ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನೀಡಿದ ‘ಮೈತ್ರಿ’ ಸಂದೇಶವೇನು?

ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿ ಸದ್ಯಕ್ಕೆ ಯಾವುದೇ ಪರಿಣಾಮ ಬೀರದು. ಆದರೆ, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಆಡಳಿತಕ್ಕೆ ಈ ಫಲಿತಾಂಶ ಕೆಲವು ಸಂದೇಶ ಮತ್ತು ಎಚ್ಚರಿಕೆಗಳನ್ನು ರವಾನಿಸಿದಂತಿದೆ

ಮೂರು ನಗರಪಾಲಿಕೆಗಳೂ ಸೇರಿ ರಾಜ್ಯದ ೧೦೫ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಯಾವ ಪಕ್ಷವೂ ಬೀಗುವಂಥ ಫಲಿತಾಂಶವನ್ನೇನೂ ನಗರ, ಪಟ್ಟಣಗಳ ಜನರು ನೀಡಿಲ್ಲ ಎನ್ನುವುದು ಹೌದಾದರೂ, ಜೆಡಿಎಸ್‌-ಕಾಂಗ್ರೆಸ್ ಪಕ್ಷಗಳ ಮೈತ್ರಿ ಬಾಂಧವ್ಯವನ್ನು ನಗರ-ಪಟ್ಟಣಗಳ ಮಟ್ಟಕ್ಕೆ ವಿಸ್ತರಿಸುವ ಅಗತ್ಯವನ್ನು ಈ ಫಲಿತಾಂಶ ಧ್ವನಿಸಿದೆ. ಎರಡು ನಗರಪಾಲಿಕೆ ಮತ್ತು ೨೫ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯದಲ್ಲಿರುವಂತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತ ಅನಿವಾರ್ಯವಾಗಿದೆ.

ಒಟ್ಟು ೨೯ ನಗರಸಭೆಗಳ ಪೈಕಿ ೧೧ರಲ್ಲಿ ಬಿಜೆಪಿ, ೦೫ರಲ್ಲಿ ಕಾಂಗ್ರೆಸ್, ೩ ಕಡೆ ಜೆಡಿಎಸ್ ಸ್ಪಷ್ಟ ಬಹುಮತದಿಂದ ಅಧಿಕಾರ ಸ್ಥಾಪಿಸಲಿವೆ. ಅತಂತ್ರವಾಗಿರುವ ೧೦ ಕಡೆ ೬ರಲ್ಲಿ ಜೆಡಿಎಸ್‌-ಕಾಂಗ್ರೆಸ್ ಮೈತ್ರಿ ಅವಶ್ಯ. ಉಳಿದ ೪ ನಗರಸಭೆಗಳಲ್ಲಿ ೨ ಕಡೆ ಪಕ್ಷೇತರರೇ ನಿರ್ಣಾಯಕರು. ಚುನಾವಣೆ ನಡೆದ ಒಟ್ಟು ೫೩ ಪುರಸಭೆಗಳ ಪೈಕಿ ೨೧ರಲ್ಲಿ ಕಾಂಗ್ರೆಸ್, ೧೧ರಲ್ಲಿ ಬಿಜೆಪಿ, ೮ರಲ್ಲಿ ಜೆಡಿಎಸ್ ನಿಚ್ಚಳ ಬಹುಮತ ಪಡೆದಿವೆ. ೧೨ ಕಡೆ ಅತಂತ್ರ ಸ್ಥಿತಿ. ಈ ಪೈಕಿ ೪ರಲ್ಲಿ ಜೆಡಿಎಸ್‌-ಕಾಂಗ್ರೆಸ್ ಮೈತ್ರಿ ಸುಲಭ. ಮೂರು ಕಡೆ ಪಕ್ಷೇತರರು ನಿರ್ಣಾಯಕ. ಅಂತೆಯೇ, ೨೦ ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ೭ ಕಡೆ, ಜೆಡಿಎಸ್ ೨ರಲ್ಲಿ ಅಧಿಕಾರ ಸ್ಥಾಪಿಸಲಿವೆ. ಮೂರು ಕಡೆ ಅತಂತ್ರ ಸ್ಥಿತಿ. ಒಂದು ಕಡೆ ಪಕ್ಷೇತರರೇ ನಿರ್ಣಾಯಕರು.

