ಸಮ್ಮಿಶ್ರ ಸರ್ಕಾರದ ಮಧುಚಂದ್ರ ಅವಧಿಯಲ್ಲಿ ಎರಡೂ ಪಕ್ಷವನ್ನು ಕಾಡಿದ ದುಸ್ವಪ್ನಗಳಿವು

ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಗುರುವಾರ (ಆ.೩೦) ಶತದಿನ ಪೂರೈಸಿದೆ. ಮಧುಚಂದ್ರದ ಈ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರವು ಸಾಲು-ಸಾಲು ಸವಾಲಿನಿಂದ ಹೈರಾಣಾಗಿದೆ. ಮೈತ್ರಿ ಸರ್ಕಾರವನ್ನು ಬೆನ್ನತ್ತಿದ್ದ ವಿವಾದ, ಘಟನೆಗಳು ಇಲ್ಲಿವೆ. ಮುಂದಾದರೂ ಪರಿಸ್ಥಿತಿ ಸುಧಾರಿಸೀತೇ?

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಾಕಷ್ಟು ಅಸಮಾಧಾನದ ನಡುವೆಯೂ ಚುನಾವಣೋತ್ತರವಾಗಿ ಮೈತ್ರಿ ಸಾಧಿಸಿ ಸರ್ಕಾರ ರಚಿಸಲು ಕಾಂಗ್ರೆಸ್‌-ಜೆಡಿಎಸ್‌ ಯಶಸ್ವಿಯಾಗಿದ್ದವು. ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಶತದಿನ ಪೂರೈಸಿದೆ. ಈ ನೂರು ದಿನಗಳ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಪತನವಾಗಿಬಿಡಬಹುದು ಎಂಬರ್ಥದ ಮಾತುಗಳೂ ಸೇರಿದಂತೆ ಉಭಯ ಪಕ್ಷಗಳ ನಾಯಕರಿಂದ ಹಲವು ವಿರೋಧಾಭಾಸದ ಹೇಳಿಕೆಗಳೂ ಹೊರಬಿದ್ದಿವೆ. ಕೆಲವು ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವಿನಿಮಯ ಆಗುವ ಮೂಲಕ ಅದು ವಿವಾದವಾಗಿ ಮಾರ್ಪಟ್ಟಿದ್ದೂ ಉಂಟು. ಇದು ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದರೆ ಅಚ್ಚರಿಯೇನಿಲ್ಲ. ಮಿತ್ರಪಕ್ಷಗಳ ಒಳಜಗಳವನ್ನು ಬಿಜೆಪಿ ಸಮರ್ಥವಾಗಿಯೇ ಬಳಸಿಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಮೇಲೆ ಮೊನಚಾದ ದಾಳಿ ನಡೆಸಿದೆ. ಇದೆಲ್ಲದರ ಮಧ್ಯೆ, ಮಿತ್ರಪಕ್ಷಗಳ ನಾಯಕರ ಹೇಳಿಕೆಗಳನ್ನು ಮಾಧ್ಯಮಗಳು ಅಗತ್ಯಕ್ಕಿಂತಲೂ ಹೆಚ್ಚಾಗಿ ಬಿಂಬಿಸಿ ವಿವಾದವನ್ನಾಗಿ ಬೆಳೆಸಿದ್ದನ್ನೂ ಅಲ್ಲಗಳೆಯಲಾಗದು.

