ಆರೆಸ್ಸೆಸ್ ವೈಚಾರಿಕ ಕುಂಭಮೇಳಗಳ ಹಿಂದಿನ ಚತುರ ವಿಚಾರ, ತಂತ್ರ ಏನಿರಬಹುದು?

ಮಾನವ ಹಕ್ಕು ಹೋರಾಟಗಾರ ಧ್ವನಿಯನ್ನು ಹತ್ತಿಕ್ಕುವ ರಾಜಕೀಯ ಷಡ್ಯಂತ್ರಗಳು ದೇಶದಲ್ಲಿ ಹೆಚ್ಚುರುವ ಹೊತ್ತಿನಲ್ಲೇ ಬಿಜೆಪಿ ಚಿಂತಕರ ಚಾವಡಿಯಲ್ಲಿ ವೈಚಾರಿಕ ಜಪ ಶುರುವಾಗಿದ್ದು, ಅಯೋಧ್ಯೆ ಸೇರಿ ದೇಶದ ಏಳು ನಗರಗಳಲ್ಲಿ ವೈಚಾರಿಕ ಕುಂಭಮೇಳ ನಡೆಸಲು ಆರೆಸ್ಸೆಸ್‌ ಮುಂದಾಗಿದೆ

ವಿಚಾರಪರರು, ಮಾನವ ಹಕ್ಕು ಹೋರಾಟಗಾರ ಧ್ವನಿಯನ್ನು ಹತ್ತಿಕ್ಕುವ, ಬಂಧಿಸಿ ಜೈಲಿಗೆ ಅಟ್ಟುವ, ನಿರ್ದಿಷ್ಟ ಸಮುದಾಯದ ಜನರಲ್ಲಿ ಭಯವನ್ನು ಬಿತ್ತುವ ಅಸಹಿಷ್ಣು ರಾಜಕೀಯ ಷಡ್ಯಂತ್ರಗಳು ದೇಶದಲ್ಲಿ ಹೆಚ್ಚುತ್ತಿರುವ ಹೊತ್ತಿನಲ್ಲೇ ಬಿಜೆಪಿಯ ಚಿಂತಕರ ಚಾವಡಿಯಲ್ಲಿ ‘ವೈಚಾರಿಕತೆಯ’ ಜಪ ಶುರುವಾಗಿದೆ. ‘ಒಳಗೊಳ್ಳುವಿಕೆ’ಯ ಆಶಯ, ಸಹಿಷ್ಣುತೆಯ ಮಹತ್ವ, ಭಾರತದ ತತ್ವ, ಗುಣ ಸಹಿತ ಅನೇಕ ಸಂಗತಿಗಳ ಚರ್ಚೆಗೆ ವೇದಿಕೆ ಕಲ್ಪಿಸಲು ದೇಶದ ಏಳು ನಗರಗಳಲ್ಲಿ 'ವೈಚಾರಿಕ ಕುಂಭಮೇಳ' ನಡೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್‌) ಸಾಂಸ್ಕೃತಿಕ ವಿಭಾಗ ‘ಸಂಸ್ಕಾರ ಭಾರತಿ’ ಮುಂದಾಗಿದೆ.

ಏನಿದು ವೈಚಾರಿಕ ಕುಂಭ?

