿಗಳಿಗಾಗಿ ಏಜೆನ್ಸಿಗಳು ನೀಡುವ ಸುದ್ದಿಗಳನ್ನೇ ನಂಬಿರುತ್ತವೆ. ಆ ಏಜೆನ್ಸಿಗಳು ಸುಳ್ಳು ಸುದ್ದಿ ನೀಡಿದರೆ ಅದನ್ನೇ ವರದಿ ಮಾಡುತ್ತವೆ! ಈ ಬಾರಿಯೂ ಹಾಗೇ ಆಗಿದೆಯೇ ಅಥವಾ ಕೆಲವೊಂದು ಪ್ರಮುಖ ಸುದ್ದಿಗಳಿಂದ ಜನರ ಗಮನವನ್ನು ಬೇರೆಡೆಗೆ ಹರಿಸಲು ಕೇಂದ್ರ ಸರ್ಕಾರ ಸಾಮಾಜಿಕ ಕಾರ್ಯಕರ್ತರ ಬಂಧನ ಮತ್ತು ನಂತರ ಬಿಡುಗಡೆಯ ಪ್ರಹಸನವನ್ನು ಮಾಡಿದೆಯೇ? ಇಂತಹ ಹಲವು ಪ್ರಶ್ನೆಗಳು ಈಗ ಟ್ವಿಟರ್‌ನಲ್ಲಿ ಚರ್ಚೆಯಾಗಿದೆ.

ಕನ್ನಡದ ಬಹುತೇಕ ಸುದ್ದಿ ಪತ್ರಿಕೆಗಳು ಸಾಮಾಜಿಕ ಕಾರ್ಯಕರ್ತರ ಬಂಧನಕ್ಕೆ ಮೋದಿ ಹತ್ಯೆಯ ಸಂಚು ಕಾರಣ ಎಂದು ವರದಿ ಮಾಡಿದರೆ, ಇಂಗ್ಲಿಷ್ ದಿನಪತ್ರಿಕೆಗಳು ಇಂಥ ನೇರವಾದ ಆರೋಪಗಳನ್ನು ಮಾಡಿಲ್ಲ.

ಸಿಪಿಐ(ಎಂ) ಮುಖಂಡರಾದ ಕವಿತಾ ಕೃಷ್ಣನ್ ಅವರು ಟ್ವೀಟ್ ಮಾಡಿ, “ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರು ಮೋದಿ ಹತ್ಯೆ ಸಂಚಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ ‘ಫ್ಯಾಸಿಸ್ಟ್ ವಿರೋಧಿ’ ನಡೆ ಎಂದು ಹೇಳಿದ್ದಾರೆ. ಇಂತಹ ಅಕ್ರಮವಾದ ಬಂಧನಗಳನ್ನು ಸಮರ್ಥಿಸಿಕೊಳ್ಳಲು ಪತ್ರಕರ್ತರು ನಾಚಿಕೆಪಡಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ ನ್ಯಾಯವಾದಿ ಸಿದ್ ಟ್ವೀಟ್ ಮಾಡಿ, “ಮಾಧ್ಯಮಗಳು ಮಾತ್ರ ಮೋದಿ ಹತ್ಯೆಯ ಸಂಚೆಂದು ಬಿಂಬಿಸಿವೆ. ಪೊಲೀಸರು ಒಂದು ಶಬ್ದವನ್ನೂ ನ್ಯಾಯಾಲಯದಲ್ಲಿ ಈ ಬಗ್ಗೆ ಹೇಳಲಿಲ್ಲ. ಕಾರ್ಯಕರ್ತರ ಮೇಲೆ ಸರ್ಕಾರವನ್ನು ಉರುಳಿಸುವ ಆರೋಪವನ್ನು ಹೊರಿಸಿರುವ ಮಾಧ್ಯಮಗಳ ಮಾಲೀಕರು ರಾತ್ರಿ ಹೇಗೆ ನಿದ್ದೆ ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಪತ್ರಕರ್ತರಾದ ರಾಣಾ ಅಯೂಬ್ ಅವರು, “ದೇಶದಲ್ಲಿ ಮಾನವ ಹಕ್ಕು ಕಾರ್ಯಕರ್ತರು ಮತ್ತು ವಕೀಲರ ಬಂಧನವಾಗುತ್ತಿದೆ. ಆದರೆ ಮಾಧ್ಯಮಗಳು 'ಮೋದಿ ಹತ್ಯೆಯ ಸಂಚನ್ನು ಹೊಸೆದ ಮಾವೋವಾದಿಗಳ ಬಂಧನ' ಎನ್ನುವ ತಲೆಬರಹಗಳಲ್ಲಿ ಸುದ್ದಿಗಳನ್ನು