ಕಾಂಗ್ರೆಸ್-ಜೆಡಿಎಸ್‌ ಮೈತ್ರಿಕೂಟ ಮೇಲುಗೈ, ಮುಂಬೈ, ಹೈ-ಕದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ರಾಜ್ಯದ ೨೧ ಜಿಲ್ಲೆಗಳ ೧೦೫ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ದ್ವಿತೀಯ ಸ್ಥಾನಕ್ಕೆ ಸೀಮಿತವಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸ್ಪಷ್ಟ ಮೇಲುಗೈ ಸಾಧಿಸಿದೆ. ಮುಂಬೈ, ಹೈ-ಕ ಭಾಗದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶಿಸಿದೆ

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿದ್ದು, ಸಮ್ಮಿಶ್ರ ಸರ್ಕಾರವು ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. ಮೂರು ಮಹಾನಗರ ಪಾಲಿಕೆ, ೨೯ ನಗರಸಭೆ, ೫೩ ಪುರಸಭೆ ಹಾಗೂ ೨೦ ಪಟ್ಟಣ ಪಂಚಾಯಿತಿಯ ೨,೬೬೨ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ೯೮೨ ಹಾಗೂ ಜೆಡಿಎಸ್‌ ೩೭೫ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿವೆ. ಸತತ ಐದು ವರ್ಷಗಳಿಂದ ಅಧಿಕಾರದಿಂದ ದೂರವಿದ್ದರೂ, ಬಿಜೆಪಿಯು ೯೨೯ ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದ ಸಮೀಪಕ್ಕೆ ಸುಳಿದಿದ್ದ ಬಿಜೆಪಿಯು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವುದು ಸ್ಪಷ್ಟವಾಗಿದೆ. ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಎಂದಿನಂತೆ ಪಾರಮ್ಯ ಮೆರೆದಿದೆ. ಕರಾವಳಿಯ ಮತದಾರರು ಬಿಜೆಪಿಗೆ ನಿಷ್ಠರಾಗಿದ್ದು, ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಏಳು ವಿಧಾನಸಭಾ ಚುನಾವಣೆ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಜೆಡಿಎಸ್, ಪ್ರಸಕ್ತ ಚುನಾವಣೆಯಲ್ಲಿ ಬೆಳ್ಳೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿ ಮೂರು ಪುರಸಭೆ ಹಾಗೂ ಒಂದು ನಗರಸಭೆಯಲ್ಲಿ ಗೆಲುವು ದಾಖಲಿಸಿದೆ. ಹಾಸನದಲ್ಲಿ ಎರಡು ನಗರಸಭೆ ಹಾಗೂ ಮೂರು ಪುರಸಭೆಗಳನ್ನು ಸ್ವೀಪ್‌ ಮಾಡುವ ಮೂಲಕ ವಿರೋಧ ಪಕ್ಷಗಳಿಗೆ ವಿಶೇಷವಾಗಿ, ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟುಮಾಡಿದೆ. ಕಳೆದ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು, ಜೆಡಿಎಸ್‌ಗೆ ನಡುಕ ಹುಟ್ಟಿಸಿದ್ದ ಬಿಜೆಪಿಯ ಪ್ರೀತಂ ಗೌಡ ಅವರು ನಗರಸಭೆ ಚುನಾವಣೆಯಲ್ಲಿ ೧೩ ಕಾರ್ಪೊರೇಟರ್‌ಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್‌ ಎದುರು ತೊಡತಟ್ಟಿದ್ದಾರೆ. ಉಳಿದಂತೆ ತುಮಕೂರಿನಲ್ಲಿಯೂ ಜೆಡಿಎಸ್‌ ನೆಲೆ ವಿಸ್ತರಿಸಿಕೊಂಡಿದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶಕ್ತಿ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಚುನಾವಣೆ ನಡೆದೆಲ್ಲೆಡೆ ಬಹುತೇಕ ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷ ಅಧಿಕಾರ ಹಿಡಿಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಶಿವಮೊಗ್ಗ ಮಹಾನಗರ ಬಿಜೆಪಿಗೆ, ಎರಡು ಅತಂತ್ರ