ಮೇ ೧೫ರಂದು ಪ್ರಕಟವಾದ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆಯನ್ನು ಅರಿತ ಕಾಂಗ್ರೆಸ್‌ ಮಿಂಚಿನ ವೇಗದಲ್ಲಿ ಜೆಡಿಎಸ್‌ಗೆ ಬೆಂಬಲ ಘೋಷಿಸುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿತ್ತು. ಆದರೆ, ಹೈಕಮಾಂಡ್ ನಿರ್ಧಾರಕ್ಕೆ ಸಿದ್ದರಾಮಯ್ಯ ಅರೆಮನಸ್ಸಿನಲ್ಲಿದ್ದರು. ರಾಷ್ಟ್ರೀಯ ಮಟ್ಟದಲ್ಲಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರು ಕೇಂದ್ರ ಕಾಂಗ್ರೆಸ್‌ ನಾಯಕರ ನಿರ್ಧಾರಕ್ಕೆ ತಲೆಬಾಗಿದ್ದರು. ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲೆಂದೇ ಸಮ್ಮಿಶ್ರ ಸರ್ಕಾರದ ಪ್ರಮುಖ ನೀತಿ, ನಿರ್ಧಾರ ತೀರ್ಮಾನಿಸುವ ಸಮನ್ವಯ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಈ ನಡುವೆ, ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಕ್ತವಾಗಿ ಹಂಚಿಕೊಂಡ ಹೇಳಿಕೆಗಳು ಹಾಗೂ ಅವುಗಳಿಗೆ ವ್ಯಕ್ತವಾದ ಪ್ರತಿಕ್ರಿಯೆಗಳು ವಿವಾದವಾಗಿ ಮಾರ್ಪಟ್ಟವು. ಕುಮಾರಸ್ವಾಮಿ ಅವರು ದುಡುಕಿ ಪ್ರತಿಕ್ರಿಯಿಸುವ ಮೂಲಕ ವಿವಾದವನ್ನು ಮೇಲೆಳೆದುಕೊಂಡರು. ಈ ನಡುವೆ, ಎರಡೂ ಪಕ್ಷಗಳಲ್ಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಗುಂಪುಗಳು ಅಸಮಾಧಾನದ, ಅತೃಪ್ತಿಯ ಮಾತುಗಳನ್ನು ಆಡಿದ್ದೂ ಸಮ್ಮಿಶ್ರ ಸರ್ಕಾರದ ವರ್ಚಸ್ಸಿಗೆ ಹೊಡೆತ ನೀಡಿದೆ. ಈ ನೂರು ದಿನದಲ್ಲಿ ಸಮ್ಮಿಶ್ರ ಸರ್ಕಾರದ ವರ್ಚಸ್ಸಿಗೆ ಭಂಗ ತಂದ ಘಟನೆಗಳು ಇಂತಿವೆ:

ಸಮ್ಮಿಶ್ರ ಸಂಕಟ ೧: ವಿಧಾನಸೌಧದಲ್ಲಿ ಭ್ರಷ್ಟಾಚಾರ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳಲ್ಲಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುವುದು ನನ್ನ ಕಣ್ಣಿಗೆ ಬಿದ್ದಿಲ್ಲ. ಕುಮಾರಸ್ವಾಮಿ ಅವರ ಕಣ್ಣಿಗೆ ಕಂಡರೆ ಅದನ್ನು ನಿಲ್ಲಿಸಲಿ,” ಎಂದಿದ್ದರು. ಇದನ್ನು ವಿಸ್ತರಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇ ಗೌಡ, “ರಾಜಕಾರಣದಲ್ಲಿ ಯಾರೂ ೨೪ ಕ್ಯಾರೆಟ್‌ ಅಪರಂಜಿ ಅಲ್ಲ,” ಎಂದು ಹೇಳಿದ್ದರು. ಕುಮಾರಸ್ವಾಮಿ ಅವರು ಹಿಂದಿನ ಸರ್ಕಾರದ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು.

ಸಮ್ಮಿಶ್ರ ಸಂಕಟ ೨: ಲೋಕಸಭಾ ಚುನಾವಣೆವರೆಗೆ ಏನೂ ಆಗದು

ಜೂನ್‌ ೧ರಂದು ಲೆಕ್ಕ ಪರಿಶೋಧಕರ ಸಮಾವೇಶದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, “ಲೋಕಸಭಾ ಚುನಾವಣೆ ಮುಗಿಯುವವರೆಗೆ ಯಾರೂ ನನ್ನನ್ನು ಮುಟ್ಟಲಾಗದು. ಅಲ್ಲಿತನಕ ಸಮ್ಮಿಶ್ರ ಸರ್ಕಾರ ಭದ್ರವಾಗಿರಲಿದೆ,” ಎಂದಿದ್ದರು. ಇದು ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಉರುಳಲಿದೆ ಎಂಬ ಚರ್ಚೆಗೆ ನಾಂದಿ ಹಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು,” ಎಂದಿದ್ದರು. ಇದು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಕುಮಾರಸ್ವಾಮಿ, “ನಾನು ಆ ಅರ್ಥದ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ,” ಎಂದು ಹೇಳಿ ವಿವಾದ ತಣ್ಣಗಾಗಿಸುವ ಯತ್ನ ಮಾಡಿದ್ದರು.

ಸಮ್ಮಿಶ್ರ ಸಂಕಟ ೩: ಹಳೇ ಬಜೆಟ್‌, ಹೊಸ ಬಜೆಟ್

ವಿಶ್ರಾಂತಿಗಾಗಿ ಉಜಿರೆಯ ಪ್ರಾಕೃತಿಕ ಚಿಕಿತ್ಸಾ ಕೇಂದ್ರಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ, “ಫೆಬ್ರವರಿಯಲ್ಲಿ ನಾನು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿದ್ದೇನೆ. ಜುಲೈ ಅಂತ್ಯದವರೆಗೆ ಲೇಖಾನುದಾನಕ್ಕೆ ಒಪ್ಪಿಗೆ ಪಡೆದಿದ್ದೇನೆ. ಹೀಗಾಗಿ ಹೊಸ ಬಜೆಟ್‌ ಮಂಡನೆಯ ಅಗತ್ಯವಿಲ್ಲ. ಹೊಸ ಕಾರ್ಯಕ್ರಮಗಳನ್ನು ಸೇರಿಸಿ ಕುಮಾರಸ್ವಾಮಿ ಅವರು ಪೂರಕ ಬಜೆಟ್‌ ಮಂಡಿಸಬಹುದು,” ಎಂದಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, “ಹೊಸ ಸರ್ಕಾರವು ಹೊಸ ಬಜೆಟ್‌ ಮಂಡಿಸುವ ಮೂಲಕ ಜನತೆಗೆ ಸಂದೇಶ ರವಾನಿಸುವುದು ವಾಡಿಕೆ. ಪ್ರಸಕ್ತ ವಿಧಾನಸಭೆಗೆ ನೂರಕ್ಕೂ ಹೆಚ್ಚು ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಹಿಂದಿನ ಬಜೆಟ್‌ ಅನ್ನೇ ಮುಂದುವರಿಸುವುದು ಸೂಕ್ತವಲ್ಲ,” ಎನ್ನುವ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದರು. ಅಂತಿಮವಾಗಿ ಹೊಸ ಬಜೆಟ್‌ ಮಂಡನೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಒಪ್ಪಿಗೆಯನ್ನೂ ಕುಮಾರಸ್ವಾಮಿ ಪಡೆದಿದ್ದರು. ಹೊಸ ಬಜೆಟ್‌ ಮಂಡನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಚಿವರಾದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡರು ನೂತನ ಬಜೆಟ್‌ ಪರವಾಗಿ ಹೇಳಿಕೆ ನೀಡಿದ್ದರು. ಸಾರ್ವಜನಿಕವಾಗಿ ವಿಚಾರ ಸಾಕಷ್ಟು ಚರ್ಚೆಗೆ ನಾಂದಿ ಹಾಡಿತ್ತು. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ-ಕುಮಾರಸ್ವಾಮಿ ಅವರ ನಡುವಿನ ವೈಮನಸ್ಸು ಹೆಚ್ಚಾಗಿತ್ತು.