  • ಪ್ರಾಚೀನ ಕಾಲದಲ್ಲಿ ನದಿಗಳ ಸಂಗಮ ಸ್ಥಳಗಳಲ್ಲಿ ಋಷಿಮುನಿಗಳು ಕಲೆತು, ವಿಚಾರ ವಿನಿಮಯ ನಡೆಸುತ್ತಿದುದನ್ನು ಕುಂಭಮೇಳ ಸಂಕೇತಿಸುತ್ತದೆ. ಈ ಮಾದರಿಯಲ್ಲೇ ‘ವೈಚಾರಿಕ ಕುಂಭ’ಗಳನ್ನು ಸಂಘಟಿಸಿ, ಕವಿ, ಕಲಾವಿದರು, ಚಿಂತಕರು, ಲೇಖಕರು, ವೈದ್ಯರು, ಪತ್ರಕರ್ತರು, ಎಂಜಿನಿಯರುಗಳು ಸಹಿತ ಎಲ್ಲ ವರ್ಗದ ‘ಚಿಂತಕ’ರನ್ನು ಆಹ್ವಾನಿಸಿ, ದೇಶ ಕಟ್ಟುವ ವಿಷಯದಲ್ಲಿ ಅವಶ್ಯ ಸಂಗತಿಗಳ ಕುರಿತು ಗಹನ ಚರ್ಚೆ, ವಿಚಾರ ಮಂಥನಕ್ಕೆ ವೇದಿಕೆ ಕಲ್ಪಿಸಲಾಗುವುದು ಎನ್ನುತ್ತಾರೆ ಸಂಘಟಕರು.
  • ಸೆಪ್ಟೆಂಬರ್‌ ೫ರಂದು ಮುಂಬಯಿಯಲ್ಲಿ ಮೊದಲನೆಯದಾಗಿ ‘ಸಾಂಸ್ಕೃತಿಕ ಕುಂಭ’ ಆಯೋಜನೆಗೊಂಡಿದ್ದು, ಸಿನಿಮಾ ಕಲಾವಿದರು ಪ್ರಮುಖವಾಗಿ ಪಾಲ್ಗೊಳ್ಳುವರು. ಲಕ್ನೋದಲ್ಲಿ ‘ಯುವಕುಂಭ’, ಅಯೋಧ್ಯೆಯಲ್ಲಿ ‘ಸಮರಸತಾ ಕುಂಭ’, ವಾರಣಾಸಿಯಲ್ಲಿ ‘ಸಮಾವೇಶಿ ಕುಂಭ’ಗಳು ನಡೆಯಲಿವೆ. ಸಮರಸತಾ ಕುಂಭ ರಾಮರಾಜ್ಯದ ಕಲ್ಪನೆಯನ್ನು, ಸಮಾವೇಶಿ ಕುಂಭ ‘ಭಾರತದ ಒಳಗೊಳ್ಳುವಿಕೆ’ಯನ್ನು ಸಂಭ್ರಮಿಸಲಿವೆ. ಪ್ರಯಾಗ್ ಮತ್ತು ಅಲಹಾಬಾದ್‌ ಕುಂಭಮೇಳಗಳು ಪರಿಸರ ಉಳಿವಿನ ಆಶಯವನ್ನು ಧ್ವನಿಸುತ್ತವೆ. ಡಿಸೆಂಬರ್‌ನಲ್ಲಿ ಬೃಂದಾವನದಲ್ಲಿ ‘ನಾರಿ ಶಕ್ತಿ ಕುಂಭ’ವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
  • ರಾಷ್ಟೀಯತೆ, ಭಾರತದ ಗುಣ-ತತ್ವ, ಸಹಿಷ್ಣುತೆಯ ಮಹತ್ವದಂಥ ವಿಷಯಗಳ ಜೊತೆ ಕೌಟುಂಬಿಕ ಮೌಲ್ಯ, ಭಾರತದ ಬುದ್ಧಿಜೀವಿ ಗಣ್ಯರಲ್ಲಿ ಮಾರ್ಕ್ಸ್‌ವಾದಿ ಪ್ರಾಬಲ್ಯ, ಹಿಂದೂ ಅಧ್ಯಾತ್ಮಿಕತೆ ಮೇಲೆ ಜಾಗತೀಕರಣದ ಪ್ರಭಾವ ಮುಂತಾದ ಸಂಗತಿಗಳೂ ಚರ್ಚೆಯ ಪಟ್ಟಿಯಲ್ಲಿವೆ. ಈ ಪೈಕಿ ಕೆಲವು ಮೇಳಗಳಿಗೆ ದಲಿತ ಬರಹಗಾರರನ್ನು ಆಹ್ವಾನಿಸುವ ಉದ್ದೇಶವನ್ನು ಸಂಘಟಕರು ಹೊಂದಿದ್ದಾರೆ.