ಪ್ರತಿಪಕ್ಷ ನಾಯಕ ಬಿ ಎಸ್‌ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಬಿಜೆಪಿ ತನ್ನ ವಶಕ್ಕೆ ಪಡೆದಿದೆ. ಮೈಸೂರು ಮತ್ತು ತುಮಕೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಇಲ್ಲಿ ಅಧಿಕಾರ ಹಿಡಿಯಲು ನೆರವಾಗಲಿದೆ. ಆದರೆ, ಅತಂತ್ರ ಮಹಾನಗರ ಪಾಲಿಕೆಗಳಲ್ಲೂ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ನಗರ ಭಾಗದಲ್ಲಿ ತಾನಿನ್ನೂ ಫೇವರಿಟ್‌ ಎನಿಸಿದೆ. ೨೯ ನಗರಸಭೆಗೆ ಚುನಾವಣೆ ನಡೆದಿದ್ದು, ೯ ಬಿಜೆಪಿ, ೫ ಕಾಂಗ್ರೆಸ್‌, ೨ ಜೆಡಿಎಸ್‌ ಪಾಲಾಗಿದ್ದು, ೧೩ ನಗರಸಭೆಗಳಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ೫೩ ಪುರಸಭೆಗಳ ಪೈಕಿ ೧೯ರಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಬಿಜೆಪಿ ೧೦, ಜೆಡಿಎಸ್‌ ೮ ಹಾಗೂ ೧೬ ಪುರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ೨೦ ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ೭ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿವೆ. ಜೆಡಿಎಸ್‌ ಎರಡನ್ನೂ ತನ್ನ ವಶಕ್ಕೆ ಪಡೆದಿದೆ. ಉಳಿದ ನಾಲ್ಕು ಪಟ್ಟಣ ಪಂಚಾಯಿತಿಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಹಲವು ಕಡೆ ಅಧಿಕಾರ ಹಿಡಿಯಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಧಿಕಾರ ಹಿಡಿಯಲು ಅತ್ಯಗತ್ಯವಾಗಿದೆ. ಕೆಲವು ಕಡೆ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ.

ಪರಮೇಶ್ವರ್, ಪುಟ್ಟರಂಗ ಶೆಟ್ಟಿಗೆ ಮುಖಭಂಗ

ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ತಮ್ಮ ಕ್ಷೇತ್ರವಾದ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಪಡೆಯುವಲ್ಲಿ ಸೋತಿದ್ದಾರೆ. ೧೫ ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ೮ ಸ್ಥಾನ ಗೆದ್ದಿರುವ ಜೆಡಿಎಸ್‌, ಅಧಿಕಾರದ ಗದ್ದುಗೆ ಹಿಡಿದಿದೆ. ೫ ವಾರ್ಡ್‌ ಗೆದ್ದಿರುವ ಕಾಂಗ್ರೆಸ್‌ ವಿರೋಧ ಪಕ್ಷವನ್ನು ಖಾತ್ರಿ ಪಡಿಸಿಕೊಂಡಿದೆ. ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಿ ಪುಟ್ಟರಂಗ ಶೆಟ್ಟಿ ಅವರು ಚಾಮರಾಜನಗರ ನಗರಸಭೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ೩೧ ಸದಸ್ಯ ಬಲದ ನಗರಸಭೆಯಲ್ಲಿ ೧೫ ವಾರ್ಡ್‌ ಗೆದ್ದಿರುವ ಬಿಜೆಪಿಯು ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ.

ಸಿದ್ದರಾಮಯ್ಯ ಗೌರವ ಉಳಿಸಿದ ಬಾದಾಮಿ ಮತದಾರ, ಕೆಪಿಜೆಪಿ ಅಚ್ಚರಿ!

ಬಾಗಲಕೋಟೆಯ ತಲಾ ಐದು ನಗರಸಭೆ, ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಐದೂ ನಗರಸಭೆಗಳ ಪೈಕಿ ನಾಲ್ಕು ನಗರಸಭೆ ಗೆದ್ದಿರುವ ಬಿಜೆಪಿಯು, ತಲಾ ಒಂದೊಂದು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯನ್ನು ವಶಕ್ಕೆ ಪಡೆದಿದೆ. ತೇರದಾಳ ಪುರಸಭೆ ಹಾಗೂ ಕೆರೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಎದುರು ನೇರ ಸ್ಪರ್ಧೆಗೆ ಇಳಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವಾದ ಬಾದಾಮಿ ಪುರಸಭೆಯನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆಯುವ ಮೂಲಕ ಗೌರವ ಉಳಿಸಿಕೊಂಡಿದೆ. ಈಚೆಗೆ ಅಪಘಾತದಲ್ಲಿ ನಿಧನರಾದ ಸಿದ್ದು ನ್ಯಾಮಗೌಡ ಪ್ರತಿನಿಧಿಸುತ್ತಿದ್ದ ಜಮಖಂಡಿ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರ ಸ್ಥಾಪಿಸಿದೆ. ಉಳಿದಂತೆ ಹಾವೇರಿಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ಪ್ರಜಾಕೀಯ ಪಕ್ಷದ ಏಕೈಕ ಶಾಸಕರಾಗಿ ಆಯ್ಕೆಯಾಗಿ, ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿರುವ ಆರ್‌ ಶಂಕರ್‌ ಅವರು ರಾಣಬೆನ್ನೂರು ನಗರಸಭೆ ಚುನಾವಣೆಯಲ್ಲಿ ೧೦ ವಾರ್ಡ್‌ಗಳಲ್ಲಿ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ ತನ್ನ ಗೆಲುವು ಆಕಸ್ಮಿಕವಲ್ಲ ಎಂದು ಸಾಬೀತುಪಡಿಸಿದ್ದಾರೆ. ಇಲ್ಲಿ ಬಿಜೆಪಿಯು ೧೫ ಸ್ಥಾನ ಗೆದ್ದಿದೆ. ಕಾಂಗ್ರೆಸ್‌ ೯ ಸ್ಥಾನ ಗೆದ್ದು ೩ನೇ ಸ್ಥಾನಕ್ಕೆ ಕುಸಿದಿದೆ. ರಾಣೆಬೆನ್ನೂರಿನಲ್ಲಿ ಅಧಿಕಾರ ಹಿಡಿಯಲು ಕೆಪಿಜೆಪಿಯ ಬೆಂಬಲವು ಕಾಂಗ್ರೆಸ್‌ ಹಾಗೂ ಬಿಜೆಪಿಗೆ ನಿರ್ಣಾಯಕವಾಗಲಿದೆ.

