ಲಕ್ಷ್ಮಿ ಹೆಬ್ಬಾಳ್ಕರ್‌- ಸತೀಶ್‌ ಜಾರಕಿಹೊಳಿ ಕಾದಾಟದ ಹಿಂದಿನ ಅಸಲಿಯತ್ತೇನು?

ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕಿಯಾಗಲು ಯತ್ನಿಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಹಿರಿಯ ನಾಯಕ ಸತೀಶ್‌ ಜಾರಕಿಹೊಳಿ ನಡುವೆ ಸಂಘರ್ಷ ಸ್ಫೋಟಗೊಂಡಿದೆ. ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರ ಆಯ್ಕೆ ಸಂಬಂಧ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರು ತಿರುಗಿಬಿದ್ದಿರುವುದು ಕುತೂಹಲಕಾರಿ

ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ (ಎಐಸಿಸಿ) ಮಾಜಿ ಕಾರ್ಯದರ್ಶಿ ಸತೀಶ್‌ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ. ಈ ಕಲಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಮೇಶ್‌ ಜಾರಕಿಹೊಳಿ ಅವರು ಸಹೋದರ ಸತೀಶ್‌ ಪರವಾಗಿ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಮೇಶ್‌ ಅವರ ನಡೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ದಿಗಿಲುಗೊಂಡಿದ್ದಾರೆ. ಇತ್ತೀಚಿನವರೆಗೂ ಸತೀಶ್‌ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ರಮೇಶ್‌ ಅವರ ನಡೆ ಕುತೂಹಲ ಹುಟ್ಟಿಸಿದ್ದು, ಲಕ್ಷ್ಮಿ-ಸತೀಶ್‌ ನಡುವಿನ ಆರೋಪ-ಪ್ರತ್ಯಾರೋಪವು ಹಲವು ಬಗೆಯ ಚರ್ಚೆಗೆ ನಾಂದಿ ಹಾಡಿದೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್‌ ಜಾರಕಿಹೊಳಿ ಅವರು ಜಿಲ್ಲೆ ಹಾಗೂ ನಾಯಕ ಸಮುದಾಯದ ಪ್ರಭಾವಿ ನೇತಾರ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದದಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ರಾಜ್ಯ ಕಾಂಗ್ರೆಸ್‌ನಲ್ಲಿ ಈಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಹಿಳಾ ನಾಯಕಿ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ಪ್ರಾಥಮಿಕ ಭೂಅಭಿವೃದ್ಧಿ ಬ್ಯಾಂಕಿಗೆ (ಪಿಎಲ್‌ಡಿ) ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕ ವಿಚಾರದಲ್ಲಿ ಲಕ್ಷ್ಮಿ ಮತ್ತು ಸತೀಶ್‌ ಅವರ ನಡುವಿನ ವಿರಸ ಸಾರ್ವಜನಿಕಗೊಂಡಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಕಾರ್ಯಕರ್ತರಿಗೆ ದಕ್ಕಬೇಕು. ಆದರೆ, ಬಿಜೆಪಿಯ ಸಂಜಯ ಪಾಟೀಲ್ ಅವರ ಜೊತೆ ಸೇರಿ ಜಾರಕಿಹೊಳಿ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದು ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಪದ ತಿರುಳು. ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್‌ ಪಾಟೀಲ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈಗ ತಮ್ಮ ಬೆಂಬಲಿಗರ ಪಡೆಯನ್ನು ಬಲಿಷ್ಠಗೊಳಿಸಿ, ರಾಜಕೀಯ ಹಿಡಿತ ಸಾಧಿಸಲು ಸ್ಥಳೀಯ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬೆಂಬಲಿಗರಿಗೆ ಸ್ಥಾನಮಾನ ಕಲ್ಪಿಸಲು ಲಕ್ಷ್ಮಿ ಹೆಬ್ಬಾಳ್ಕರ್‌ ಮುಂದಾಗಿದ್ದಾರೆ. ಆದರೆ, ಇದನ್ನು ತಡೆಯಲು ಸತೀಶ್‌ ಜಾರಕಿಹೊಳಿ ಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಪ್ರಭಾವಗಳಿಸಿಕೊಂಡಷ್ಟೂ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಸತೀಶ್‌ ಆತಂಕಕ್ಕೆ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಸದ್ಯದ ಕಲಹವನ್ನು ಪಿಎಲ್‌ಡಿ ಬ್ಯಾಂಕ್‌ ಚುನಾವಣೆಗೆ ಸೀಮಿತವಾಗಿ ನೋಡಬಾರದು ಎನ್ನುವ ಮಾತುಗಳು ಕೇಳಿಬಂದಿವೆ.