ಎತ್ತಣಿಂದೆತ್ತ ಸಂಬಂಧ?

ಸರ್ವರನ್ನೂ ಒಳಗೊಳ್ಳುವ ರಾಜಕಾರಣ ಮಾಡುತ್ತಿಲ್ಲ ಎನ್ನುವುದು ಹಾಲಿ ಬಿಜೆಪಿ ಸರ್ಕಾರದ ಮೇಲಿರುವ ಆರೋಪ. ನಿರ್ದಿಷ್ಟ ಧರ್ಮೀಯರು, ಭಿನ್ನ ಸಿದ್ಧಾಂತ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿಪಾದಿಸುವವರು, ಭಿನ್ನಾಭಿಪ್ರಾಯ ವ್ಯಕ್ತ ಮಾಡುವವರನ್ನು ಮೋದಿ ರಾಜ್ಯಭಾರದಲ್ಲಿ ಹತ್ತಿಕ್ಕಲಾಗುತ್ತಿದೆ ಎನ್ನುವ ಆಕ್ಷೇಪ ದೇಶವ್ಯಾಪಿ ಕಾವು ಪಡೆದಿದೆ. ಇಂಥದಕ್ಕೆಲ್ಲ ಒತ್ತಾಸೆಯಾಗಿರುವ ಮತ್ತು ಈ ಯಾವ ಸಂದರ್ಭದಲ್ಲೂ ತುಟಿಬಿಚ್ಚದ ಆರೆಸ್ಸೆಸ್ ‘ವೈಚಾರಿಕ ಕುಂಭ’ಗಳ ಮೂಲಕ‌ ಯಾವ ವೈಚಾರಿಕತೆ, ಸಹಿಷ್ಣುತೆ ಕುರಿತು ಚಿಂತನ ಮಂಥನ ನಡೆಸಲಿದೆ, ‘ಕುಂಭ’ಕ್ಕೂ ವೈಚಾರಿಕತೆಗೂ ಎತ್ತಣಿಂದೆತ್ತ ಸಂಬಂಧ ಎನ್ನುವ ಪ್ರಶ್ನೆ ಮೂಡದೆ ಇರದು.

ಈಚೆಗೆ ಅಯೋಧ್ಯೆಯ ತನ್ನ ಕೇಂದ್ರ ಸ್ಥಾನಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರನ್ನು ಕರೆದು ಭಾಷಣ ಮಾಡಿಸಿ, ತನ್ನದು ‘ಒಳಗೊಳ್ಳುವ’ ರಾಜಕಾರಣ ಎಂದು ಬಿಂಬಿಸಿಕೊಂಡಿದ್ದ ಆರ್‌ಎಸ್‌ಎಸ್, ಈಗ ದೆಹಲಿಯಲ್ಲಿ ಸಂಘಟಿಸಿರುವ ಉಪನ್ಯಾಸ ಸರಣಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರಂತಹ ಭಿನ್ನ ಸಿದ್ಧಾಂತವನ್ನು ಹೊಂದಿದ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗುತ್ತದೆನ್ನುವ ಸುದ್ದಿಯನ್ನು ತೇಲಿಬಿಟ್ಟಿದೆ. ಬೆನ್ನಿಗೇ, ಎಲ್ಲ ಜಾತಿ-ಧರ್ಮ, ವರ್ಗಗಳ ವಿಚಾರವಂತರನ್ನು ‘ಒಳಗೊಳ್ಳುವ’, ಅವರ ವಿಚಾರಗಳನ್ನು ಕೇಳಿಸಿಕೊಳ್ಳುವ 'ವೈಚಾರಿಕ ಕುಂಭ'ದ ಹಿಂದೆ ಬಿದ್ದಿದೆ. ಸೂಕ್ಷ್ಮವಾಗಿ ನೋಡಿದರೆ, ಈ ಎಲ್ಲವೂ ಒಂದೇ ಸೂತ್ರದಲ್ಲಿ ಪೋಣಿಸಿದ ಹಲವು ತಂತ್ರಗಳಂತೆ ಮತ್ತು ಈ ತಂತ್ರಗಳು ಮುಂಬರುವ ಚುನಾವಣೆಗಳಿಗೆ ಶಕ್ತಿ ಭೂಮಿಕೆಯನ್ನು ಸಿದ್ಧಪಡಿಸುವ ಇರಾದೆಯನ್ನು ಹೊಂದಿರುವಂತೆ ತೋರುತ್ತಿವೆ.

