ಸ್ಥಳೀಯ ಸಂಸ್ಥೆಗಳ ಚುನಾವಣೆ: ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಾರುಪತ್ಯ, ಬಿಜೆಪಿ ಚಿಗುರು

ಜೆಡಿಎಸ್ ತವರು ಜಿಲ್ಲೆ ಹಾಸನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪ್ರಾಬಲ್ಯ ಮುಂದುವರಿಸಿದೆ. ಐದು ಸಂಸ್ಥೆಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್ ಅಧಿಕಾರ ಉಳಿಸಿಕೊಂಡಿದೆ. ಹಾಸನ ನಗರಸಭೆಯಲ್ಲಿ ಸರಳ ಬಹುಮತಕ್ಕೆ ಒಂದು ಸ್ಥಾನ ಕೊರತೆಯಾಗಿದ್ದು, ಪಕ್ಷೇತರರ ಬೆಂಬಲ ಪಡೆಯಲಿದೆ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಜಾತ್ಯತೀತ ಜನತಾದಳ ತನ್ನ ತವರು ಜಿಲ್ಲೆ ಹಾಸನದಲ್ಲಿ ಪ್ರಾಬಲ್ಯ ಮುಂದುವರಿಸಿದೆ. ಚುನಾವಣೆ ನಡೆದ ಐದು ಸ್ಥಳೀಯ ಸಂಸ್ಥೆಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್ ಅಧಿಕಾರ ಉಳಿಸಿಕೊಂಡಿದೆ. ಆದರೆ, ಜಿಲ್ಲಾ ಕೇಂದ್ರ ಹಾಸನ ನಗರಸಭೆಯಲ್ಲಿ ಮಾತ್ರ ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಬಿದ್ದಿದ್ದು, ಮೂವರು ಪಕ್ಷೇತರ ಸದಸ್ಯರ ಬೆಂಬಲದಿಂದ ಇಲ್ಲೂ ಅಧಿಕಾರ ಹಿಡಿಯಲಿದೆ. ಆದರೆ, ಜೆಡಿಎಸ್ ಸರ್ವಾಧಿಕಾರಕ್ಕೆ ಭಾರತೀಯ ಜನತಾ ಪಕ್ಷ ಅಡ್ಡಿ ಉಂಟುಮಾಡಿರುವುದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣನವರಿಗೆ ಎಚ್ಚರಿಕೆಯ ಗಂಟೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೆಲವೇ ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್ ಜಯ ಗಳಿಸಿ, ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿತ್ತು. ಆದರೆ ಜಿಲ್ಲಾಕೇಂದ್ರವಾದ ಹಾಸನ ವಿಧಾನಸಭಾ ಕ್ಷೇತ್ರವನ್ನು ಬಿಪಿಪಿಯ ಪ್ರೀತಂ ಜೆ ಗೌಡ ಅವರು ಜೆಡಿಎಸ್‌ನಿಂದ ಕಿತ್ತುಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಅದೇ ಅಚ್ಚರಿಯ ಫಲಿತಾಂಶ ಹಾಸನ ನಗರಸಭೆ ಚುನಾವಣೆಯಲ್ಲೂ ಮುಂದುವರಿದಿದೆ.

ನಗರಸಭೆಯ 35 ಸ್ಥಾನಗಳ ಪೈಕಿ 13ರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಸ್ಥಳೀಯ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿನ ತಮ್ಮ ಗೆಲುವು ಆಕಸ್ಮಿಕವಲ್ಲ, ನಿಜಕ್ಕೂ ತಮಗೆ ಜನಬೆಂಬಲ ಇದೆ ಎಂಬುದನ್ನು ಸಾಧಿಸಿ ತೋರಿದ್ದಾರೆ. ಹಿಂದಿನ ನಗರಸಭೆಯಲ್ಲಿ ಕೇವಲ ಒಬ್ಬ ಸದಸ್ಯನನ್ನು ಹೊಂದಿದ್ದ ಬಿಜೆಪಿ ಬಲ ಈ ಬಾರಿ 13ಕ್ಕೆ ಏರಿರುವುದು ಜೆಡಿಎಸ್ ಮುಖಂಡರ ಆತಂಕಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮಾತ್ರ ಇತ್ತೀಚಿನ ವಿಧಾನಸಭಾ ಚುನಾವಣೆಯಂತೆಯೇ ಕಳಪೆ ಸಾಧನೆ ಮುಂದುವರಿಸಿದೆ. ಹಾಸನ ನಗರಸಭೆಯ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ದಾಖಲಿಸಿ, ಹೀನಾಯ ಸ್ಥಿತಿ ತಲುಪಿದೆ.