ಕಾರವಾರದಲ್ಲಿ ಜೆಡಿಎಸ್‌ ನಿರ್ಣಾಯಕ, ಹೊಳೆನರಸೀಪುರದಲ್ಲಿ ಇಲ್ಲ ವಿಪಕ್ಷ!

ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್‌ ಹೆಗಡೆ ಅವರ ಲೋಕಸಭಾ ಕ್ಷೇತ್ರದ ಕೇಂದ್ರಸ್ಥಾನವಾದ ಕಾರವಾರ ನಗರಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ೧೧ ವಾರ್ಡ್‌ ಗೆಲ್ಲುವ ಮೂಲಕ ಅಧಿಕಾರ ಹಿಡಿಯಲು ಮುಂದಾಗಿವೆ. ೩೧ ಸದಸ್ಯ ಬಲದ ಕಾರವಾರ ನಗರಸಭೆಯಲ್ಲಿ ಸರಳ ಬಹುಮತಕ್ಕೆ ೧೬ ಸ್ಥಾನದ ಅಗತ್ಯವಿದ್ದು, ನಾಲ್ವರು ಜೆಡಿಎಸ್‌ ಹಾಗೂ ಐವರು ಪಕ್ಷೇತರ ಸದಸ್ಯರು ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಕಾರವಾರದ ಜೆಡಿಎಸ್‌ ಮುಖಂಡ ಆನಂದ್‌ ಅಸ್ನೋಟಿಕರ್‌ ಅವರು ಜೆಡಿಎಸ್‌ಗೆ ನಗರಸಭೆ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ ಡಿ ರೇವಣ್ಣ ಅವರ ವಿಧಾನಸಭಾ ಕ್ಷೇತ್ರವಾದ ಹೊಳೆನರಸೀಪುರದ ೨೩ ಸದಸ್ಯ ಬಲದ ಪುರಸಭೆಯನ್ನು ಜೆಡಿಎಸ್‌ ಸ್ವೀಪ್‌ ಮಾಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವ ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹೊಳೆನರಸೀಪುರದಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.

ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಮೈತ್ರಿಧರ್ಮವನ್ನು ಪೊರೆದೀತೇ?

ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ಪ್ರಾಬಲ್ಯ

ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಬೆಳಗಾವಿ ಜಿಲ್ಲಾ ರಾಜಕೀಯದ ಮೇಲೆ ಪ್ರಭುತ್ವ ಸಾಧಿಸುವ ವಿಚಾರದಲ್ಲಿನ ತಿಕ್ಕಾಟ ಸಾರ್ವಜನಿಕವಾದ ಬೆನ್ನಿಗೇ ಜಾರಕಿಹೊಳಿ ಸಹೋದರರು ಕುಂದಾನಗರಿಯಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಒಟ್ಟಾರೆ ೯೪ ಕಾಂಗ್ರೆಸ್‌ ಸದಸ್ಯರು ಆಯ್ಕೆಯಾಗಿದ್ದು, ೫೫ ಬಿಜೆಪಿ, ೧೫ ಜೆಡಿಎಸ್‌, ಐವರು ಎಂಇಎಸ್‌ ಹಾಗೂ ೯ ಪಕ್ಷೇತರರು ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಧಾನಸಭಾ ಕ್ಷೇತ್ರವಾದ ಗೋಕಾಕ ನಗರಸಭೆ ಹಾಗೂ ಕೊಣ್ಣೂರು ಪುರಸಭೆಯಲ್ಲಿ ರಮೇಶ್‌ ಜಾರಕಿಹೊಳಿ ಅವರ ಬೆಂಬಲಿಗರು ಮುನ್ನಡೆ ಸಾಧಿಸಿದ್ದಾರೆ. ಬೈಲಹೊಂಗಲದಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಮದುರ್ಗ, ಸವದತ್ತಿ ಪುರಸಭೆಗಳಲ್ಲಿ ಸರಳ ಬಹುಮತ ಪಡೆದಿರುವ ಬಿಜೆಪಿಯು ಮೂಡಲಗಿಯಲ್ಲಿ ಅಧಿಕಾರ ಹಿಡಿಯಲು ಒಬ್ಬ ಸದಸ್ಯರ ಬೆಂಬಲದ ಅಗತ್ಯವಿದೆ. ಖಾನಪುರ ಪಟ್ಟಣ ಪಂಚಾಯಿತಿಯ ೨೦ ಸದಸ್ಯರು ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More