ಈಗಾಗಲೇ ರಾಯಚೂರು, ಮಂತ್ರಾಲಯಗಳಿಗೆ ಭೇಟಿ ನೀಡಿರುವ ಆರ್‌ಎಸ್‌ಎಸ್‌‌ ಮುಖ್ಯಸ್ಥ ಮೋಹನ್ ಭಾಗವತ್, ಈ ಭಾಗದ ಪ್ರಮುಖರೊಂದಿಗೆ ‘ಆಂತರಿಕ’ ಚರ್ಚೆ ನಡೆಸಿದ್ದಾರೆ. ಮಂತ್ರಾಲಯದಲ್ಲಿ ಮುಂದಿನ ಎರಡು ಮೂರು ದಿನ ಪರಿವಾರದ ‘ಬೈಠಕ್’‌ ನಡೆಸಲಿದ್ದು, ಅದರಲ್ಲಿ ರಾಷ್ಟ್ರೀಯ ಪ್ರಮುಖರು ಮತ್ತು ನೂರಕ್ಕೂ ಹೆಚ್ಚು ಅಂಗಸಂಸ್ಥೆಗಳ ಕಟ್ಟಾಳುಗಳು ಭಾಗವಹಿಸುತ್ತಿದ್ದಾರೆ. ಮುಂಬರುವ ಆಂಧ್ರಪ್ರದೇಶ, ತೆಲಂಗಾಣ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಪರಿವಾರ’ ವಹಿಸಬೇಕಿರುವ ಹೊಣೆಗಾರಿಕೆಯ ಕುರಿತು ಇಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ. ಇದರ ಮುಂದುವರಿದ ಭಾಗವೇ ‘ವೈಚಾರಿಕ-ಕುಂಭ’ದ ಕಲ್ಪನೆ.

ಪಾಠ ಕಲಿಯಲು ಕುಂಭವೇ ಬೇಕಿಲ್ಲ

ವಿಚಾರ, ವೈಚಾರಿಕತೆ ಯಾರೊಬ್ಬರ ಸ್ವತ್ತಲ್ಲ ಎನ್ನುವುದು ನಿಜ. ವಿವಿಧ ಹಿನ್ನೆಲೆ ಮತ್ತು ತಾತ್ವಿಕತೆಯ ವಿಚಾರವಂತರನ್ನು ಒಂದೆಡೆ ಕಲೆಹಾಕಿ, ಚಿಂತನ-ಮಂಥನಕ್ಕೆ ವೇದಿಕೆ ಕಲ್ಪಿಸುವುದು, ವ್ಯಕ್ತವಾಗುವ ಎಲ್ಲ ಬಗೆಯ ವಿಚಾರಗಳಿಗೆ ಕಿವಿಯಾಗುವುದು ಒಳ್ಳೆಯದೇ ಹೌದು. ಆದರೆ, ಅಲ್ಲಿ ಮಂಡಿತವಾಗುವ ಭಿನ್ನ ಧಾರೆಯ ವಿಚಾರ, ಸಹಿಷ್ಣುತೆಯ ಪಾಠಗಳು ಆಡಳಿತದ ಸಂದರ್ಭದಲ್ಲಿ ಪಾಲನೆಗೆ ಬರಬೇಕು. ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುತ್ತೇವೆ ಎನ್ನುವುದು ನುಡಿಗೆ ಸೀಮಿತವಾಗದೆ ನಡೆಯಲ್ಲೂ ಕಾಣಿಸಬೇಕು. ಬರೀ ಕೇಳಿಸಿಕೊಳ್ಳುವ ನಾಟಕವಾದರೆ ಅಥವಾ ಆಹ್ವಾನಿತರ ತಲೆಗೆ ಪರಿವಾರದ ಸ್ಥಾಪಿತ ವಿಚಾರಗಳನ್ನು ತುಂಬಿ ಕಳುಹಿಸುವುದಷ್ಟೇ ಘನ ಉದ್ದೇಶವಾದರೆ ಈ ‘ಕುಂಭ’ ಪ್ರಯತ್ನಕ್ಕೆ ಅಂಥ ಮಹತ್ವ ಕೊಡಬೇಕಿಲ್ಲ.

