ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಬೇಕಿದೆ ಪ್ರಬಲ ಸ್ಥಳೀಯ ನಾಯಕತ್ವ

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿರುವ ಕೊಡಗಿನಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಷ್ಟ್ರದ ಗಮನ ಸೆಳೆಯುವ ಇಚ್ಛಾಶಕ್ತಿ ಹೊಂದಿದ ಸ್ಥಳೀಯ ನಾಯಕತ್ವದ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ, ಕೊಡಗಿಗೆ ರಾಜಕೀಯ ಪ್ರಾತಿನಿಧ್ಯದ ವಿಚಾರವಾಗಿ ದನಿ ಎದ್ದಿದೆ

“ಕೊಡಗಿಗೆ ಸೂಕ್ತ ಪ್ರತಿನಿಧಿ ಇಲ್ಲದ ಕಾರಣ ಆ ಜಿಲ್ಲೆ ಅನಾಥವಾಗಿದೆ. ಕೊಡಗಿನ ಇತಿಹಾಸ ಅರಿಯದ ಜನಪ್ರತಿನಿಧಿಗಳು ಆಡಳಿತದಲ್ಲಿ ಇರುವುದರಿಂದ ಅಲ್ಲಿಯ ಪ್ರದೇಶಗಳು ಕಾಸರಗೋಡು ರೀತಿಯಲ್ಲಿ ಕೈಬಿಟ್ಟು ಹೋಗುವ ಸಾಧ್ಯತೆ ಹೆಚ್ಚಿದೆ…” ಎಂದು ಇತ್ತೀಚೆಗೆ ಹೇಳಿದವರು ನಾಡೋಜ ಪಾಟೀಲ ಪುಟ್ಟಪ್ಪ.

ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಅವರು, “ಕೊಡಗು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಂಡ ನಂತರ ಮೈಸೂರಿಗೆ ಸೇರಿದವರೇ ಸಂಸದರಾಗಿ ಆಯ್ಕೆ ಆಗುತ್ತಿದ್ದು, ಕೊಡಗಿಗೆ ಸೂಕ್ತ ಪ್ರತಿನಿಧಿಯೇ ಇಲ್ಲವಾಗಿದೆ. ಹೀಗಾಗಿ, ಅತಿವೃಷ್ಟಿಯಿಂದಾಗಿ ನೆಲಕಚ್ಚಿರುವ ಕೊಡಗಿನ ಮರುನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಾರತಮ್ಯ ತೋರದೆ ಸುವ್ಯವಸ್ಥಿತವಾಗಿ ಆ ಜಿಲ್ಲೆಯನ್ನು ನಿರ್ಮಿಸಬೇಕಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಟೀಲ ಪುಟ್ಟಪ್ಪ ಅವರ ಈ ಮಾತುಗಳು ಹೊಸದೊಂದು ಚರ್ಚೆಗೆ ಮುನ್ನುಡಿ ಬರೆದಿವೆ. ಭಾರತದ ಸ್ಕಾಟ್‌ಲ್ಯಾಂಡ್ ಹಾಗೂ ದಕ್ಷಿಣ ಕಾಶ್ಮೀರ (ಕರ್ನಾಟಕದ ಕಾಶ್ಮೀರ ಎಂದೂ ಕರೆಯಲಾಗುತ್ತದೆ) ಎಂದೇ ಖ್ಯಾತಿ ಪಡೆದಿರುವ ಕೊಡಗನ್ನು ಇನ್ನಾದರೂ ಸ್ಥಳೀಯ ರಾಜಕೀಯ ಪ್ರಾತಿನಿಧ್ಯದ ಮೂಲಕ ರಕ್ಷಿಸಿಕೊಳ್ಳಲೇಬೇಕು ಹಾಗೂ ರಾಜಕೀಯವಾಗಿ ಸ್ಥಾನಮಾನಗಳನ್ನು ಬಲಪಡಿಸಿಕೊಳ್ಳಬೇಕು ಎಂಬ ಮಾತುಗಳು ಅಲ್ಲಿನ ಜನಮನದಲ್ಲಿ ಹೆಚ್ಚು ಕೇಳಿಬರತೊಡಗಿವೆ.