ಮೂರು ನಗರ ಪಾಲಿಕೆಗಳಲ್ಲಿ

ಮೂರು ನಗರಪಾಲಿಕೆಗಳ ಪೈಕಿ ಯಡಿಯೂರಪ್ಪ, ಈಶ್ವರಪ್ಪ ಅವರ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು ೩೫ ವಾರ್ಡ್‌ ಗಳಲ್ಲಿ ೨೦ರಲ್ಲಿ ಬಿಜೆಪಿ, ೭ರಲ್ಲಿ ಕಾಂಗ್ರೆಸ್, ೨ರಲ್ಲಿ ಜೆಡಿಎಸ್‌, ಆರು ಮಂದಿ ಪಕ್ಷೇತರರು ಗೆದ್ದಿದ್ದಾರೆ. ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರ ತವರು ತುಮಕೂರು ನಗರ ಪಾಲಿಕೆಯಲ್ಲಿ ಕೂಡ ಬಿಜೆಪಿ ಅತಿ ಹೆಚ್ಚು (೧೨) ಸ್ಥಾನ ಪಡೆದಿದೆಯಾದರೂ, ತಲಾ ೧೦ ವಾರ್ಡ್‌ಗಳಲ್ಲಿ ಗೆದ್ದಿರುವ ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳು ಮೈತ್ರಿ ಅಧಿಕಾರ ಸ್ಥಾಪಿಸುವುದು ನಿಚ್ಚಳ. ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಸಚಿವ ಜಿ ಟಿ ದೇವೇಗೌಡ ಮತ್ತಿತರ ಹಲವು ಮುಖಂಡರ ಪ್ರತಿಷ್ಠೆಯ ಕಣ ಮೈಸೂರು ನಗರಪಾಲಿಕೆಯಲ್ಲಿ ಮತ್ತೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಐದು ವರ್ಷದ ಅವಧಿಯಲ್ಲಿ ಇಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಡಳಿತವಿತ್ತು. ಈ ಬಾರಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಗೆ ಜನ ಮತ ನೀಡಿದ್ದಾರೆ. ಒಟ್ಟು ೬೫ ವಾರ್ಡ್ ‌ಪೈಕಿ, ಬಿಜೆಪಿ ಅತಿ ಹೆಚ್ಚು (೨೨) ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ೧೯, ಜೆಡಿಎಸ್ ೧೮ ವಾರ್ಡ್‌ಗಳಲ್ಲಿ ಗೆದ್ದಿವೆ.