೧೫ ಸದಸ್ಯರನ್ನು ಹೊಂದಿರುವ ಪಿಎಲ್‌ಡಿ ಬ್ಯಾಂಕಿನಲ್ಲಿ ೯ ಮಂದಿ ಸದಸ್ಯರು ಲಕ್ಷ್ಮಿ ಅವರ ಪರವಾಗಿದ್ದಾರೆ. ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಆಗಸ್ಟ್‌ ೨೮ರಂದು ಚುನಾವಣೆಯೂ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಲಕ್ಷ್ಮಿ ಪಾಳೆಯದಲ್ಲಿರುವ ಸದಸ್ಯರೊಬ್ಬರನ್ನು ಅಡಗಿಸಿಡುವ ತಂತ್ರದ ಮೂಲಕ ಚುನಾವಣೆ ಮುಂದೂಡಿಸಲು ಸತೀಶ್‌ ಜಾರಕಿಹೊಳಿ ಬಣ ಯಶಸ್ವಿಯಾಗಿದೆ ಎನ್ನಲಾಗಿದೆ. ಆದರೆ, ಮಧ್ಯರಾತ್ರಿಯಲ್ಲಿ ನಾಪತ್ತೆಯಾದ ಎನ್ನಲಾದ ಸದಸ್ಯರನ್ನು ಕರೆಸಿಕೊಳ್ಳುವ ಮೂಲಕ ತಹಶೀಲ್ದಾರ್ ಕಚೇರಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಧರಣಿ ಕೂತು ಚುನಾವಣೆ ನಡೆಸುವಂತೆ ಪಟ್ಟುಹಿಡಿದಿದ್ದಾರೆ. ಸತೀಶ್‌ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸಹೋದರನಿಗೆ ಮುಜುಗರ ತಪ್ಪಿಸಲು ಮಧ್ಯಪ್ರವೇಶಿಸಿರುವ ಸಚಿವ ರಮೇಶ್‌ ಜಾರಕಿಹೊಳಿ ಅವರು ಲಕ್ಷ್ಮಿ ಅವರ ವಿರುದ್ಧ ಕಿಡಿಕಾರಿದ್ದಾರೆ. “ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಸತೀಶ್‌ ಕಾಲಕಸವಾಗಲಿಕ್ಕೂ ಲಾಯಕ್ಕಲ್ಲ,” ಎಂದಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ವಿರಸಕ್ಕೆ ಹಲವು ಕಾರಣಗಳಿವೆ. ಪಕ್ಷದೊಳಗೆ ರಾಜ್ಯಮಟ್ಟದಲ್ಲಿ ಪ್ರಭಾವಿಯಾಗುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಜಿಲ್ಲಾ ರಾಜಕೀಯದ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಇದು ಸತೀಶ್‌ ಜಾರಕಿಹೊಳಿಗೆ ಸುತಾರಾಂ ಇಷ್ಟವಾಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಸತೀಶ್‌ ಅವರ ಮತ್ತೊಬ್ಬ ಸಹೋದರ ಉದ್ಯಮಿ ಲಖನ್ ಜಾರಕಿಹೊಳಿ ಅವರಿಗೆ ಯಮಕನಮರಡಿ ಕ್ಷೇತ್ರ ಬಿಟ್ಟುಕೊಟ್ಟು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಸತೀಶ್ ಚಿಂತನೆ ನಡೆಸಿದ್ದರು. ಆದರೆ, ಸತೀಶ್‌ ಅವರ ತಂತ್ರ ಕೈಗೂಡಲಿಲ್ಲ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಲು ಲಕ್ಷ್ಮಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಇದಕ್ಕೆ ಸತೀಶ್‌ ಜಾರಕಿಹೊಳಿ ತಡೆಗೋಡೆಯಾದರು ಎನ್ನಲಾಗಿದೆ. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು, ಸತೀಶ್‌ಗೂ ಮಂತ್ರಿ ಪದವಿ ದೊರೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಇಬ್ಬರ ಕಲಹದಲ್ಲಿ ಸಚಿವ ಸ್ಥಾನ ರಮೇಶ್‌ ಜಾರಕಿಹೊಳಿ ಪಾಲಾಯಿತು. ಇದೇ ಕಾರಣಕ್ಕೆ ಸತೀಶ್‌ ಅವರು ರಮೇಶ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಚುನಾವಣೆಯಲ್ಲಿ ಸತೀಶ್‌ ಮತ್ತು ರಮೇಶ್‌ ಅವರ ಗೆಲುವಿನ ಅಂತರ ಗಣನೀಯವಾಗಿ ತಗ್ಗಿದ್ದು, ಲಕ್ಷ್ಮಿ ಅವರ ಗೆಲುವಿನ ಅಂತರ ಹೆಚ್ಚಿತ್ತು. ಇದೂ ಲಕ್ಷ್ಮಿ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಬಿಗುಮಾನಕ್ಕೆ ಕಾರಣ ಎನ್ನಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಸತೀಶ್ ಅವರು ಸಿದ್ದರಾಮಯ್ಯ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಜಲಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ್‌ ಅವರ ಪಾಳೆಯದಲ್ಲಿ ಸಕ್ರಿಯರಾಗಿದ್ದಾರೆ. ಇದುವೇ ಉಭಯ ನಾಯಕರ ನಡುವಿನ ಅಂತರ ಹೆಚ್ಚಾಗಲು ಪ್ರಮುಖವಾದ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : ಸಚಿವ ಸ್ಥಾನಕ್ಕೆ ಬೆಳಗಾವಿ ಲಾಬಿ; ಹೆಬ್ಬಾಳ್ಕರ್, ನಿಂಬಾಳ್ಕರ್ ನಡುವೆ ಪೈಪೋಟಿ

“ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ತಪ್ಪುತ್ತಿದೆ ಎನ್ನುವುದು ಜಾರಕಿಹೊಳಿ ಸಹೋದರರಿಗೆ ಅರಿವಿಗೆ ಬರಲಾರಂಭಿಸಿದೆ. ಇದೇ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಹಿನ್ನಡೆ ಇಂಟು ಮಾಡುವ ಕೆಲಸ ಮಾಡಲಾಗುತ್ತಿದೆ. ಇದರ ಮಧ್ಯೆ, ಲಕ್ಷ್ಮಿ ಹೆಬ್ಬಾಳ್ಕರ್‌ ಅವರೂ ತಾನು ಪ್ರಭಾವಿ ಎಂಬುದನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆ. ರಾಜಕೀಯ ಮೇಲಾಟಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಲಕ್ಷ್ಮಿ-ಸತೀಶ್‌ ಅವರ ನಡುವೆ ವೈಮನಸ್ಯ ಇಂದು, ನಿನ್ನೆಯದಲ್ಲ. ಈಚೆಗೆ ಸ್ವಲ್ಪಮಟ್ಟಿಗೆ ಹೊರಬಂದಿದೆಯಷ್ಟೆ,” ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರೊಬ್ಬರು. ಲಕ್ಷ್ಮಿ ಮತ್ತು ಸತೀಶ್‌ ಅವರ ನಡುವಿನ ಕಲಹವು ಬೆಳಗಾವಿ ಕಾಂಗ್ರೆಸ್ ಜಿಲ್ಲಾ ರಾಜಕಾರಣ ಮತ್ತಷ್ಟು ರೋಚಕವಾಗುವುದರ ಮುನ್ಸೂಚನೆ ಎನ್ನುವ ಮಾತುಗಳು ಬಲವಾಗಿ ಕೇಳಿಬಂದಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More