ಅತಿವೃಷ್ಟಿ, ಪ್ರವಾಹದಿಂದಾಗಿ ಕೊಡಗಿನ ಶೇ.೩೦ರಷ್ಟು ಭೂಭಾಗ ಕುಸಿದಿದೆ ಎನ್ನಲಾಗಿದೆ. ಮಳೆಯ ಪ್ರಕೋಪಕ್ಕೆ ೪೦ಕ್ಕೂ ಹೆಚ್ಚು ಹಳ್ಳಿಗಳು ಗಂಭೀರ ಹಾನಿಗೊಳಗಾಗಿವೆ. ಕೊಡಗು ಮೊದಲಿನಂತೆ ನಿರ್ಮಾಣವಾಗಬೇಕಾದರೆ ಹೆಚ್ಚಿನ ಪ್ರಮಾಣದ ಅನುದಾನ ಅಗತ್ಯವಿದೆ. ಹೀಗಾಗಿ, ಆ ಎಲ್ಲ ಅನುದಾನವನ್ನು ಕೇವಲ ರಾಜ್ಯ ಸರ್ಕಾರ ನೀಡುತ್ತದೆ ಎನ್ನುವುದು ಕಷ್ಟ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಭಾಗಿತ್ವವೂ ಅತಿ ಮುಖ್ಯ. ಅತಿವೃಷ್ಟಿಯಿಂದಾಗಿ ಕೊಡಗಿಗಾದ ಹಾನಿಯ ಸ್ವರೂಪ, ಕೊಡಗು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಿಯಾಗಿ ಅರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ನಾಯಕತ್ವದ ಕೊರತೆ ಕೊಡಗಿಗಿದೆ ಎನ್ನುವುದನ್ನೇ ಪಾಟೀಲ ಪುಟ್ಟಪ್ಪನವರ ‘ಕೊಡಗು ಅನಾಥವಾಗಿದೆ’ ಎನ್ನುವ ಮಾತು ಧ್ವನಿಸುತ್ತದೆ.

೧೮೩೪ರವರೆಗೆ ಪ್ರತ್ಯೇಕ ದೇಶವಾಗಿದ್ದ ಕೊಡಗು ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ರಾಜ್ಯವಾಗಿ ಮಾರ್ಪಾಡಾಯಿತು. ೧೯೫೬ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಲ್ಲಿ ಕೊಡಗು ಕರ್ನಾಟಕದ ಭಾಗವಾಗಿ ಸೇರ್ಪಡೆಗೊಂಡಿದೆ. ಭಾಷೆ, ಸಂಸ್ಕೃತಿ, ಭೌಗೋಳಿಕತೆ ದೃಷ್ಟಿಯಿಂದ ಕೊಡಗು ವಿಭಿನ್ನವಾಗಿ ಗುರುತಿಸಿಕೊಂಡಿದ್ದು, ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂಬ ಕೂಗು ಹಿಂದಿನಿಂದಲೂ ಕೇಳಿಬಂದ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಚಿನ ವರ್ಷಗಳಲ್ಲಿ ಪ್ರತ್ಯೇಕತೆಯ ಕೂಗು ಕಡಿಮೆ ಆದಂತೆ ಕಾಣುತ್ತಿದೆ. ಅದರ ಜಾಗದಲ್ಲಿ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ವಿಶೇಷ ಸ್ಥಾನಮಾನದ ಬೇಡಿಕೆ ಹೆಚ್ಚಾಗಿ ಕೇಳಿಬರುತ್ತಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿರುವ ಕೊಡಗಿನಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಷ್ಟ್ರದ ಗಮನ ಸೆಳೆಯುವ ಇಚ್ಛಾಶಕ್ತಿ ಹೊಂದಿದ ಸ್ಥಳೀಯ ನಾಯಕತ್ವದ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ, ರಾಜಕೀಯ ಪ್ರಾತಿನಿಧ್ಯದ ಬಗ್ಗೆ ದನಿ ಈಗ ಮತ್ತಷ್ಟು ಬಲಗೊಳ್ಳುತ್ತಿದೆ.

