ಚಾಣಕ್ಯಪುರಿ | ಸಮ್ಮಿಶ್ರ ಸರ್ಕಾರ ಕೆಡವಲು ಬಿಎಸ್‌ವೈ ಸನ್ನದ್ಧ, ಹೈಕಮಾಂಡ್‌ಗಿಲ್ಲ ಒಲವು!

ಮೂರು ದಿನದ ಮುಖ್ಯಮಂತ್ರಿ ಎಂಬ ಕುಹಕದಿಂದ ತೀವ್ರ ನೊಂದಿರುವ ವಿಪಕ್ಷ ನಾಯಕ ಬಿಎಸ್‌ವೈ ಶತಾಯಗತಾಯ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ನಡೆಸಿದ್ದಾರೆ. ರೆಡ್ಡಿ ಸಹೋದರರನ್ನು ಈ ಯಾಗದಲ್ಲಿ ತೊಡಗಿಸಿರುವ ಬಿಎಸ್‌ವೈಗೆ ಬಿಜೆಪಿ ಹೈಕಮಾಂಡ್‌ ಒಪ್ಪಿಗೆ ನೀಡುತ್ತಿಲ್ಲ ಎನ್ನಲಾಗಿದೆ

ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಪಣ ತೊಟ್ಟಿದ್ದು, ಅದಕ್ಕೆ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ. ಈ ಬಾರಿ ಅವರದು ಮಾಸ್ಟರ್ ಸ್ಟ್ರೋಕ್ ಅಂತೆ...

-ಹೀಗೆ ಒಂದೇ ಸಮನೆ ಯಡಿಯೂರಪ್ಪ ಮನದಿಂಗಿತವನ್ನು ಬಿಚ್ಚಿಟ್ಟರು ಅವರ ಬೆಂಬಲಿಗರೊಬ್ಬರು. ದೆಹಲಿ ಬಿಸಿಲಿಗೆ ದಣಿದಿದ್ದ ಅವರು ನಂತರ ಬಿಡಿಸಿ ಹೇಳಲು ಆರಂಭಿಸಿದರು. “ಮೂರು ದಿನದ ಮುಖ್ಯಮಂತ್ರಿ ಆಗಿದ್ದದ್ದು ಅವರಿಗೆ ಮುಖಭಂಗ ಆದಂತಾಗಿದೆ. ಅದಕ್ಕೋಸ್ಕರನಾದ್ರೂ ಇನ್ನೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದುಕೊಂಡಿದ್ದಾರೆ. ಆತುರಗಾರನಿಗೆ ಬುದ್ದಿ ಕಮ್ಮಿ ಎನ್ನುವ ಹಾಗೆ ಯಡಿಯೂರಪ್ಪ ಅವಸರ ಮಾಡಿ ಯಾಮಾರಿಬಿಟ್ಟರು. ಈಗ ನಿಧಾನವಾಗಿ ತಂತ್ರ ರೂಪಿಸುತ್ತಿದ್ದಾರೆ‌. ಅವರಿಗೀಗ ಒಂದಷ್ಟು ವಾಸ್ತವಗಳು ಅರ್ಥವಾಗಿವೆ. ಏಕಾಂಗಿಯಾಗಿ ಹೋರಾಡಿ ಗೆಲ್ಲುವುದು ಕಷ್ಟ ಅಂತ ಗೊತ್ತಾಗಿದೆ.‌ ಅದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆವರೆಗೂ ಕಾಯುತ್ತ ಕುಳಿತುಕೊಂಡರೆ ನಂತರ ಅಧಿಕಾರ ಸಿಗುವುದು ಕಷ್ಟ ಎಂದು ಗೊತ್ತಾಗಿದೆ. ಅದಕ್ಕಾಗಿ ಯಾರಿಗೆ ಯಾವ ಕೆಲಸ ವಹಿಸಬೇಕು, ಬೇರೆ ಪಕ್ಷದ ಯಾವ ಶಾಸಕರನ್ನು ಸೆಳೆಯಲು ಯಾರಿಗೆ ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಅಳೆದು ತೂಗಿ ನಿಶ್ಚಯಿಸುತ್ತಿದ್ದಾರೆ,” ಎಂದು ವಿವರಿಸಿದರು.

ಬಿಜೆಪಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಷ್ಟು ಫಾಸ್ಟ್ ಆಗಿ ಕೆಲಸ ಮಾಡುವವರು ಇಲ್ಲವಂತೆ. ಅದಕ್ಕಾಗಿ ಯಡಿಯೂರಪ್ಪ ಮತ್ತೊಮ್ಮೆ ರೆಡ್ಡಿ-ರಾಮುಲು ಸಹಾಯ ಪಡೆದುಕೊಳ್ಳುತ್ತಿದ್ದಾರಂತೆ. ಈಗಾಗಲೇ ಇಬ್ಬರ ಜೊತೆಯೂ, “ನೀವು ಶಾಸಕರನ್ನು ಸೆಳೆಯುವ ಕೆಲಸ ಮಾಡಿ, ಹಿಂದೆ ಆಗಿದ್ದೆಲ್ಲವನ್ನೂ ಮರೆತು ಮುಂದೆ ಚೆನ್ನಾಗಿರೋಣ,” ಎಂಬರ್ಥದಲ್ಲಿ ಮಾತನಾಡಿದ್ದಾರಂತೆ‌. ಜನಾರ್ದನ ರೆಡ್ಡಿ ಈಗಾಗಲೇ ಸೈಲೆಂಟ್ ಆಪರೇಷನ್ ಶುರುಮಾಡಿಕೊಂಡಿದ್ದಾರಂತೆ. ಆದರೆ, ಒಂದು ಸಮಸ್ಯೆ ಇದೆಯಂತೆ; ಯಡಿಯೂರಪ್ಪ ಎಷ್ಟೇ ಹೇಳಿದರೂ ಹೈಕಮಾಂಡಿನಿಂದ ಮಾತ್ರ ಗ್ರೀನ್ ಸಿಗ್ನಲ್ ಸಿಗುತ್ತಿಲ್ಲವಂತೆ. “ಲೋಕಸಭಾ ಚುನಾವಣೆವರೆಗೂ ಸುಮ್ಮನಿರಿ. ಈಗ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಬೀಳಿಸಿದರೆ ಒಕ್ಕಲಿಗ ಮತಗಳು ಬಿಜೆಪಿಯಿಂದ ದೂರವಾಗುತ್ತವೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಪೂರ್ಣವಾಗಿ ಹಾಳಾಗಿಬಿಡುತ್ತದೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಬರುವುದರಿಂದ ನಂತರ ನೋಡಿಕೊಳ್ಳೋಣ,” ಎನ್ನುತ್ತಿದ್ದಾರಂತೆ. “ಇದು ಅನಂತಕುಮಾರ್ ಇಟ್ಟಿರುವ ಫಿಟ್ಟಿಂಗು. ಅವರಿಗೆ ಒಕ್ಕಲಿಗ ಮತಗಳು ಬೇಕಿರುವುದರಿಂದ ರಾಜ್ಯದಲ್ಲಿ ಸರ್ಕಾರ ಬರುವುದನ್ನೇ ತಡೆಯುತ್ತಿದ್ದಾರೆ,” ಎಂದು ನೊಂದುಕೊಂಡರು ಅವರು. ಬಳಿಕ ಯಡಿಯೂರಪ್ಪ ಅವರ ಮಾಸ್ಟರ್ ಸ್ಟ್ರೋಕ್ ಬಗ್ಗೆ ಲೀಕ್ ಮಾಡಿಬಿಟ್ಟರು.

“ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಲೋಕಸಭೆಯಲ್ಲಿ ಹೆಚ್ಚು ಸೀಟು ಗೆಲ್ಲೋಕೆ ಸಾಧ್ಯ.‌ ಇಲ್ಲದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಹೆಚ್ಚು ಸ್ಥಾನ ಗೆದ್ದುಬಿಡುತ್ತವೆ. ಆ ಪಕ್ಷಗಳನ್ನು ನಿಯಂತ್ರಿಸಬೇಕು ಎಂದರೆ ಮೈತ್ರಿ ಮುರಿದುಹಾಕಬೇಕು. ಅಧಿಕಾರ ಇಲ್ಲದಿದ್ದರೆ ಅವರು ಒಂದಾಗಿರುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ನಮ್ಮ ಸರ್ಕಾರ ಇದ್ದರೆ ಆಡಳಿತ ಯಂತ್ರವನ್ನು ನಮ್ಮ ಪಕ್ಷದ ಪರವಾಗಿ ಬಳಸಿಕೊಳ್ಳಬಹುದು. ರಾಜ್ಯದಲ್ಲೂ ಬಿಜೆಪಿ, ಕೇಂದ್ರದಲ್ಲೂ ಬಿಜೆಪಿ ಎಂದು ಪ್ರಚಾರ ಮಾಡಬಹುದು. ಇದರಿಂದ ಬಿಜೆಪಿಗೆ ನರೆವಾಗುತ್ತದೆ,” ಅಂತ ನೇರವಾಗಿ ಅಮಿತ್ ಶಾಗೆ ಹೇಳಿದ್ದಾರಂತೆ!

ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗದ ಕುಮಾರಸ್ವಾಮಿ!

ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿ ಬಳಿ ದೂರು ನೀಡಲು ಹೋಗಿದ್ದ ಸಿಎಂ ಕುಮಾರಸ್ವಾಮಿಗೆ ನಿರಾಸೆಯಾಗಿದೆ.‌ “ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ,” ಎಂಬ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ವಿದೇಶ ಪ್ರವಾಸ ಮತ್ತು ಅವರ ಬೆಂಬಲಿಗರ ನಡೆಗಳು ಕೂಡ ಅನುಮಾನಾಸ್ಪದವಾಗಿವೆ. ಸಮನ್ವಯ ಸಮಿತಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಆಕ್ಷೇಪಿಸುತ್ತಿದ್ದಾರೆ ಎಂಬ ದೂರುಗಳ ಸರಮಾಲೆಯೇ ಇತ್ತು. ಜೊತೆಗೆ, ಸಿದ್ದರಾಮಯ್ಯ ಮಾತು ಮತ್ತು ವರ್ತನೆಗಳು ಮೈತ್ರಿಗೆ ಧಕ್ಕೆ ತರುವಂತಿವೆ. ಮುಂದೆ ಮೈತ್ರಿ ಮುರಿದರೆ ಅವರೇ ಜವಾಬ್ದಾರರು ಎಂಬ ಒಗ್ಗರಣೆ ಇತ್ತು. ಇವೆಲ್ಲವನ್ನೂ ರಾಹುಲ್ ಗಾಂಧಿ ಬಳಿ ಮಂಡಿಸಿ, ನೀವೇ ಸಿದ್ದರಾಮಯ್ಯ ಅವರ ಕಿವಿಹಿಂಡಿ ಎಂದು ಹೇಳಲು ತಯಾರಾಗಿ ಹೋಗಿದ್ದರು ಕುಮಾರಸ್ವಾಮಿ. ಆದರೆ, ರಾಹುಲ್ ಗಾಂಧಿ ಭೇಟಿ ಉಭಯಕುಶಲೋಪರಿಗೆ ಸೀಮಿತವಾಗಿದೆ.

ಕುಮಾರಸ್ವಾಮಿ ಸ್ವಲ್ಪ ಬೇಗ ರಾಹುಲ್ ಗಾಂಧಿ ಭೇಟಿ ಮಾಡಿದ್ದಿದ್ದರೆ ದೂರು ನೀಡಲು ಅವಕಾಶ ಇರುತ್ತಿತ್ತು. ಕುಮಾರಸ್ವಾಮಿ ಎಲ್ಲ ಕಾರ್ಯಕ್ರಮಗಳಿಗೂ ತಡವಾಗಿ ಹೋಗುವಂತೆ ರಾಹುಲ್ ಗಾಂಧಿ ಭೇಟಿಗೂ ತಡವಾಗಿ ಹೋದರು. ಭೇಟಿ ಬೆಳಗ್ಗೆ ೯.೩೦ಕ್ಕೆ ನಿಗದಿಯಾಗಿತ್ತು. ಆ ಭೇಟಿ ಹಿನ್ನೆಲೆಯಲ್ಲೇ ಹಿಂದಿನ ದಿನವೇ ದೆಹಲಿಗೆ ಬಂದು ಉಳಿದುಕೊಂಡಿದ್ದರು ಕುಮಾರಸ್ವಾಮಿ. ‌ಆಮೇಲೆ ೯.೩೦ಕ್ಕೆ ನಿಗದಿಯಾಗಿದ್ದ ಸಮಯ ೧೦.೩೦ಕ್ಕೆ ಪೋಸ್ಟ್ ಪೋನ್ ಆಯಿತು. ೧೦.೩೦ ಆದರೂ ಕುಮಾರಸ್ವಾಮಿ ಕರ್ನಾಟಕ ಭವನದಲ್ಲೇ ಇದ್ದರು.‌ ಆಗಲೇ ದೆಹಲಿ ಪತ್ರಕರ್ತರಿಗೆ ಅನುಮಾನಗಳು ಶುರುವಾಗಿದ್ದವು. ಕಡೆಗೆ ೧೧ ಗಂಟೆಗೆ ತೆರಳಿದರು.

