ಚಿಂಚನಸೂರ ಬಿಜೆಪಿ ಸೇರ್ಪಡೆಯಿಂದ ಯಾದಗಿರಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ?

ಬಾಬುರಾವ್ ಚಿಂಚನಸೂರ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಕ್ತಿ ಕುರಿತ ಚರ್ಚೆ ಶುರುವಾಗಿದೆ. ಮಾಲೀಕಯ್ಯ ಗುತ್ತೇದಾರ್‌ ಈಗಾಗಲೇ ಪಕ್ಷ ತೊರೆದಿದ್ದು, ಮಾಲಕರೆಡ್ಡಿ ತಟಸ್ಥವಾಗಲು ಮುಂದಾಗಿರುವುದು ದೀರ್ಘಾವಧಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎನ್ನಲಾಗುತ್ತಿದೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹೈದರಾಬಾದ್‌ ಕರ್ನಾಟಕ ಭಾಗದ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಹಾಗೂ ಕಲಬುರಗಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಿಂಚನಸೂರ ಅವರು ಹೈದರಾಬಾದ್‌-ಕರ್ನಾಟಕದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುವ ಕೋಲಿ-ಕಬ್ಬಲಿಗ ಸಮಾಜದ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಏಳು ಬಾರಿ ಸ್ಪರ್ಧಿಸಿ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಚಿಂಚನಸೂರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಗನಗೌಡ ಕಂದಕೂರು ಎದುರು ಪರಾಭವಗೊಂಡಿದ್ದರು. ಚಿತ್ತಾಪುರ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿರುವ ಅವರು ಗುರುಮಠಕಲ್‌ನಿಂದ ಎರಡು ಬಾರಿ ಆರಿಸಿ ಬಂದಿದ್ದರು. ಕ್ಷೇತ್ರ ಪುನರ್ವಿಂಗಡೆಯ ಸಂದರ್ಭದಲ್ಲಿ ಚಿತ್ತಾಪುರ ಮೀಸಲು ಕ್ಷೇತ್ರವಾದ್ದರಿಂದ ಮಲ್ಲಿಕಾರ್ಜುನ ಖರ್ಗೆ ಇಲ್ಲಿಗೆ, ಸಾಮಾನ್ಯ ಕ್ಷೇತ್ರವಾದ ಗುರುಮಠಕಲ್‌ಗೆ ಚಿಂಚನಸೂರ ವಲಸೆ ಹೋಗಿದ್ದರು.

ಹೈದರಾಬಾದ್ ಕರ್ನಾಟಕ ವಲಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಅಫಜಲಪುರ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಚುನಾವಣೆಗೆ ಕೆಲವೇ ತಿಂಗಳು ಇರುವ ಸಂದರ್ಭದಲ್ಲಿ ಹಿರಿಯ ನಾಯಕ ಮಾಲಕರೆಡ್ಡಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಆನಂತರ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಸ್ಪರ್ಧಿಸಿ ಸೋಲನುಭವಿಸಿದರು. ಈ ಮಧ್ಯೆ, ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದಾರೆ. ಉಳಿದ ಎರಡು ಬಿಜೆಪಿ ಪಾಲಾಗಿದ್ದು, ಮತ್ತೊಂದು ಕ್ಷೇತ್ರ ಜೆಡಿಎಸ್‌ ತೆಕ್ಕೆಯಲ್ಲಿದೆ. ಗುರುಮಠಕಲ್‌ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಚಿಂಚನಸೂರ ಅವರು ಬಿಜೆಪಿ ಸೇರಿರುವುದರಿಂದ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಬಹುದಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಂದರು ಮತ್ತು ಒಳನಾಡು ಹಾಗೂ ಜವಳಿ ಸಚಿವರಾಗಿದ್ದ ಚಿಂಚನಸೂರ ಅವರನ್ನು ೨೦೧೬ರಲ್ಲಿ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಕೈಬಿಡಲಾಗಿತ್ತು. ಆನಂತರ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮಾಹಿತಿ ತಂತ್ರಜ್ಞಾನ ಸಚಿವರನ್ನಾಗಿ ಮಾಡಿ, ಯಾದಗಿರಿ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಇದು ಚಿಂಚನಸೂರ ಮಾತ್ರವಲ್ಲದೇ ಹೈದರಾಬಾದ್‌ ಕರ್ನಾಟಕ ಭಾಗದ ನಾಯಕರಾದ ದಿವಂಗತ ಖಮರುಲ್ಲಾ ಇಸ್ಲಾಂ, ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್‌ ಹಾಗೂ ಅಜಯ್‌ ಸಿಂಗ್‌ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನೇ ಮುಂದು ಮಾಡಿ ಗುತ್ತೇದಾರ್‌ ಪಕ್ಷ ತೊರೆದಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದಾರೆ. ಈಗ ಲೋಕಸಭಾ ಹೊಸ್ತಲಿಲ್ಲ ಚಿಂಚನಸೂರ ಪಕ್ಷ ತೊರೆದಿರುವುದು ಪಕ್ಷ ಸಂಘಟನೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ : ಕುಟುಂಬ ರಾಜಕಾರಣದ ಬಗ್ಗೆ ಮಾತಾಡೋ ನೈತಿಕತೆ ಕಳೆದುಕೊಳ್ಳಲಿದ್ದಾರೆಯೇ ಬಿಎಸ್‌ವೈ?