ರಾಜಕೀಯವಾಗಿ ಕೊಡಗಿಗೆ ಪ್ರಾತಿನಿಧ್ಯ ಸಿಗಬೇಕಾದರೆ ಆ ಜಿಲ್ಲೆಯನ್ನು ಲೋಕಸಭಾ ಕ್ಷೇತ್ರವನ್ನಾಗಿ ಮಾಡಲು ಸಾಧ್ಯವೇ? ಇಂಥದ್ದೊಂದು ರಚನಾತ್ಮಕ ಚರ್ಚೆ ಕೂಡ ಕೊಡಗಿನಾದ್ಯಂತ ಈಗ ಹರಳುಗಟ್ಟುತ್ತಿದೆ. ಹೈದರಾಬಾದ್ ಕರ್ನಾಟಕಕ್ಕೆ ನೀಡಿದ ವಿಶೇಷ ಸ್ಥಾನಮಾನದ ಮಾದರಿಯಲ್ಲೇ ಕೊಡಗು ಕೂಡ ಹೇಗೆ ವಿಶೇಷ ಸ್ಥಾನಮಾನ ಪಡೆಯಬಹುದು ಎಂಬುದರ ಬಗ್ಗೆಯೂ ವಿಶೇಷ ಚರ್ಚೆಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ನ್ಯಾಷನಲ್ ಕೌನ್ಸಿಲ್ ನಾಯಕರಾದ ನಾಚಪ್ಪ ಅವರು ‘ದಿ ಸ್ಟೇಟ್’ನೊಂದಿಗೆ ಮಾತನಾಡಿ, “ಈ ಭಾಗದ ಭೂಮಿ, ಭಾಷೆ ಹಾಗೂ ಮೂಲನಿವಾಸಿಗಳಿಗೆ ಭದ್ರತೆ ಸಿಗಬೇಕು. ಹೀಗಾಗಿ, ಸಂವಿಧಾನದ ೬ನೇ ವಿಧಿ ಪ್ರಕಾರ ಕೊಡಗಿಗೆ ಗೋರ್ಖಾಲ್ಯಾಂಡ್‌ನಂತೆ ಸ್ವಾಯತ್ತತೆ ನೀಡಬೇಕು. ಈ ಬಗ್ಗೆ ರಾಜಕೀಯವಾಗಿ ಧ್ವನಿ ಎತ್ತಲೂ ಸ್ಥಳೀಯ ನಾಯಕತ್ವದ ಕೊರತೆ ಇದೆ. ಸಂಸತ್‌ನಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಸೂಕ್ತವಾಗಿ ಧ್ವನಿ ಎತ್ತುವವರೇ ಇಲ್ಲವಾಗಿದೆ. ಕೊಡಗಿನ ಹಿಂದಿನ ಅಸ್ತಿತ್ವ ಕುಗ್ಗಲು ಹಳೇ ಮೈಸೂರಿನ ರಾಜಕಾರಣಿಗಳೇ ಕಾರಣ. ಹೀಗಾಗಿ, ನಮಗೆ ಲೋಕಸಭಾ ಕ್ಷೇತ್ರ ನೀಡಿದರೆ ಅನುಕೂಲ. ಇದಕ್ಕಿಂತ ಹೆಚ್ಚಿನ ಬೇಡಿಕೆ ನಮ್ಮದಾಗಿದ್ದು, ಕೊಡಗಿಗೆ ಸ್ವಾಯತ್ತತೆ ಇಲ್ಲವೇ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿಬೇಕು,” ಎಂದು ಆಗ್ರಹಿಸುತ್ತಾರೆ.