ಜಿಲ್ಲೆಯ ಹಾಸನ ಮತ್ತು ಅರಸೀಕೆರೆ ನಗರಸಭೆಗಳು ಹಾಗೂ ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಸಕಲೇಶಪುರ ಪುರಸಭೆಗಳಿಗೆ ನಡೆದ ಚುನಾವಣೆ ಫಲಿತಾಂಶ ಸೋಮವಾರ (03-09-2018) ಬೆಳಗ್ಗೆ 10 ಗಂಟೆ ವೇಳೆಗೇ ಹೊರಬಿದ್ದಿತ್ತು. ನಿರೀಕ್ಷೆಯಂತೆ ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಸಕಲೇಶಪುರ ಪುರಸಭೆಗಳಲ್ಲಿ ಜೆಡಿಎಸ್ ಅಧಿಕಾರ ಉಳಿಸಿಕೊಡುವಲ್ಲಿ ಆಯಾ ಕ್ಷೇತ್ರಗಳ ಜೆಡಿಎಸ್ ಶಾಸಕರು ಯಶಸ್ವಿಯಾಗಿದ್ದಾರೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಸಾಧನೆ ನಿರಾಶಾದಾಯಕವಾಗಿದ್ದು, ಆ ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಲು ಕಾರಣವಾಗಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಕಂಡು ಕೇಳರಿಯದ ಮಳೆಗೆ ಮೈಯೊಡ್ಡಿದ ಹಾಸನ ಜಿಲ್ಲೆ

ಅರಸೀಕೆರೆ ನಗರಸಭೆ

ಅರಸೀಕೆರೆ ನಗರಸಭೆಯ 31 ಸ್ಥಾನಗಳಲ್ಲಿ ಜೆಡಿಎಸ್ 22ರಲ್ಲಿ ಗೆಲುವು ಸಾಧಿಸಿ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಕ್ಷೇತ್ರದ ಶಾಸಕ ಕೆ ಎಂ ಶಿವಲಿಂಗೇಗೌಡರ ಬಲವನ್ನು ಹೆಚ್ಚಿಸಿದೆ. ಉಳಿದಂತೆ ಬಿಜೆಪಿ 5, ಕಾಂಗ್ರೆಸ್ 1 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಮುಕ್ತ ಹೊಳೆನರಸೀಪುರ

ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರಿಗೆ ಗೆಲುವು ಕಷ್ಟವಿದೆ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಪ್ರಬಲ ಪೈಪೋಟಿ ಒಡ್ಡಿದ್ದಾರೆ ಎಂಬುದಾಗಿ ವ್ಯಾಪಕ ಚರ್ಚೆಗಳು ನಡೆದಿದ್ದವು. ಆದರೆ, ಅವೆಲ್ಲವನ್ನೂ ಸುಳ್ಳು ಮಾಡುವ ಮೂಲಕ ರೇವಣ್ಣ ಭಾರಿ ಅಂತರದಿಂದ ಗೆಲುವು ಸಾಧಿಸಿ, ಹೊಳೆನರಸೀಪುರ ಎಂದೆಂದಿಗೂ ತಮ್ಮ ಸಾಮ್ರಾಜ್ಯ ಎಂಬುದನ್ನು ತೋರಿದ್ದರು. ಈಗ ಪುರಸಭೆ ಚುನಾವಣೆಯಲ್ಲೂ ತಮ್ಮ ಅಧಿಪತ್ಯಕ್ಕೆ ಕುಂದಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಹೊಳೆನರಸೀಪುರ ಪುರಸಭೆಯ 23 ಸ್ಥಾನಗಳಲ್ಲಿ 23 ಸ್ಥಾನಗಳನ್ನೂ ಜೆಡಿಎಸ್ ಗೆದ್ದುಕೊಂಡಿದ್ದು, ಅಲ್ಲಿ ಕಾಂಗ್ರೆಸ್ ಮುಕ್ತ ಪುರಸಭೆ ರಚಿಸಲ್ಪಟ್ಟಿದೆ.

ಚನ್ನರಾಯಪಟ್ಟಣ ಪುರಸಭೆ

ಚನ್ನರಾಯಪಟ್ಟಣ ಪುರಸಭೆಯ 23 ಸ್ಥಾನಗಳ ಪೈಕಿ ಜೆಡಿಎಸ್ 15ರಲ್ಲಿ ಗೆಲುವು ಸಾಧಿಸಿ, ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 8 ಸ್ಥಾನ ಗಳಿಸಿದ್ದು, ಇಲ್ಲಿ ಬಿಜೆಪಿಯದು ಶೂನ್ಯ ಸಾಧನೆ. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ ಎನ್ ಬಾಲಕೃಷ್ಣ ಅವರ ಅಧಿಕಾರ ಇಲ್ಲಿ ಅಬಾಧಿತವಾಗಿ ಮುಂದುವರಿಯಲಿದೆ.

ಸಕಲೇಶಪುರ ಪುರಸಭೆ

ಸಕಲೇಶಪುರ ಪುರಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 14 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಂಡಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದ ಕ್ಷೇತ್ರದ ಶಾಸಕ ಎಚ್ ಕೆ ಕುಮಾರಸ್ವಾಮಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿ ಕಾಂಗ್ರೆಸ್ 4, ಬಿಜೆಪಿ 2 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More