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌ ಹಾಗೂ ಗುರುಮಠಕಲ್, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಸೇಡಂನಲ್ಲಿ ಬಿಜೆಪಿ ಶಾಸಕರಿದ್ದಾರೆ. ಜೇವರ್ಗಿ ಶಾಸಕರಾದ ಅಜಯ್‌ ಸಿಂಗ್‌ ಹಾಗೂ ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಖರ್ಗೆ ವಿರುದ್ಧ ಸ್ವಜನಪಕ್ಷಪಾತದ ಆರೋಪ ಬಲವಾಗಿ ಬೇರುರಲಾರಂಭಿಸಿದೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿಲ್ಲ ಎಂಬ ಅಸಮಾಧಾನವು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದಲ್ಲಿದೆ. ಮತ್ತೊಂದೆಡೆ ಕಾಂಗ್ರೆಸ್‌ನ ಅಸಮಾಧಾನಗೊಂಡ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯಗಳ ನಾಯಕರನ್ನು ಪಕ್ಷಕ್ಕೆ ಕರೆತರುವ ಮೂಲಕ ಬಿಜೆಪಿಯು ಹೈದರಾಬಾದ್‌ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಕೆಲಸ ಮಾಡುತ್ತಿದೆ.

ಕಾಂಗ್ರೆಸ್‌ನಲ್ಲಿ ಕೆಲವರಿಗಷ್ಟೆ ಸ್ಥಾನಮಾನ ಅನಾಯಾಸವಾಗಿ ಒಲಿಯುತ್ತಿದೆ ಎಂಬ ಅಸಮಾಧಾನವಿದೆ. ದೀರ್ಘಾವಧಿಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಹೊಸ ನಾಯಕತ್ವವನ್ನು ಬೆಳೆಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಬೇಕಿದೆ ಎನ್ನುವ ಆಗ್ರಹ ಕಾಂಗ್ರೆಸ್‌ ಕಾಂಗ್ರೆಸ್‌ ವಲಯದಿಂದ ಕೇಳಿಬಂದಿದೆ. “ಚಿಂಚನಸೂರ ಅವರಿಗೆ ಪಕ್ಷವು ಸಾಕಷ್ಟು ಅವಕಾಶ ನೀಡಿದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕಿತ್ತು. ಆದರೆ, ಯಾವಾಗಲೂ ಅಧಿಕಾರದಲ್ಲಿರಬೇಕೆಂಬ ಹಂಬಲ ಅವರಲ್ಲಿ ಮನೆ ಮಾಡಿದೆ. ಚಿಂಚನಸೂರ ನಿರ್ಗಮನದಿಂದ ಹೊಸಬರಿಗೆ ಅವಕಾಶ ಸಿಗಲಿದೆ,” ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ ನಾಯಕರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಬಿಜೆಪಿ ಅಥವಾ ಮತ್ಯಾವುದೇ ಪಕ್ಷದಲ್ಲಿಲ್ಲ ಎನ್ನುವುದು ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ್‌ ಅವರ ಬಿಜೆಪಿ ಸೇರ್ಪಡೆಗೆ ಹೆಚ್ಚಿನ ಮಾನ್ಯತೆ ಸಿಗದಂತೆ ಮಾಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More