ಇದನ್ನೂ ಓದಿ : ಕ್ರೈಸ್ತರ ವಿರುದ್ಧ ಸುಳ್ಳುಸುದ್ದಿ ಹಬ್ಬಿಸಿದ ಆರ್‌ಎಸ್‌ಎಸ್‌ ಹಿನ್ನೆಲೆಯ ರತನ್‌ ಶಾರದಾ

ಅಷ್ಟಕ್ಕೂ, ಭಾರತದ ವರ್ತಮಾನದಲ್ಲಿ ‘ಒಳಗೊಳ್ಳುವಿಕೆ’ ರಾಜಕಾರಣ, ವೈಚಾರಿಕತೆ, ಸಹಿಷ್ಣುತೆಯ ಪಾಠಗಳನ್ನು ಕಲಿಯಲು, ಅರಿವನ್ನು ಪಡೆಯಲು ಕುಂಭಗಳೇ ಆಗಬೇಕೆಂದಿಲ್ಲ. ಸಂಘ ಪರಿವಾರ ಪ್ರಣೀತ ಆಡಳಿತವನ್ನು ದೇಶವಾಸಿಗಳಿಗೆ ಉಣಬಡಿಸುತ್ತಿರುವ ಮೋದಿ ರಾಜ್ಯಭಾರದಲ್ಲಿ ನಿರಂತರ ದಾಳಿಗೆ ಗುರಿಯಾಗುತ್ತಿರುವ, ಹತ್ತಿಕ್ಕಲ್ಪಡುತ್ತಿರುವ ‘ವೈಚಾರಿಕ’ರು, ಮಾನವ ಹಕ್ಕು ಹೋರಾಟಗಾರರು, ಪ್ರಗತಿಪರರು, ಅಲ್ಪಸಂಖ್ಯಾತರು, ದಲಿತರು ಮತ್ತು ಅವರೆಲ್ಲರ ಪರ ನಿಂತಿರುವ ಚಿಂತಕರು ತಿರುಗಿಬಿದ್ದು, ಆ ಎಲ್ಲ ಪಾಠಗಳನ್ನು ಬೀದಿಯಲ್ಲಿ ನಿಂತು ಗಟ್ಟಿ ಧ್ವನಿಯಲ್ಲಿ ಬೋಧಿಸುತ್ತಿದ್ದಾರೆ. ಸರ್ವರನ್ನೂ ಒಳಗೊಳ್ಳುವ ಭಾರತವನ್ನು ಕಟ್ಟುವವರಿಗೆ ಇರಬೇಕಾದ ವಿವೇಕ, ಸರ್ವಧರ್ಮ ಸಹಿಷ್ಣು ಮನೋಧರ್ಮ, ಸಾಮರಸ್ಯ ಗುಣಗಳನ್ನು ನ್ಯಾಯಾಲಯಗಳು ಕೂಡ ಕಟು ಎಚ್ಚರಿಕೆ ಮತ್ತು ‘ಪಾಠ’ದ ರೂಪದಲಿಯೇ ಹೇಳುತ್ತಿವೆ.