ಪ್ರಕಟಿಸುತ್ತವೆ,” ಎಂದು ಟೀಕಿಸಿದ್ದಾರೆ. ‘ಇಂಡಿಯಾ ಟುಡೆ’, ‘ರಿಪಬ್ಲಿಕ್’, ‘ಟೈಮ್ಸ್ ನೌ’ ಮೊದಲಾದ ವಾಹಿನಿಗಳು ಸಾಮಾಜಿಕ ಕಾರ್ಯಕರ್ತರನ್ನು ‘ಮೋದಿ ಹತ್ಯೆಯ ಸಂಚಿನಲ್ಲಿ ಬಂಧಿಸಲಾಗಿದೆ’ ಎನ್ನುವ ಸೆನ್ಸೇಶನಲ್ ಸುದ್ದಿಗಳನ್ನೇ ಪ್ರಕಟಿಸಿವೆ. ಅಲ್ಲದೆ, ಬಂಧಿತರನ್ನು ‘ನಗರ ಪ್ರದೇಶದ ನಕ್ಸಲೀಯರು’ ಎಂದು ಬಣ್ಣಿಸಿ, ಚರ್ಚಾ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಬಂದವರಿಂದ ಹೀನಾಯವಾಗಿ ಬಂಧಿತರ ಬಗ್ಗೆ ಅಭಿಪ್ರಾಯ ಹೇಳಿಸಿ, ಸಂಪೂರ್ಣವಾಗಿ ವಾಸ್ತವಕ್ಕೆ ದೂರವಾದ ಚಿತ್ರಣವನ್ನು ವೀಕ್ಷಕರ ಮುಂದಿಟ್ಟಿವೆ.

ಇದನ್ನೂ ಓದಿ : ಜನ ಹೋರಾಟಗಾರರ ಧ್ವನಿ ಹತ್ತಿಕ್ಕುವಲ್ಲಿ ಮೋದಿ ಅಧಿಪತ್ಯದ ಷಡ್ಯಂತ್ರಗಳಿವೆಯೇ?

ವಾಸ್ತವದಲ್ಲಿ ಮಾಧ್ಯಮಗಳು ನೀಡಿದ ಚಿತ್ರಣವನ್ನೇ ನಂಬಿದ ಬಲಪಂಥೀಯರು ಮತ್ತು ಅಮಾಯಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಲಯದ ಮೇಲೆಯೇ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. “ಪ್ರಧಾನಿ ಮೋದಿ ಹತ್ಯೆಯ ಸಂಚು ಸುಪ್ರೀಂ ಕೋರ್ಟ್‌ನಲ್ಲಿ ಹೇಗೆ ಅಸಹನೆ ಪ್ರಕಟಿಸುವ ವಿಧಾನ ಎಂದು ಬದಲಾಯಿತು,” ಎಂದು ಸಾಮಾನ್ಯ ಟ್ವೀಟಿಗರು ಪ್ರಶ್ನಿಸಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಆರ್‌ಬಿಐಯ ತಾತ್ಕಾಲಿಕ ನಿರ್ದೇಶಕರಾಗಿರುವ ಎಸ್ ಗುರುಮೂರ್ತಿ ಅವರಂತಹ ವ್ಯಕ್ತಿಗಳೂ ಪ್ರಧಾನಿಯವರ ಹತ್ಯೆ ಸಂಚಿನ ಆರೋಪಕ್ಕೆ ನ್ಯಾಯಾಲಯ ಬೆಲೆ ಕೊಡಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಮತ್ತು ಸರ್ಕಾರಿ ವಕೀಲರೇ ಅವರ ಮೇಲೆ ಈ ಆರೋಪ ಪಟ್ಟಿಯನ್ನು ಹೊರಿಸಿರಲಿಲ್ಲ ಎನ್ನುವ ಸತ್ಯವನ್ನು ಮರೆಮಾಚಲಾಗಿದೆ. ಹೀಗಾಗಿ, ಪತ್ರಕರ್ತರು ಮತ್ತು ವಕೀಲರು ಟ್ವಿಟರ್ ಮೂಲಕ ಜನರಿಗೆ ನ್ಯಾಯಾಲಯದಲ್ಲಿ ನಡೆದ ಚಟುವಟಿಕೆಗಳನ್ನು ವಿವರಿಸಿ ಸತ್ಯವನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಪತ್ರಕರ್ತ ಅಭಿಷೇಕ್ ಡೇ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ ಸಂಪೂರ್ಣ ವಿವರ ನೀಡಿದ್ದಾರೆ. “ಪ್ರಧಾನಿ ಮೋದಿ ಹತ್ಯೆಯ ಯಾವುದೇ ಪ್ರಕರಣವನ್ನೂ ಆರೋಪಿಗಳ ಮೇಲೆ ಹೊರಿಸಲಾಗಿಲ್ಲ. ಭೀಮಾ ಕೋರೆಗಾಂವ್‌ ಹಿಂಸೆಗೆ ಸಂಬಂಧಿಸಿ ರಾಜ್ಯಾದ್ಯಂತ ೫೦೨ ಪ್ರಕರಣಗಳನ್ನು ಹಾಕಲಾಗಿದೆ. ೧೦ ಸಾಮಾಜಿಕ ಕಾರ್ಯಕರ್ತರನ್ನು ಕೇಸ್ 04/2018ಗೆ ಸಂಬಂಧಿಸಿ ಬಂಧಿಸಲಾಗಿದೆ. ಕೇಸ್ 04/2018 ಅನ್ನು ಪುಣೆಯ ವಿಶ್ರಾಮ್‌ಬೌಗ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪುಣೆಯ ನಿವಾಸಿ ತುಷಾರ್ ದಾಮ್‌ಗುಡೆ ಅವರ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ. ಎಲ್ಗಾರ್‌ ಪರಿಷತ್‌ಗೆ ಭೇಟಿ ನೀಡಿದ್ದ ತುಷಾರ್ ದಾಮ್ ಅವರು ಆರೋಪಿಗಳು ಮಾಡಿದ ಕೆಲವು ಭಾಷಣಗಳನ್ನು ಇಷ್ಟಪಟ್ಟಿರಲಿಲ್ಲ. ಅದು ಪ್ರಚೋದನಕಾರಿ ಆಗಿತ್ತೆಂದು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಜೂನ್ ಮತ್ತು ಆಗಸ್ಟ್‌ನಲ್ಲಿ ಬಂಧನಕ್ಕೆ ಒಳಗಾದ ಎಲ್ಲ ೧೦ ಸಾಮಾಜಿಕ ಕಾರ್ಯಕರ್ತರನ್ನು ಇದೇ ಕೇಸ್‌ ಮೇಲೆ ವಿಚಾರಣೆ ನಡೆಸಲಾಗುತ್ತಿದೆ. ಈ ವಿಚಾರಣೆಯೇ ಅವರನ್ನು ಭೀಮಾ ಕೋರೆಗಾಂವ್ ಮತ್ತು ಮೋದಿ ಹತ್ಯೆ ಸಂಚು, ಮಾವೋವಾದಿ ಜೊತೆಗಿನ ನಂಟನ್ನು ಬಯಲಿಗೆ ತಂದಿದೆ ಎನ್ನುವುದು ಪೊಲೀಸರ ಅಭಿಪ್ರಾಯ. ಆದರೆ, ಭೀಮಾ ಕೋರೆಗಾಂವ್ ಹಿಂಸೆಗೆ ಸಂಬಂಧಿಸಿ ಆರೋಪ ಎದುರಿಸುತ್ತಿರುವ ಭಿಡೆ ಅವರನ್ನು ತಮ್ಮ ಸಾಮಾಜಿಕ ಚಟುವಟಿಕೆಗಳಲ್ಲಿ ಉಲ್ಲೇಖಿಸುತ್ತಾರೆ. ಭೀಮಾ ಕೋರೆಗಾಂವ್ ಹಿಂಸೆಗೆ ಸಂಬಂಧಿಸಿ ಮಿಲಿಂದ್ ಎಕೋಬ್ಟೆ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ ಭಿಡೆ ಅವರನ್ನು ಪೊಲೀಸರು ಬಂಧಿಸುವುದು ಬಿಡಿ, ವಿಚಾರಣೆಯೂ ನಡೆಸಿಲ್ಲ. ಈ ಇಬ್ಬರ ಮೇಲೆ ಪುಣೆ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ,” ಎನ್ನುವುದು ಅಭಿಷೇಕ್ ಡೇ ಅವರ ಸರಣಿ ಟ್ವೀಟ್‌ಗಳ ಸಾರಾಂಶ.