ನಗರಸಭೆ, ಪುರಸಭೆ, ಪಪಂ

ನಗರಪಾಲಿಕೆಯಷ್ಟೇ ಕುತೂಹಲ ಕೆರಳಿಸಿದ್ದ ೨೯ ನಗರಸಭೆ, ೫೩ ಪುರಸಭೆ, ೨೦ ಪಟ್ಟಣ ಪಂಚಾಯಿತಿಗಳ ಒಟ್ಟು ೨,೫೨೭ ವಾರ್ಡ್‌ಗಳಲ್ಲಿ ಕಾಂಗ್ರೆಸ್ ೯೪೬ರಲ್ಲಿ ಗೆದ್ದು ಸಂಖ್ಯಾಬಲದಲ್ಲಿ ಮುಂಚೂಣಿ ಕಾಯ್ದುಕೊಂಡಿದೆ. ಹಲವು ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಬಿಜೆಪಿ ೨ನೇ ಸ್ಥಾನ (೮೭೫ ವಾರ್ಡ್) ಪಡೆದಿದೆ. ಎಂದಿನಂತೆ ಹಳೇ ಮೈಸೂರು ಜಿಲ್ಲೆಗಳಲ್ಲಷ್ಟೆ ತನ್ನ ಬಲ ಪ್ರದರ್ಶಿಸಿರುವ ಜೆಡಿಎಸ್, ೩೪೫ ವಾರ್ಡ್‌ಗಳಲ್ಲಿ ಗೆದ್ದಿದೆ. ಈ ಸಂಖ್ಯೆ ಪಕ್ಷೇತರರ ಒಟ್ಟು ಸಂಖ್ಯೆಗಿಂತ (೩೧೫) ತುಸು ಹೆಚ್ಚು ಎನ್ನುವುದಷ್ಟೇ ಆ ಪಕ್ಷದ ಪಾಲಿನ ಸಮಾಧಾನ. ಉಳಿದಂತೆ ಇತರ ಪಕ್ಷಗಳ ಸ್ಥಾನ ಗಳಿಕೆ ಇಂತಿದೆ: ಬಿಎಸ್ಪಿ ೧೨, ಎಸ್ಡಿಪಿಐ ೧೭, ಕೆಪಿಜೆಪಿ ೧೦, ಎಸ್ಪಿ ೪, ಕರ್ನಾಟಕ ರಾಜ್ಯ ರೈತ ಸಂಘ, ಇಂಡಿಯನ್‌ ನ್ಯೂ ಕಾಂಗ್ರೆಸ್ ಮತ್ತು ಡಬ್ಲ್ಯುಪಿಐ ಗಳು ತಲಾ ೧.

ಪಕ್ಷಗಳ ಜಿಲ್ಲಾವಾರು ಬಲಾಬಲ

ಜೆಡಿಎಸ್‌ ತನ್ನ ಸಾಂಪ್ರದಾಯಿಕ ಪ್ರದೇಶದಿಂದ ಆಚೆ ಚಾಚಿಕೊಂಡಿಲ್ಲ ಎನ್ನುವುದು ಈ ಫಲಿತಾಂಶದಲ್ಲೂ ವ್ಯಕ್ತ. ಮಂಡ್ಯ (ಒಟ್ಟು ವಾರ್ಡ್‌ ೧೧೭/ ಜೆಡಿಎಸ್ ೬೪), ಮೈಸೂರು (೬೯/೨೫), ತುಮಕೂರು (೮೦/೪೧), ಹಾಸನ (೧೩೫/ ೯೧), ರಾಯಚೂರು (೧೭೫/೪೦) ಜಿಲ್ಲೆಗಳಲ್ಲಷ್ಟೇ ಈ ಪಕ್ಷ ಹೆಚ್ಚು ಸ್ಥಾನ ಪಡೆದಿರುವುದು.

ಇನ್ನು, ನಗರ-ಪಟ್ಟಣ ಪ್ರದೇಶದ ಮತದಾರರು ಬಿಜೆಪಿ ಪರ ಹೆಚ್ಚು ಎನ್ನುವ ಸಾಮಾನ್ಯ ನಂಬಿಕೆ ಎಲ್ಲೆಡೆ ನಿಜವಾಗಿಲ್ಲ. ಬಾಗಲಕೋಟೆ (ಜಿಲ್ಲೆಯ ಒಟ್ಟು ವಾರ್ಡ್ ೩೧೨/ ಬಿಜೆಪಿ ೧೬೧), ದಕ್ಷಿಣ ಕನ್ನಡ (೮೯/೪೨), ದಾವಣಗೆರೆ (೫೯/೩೧), ಚಿತ್ರದುರ್ಗ (೮೯/೩೫), ಉಡುಪಿ (೯೭/೬೬) ಜಿಲ್ಲೆಗಳಲ್ಲಿ ಬಿಜೆಪಿ ಮೇಲುಗೈ ಪಡೆದಿದೆ. ಕಾಂಗ್ರೆಸ್ ಭದ್ರಕೋಟೆ ಎನ್ನಿಸಿಕೊಂಡಿದ್ದ ಚಾಮರಾಜನಗರ ನಗರಸಭೆಯಲ್ಲಿ ೩೧ ಸ್ಥಾನಗಳಲ್ಲಿ ೧೫ರಲ್ಲಿ ಬಿಜೆಪಿ ಗೆದ್ದು ಬೀಗಿದ್ದು ಇನ್ನೊಂದು ವಿಶೇಷ.