ಸಮ್ಮಿಶ್ರ ಸಂಕಟ ೪: ಅನ್ನಭಾಗ್ಯದಲ್ಲಿ ೨ ಕೆ.ಜಿ ಅಕ್ಕಿ ಕಡಿತ

ಬಜೆಟ್‌ ಮಂಡಿಸಿದ್ದ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸಲು ಕಷ್ಟವಾಗುತ್ತದೆ ಎಂದು ಹೇಳಿ, ಸಿದ್ದರಾಮಯ್ಯ ಕಾಲದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಏಳು ಕೆ.ಜಿ ಅಕ್ಕಿ ಪೈಕಿ ಎರಡು ಕೆ.ಜಿ ಅಕ್ಕಿ ಕಡಿತ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಭಾವನಾತ್ಮಕವಾಗಿ ಪತ್ರ ಬರೆದು, ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಕಾಂಗ್ರೆಸ್‌ ಸಚಿವರು ಸೇರಿದಂತೆ ಹಲವು ಕುಮಾರಸ್ವಾಮಿ ಅವರಿಗೆ ಅಕ್ಕಿ ಕಡಿತ ಮಾಡದಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಕುಮಾರಸ್ವಾಮಿ, ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಸದನದಲ್ಲೇ ಘೋಷಿಸಿದ್ದರು. ಈ ನಡುವೆ, ಸಿದ್ದರಾಮಯ್ಯ ಬಾದಾಮಿ ಅಭಿವೃದ್ಧಿ ಹಾಗೂ ಸರ್ಕಾರದ ವಿವಿಧ ನಿರ್ಧಾರಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಕುಮಾರಸ್ವಾಮಿ ಹಾಗೂ ವಿವಿಧ ಸಚಿವರಿಗೆ ಸಾಲು-ಸಾಲು ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಅವರು ಪತ್ರಗಳನ್ನು ಬರೆಯುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಆಕ್ಷೇಪ, ಸಲಹೆಗಳನ್ನು ಸಮನ್ವಯ ಸಮಿತಿಯಲ್ಲಿ ನೀಡಬಹುದಲ್ಲವೇ? ಎಂಬ ಪ್ರಶ್ನೆ ಎದ್ದಿತ್ತು.

ಸಮ್ಮಿಶ್ರ ಸಂಕಟ ೬: ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಅತಂತ್ರ?

ನೈಸರ್ಗಿಕ ಚಿಕಿತ್ಸೆಗಾಗಿ ಶಾಂತಿವನದಲ್ಲಿದ್ದ ಸಿದ್ದರಾಮಯ್ಯ ಆಪ್ತರೊಂದಿಗೆ ಮಾತನಾಡುವಾಗ, ಕುಮಾರಸ್ವಾಮಿಯವರ ನೂತನ ಬಜೆಟ್‌ ಮಂಡನೆಗೆ ವಿರೋಧ ವ್ಯಕ್ತಪಡಿಸಿದ್ದ ವಿಡಿಯೋ ಬಹಿರಂಗವಾಗಿತ್ತು. “ಇದು ಸಮ್ಮಿಶ್ರ ಸರ್ಕಾರ. ಮುಂದಿನ ವರ್ಷ ಅವರಿದ್ದರೆ ಬಜೆಟ್‌ ಮಂಡಿಸಿಕೊಳ್ಳಲಿ. ರೈತರ ಸಾಲಮನ್ನಾಕ್ಕೆ ಹಣವನ್ನು ಎಲ್ಲಿಂದ ತರುತ್ತಾರೆ? ಇನ್ನೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಪಟ್ಟಿಯೇ ಅಂತಿಮವಾಗಿಲ್ಲ. ಈಗಾಗಲೇ ಕುಮಾರಸ್ವಾಮಿ ಅವರು ಬಜೆಟ್‌ ಮಂಡನೆಗೆ ಅಣಿಯಾಗಿದ್ದಾರೆ. ಇದಕ್ಕೆ ನಮ್ಮ ಸಚಿವರು ಬೆಂಬಲ ವ್ಯಕ್ತಪಡಿಸಿದ್ದಾರೆ!” ಎನ್ನುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, “ನಾನು ಬಜೆಟ್‌ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ. ಅಧಿಕಾರ ಭಿಕ್ಷೆ ಅಲ್ಲ,” ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ತೊಡೆ ತಟ್ಟಿದ್ದರು. ಆನಂತರ ಈ ವಿವಾದ ವಿಭಿನ್ನ ರೂಪ ಪಡೆದು ಸಾಕಷ್ಟು ಚರ್ಚೆಗೆ ನಾಂದಿ ಹಾಡಿತ್ತು.