ಈ ನಡುವೆ, ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಟ್ವೀಟ್ ಮಾಡಿ, “ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತರ ಬಂಧನಕ್ಕೆ ಸಂಬಂಧಿಸಿದ ಅರ್ಜಿಗಳ ವಿವರವನ್ನು ನಮ್ಮ ವರದಿಗಾರರು ಪಡೆದಿದ್ದಾರೆ. ಈ ಅರ್ಜಿಗಳಲ್ಲಿ ಪ್ರಧಾನಿ ಮೋದಿ ಹತ್ಯೆ ಸಂಚು ಅಥವಾ ಭೀಮಾ ಕೋರೆಗಾಂವ್ ಹಿಂಸೆಯ ಉಲ್ಲೇಖವೇ ಇಲ್ಲ,” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಬಗ್ಗೆ ವರದಿ ಮಾಡಿದ ಹಲವು ಪತ್ರಕರ್ತರು ಪ್ರಧಾನಿ ಹತ್ಯೆ ಸಂಚಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಯಾವುದೇ ಉಲ್ಲೇಖವಾಗಿಲ್ಲ ಎಂದೇ ಹೇಳಿದ್ದಾರೆ. “ಇಂದು ನ್ಯಾಯಾಲಯದಲ್ಲಿ ಪ್ರಧಾನಿ ಹತ್ಯೆ ಸಂಚಿಗೆ ಸಂಬಂಧಿಸಿ ಯಾವುದೇ ಉಲ್ಲೇಖವಾಗಿಲ್ಲ. ಸುಪ್ರೀಂ ಕೋರ್ಟ್‌ ಅಥವಾ ಪುಣೆಯ ಹೈಕೋರ್ಟ್‌ಗಳಲ್ಲಿ ಎಲ್ಲೂ ಹತ್ಯೆ ಸಂಚು ಬಗ್ಗೆ ಉಲ್ಲೇಖವಾಗಿಲ್ಲ. ಅಂತಹ ಸಂಚಿನ ಕುರಿತ ಪತ್ರವೊಂದು ಇದೆ ಎನ್ನುವ ವಿಚಾರವೂ ಎತ್ತಿಲ್ಲ. ಹಾಗಿದ್ದರೆ, ಪ್ರಧಾನಿ ಭದ್ರತೆ ಒಂದು ತಮಾಷೆಯ ವಿಚಾರವೇ?” ಎಂದು ಪತ್ರಕರ್ತೆ ಅನುಶಾ ಸೋನಿ ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಹಲವು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ನಿಜವಾದ ಕಾರಣ ನಿತ್ಯವೂ ಬದಲಾಗುತ್ತಲೇ ಇದೆ ಎಂದು ಹಲವು ಟ್ವೀಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪತ್ರಕರ್ತೆ ಸುಪ್ರಿಯಾ ಭಾರದ್ವಾಜ್ ಟ್ವೀಟ್ ಮಾಡಿ, “ಬಂಧನಕ್ಕೆ ನಿಜವಾದ ಕಾರಣವೇನು? ಸಂಚು ಬಲವಾಗುತ್ತಲೇ ಇದೆ. ನೋಟು ಅಮಾನ್ಯ ರೀತಿಯಲ್ಲಿಯೇ ಸಾಮಾಜಿಕ ಕಾರ್ಯಕರ್ತರ ಬಂಧನದ ಕಾರಣವೂ ಬದಲಾಗುತ್ತಲೇ ಇದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ, ಬಲಪಂಥೀಯ ಟ್ವೀಟಿಗರು, ಬಂಧನಕ್ಕೊಳಗಾದವರು ನೇಪಾಳದಿಂದ ಶಸ್ತ್ರಾಸ್ತ್ರ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದರು ಎನ್ನುವ ಹೊಸ ಆರೋಪವನ್ನು ಇಂದು ಹೊರಿಸುತ್ತಿದ್ದಾರೆ. ಪೊಲೀಸರು ನೀಡಿದ ಹೇಳಿಕೆಯಲ್ಲಿ ಬಂಧಿತರು ‘ಫ್ಯಾಸಿಸ್ಟ್ ವಿರೋಧಿಗಳು’ ಎಂದು ಹೇಳಿರುವುದೂ ಮತ್ತೊಂದೆಡೆ ತಮಾಷೆಯ ವಸ್ತುವಾಗಿದೆ. ಕೇಂದ್ರ ಸರ್ಕಾರವನ್ನು ಫ್ಯಾಸಿಸ್ಟ್ ಸರ್ಕಾರ ಎಂದು ಪೊಲೀಸರೇ ಬಣ್ಣಿಸುತ್ತಿದ್ದಾರೆ ಎಂದು ಟ್ವೀಟಿಗರು ಅಣಕಿಸಿದ್ದಾರೆ. ಕೆಲವು ನಾಯಕರು ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ‘ಹತ್ಯೆಯ ಸಂಚು’ ನಾಟಕಗಳನ್ನು ಆಡುತ್ತಾರೆ ಎಂದು ಪತ್ರಕರ್ತ ಲಾಚ್ಲನ್ ಮಾರ್ಕೇ ಅಭಿಪ್ರಾಯಪಟ್ಟಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಂಥವರು ಟ್ವಿಟರ್‌ ಜಾಲತಾಣವನ್ನೇ ತಮ್ಮ ಸುಳ್ಳು ಸುದ್ದಿಗಳ ಪ್ರಚಾರಾಭಿಯಾನಕ್ಕೆ ಬಳಸಿಕೊಂಡಿದ್ದಾರೆ. ಇಂತಹ ಪ್ರಯತ್ನಗಳಿಂದ ಸಾಕಷ್ಟು ವಿರೋಧಗಳನ್ನೂ ಅವರು ಎದುರಿಸುತ್ತಿದ್ದಾರೆ. ಬಂಧಿತರನ್ನು ನಗರದಲ್ಲಿ ನೆಲೆಸಿರುವ ನಕ್ಸಲೀಯರು ಎಂದು ಬಣ್ಣಿಸಿರುವುದೇ ಅಲ್ಲದೆ, ಬಂಧಿತರನ್ನು ಬೆಂಬಲಿಸುವವರ ಪಟ್ಟಿ ಮಾಡುತ್ತೇನೆ ಎಂದು ಮುಂದಾಗಿದ್ದಾರೆ. ಹೀಗಾಗಿ, ಅವರು ಟ್ವೀಟಿಗರ ಆಕ್ರೋಶವನ್ನೂ ಎದುರಿಸುತ್ತಿದ್ದಾರೆ.

ಒಟ್ಟಾರೆ, ಈ ಪ್ರಕರಣದಲ್ಲಿ ಮಾಧ್ಯಮಗಳು ನೈತಿಕ ಹೊಣೆಗಾರಿಕೆಯಿಂದ ವರ್ತಿಸಿಲ್ಲ ಎನ್ನುವುದು ಮಾತ್ರ ನಿಜ. ಕೇಂದ್ರ ಸರ್ಕಾರ ಬಯಸಿದ ರೀತಿಯಲ್ಲಿ ಸುದ್ದಿಯನ್ನು ತಿರುಚಿ ಮುಂದಿಡುವ ವೇದಿಕೆಗಳಾಗಿ ಮಾಧ್ಯಮಗಳು ಪರಿಣಮಿಸುತ್ತಿರುವುದು ವಿಷಾದನೀಯ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More