ಎನ್‌ಡಿಎ, ಯುಪಿಎ ಮೈತ್ರಿಕೂಟಗಳಲ್ಲಿ ಅಸಮಾಧಾನ ಸ್ಫೋಟಿಸಲಿದೆಯೇ ಸೀಟು ಹಂಚಿಕೆ ವಿಚಾರ?

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಅಸಮಾಧಾನ ಮೂಡುತ್ತಿರುವ ಹೊತ್ತಿನಲ್ಲೇ, ಇತ್ತ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಡುವೆ ಇದೇ ವಿಚಾರವಾಗಿ ಭಿನ್ನಾಪ್ರಾಯಗಳು ಮೂಡುವ ಎಲ್ಲ ಸೂಚನೆಗಳು ಕಂಡುಬಂದಿವೆ

ಮುಂಬರುವ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಗಳು ದಟ್ಟವಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸೀಟು ಹಂಚಿಕೆ ಸಂಬಂಧ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಭಿನ್ನಾಪ್ರಾಯಗಳು ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿವೆ. ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳಿದ್ದು, ಮಹಾರಾಷ್ಟ್ರವು 48 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಹಾಗಾಗಿ ಈ ಎರಡು ರಾಜ್ಯಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿವೆ.

ಬಿಹಾರದ ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿಗೆ 20, ಜೆಡಿಯುಗೆ 12, ರಾಮ್‌ ವಿಲಾಸ್‌ ಪಾಸ್ವಾನರ ಎಲ್‌ಜೆಪಿಗೆ 6 ಮತ್ತು ಉಪೇಂದ್ರ ಕುಶ್ವಾಹ ನೇತೃತ್ವದ ಆರ್‌ಎಲ್‌ಎಸ್‌ಪಿಗೆ‌ 2 ಸ್ಥಾನಗಳ ಹಂಚಿಕೆ ಪ್ರಸ್ತಾವನೆಯನ್ನು ಬಿಜೆಪಿ ಮುಂದಿಟ್ಟಿದೆ. ಇದನ್ನು ಜೆಡಿಯು ನಾಯಕತ್ವ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಕಳೆದ ಆರು ತಿಂಗಳಿಂದ ಸೀಟು ಹಂಚಿಕೆ ವಿಚಾರವಾಗಿ ಜೆಡಿಯು ನಾಯಕರು ಹಾಗೂ ಬಿಹಾರದ ಬಿಜೆಪಿ ಮುಖಂಡರ ನಡುವೆ ಅಸಮಾಧಾನ ಕೇಳಿಬಂದಿತ್ತು. ಬಿಹಾರದಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ನಿತೀಶ್‌ ನೇತೃತ್ವದಲ್ಲಿ ಎದುರಿಸಲಾಗುತ್ತದೆಂದು ಜೆಡಿಯು ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಹಾರ ಬಿಜೆಪಿ ಮುಖಂಡ ಮತ್ತು ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು, “2019ರ ಲೋಕಸಭಾ ಚುನಾವಣೆಯನ್ನು ನಿತೀಶ್‌ ಮುಂದಾಳತ್ವದಲ್ಲಿ ಸ್ಪರ್ಧಿಸುವುದು ನಿಶ್ಚಿತ. ಆದರೆ, ಸೀಟು ಹಂಚಿಕೆ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಕೈಗೊಳ್ಳಲಿದೆ,” ಎಂದು ಚಾಣಾಕ್ಷತನದ ಹೇಳಿಕೆ ನೀಡಿದ್ದರು.

ಈ ನಡುವೆ ಗುರುವಾರ (ಆ.30), ಬಿಜೆಪಿ ಸೀಟು ಹಂಚಿಕೆ ಪ್ರಸ್ತಾವನೆ ಮುಂದಿಟ್ಟಿರುವ ಬಗ್ಗೆ ವರದಿಯಾಗಿದ್ದು, ಇದಕ್ಕೆ ಜೆಡಿಯು ನಾಯಕತ್ವ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಸೀಟು ಹಂಚಿಕೆ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಬೇಕೆಂದು ಜೆಡಿಯು ನಾಯಕತ್ವ ಬಿಜೆಪಿಗೆ ಸೂಚಿಸಿದೆ ಎನ್ನಲಾಗುತ್ತಿದೆ. ಬಿಹಾರದಲ್ಲಿ ಬಿಜೆಪಿಗಿಂತ ಜೆಡಿಯು ದೊಡ್ಡ ಪಕ್ಷವಾಗಿದ್ದು, ಸಹಜವಾಗಿ ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಹಂಚಿಕೆಯಾಗಬೇಕು ಎನ್ನುವುದು ಜೆಡಿಯು ಒತ್ತಾಸೆ. ಜೆಡಿಯು ಬೇಡಿಕೆಯನ್ನು ತಳ್ಳಿಹಾಕಿರುವ ಬಿಜೆಪಿ ಹೈಕಮಾಂಡ್,‌ “2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 22 ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಯು ಕೇವಲ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆ ಕಾರಣ ಬಿಜೆಪಿಗೆ ಹೆಚ್ಚು ಲೋಕಸಭಾ ಸೀಟುಗಳನ್ನು ಬಿಟ್ಟುಕೊಡಬೇಕು,” ಎಂದು ಹೇಳಿದೆ.