ಕಾಂಗ್ರೆಸ್ ಬಳ್ಳಾರಿ (ಒಟ್ಟು ವಾರ್ಡ್‌ ೩೯/ ಕಾಂಗ್ರೆಸ್ ೨೦), ಬೀದರ್‌ (೨೩/೧೪), ಗದಗ (೧೨೩/೫೭), ಹಾವೇರಿ (೧೩೬/೬೬ ), ಕಲಬುರಗಿ (೧೬೮/೯೦), ಕೊಪ್ಪಳ (೧೦೪/ ೪೭), ಮೈಸೂರು (೬೯/೨೯), ಉತ್ತರ ಕನ್ನಡ (೨೦೦/೮೭) ಮತ್ತಿತರ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇಲುಗೈ ಪಡೆದಿದೆ. ಸ್ಥಳೀಯ ಮುನಿಸುಗಳು ಅಲ್ಲಲ್ಲಿ ಢಾಳಾಗಿ ವ್ಯಕ್ತವಾಗಿದ್ದು ಫಲಿತಾಂಶದಲ್ಲಿ ಕಾಣಿಸಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರಸಭೆಯ ೩೧ ವಾರ್ಡ್‌ಗಳ ಪೈಕಿ ೩೦ರಲ್ಲಿ,ನಿಪ್ಪಾಣಿ ನಗರಸಭೆಯ ೧೮ ವಾರ್ಡ್‌ಗಳಲ್ಲಿ ‘ಪಕ್ಷೇತರ’ರು ಜಯ ದಾಖಲಿಸಿದ್ದಾರೆ. ಮಾತ್ರವಲ್ಲ, ಈ ಜಿಲ್ಲೆಯ ವಿವಿಧ ಸಂಸ್ಥೆಗಳ ಒಟ್ಟು ೩೪೩ ವಾರ್ಡ್‌ಗಳಲ್ಲಿ ೧೪೪ ಕಡೆ ಪಕ್ಷೇತರರೇ ಗೆದ್ದಿದ್ದಾರೆ ಎನ್ನುತ್ತದೆ ಚುನಾವಣಾ ಆಯೋಗದ ಮಾಹಿತಿ. ಕಾಂಗ್ರೆಸ್‌ ಪಕ್ಷದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳಕರ್‌ ಮಧ್ಯದ ವೈಮನಸ್ಸು ಇಂಥ ಫಲಿತಾಂಶಕ್ಕೆ ಕಾರಣ ಎನ್ನುವುದು ವಾಸ್ತವಾಂಶ. ಕಾಂಗ್ರೆಸ್ ವರಿಷ್ಠರು ಈ ಮುನಿಸನ್ನು ಶಮನ ಮಾಡಿ,ಪಕ್ಷೇತರ “ವಿಜೇತ’’ ರನ್ನು ಪಕ್ಷದ ಬಾಬ್ತಿಗೆ ಸೇರಿಸಿಕೊಂಡಲ್ಲಿ ‘ಕೈ’ಬಲ ಮತ್ತಷ್ಟು ಹೆಚ್ಚುತ್ತದೆ.

ಫಲಿತಾಂಶ ನೀಡಿದ ಸಂದೇಶಗಳೇನು?

ಈ ಫಲಿತಾಂಶ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಸದ್ಯದ ಭವಿಷ್ಯದಲ್ಲಿ ಅಂಥ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದು ನಿಜ. ಆದರೆ, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷಗಳ ಬೇರು ಬಲವರ್ಧನೆ ದೃಷ್ಟಿಯಲ್ಲಿ ಇದು ಮುಖ್ಯ. ಈ ನೆಲೆಯಲ್ಲಿ ನೋಡಿದರೆ ಈ ಕೆಲವು ಅಂಶಗಳು ವ್ಯಕ್ತವಾಗುತ್ತವೆ:

  • ನಗರ ಪಾಲಿಕೆ, ನಗರಸಭೆಗಳ ಮಟ್ಟದಲ್ಲಿ ನೋಡಿದರೆ ಬಿಜೆಪಿಯೇ ಹೆಚ್ಚು ಬಲಯುತ. ಶಿವಮೊಗ್ಗದಲ್ಲಿ ನಿಚ್ಚಳ ಬಹುಮತ ಪಡೆದಿದ್ದಷ್ಟೆ ಅಲ್ಲ, ಮೈಸೂರು, ತುಮಕೂರಿನಲ್ಲೂ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ಅಂತೆಯೇ, ೧೧ ನಗರಸಭೆಗಳಲ್ಲಿ ಸ್ವತಂತ್ರವಾಗಿ ಅಧಿಕಾರ ಸ್ಥಾಪಿಸಲಿದೆ. ಅತಂತ್ರ ನಗರಸಭೆಗಳಲ್ಲಿ ಒಂದೆರಡು ಕಡೆ ಸ್ಥಳೀಯ ರಾಜಕೀಯ ಮೇಲಾಟದ ಲಾಭ ಪಡೆದು ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಯೂ ಇದೆ.
  • ಪುರಸಭೆಯ ಹಂತದಲ್ಲಿ ಕಾಂಗ್ರೆಸ್ ಪಕ್ಷದ್ದು ಗರಿಷ್ಠ (೨೧ ಕಡೆ ಸ್ವತಂತ್ರ) ಸಾಧನೆ. ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ್ದು ಸಮಾನ (ತಲಾ ಏಳು ಪಪಂ) ಮೇಲಾಟ. ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಈ ನಾಲ್ಕೂ ಹಂತದಲ್ಲಿ ಜೆಡಿಎಸ್ ಪಕ್ಷದ್ದು ವಿಧಾನಸಭಾ ಚುಣಾವಣೆ ಮಾದರಿಯಲ್ಲೇ ಮೂರನೆಯ ಸ್ಥಾನ. ರಾಜ್ಯದಲ್ಲಿ ಕಳೆದ ಐದು ವರ್ಷ ಕಾಂಗ್ರೆಸ್ ಆಡಳಿತವಿತ್ತು. ಈಗ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹಾಗಿದ್ದಾಗ್ಯೂ, ಸ್ಥಳೀಯ ಹಂತದಲ್ಲಿ ಬಿಜೆಪಿ ದೊಡ್ಡ ಮಟ್ಟದ ಪೈಪೋಟಿ ನೀಡಿದೆ ಎನ್ನುವುದನ್ನು ಆಡಳಿತ ಪಕ್ಷಗಳು ಸುಲಭವಾಗಿ ಪರಿಗಣಿಸುವಂತಿಲ್ಲ.
  • ಮೈತ್ರಿಯ ಕಟ್ಟುಪಾಡು ಇಲ್ಲದಿದ್ದಲ್ಲಿ ಕಾಂಗ್ರೆಸ್ ಸಾಧನೆ ಮತ್ತಷ್ಟು ಹೆಚ್ಚಿರುತ್ತಿತ್ತು ಎನ್ನುವುದು ಅನೇಕರ ಅಭಿಪ್ರಾಯ. "ಇಬ್ಬರೂ ಫ್ರೆಂಡ್ಲಿ ಫೈಟ್‌ ಮಾಡದೆ ಇದ್ದಿದ್ದರೆ ಬಿಜೆಪಿ ಇನ್ನೂ ಹೆಚ್ಚಿನ ವಾರ್ಡ್‌ಗಳಲ್ಲಿ ಗೆಲ್ಲುತ್ತಿತ್ತು,” ಎನ್ನುತ್ತಿದ್ದಾರೆ ಬಿಜೆಪಿಗರು. ಈ ಎರಡೂ ಬಗೆಯ ಅಭಿಪ್ರಾಯಗಳಿಗೆ ಕೆಲ ನಿದರ್ಶನಗಳು ಕಾಣಿಸಿವೆ. ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದೂ ಅಧಿಕಾರದ ಬಂಪರ್ ಲಾಭ ಪಡೆದಂತೆಯೇ ಈಗಲೂ ಕೆಲವು ಕಡೆ ಜೆಡಿಎಸ್‌ ‘ಲಾಭ’ ಪಡೆಯುವ ಸಾಧ್ಯತೆ ಕಾಣುತ್ತಿದೆ.
  • ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಲವನ್ನು ಕುಗ್ಗಿಸಲಾಗದು ಎನ್ನುವ ಎಚ್ಚರಿಕೆಯ ಸಂದೇಶವನ್ನು ಎರಡೂ ಪಕ್ಷಗಳಿಗೆ ಈ ಫಲಿತಾಂಶ ನೀಡಿದಂತಿದೆ. ಚುನಾವಣೆಗೆ ಮುನ್ನ ಮೈತ್ರಿ ಮುರಿದುಬಿದ್ದು, ಎರಡೂ ಪಕ್ಷಗಳು ಪರಿಸ್ಪರ ಯುದ್ಧಕ್ಕೆ ನಿಂತರೆ ಇಬ್ಬರ ಜಗಳದಲ್ಲಿ ಬಿಜೆಪಿ ಲಾಭ ಪಡೆಯುವುದನ್ನು ಅಲ್ಲಗಳೆಯಲಾಗದು.

ಮೈತ್ರಿಯ ಮುಂದಿರುವ ಇಕ್ಕಟ್ಟು, ಬಿಕ್ಕಟು

ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ‘ಫ್ರೆಂಡ್ಲಿ ಫೈಟ್‌’ ನಡೆದಿದೆ; ಮುಂದೆಯೂ ಮೈತ್ರಿ ಮುಂದುವರಿಯುತ್ತದೆ ಎಂದು ಎರಡೂ ಪಕ್ಷದ ರಾಜ್ಯ ನಾಯಕರು ಹೇಳುತ್ತಿದ್ದಾರೆ. ಅತಂತ್ರ ಸ್ಥಿತಿ ನಿರ್ಮಾಣವಾದ ಕಡೆಗಳಲ್ಲಿ ಮೈತ್ರಿ ಮಾಡಿಕೊಳ್ಳಲು ಎರಡೂ ಪಕ್ಷದ ಮುಖಂಡರನ್ನೊಳಗೊಂಡ ಸನ್ವಯ ಸಮಿತಿ ಸಭೆ ನಿರ್ಣಯಿಸಿದೆ. ಈ ಮಧ್ಯೆ, ಸ್ಥಳೀಯವಾಗಿ ಅನೇಕ ಕಡೆ ನೇರ ಹಣಾಹಣಿ ನಡೆದುಹೋಗಿದೆ. ಈಗ ಮೈತ್ರಿ ಅನಿವಾರ್ಯವಾದ ಸಂಸ್ಥೆಗಳಲ್ಲಿ ಮೇಯರ್‌, ಅಧ್ಯಕ್ಷ ಹುದ್ದೆಗೆ ಮೇಲಾಟ ನಡೆಯುವುದನ್ನು ತಳ್ಳಿಹಾಕಲಾಗದು. ಆಗ ರಾಜ್ಯಮಟ್ಟದ ಮೈತ್ರಿ ಆಶಯ, ಆದೇಶವು ಅದೇ ಉತ್ಸಾಹ, ಬದ್ಧತೆಯಿಂದ ಮುಂದುವರಿಯುತ್ತದಾ, ಸ್ಥಳೀಯ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತದಾ ಎನ್ನುವುದನ್ನು ಕಾಯ್ದುನೋಡಬೇಕು.