ಅದನ್ನೆಲ್ಲ ಕೇಳಿಸಿಕೊಳ್ಳುವ ವ್ಯವಧಾನ ತೋರದೆ, ವೈದಿಕತೆ, ಅವಿಚಾರ, ಅಸಹಿಷ್ಣುತೆ, ಸರ್ವಾಧಿಕಾರಿತನವನ್ನು ಢಾಳಾಗಿ ಮೆರೆಸುವ ಅಧಿಕಾರಸ್ಥ ಜನರನ್ನು ‘ತನ್ನವರು’ ಎಂದು ಪೊರೆದುಕೊಳ್ಳುವುದು ಮತ್ತು ಅದನ್ನು ಗೆಲ್ಲುವ, ಗೆಲ್ಲಿಸುವ ತಂತ್ರವನ್ನಾಗಿಸಿಕೊಂಡರೆ ಪರಿವಾರ ಇಂಥ ಯಾವುದೇ ಚರ್ಚಾ ವೇದಿಕೆಯನ್ನು ಸೃಜಿಸಿದರೂ ಅದು ಮತ್ತೊಂದು ನಾಟಕ, ತಂತ್ರವಾಗಿ ಮಾತ್ರ ಕಾಣುತ್ತದೆ. ನಡೆ, ನುಡಿಯಲ್ಲಿ ವೈದಿಕತೆಯನ್ನು ಹೆಚ್ಚು ಬಿಂಬಿಸುವ ಕಟ್ಟಾಳುಗಳಿಗೆ ಪ್ರತಿಪಕ್ಷಗಳಿಗಿಂತ ಈಗ ‘ವಿಚಾರವಂತರು’, ಸೈದ್ಧಾಂತಿಕ ಭಿನ್ನತೆಯನ್ನು ಹೊಂದಿದ ಜನಪರ ಹೋರಾಟಗಾರರು ಮತ್ತು ಅವರು ಕಟ್ಟಿನಿಲ್ಲಿಸುತ್ತಿರುವ ಪ್ರಜಾತಾಂತ್ರಿಕ ಪ್ರತಿರೋಧಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ. ಹೀಗೇ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಗಬಹುದೆನ್ನುವ ಆತಂಕ ಬಿಜೆಪಿ-ಪರಿವಾರದಲ್ಲಿ ಮೂಡಿದಂತಿದೆ. ಅದಕ್ಕೇ, ತೋರುಗಾಣಿಕೆಗಾಗಿ ‘ವೈಚಾರಿಕ’ರನ್ನು ಅಪ್ಪುವ ಮೂಲಕ, ವೈಚಾರಿಕ-ವೈದಿಕ ಎರಡನ್ನೂ ‘ವೈಚಾರಿಕ ಕುಂಭ’ದ ಮೂಲಕ ಬೆರೆಸಿ ಕಲಸುಮೇಲೋಗರ ಮಾಡಿ, ಜನರನ್ನು ಗೊಂದಲಕ್ಕೆ ಬೀಳಿಸಿ, ಮುಂಬರುವ ಚುನಾವಣೆಯ ವೇಳೆಗೆ ಆ ‘ಮೇಲೋಗರ’ವನ್ನು ಅದೇ ಜನರಿಗೆ ಬಡಿಸಿ ಗರಿಷ್ಠ ಲಾಭ ಪಡೆಯಲು ಬಯಸಿದಂತೆ ತೋರುತ್ತಿದೆ. ಜನರ ಮಧ್ಯೆ ವಿಚಾರವನ್ನು ಹಬ್ಬಿಸುವುದಕ್ಕಿಂತ ಗೊಂದಲ ಮೂಡಿಸಿ ಲಾಭ ಪಡೆಯುವುದು ಸೋವಿ ಎನ್ನುವುದನ್ನವರು ಉಳಿದೆಲ್ಲ ಪಕ್ಷ, ಸಂಘಟನೆಗಳಿಗಿಂತ ತುಸು ಹೆಚ್ಚೇ ಅರಿತಂತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More