ಸಮ್ಮಿಶ್ರ ಸಂಕಟ ೬: ಮತ್ತೊಮ್ಮೆ ಮುಖ್ಯಮಂತ್ರಿ ಬಯಕೆ

ಇತ್ತೀಚೆಗೆ ಹಾಸನದ ಹೊಳೆನರಸೀಪುರದ ಹಾಡ್ಯದಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, “ವಿರೋಧಿಗಳು ವ್ಯವಸ್ಥಿತ ಷಡ್ಯಂತ್ರ ನಡೆಸಿ ನನ್ನ ಸೋಲಿಗೆ ಕಾರಣರಾದರು. ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ,” ಎಂದು ಹೇಳಿದ್ದರು. ಇದು ಮೈತ್ರಿ ಸರ್ಕಾರ ಶೀಘ್ರ ಉರುಳುತ್ತದೆ ಎಂಬ ಚರ್ಚೆಗೆ ಮತ್ತೆ ಜೀವ ತುಂಬಿತು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, “ಸರ್ಕಾರ ಅಸ್ಥಿರಗೊಳಿಸಲು ಕೆಲವರು ಏನೆಲ್ಲ ಮಾಡುತ್ತಿದ್ದಾರೆ ಎಂಬುದು ತಿಳಿದಿದೆ,” ಎಂದಿದ್ದರು. ಇದಕ್ಕೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರಲ್ಲದೆ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡುವಂತಾಯಿತು. “ಕುಮಾರಸ್ವಾಮಿ ಅವರನ್ನು ಇಳಿಸಿ ಮುಖ್ಯಮಂತ್ರಿಯಾಗುವುದಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ,” ಎಂದು ಅವರು ಸಮಜಾಯಿಷಿ ನೀಡಿದರು.

ಈ ಮಧ್ಯೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಪಕ್ಷದ ವರಿಷ್ಠರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ಜೆಡಿಎಸ್‌ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದೂ ಇದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತ ಕುಮಾರಸ್ವಾಮಿ ಅವರ ಹೇಳಿಕೆ ಹಾಗೂ ಅದರ ಮೇಲಿನ ಚರ್ಚೆ; ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬುದಕ್ಕೂ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಆಕಾಂಕ್ಷಿಗಳಾಗಿದ್ದ‌ ಎಂ ಬಿ ಪಾಟೀಲ್‌, ಎಚ್‌ ಕೆ ಪಾಟೀಲ್‌ ಹಾಗೂ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಹಲವು ಶಾಸಕರು ಸಭೆ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಕುಮಾರಸ್ವಾಮಿ ಅವರು ಸಚಿವ ಸ್ಥಾನ ವಂಚಿತ ಎಂ ಬಿ ಪಾಟೀಲ್‌ ಅವರನ್ನು ಸಂತೈಸಲು ಅವರ ಮನೆಗೆ ತೆರಳಬೇಕಾದ ಸ್ಥಿತಿ ಬಂದೊದಗಿದ್ದನ್ನು ಇಲ್ಲಿ ನೆನೆಯಬಹುದು.

ಇದನ್ನೂ ಓದಿ : ದೇವೇಗೌಡರ ಪತ್ರ ರಾಜಕಾರಣದ ಅಸ್ತ್ರ ಪ್ರಯೋಗಿಸುತ್ತಿದ್ದಾರೆಯೇ ಸಿದ್ದರಾಮಯ್ಯ?