‌ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಮನೆಗೆ ಕಾಲಿಟ್ಟಾಗಲೇ ನಿರಾಸೆಯಾಗಿದೆ. ಏಕೆಂದರೆ, ಅಷ್ಟರೊಳಗೆ ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್, ಕೆ ಸಿ ವೇಣುಗೋಪಾಲ್ ಮತ್ತಿತರ ಕೋರ್ ಕಮಿಟಿ ಸದಸ್ಯರೊಂದಿಗೆ ರಾಹುಲ್ ಗಾಂಧಿ ಮಾತಿಗಿಳಿದಿದ್ದರು. ಎಲ್ಲರೆದುರೇ ಕುಮಾರಸ್ವಾಮಿ ಅವರಿಗೂ, “ಏನು ಹೇಳಿ?” ಎಂದು ಕೇಳಿದರು. ಬೇರೆ ರಾಷ್ಟ್ರೀಯ ನಾಯಕರಿದ್ದರೆ ಏನಾದರೂ ಮಾತನಾಡಬಹುದಿತ್ತೆನೋ, ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಎದುರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಉಪಸ್ಥಿತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹೇಗೆ ತಾನೇ ದೂರು ನೀಡಲು ಸಾಧ್ಯ? “ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಿದೆ. ನಿಮ್ಮ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ,” ಎಂದು ಹೇಳಿ, ಕೈ ಕುಲುಕಿ, ಕಾಲು ಕೀಳಬೇಕಾಯಿತು.

ಇದನ್ನೂ ಓದಿ : ಚಾಣಕ್ಯಪುರಿ | ಒಂದೇ ಮಾತಿನಲ್ಲಿ ಹಲವರ ನಿದ್ದೆಗೆಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

ಪರಮೇಶ್ವರ್ ಅವರಿಗೂ ನಿರಾಸೆ ತಂದ ದೆಹಲಿ ದಂಡಯಾತ್ರೆ!

ಸಿಎಂ ಕುಮಾರಸ್ವಾಮಿ ಅವರಂತೆ ಡಿಸಿಎಂ‌ ಪರಮೇಶ್ವರ್ ಕೂಡ‌ ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಸನ್ನದ್ದರಾಗಿದ್ದರು. ಆದರೆ, ರಾಹುಲ್ ಗಾಂಧಿ ಅವರು ಪರಮೇಶ್ವರ್ ಅವರಿಗೆ ಸಮಯಾವಕಾಶವನ್ನೇ ನೀಡಲಿಲ್ಲ. ಪರಮೇಶ್ವರ್ ಬಳಿ‌ ಕುಮಾರಸ್ವಾಮಿ ಅವರಂತೆ ನಿರ್ದಿಷ್ಟ ದೂರುಗಳಿರಲಿಲ್ಲ.‌ ಆದರೂ ಸಮ್ಮಿಶ್ರ ಸರ್ಕಾರ ಬಿದ್ದುಹೋದರೆ ತಮ್ಮ‌ ಉಪ ಮುಖ್ಯಮಂತ್ರಿ ಸ್ಥಾನವೂ ಕಿತ್ತುಕೊಂಡು ಹೋಗುತ್ತದೆಂಬ ಕಾರಣಕ್ಕೆ ಅವರು ದೂರು ತೆಗೆದುಕೊಂಡು ದೆಹಲಿಗೆ ಬಂದಿದ್ದರು. ಕುಮಾರಸ್ವಾಮಿ ಜೊತೆಯಲ್ಲೇ ರಾಹುಲ್ ಗಾಂಧಿ ಭೇಟಿ ಮಾಡಿ ಸಿದ್ದರಾಮಯ್ಯ ವಿರುದ್ಧ ದೂರುವುದು ಮೊದಲ ಯೋಜನೆಯಾಗಿತ್ತು. ಸ್ವತಃ ಕುಮಾರಸ್ವಾಮಿ ಇದಕ್ಕೆ ಅವಕಾಶ ಕೊಡಲಿಲ್ಲ; ಅವರನ್ನು ಜೊತೆಯಲ್ಲಿ ಕೊಂಡೊಯ್ಯಲಿಲ್ಲ. ಬಳಿಕ ರಾಹುಲ್ ಗಾಂಧಿ ಕಚೇರಿಗೆ ಪ್ರತ್ಯೇಕ ಸಮಯಕ್ಕೆ ಅರ್ಜಿ ಹಾಕಿದರು. ದಿನವಿಡೀ ಕಾದು ಕುಳಿತಿದ್ದರೂ ಉತ್ತರ ಬರಲಿಲ್ಲ.‌ ಕೊನೆಗೆ, ಪರಮೇಶ್ವರ್ ಅವರು ನಿರಾಸೆಯೊಂದಿಗೆ ಬೆಂಗಳೂರಿಗೆ ವಾಪಸಾದರು.