ಕಳೆದ ಚುನಾವಣೆಯಲ್ಲಿದ್ದ ಮೋದಿ ಅಲೆ ಈಗ ಕಡಿಮೆ ಆಗಿದೆ ಎಂಬುದು ಜೆಡಿಯು ಮುಖಂಡರಿಗೆ ಮನವರಿಕೆಯಾದಂತಿದೆ. ಆ ಕಾರಣ, ಬಿಹಾರದಲ್ಲಿ ಜೆಡಿಯುಗೆ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆಯನ್ನು ನಿತೀಶ್‌ ಮುಂದಿಟ್ಟಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಆದರೆ, ಬಿಹಾರದಲ್ಲಿ ಮೋದಿ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಬೇಕೆಂಬುದು ಅಲ್ಲಿನ ಬಿಜೆಪಿ ನಾಯಕರ ಒತ್ತಾಸೆಯಾಗಿದೆ. ಈಗ ಬಿಜೆಪಿ ಮುಂದಿಟ್ಟಿರುವ ಪ್ರಸ್ತಾವನೆಯನ್ನು ನಿತೀಶ್‌ ಒಪ್ಪಿಕೊಳ್ಳಲಿದ್ದಾರಾ ಅಥವಾ ಮತ್ತೆ ಎನ್‌ಡಿಎ ಮೈತ್ರಿಕೂಟದಿಂದ ದೂರವಾಗಲಿದ್ದಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಮಹಾರಾಷ್ಟ್ರದಲ್ಲಿ 50-50 ಪ್ರಸ್ತಾವನೆ ಮುಂದಿಟ್ಟ ಎನ್‌ಸಿಪಿ

ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ವಿಚಾರ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಅಸಮಾಧಾನ ಮೂಡುತ್ತಿರುವ ಹೊತ್ತಿನಲ್ಲೇ ಇತ್ತ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಡುವೆಯೂ ಇದೇ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮೂಡುವ ಎಲ್ಲ ಸೂಚನೆಗಳು ಕಂಡುಬಂದಿವೆ.

ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಎನ್‌ಸಿಪಿ ತಿಳಿಸಿದೆ. ಸೀಟು ಹಂಚಿಕೆಯ ಅಂತಿಮ ನಿರ್ಧಾರವನ್ನು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಾಯಕರನ್ನು ಒಳಗೊಂಡ ನಾಲ್ಕು ಸದಸ್ಯರ ಸಮಿತಿ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ‌

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 26, ಎನ್‌ಸಿಪಿ 22 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಕಾಂಗ್ರೆಸ್‌ 2 ಸ್ಥಾನ ಗೆದ್ದುಕೊಂಡರೆ, ಎನ್‌ಸಿಪಿ 4 ಕ್ಷೇತ್ರ ತನ್ನದಾಗಿಸಿಕೊಂಡಿತ್ತು. ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಮತಹಂಚಿಕೆ ಪ್ರಮಾಣದಲ್ಲಿ ಕಾಂಗ್ರೆಸ್‌ ಪಕ್ಷವು ಎನ್‌ಸಿಪಿಗಿಂತ ಶೇ.2ರಷ್ಟು ಮುಂದಿತ್ತು. ಈ ವಿಚಾರವನ್ನು ಕಾಂಗ್ರೆಸ್‌ ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಿರುವ ಎನ್‌ಸಿಪಿ ನಾಯಕರು, ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬೇಕೆಂಬ ಬೇಡಿಕೆಯನ್ನಿರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪ್ರತ್ಯೇಕ ಸ್ಪರ್ಧೆ ಕುರಿತ ನಿತೀಶ್‌ ಹೇಳಿಕೆಯಲ್ಲಿ ಬಿಜೆಪಿಗಿರುವ ಸಂದೇಶವೇನು?

ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬೇಡಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡರು, ಮಹಾರಾಷ್ಟ್ರದಲ್ಲಿ ತಮ್ಮದು‌ ದೊಡ್ಡ ಪಕ್ಷವಾಗಿದ್ದು, ಎನ್‌ಸಿಪಿ ಬೇಡಿಕೆ ನ್ಯಾಯಸಮ್ಮತವಲ್ಲ ಎಂದಿದ್ದಾರೆ. “ಮೈತ್ರಿಧರ್ಮದ ಅನುಸಾರ ನಡೆದುಕೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷವು ಕಳೆದ ಬಾರಿಗಿಂತ ಒಂದೆರಡು ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಬಹುದು. ಆದರೆ, ಅರ್ಧದಷ್ಟು ಸ್ಥಾನಗಳ ಬೇಡಿಕೆ ಮುಂದಿಡುತ್ತಿರುವ ಎನ್‌ಸಿಪಿ ಪಕ್ಷದ ನಡೆ ನ್ಯಾಯ ಸಮ್ಮತವಾದುದಲ್ಲ,” ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರೊಬ್ಬರು ‘ದಿ ಕ್ವಿಂಟ್‌’ ಡಿಜಿಟಲ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಸೀಟು ಹಂಚಿಕೆ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್‌ ಮುಖಂಡರಾದ ಅಶೋಕ್‌ ಗೆಹ್ಲೋಟ್ ಮತ್ತು ಅಶೋಕ್‌ ಚೌಹಾಣ್‌‌, ಎನ್‌ಸಿಪಿ ನಾಯಕರಾದ ಪ್ರಫುಲ್‌ ಪಟೇಲ್‌ ಹಾಗೂ ಜಯಂತ್‌ ಪಾಟೀಲ್‌ ಅವರನ್ನೊಳ್ಳಗೊಂಡ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More