ಮೈಸೂರು ನಗರ ಪಾಲಿಕೆಯ ನಿದರ್ಶನವನ್ನೇ ನೋಡಿ. ೩೫ ವರ್ಷದ ಪಾಲಿಕೆ ಇತಿಹಾಸದಲ್ಲಿ ಯಾವುದೇ ಪಕ್ಷ ಸ್ವತಂತ್ರವಾಗಿ ಇಲ್ಲಿ ಅಧಿಕಾರಕ್ಕೆ ಬಂದಿಲ್ಲ. ಮಾತ್ರವಲ್ಲ, ೩ ವರ್ಷ ಉಪಮೇಯರ್‌ ಆಗಿದ್ದರ ಹೊರತು ಬಿಜೆಪಿಗೆ ಮೇಯರ್‌ ಭಾಗ್ಯ ಯಾವತ್ತೂ ಸಿಕ್ಕಿಲ್ಲ. ೨೦೦೭ರಲ್ಲಿ ೧೮ ಸ್ಥಾನ ಪಡೆದದ್ದರ ಹೊರತು ಇದೇ ಮೊದಲ ಬಾರಿ ಕಮಲ ಪಕ್ಷ ಅತಿ ಹೆಚ್ಚು (೨೨) ಸ್ಥಾನಗಳಲ್ಲಿ ಗೆದ್ದಿದೆ. ಇದಕ್ಕೆ ಹಲವು ವಾರ್ಡ್‌ಗಳಲ್ಲಿ ಜೆಡಿಎಸ್‌-ಕಾಂಗ್ರೆಸ್ ಅಭ್ಯರ್ಥಿಗಳು ನಡೆಸಿದ ‘ಫ್ರೆಂಡ್ಲಿ ಫೈಟ್’ ಅನ್ನು‌ ಮೀರಿದ ಸೆಣಸು ಮತ್ತು ಜೆಡಿಎಸ್ -ಬಿಜೆಪಿ ಮಧ್ಯದ ಹಳೆಯ ಸ್ನೇಹ ಕಾರಣ ಎನ್ನುವುದು ಸ್ಪಷ್ಟ. ಆದರೆ, ಇನ್ಮುಂದೆ ೧೯ ಸ್ಥಾನ ಪಡೆದ ಕಾಂಗ್ರೆಸ್, ೧೮ರಲ್ಲಿ ಗೆದ್ದಿರುವ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ. ಬಿಎಸ್ಪಿಯ ಒಬ್ಬ ಸದಸ್ಯನ ಬೆಂಬಲ ಸೇರಿದರೆ ಜೆಡಿಎಸ್‌ ಬಾಬತ್ತೂ ೧೯ ಆಗುತ್ತದೆ. ಸಮಬಲ ಇದ್ದಾಗ ಮೇಯರ್ ಗಾದಿ ಯಾರಿಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಶಾಸಕ, ವಿಧಾನ ಪರಿಷತ್‌ ಸದಸ್ಯರ ಮತ ಸೇರಿದರೆ ಜೆಡಿಎಸ್ ಬಲ ೨೪, ಕಾಂಗ್ರೆಸ್ ಬಲ ೨೨ಕ್ಕೆ ಹೆಚ್ಚುತ್ತದೆ. ಅಲ್ಲದೆ, ಕಾಂಗ್ರೆಸ್, ಬಿಜೆಪಿಯಿಂದ ಬಂಡೆದ್ದು ಸ್ಪರ್ಧಿಸಿ ಗೆದ್ದಿರುವ ಇಬ್ಬರು ಜೆಡಿಎಸ್‌ ಬೆಂಬಲಕ್ಕೆ ನಿಲ್ಲುವ ಇರಾದೆ ವ್ಯಕ್ತಪಡಿಸಿದ್ದಾರೆ. ಇಂಥ ಸಂದರ್ಭದಲ್ಲಿ ಮೇಯರ್‌ಗಿರಿಗೆ ಮೇಲಾಟ ನಡೆಯುವುದು; ಎರಡೂ ಪಕ್ಷದ ಕೆಲವು ವರಿಷ್ಠ ನಾಯಕು ಮತ್ತು ಸ್ಥಳೀಯ ಮುಖಂಡರ ವರ್ಚಸ್ಸು, ವ್ಯಕ್ತಿ ಪ್ರತಿಷ್ಠೆ, ಬದ್ಧ ವೈರಗಳು ಮುನ್ನೆಲೆಗೆ ಬರುವುದು ನಿಶ್ಚಿತ. ಇಂಥ ಸಂಭವನೀಯ ಬಿಕ್ಕಟ್ಟನ್ನು ರಾಜ್ಯ ನಾಯಕರು ಹೇಗೆ ನಿಭಾಯಿಸುತ್ತಾರೆ, ಯಾವ ರೀತಿಯ ಅಧಿಕಾರ ಸೂತ್ರ ಹೆಣೆಯುತ್ತಾರೆ ಎನ್ನುವುದರ ಮೇಲೆ ಒಟ್ಟು ಮೈತ್ರಿ ಬಂಧದ ಭವಿಷ್ಯ ಅಡಗಿರುತ್ತದೆ.