ಇನ್ನು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅಡ್ಡಿಪಡಿಸಲಾಗುತ್ತಿದೆ ಎಂಬ ಹೇಳಿಕೆ ಮಠಾಧೀಶರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎರಡು ಬಾರಿ ತಮ್ಮ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದು ರಾಜಕೀಯ ಪ್ರೇರಿತ ಎಂಬ ಚರ್ಚೆಗಳು ನಡೆದಿವೆ. ಹಿಂದಿನ ಸರ್ಕಾರ ನೇಮಿಸಿದ್ದ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆ ಮಾಡಲಾಗುತ್ತಿದೆ; ಕಾಂಗ್ರೆಸ್‌ ಶಾಸಕರಿಗೆ ಕುಮಾರಸ್ವಾಮಿ ಅವರು ಪ್ರಾಶಸ್ತ್ಯ ನೀಡುತ್ತಿಲ್ಲ ಎನ್ನುವ ಅಸಮಾಧಾನವೂ ವ್ಯಕ್ತವಾಗಿದೆ. ನೆರೆ ಸಂತ್ರಸ್ತರಿಗೆ ಹಾಸನದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಬಿಸ್ಕೆಟ್‌ ಎಸೆದ ಘಟನೆಗೆ ದೇಶಾದ್ಯಂತ ವ್ಯಾಪಕ ವಿರೋಧವು ವ್ಯಕ್ತವಾಗಿದೆ. ಇದೆಲ್ಲದರ ನಡುವೆ, ಉಭಯ ಪಕ್ಷಗಳು ಹಾಗೂ ನಾಯಕರ ನಡುವೆ ಸಮನ್ವಯ ಸಾಧಿಸಬೇಕಾದ ಸಮಿತಿಯ ಜವಾಬ್ದಾರಿ ಹಾಗೂ ಮಿತಿಗಳ ಬಗ್ಗೆಯೂ ವ್ಯಾಪಕ ಚರ್ಚೆಯಾಗಿದೆ.

ಈ ಮಧ್ಯೆ, ಕುಮಾರಸ್ವಾಮಿ ಅವರ ೧೦೦ ದಿನಗಳ ಅಧಿಕಾರಾವಧಿಯಲ್ಲಿ ಸಾಲಮನ್ನಾ ಗೊಂದಲ ಹೊರತಾಗಿ ವಿಶಿಷ್ಟವಾದ ಭರವಸೆ ಮೂಡಿಸುವಲ್ಲಿ ಸಮ್ಮಿಶ್ರ ಸರ್ಕಾರ ಸಫಲವಾಗಿಲ್ಲ ಎನ್ನುವ ಅಭಿಪ್ರಾಯ ಜನಮಾನಸದಲ್ಲಿದೆ. ಇನ್ನು ಎಂಟು ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತುಗಳನ್ನಾಡುತ್ತಿವೆ. ಈ ಸಂದರ್ಭದಲ್ಲಿ ಆರಂಭಿಕ ಹಂತದಲ್ಲಾದ ಭಿನ್ನಮತ, ಅನಿಶ್ಚಿತತೆ ಮುಂದುವರಿಯದಂತೆ ಜಾಗೃತಿ ವಹಿಸುವಲ್ಲಿ ಸಮನ್ವಯ ಸಮಿತಿ ಹಾಗೂ ಸಮ್ಮಿಶ್ರ ಸರ್ಕಾರದ ನೇತಾರರು ಯಶಸ್ವಿಯಾಗುವರೇ ಅಥವಾ ಹಗ್ಗಜಗ್ಗಾಟ ಮತ್ತಷ್ಟು ಹೆಚ್ಚಾಗಲಿದೆಯೇ ಎಂಬುದಕ್ಕೆ ಇಂದಿನ ಮೂರನೇ ಸಮನ್ವಯ ಸಮಿತಿಯ ನಿರ್ಧಾರಗಳು ಸ್ಪಷ್ಟತೆ ಒದಗಿಸಲಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More