ರೇವಣ್ಣ ದೆಹಲಿ‌ ಪ್ರಯಾಣಕ್ಕೆ ತಡೆಯಾಜ್ಞೆ ನೀಡಿದ ದೇವೇಗೌಡ

ರಾಹುಲ್ ಗಾಂಧಿ ಭೇಟಿ ಮಾಡಲು ಮತ್ತು ಕೇಂದ್ರ ಸಚಿವರ ಬಳಿ ಅತಿವೃಷ್ಟಿಯಿಂದ ಆಗಿರುವ ಅಪಾರ ಪ್ರಮಾಣದ ನಷ್ಟಕ್ಕೆ ಪರಿಹಾರ ಕೇಳಲು ದೆಹಲಿಗೆ ಆಗಮಿಸಿದ್ದ ಸಿಎಂ‌ ಕುಮಾರಸ್ವಾಮಿ ಜೊತೆ ಎಚ್ ಡಿ ರೇವಣ್ಣ ಕೂಡ ಹೊರಟುಬಿಟ್ಟಿದ್ದರಂತೆ.‌ “ಲೋಕೋಪಯೋಗಿ ಸಚಿವ ಆಗಿರುವುದರಿಂದ ಹಾಳಾಗಿರುವ ರಸ್ತೆಗಳಿಗೆ ನಾನೇ ಬಂದು ಹಣ ಕೇಳುತ್ತೇನೆ,” ಎಂದು ಹಠ ಹಿಡಿದಿದ್ದರಂತೆ. “ರೇವಣ್ಣ ದೆಹಲಿಗೆ ಬಂದರೆ ಆಮೇಲೆ ರಾಹುಲ್ ಗಾಂಧಿ ಭೇಟಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ವೇಳೆಯೂ ಜೊತೆಗಿರುತ್ತಾರೆ. ಸಂಬಂಧ ಇಲ್ಲದಿದ್ದರೂ ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಮತ್ತು ರಾಜನಾಥ್ ಸಿಂಗ್ ಭೇಟಿಗೂ ಬರುತ್ತಾರೆ. ಈಗಾಗಲೇ ರೇವಣ್ಣ ಹಸ್ತಕ್ಷೇಪದ ಬಗ್ಗೆ ದೂರುಗಳು ಮಿತಿ ಮೀರುತ್ತಿದೆ. ಈಗ ರಾಹುಲ್ ಗಾಂಧಿ, ರಾಷ್ಟ್ರಪತಿ ಮತ್ತು ಕೇಂದ್ರ ಸಚಿವರ ಭೇಟಿ ವೇಳೆಯಲ್ಲಿಯೂ ರೇವಣ್ಣ ಕಾಣಿಸಿಕೊಂಡರೆ ವಿಪಕ್ಷಗಳಿಗೆ ಮತ್ತು ಮಾಧ್ಯಮಗಳಿಗೆ ಆಹಾರ ಆಗಬೇಕಾಗುತ್ತದೆ. ಅವರು ಬಿಲ್‌ಕುಲ್ ಬರುವುದು ಬೇಡ,” ಎಂದು ಕುಮಾರಸ್ವಾಮಿ ಅವರು ದೇವೇಗೌಡರ ಬಳಿ ಅಲವತ್ತುಕೊಂಡರಂತೆ. ನಂತರದಲ್ಲಿ, ದೇವೇಗೌಡರು ರೇವಣ್ಣ ಜೊತೆ ಮಾತನಾಡಿ ದೆಹಲಿ ಪ್ರಯಾಣಕ್ಕೆ ತಡೆಯಾಜ್ಞೆ ನೀಡಿದರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More