ಇದನ್ನೂ ಓದಿ : ಸ್ಥಳೀಯ ಸಂಸ್ಥೆಗಳ ಚುನಾವಣೆ: ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಾರುಪತ್ಯ, ಬಿಜೆಪಿ ಚಿಗುರು

ಅಂತೆಯೇ, ಮಂಡ್ಯ ನಗರಸಭೆ, ನಾಗಮಂಗಲ, ಮದ್ದೂರು ಪುರಸಭೆ ಸಹಿತ ಅನೇಕ ಕಡೆಗಳಲ್ಲಿ ಜೆಡಿಎಸ್‌ ಅಧಿಕಾರ ಹಿಡಿದರೆ, ಕಾಂಗ್ರೆಸ್ ಪ್ರತಿಪಕ್ಷವಾಗಿ ಕೂರುತ್ತದೆ. ಹಾಸನದಲ್ಲಿ ಕೆಲವೆಡೆ ಕಾಂಗ್ರೆಸ್ ಅನ್ನು ಪೂರ್ಣ ಹಣಿಯಲು ಜೆಡಿಎಸ್‌ ಯತ್ನಿಸಿದ್ದು, ಹೈಟೆನ್ಷನ್‌ ಸ್ಥಿತಿಯನ್ನು ನಿರ್ಮಿಸಿದೆ. ಇಂಥಲ್ಲಿ ಸ್ಥಳೀಯ ನಾಯಕರ ಪ್ರತಿಷ್ಠೆಗಳು ಕೆಣಕಲ್ಪಡಬಹುದು. ರಾಜ್ಯಮಟ್ಟದಲ್ಲಿ ರೂಪಿಸಿರುವ ಏಕಮೈತ್ರಿ ಸೂತ್ರದಡಿ ಈ ಬಗೆಯ ಸ್ಥಳೀಯ ಭಿನ್ನತೆ, ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುವುದು ಎರಡೂ ಪಕ್ಷಗಳ ಪಾಲಿಗೆ ಸವಾಲಿನ ಸಂಗತಿ. “ಮೈತ್ರಿ ಅವಶ್ಯಕತೆ ಇರುವುದು ಕಾಂಗ್ರೆಸ್ಸಿಗೆ, ನಮಗಲ್ಲ. ನಾವು ಕೊಡವಿಕೊಂಡು ಹೋಗಲು ಸಿದ್ಧ,’’ ಎನ್ನುವ ಕೆಲವು ದಳಪತಿಗಳ ಮನೋಧರ್ಮಕ್ಕೆ ಈ ಫಲಿತಾಂಶ ಚುಚ್ಚುಮದ್ದು ನೀಡಿದಂತಿದೆ. ಯಾವುದೋ ಕ್ಷಣಿಕ ಆವೇಶಕ್ಕೆ ಬಿದ್ದು ಸಂಬಂಧ ಮುರಿದುಕೊಂಡರೆ ಮುಂದೆ (ಲೋಕಸಭೆ ಚುನಾವಣೆಯಲ್ಲಿ) ಗರಿಷ್ಠ ಬೆಲೆ ತೆರಬೇಕಾಗುತ್ತದೆ ಎನ್ನುವ ಆತಂಕವಷ್ಟೇ ಸದ್ಯದ ಸ್ಥಿತಿಯಲ್ಲಿ ‘ಮೈತ್ರಿಯ ಕೊಂಡಿ’ಯಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More