ಕೊಡಗಿನ ಪರಿಸರವಾದಿ ತಮ್ಮು ಪೂವಯ್ಯ ಪ್ರತಿಕ್ರಿಯಿಸಿ, “ಕೊಡಗು ತನ್ನತನವನ್ನು ಕಳೆದುಕೊಂಡಿದ್ದು ಅಕ್ಷರಶಃ ನಿಜ. ರಾಜಕೀಯವಾಗಿ ಕೊಡಗಿಗೆ ಪ್ರಾತಿನಿಧ್ಯ ಕಡಿಮೆ ಆಗುತ್ತಲೇ ಬಂದಿದೆ. ನಮ್ಮ ಜಿಲ್ಲೆಗೆ ವಿಶೇಷವಾದದ್ದು ಏನು ಸಿಗುತ್ತಿಲ್ಲ. ಇಲ್ಲಿರುವ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದ್ದು, ಕೊಡಗಿಗೆ ೨೦ ವರ್ಷದಲ್ಲಿ ಬಂದ ಬಹುತೇಕ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಇಲ್ಲಿಯ ಭೂಮಿಯನ್ನು ಅನೇಕ ಜನಪ್ರತಿನಿಧಿಗಳು ಅಕ್ರಮವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ, ಇನ್ನಾದರೂ ಕೊಡಗು ಉಳಿಯುತ್ತದೆಯೇ ಎಂಬ ಆತಂಕ ಎದುರಾಗಿದೆ. ನಮ್ಮ ಆತಂಕ ದೂರವಾಗಲು ಕೊಡಗಿಗೆ ವಿಶೇಷ ಸ್ಥಾನಮಾನ ಸಿಗಬೇಕು. ಕೊಡಗಿಗೆ ಲೋಕಸಭಾ ಕ್ಷೇತ್ರ ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ. ಇದಕ್ಕಿರುವ ಕಾನೂನುಗಳನ್ನು ತಿದ್ದುಪಡಿ ತರಬೇಕು. ಇದಾಗದಿದ್ದರೆ ಕೊಡಗಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಬಹುದು,” ಎಂದರು.

ಪೂವಯ್ಯ ಅವರ ಮಾತುಗಳನ್ನು ವಿಸ್ತರಿಸುವ ದಾಟಿಯಲ್ಲಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪೋರಂನ ಕರ್ನಲ್ ಸುಬ್ಬಯ್ಯ, “ಇಲ್ಲಿಯ ರಾಜಕಾರಣವೇ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆ ಮಾಡಿದೆ. ಇಲ್ಲಿ ಆಸ್ತಿ ಮಾಡಿರುವ ಜನಪ್ರತಿನಿಧಿಗಳಿಗೆ ಕೊಡಗಿನ ಅಭಿವೃದ್ಧಿ ಬೇಕಾಗಿಲ್ಲ. ಇದಕ್ಕಾಗಿ ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿ ರಂಗನ್ ವರದಿಯನ್ನು ತೆರೆಮರೆಗೆ ಸರಿಸಲಾಗಿದೆ. ಕೊಡಗಿನಲ್ಲಿ ಜನಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ಇಲ್ಲಿಯ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲಾಗಿದೆ. ಇದು ಸರಿಯಲ್ಲ. ಕೊಡಗಿಗೆ ವಿಶೇಷ ಸ್ಥಾನಮಾನ ಮತ್ತು ಲೋಕಸಭಾ ಕ್ಷೇತ್ರ ಕೊಡಗಿಗೆ ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ,” ಎಂದು ವಿವರಿಸಿದರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಕೊಡಗು ಪುನರ್ವಸತಿ; ಸರ್ಕಾರದ ಮುಂದಿರುವ ಸವಾಲುಗಳೇನು?

ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ, “ಈ ಹಿಂದೆ ಕೂಡ ಕೊಡಗಿಗೆ ಲೋಕಸಭಾ ಕ್ಷೇತ್ರದ ಸ್ಥಾನ ನೀಡುವಂತೆ ಆಗ್ರಹಿಸಿದ್ದೆವು. ಅದು ಸಾಧ್ಯವಾಗಿಲ್ಲ. ಕೊಡಗು ಮೊದಲು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸೇರ್ಪಡೆಯಾಗಿತ್ತು. ನಂತರ ಮೈಸೂರಿಗೆ ವಿಲೀನಗೊಂಡಿದೆ. ಕೊಡಗಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ಈಗ ಎರಡಕ್ಕೆ ಇಳಿಸಲಾಗಿದೆ. ಮುಂದೆ ಅದು ಎಲ್ಲಿ ಒಂದಕ್ಕೆ ಸಿಮೀತವಾಗುತ್ತದೆಯೋ ಎಂಬ ಆತಂಕ ಇದೆ. ರಾಜಕೀಯ ಪ್ರಾತಿನಿಧ್ಯ ದೃಷ್ಟಿಯಿಂದ ಕೊಡಗಿಗೆ ಲೋಕಸಭೆ ಸ್ಥಾನಮಾನ ನೀಡಿದರೆ ಬಹಳ ಒಳ್ಳೆಯದು,” ಎಂದು ಅಭಿಪ್ರಾಯಪಟ್ಟರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More