ಮುಂದಿನ ಲೋಕಸಭಾ ಚುನಾವಣೆ; ಬಿಜೆಪಿಗೆ ಹಾದಿ ಸುಗಮವಲ್ಲ ಎಂದ ಸಮೀಕ್ಷೆಗಳು

ಸಮೀಕ್ಷೆಗಳ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸುವಲ್ಲಿ ವಿಫಲವಾಗಲಿದೆ ಎಂದು ವಿಶ್ಲೇಷಿಸಿದ್ದಾರೆ, ರಾಜಕೀಯ ವಿಶ್ಲೇಷಕ ಜೇಮ್ಸ್‌ ಮ್ಯಾನರ್‌. ‘ದಿ ವೈರ್‌ನಲ್ಲಿ ಪ್ರಕಟವಾದ ಲೇಖನದ ಭಾವಾನುವಾದ ಇಲ್ಲಿದೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಜನಪ್ರಿಯತೆಯ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲು ಸಾಧ್ಯವಿಲ್ಲ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ. ಇತ್ತೀಚೆಗೆ ಕೈಗೊಳ್ಳಲಾದ ಜನಾಭಿಪ್ರಾಯ ಸಮೀಕ್ಷೆಗಳಿಂದ ಬಿಜೆಪಿಯ ಜನಪ್ರಿಯತೆ ಕುಗ್ಗಿದೆ ಎಂದು ‘ದಿ ವೈರ್‌’ ವರದಿ ಮಾಡಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪೂರ್ಣ ಬಹುಮತ ಸಾಧಿಸಲು ಸಾಧ್ಯವಿಲ್ಲ. ಆದರೆ, ಮೈತ್ರಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸದಿದ್ದಲ್ಲಿ, ಎನ್‌ಡಿಎ ಮೈತ್ರಿಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ಮೋದಿಯವರನ್ನು ಪ್ರಧಾನಿಯಾಗಿ ಸ್ವೀಕರಿಸಲಾರವು ಎಂದು ಊಹಿಸಲಾಗಿದೆ. ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕಾರ್ಯವೈಖರಿಯ ಬಗ್ಗೆ ಮಿತ್ರ ಪಕ್ಷಗಳು ಅಸಮಾಧಾನ ಹೊಂದಿವೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಬದಲಿಸಬೇಕೆಂದು ಮಿತ್ರ ಪಕ್ಷಗಳು ಬೇಡಿಕೆ ಇಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.

ಸಮೀಕ್ಷೆಯ ಪ್ರಮುಖ ಅಂಶಗಳ ಪ್ರಕಾರ

  • ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರದ ಸಂಪೂರ್ಣ ವಿಫಲವಾಗಿದೆ ಎಂದು ಶೇ.61 ಮಂದಿ ತಿಳಿಸಿದ್ದಾರೆ.
  • ಭ್ರಷ್ಟಾಚಾರ ತಡೆಯುವಲ್ಲಿ ಕೇಂದ್ರ ಸರ್ಕಾರ ಕಳಪೆ ಪ್ರದರ್ಶನ ತೋರಿದೆ ಎಂದು ಶೇ.55 ಜನರು ಹೇಳಿದ್ದಾರೆ.
  • ಶೇ.61 ಜನರು ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
  • ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶೇ.64 ಜನರು ನಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ
  • ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಧಾನಿ ಮೋದಿಯವರು 2014 ರಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲವೆಂದು ಶೇ.57 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
  • ಸರ್ಕಾರದ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ ಶೇ. 47 ಜನರು ಅಸಮಾಧಾನ ಹೊಂದಿದ್ದಾರೆ
  • 2014 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಮತ ಚಲಾಯಿಸಿದ ಶೇ.38 ಜನರು ಮತ್ತೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ

2019 ರ ಚುನಾವಣೆಯಲ್ಲಿ ಕೆಲ ರಾಜ್ಯಗಳಲ್ಲಿ ಬಿಜೆಪಿ ಕಳೆದ ಭಾರಿಗಿಂತ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿದುಬಂದಿದೆ. 2014 ರ ಚುನಾವಣೆಯಲ್ಲಿ ಒಡಿಶಾದ 21 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಭಾರಿ ಬಿಜೆಪಿ 10 ರಿಂದ 15 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ಸಮೀಕ್ಷೆಗಳು ಹೇಳಿವೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಅಲ್ಪ ಮಟ್ಟದ ಮುನ್ನೆಡೆ ಸಾಧ್ಯವಾಗಬಹುದು ಎನ್ನುವ ಸಮೀಕ್ಷೆಗಳು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಳೆದ ಭಾರಿಗಿಂತ ಅಧಿಕ ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಅಸ್ಸಾಂನ 14 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದರೆ, ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ ಕೇವಲ 2 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು.

ಮುಂದಿನ ಚುನಾವಣೆಯಲ್ಲಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಕಳೆದ ಚುನಾವಣೆಯಲ್ಲಿ ದೆಹಲಿಯ ಎಲ್ಲ 7 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದ ಬಿಜೆಪಿ ಛತ್ತೀಸ್‌‌ಗಡದ 11 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಜಯಸಾಧಿಸಿತ್ತು. ಗುಜರಾತಿನ 26 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಎಲ್ಲ ಕ್ಷೇತ್ರಗಳನ್ನೂ ತನ್ನದಾಗಿಸಿಕೊಂಡಿತ್ತು.

ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಬಿಹಾರದಲ್ಲಿ ಬಿಜೆಪಿ ಈಗಿರುವ ಹಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಕಳೆದ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದ್ದರೆ, ಬಿಜೆಪಿಯ ಮಿತ್ರ ಪಕ್ಷಗಳು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.

ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಕಳೆದ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ 17 ಸ್ಥಾನಗಳು ಬಿಜೆಪಿಗೆ ಸಿಕ್ಕಿದ್ದವು. ಆದರೆ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸುವ ಸಾಧ್ಯತೆಗಳಿದ್ದು, ಇದರಿಂದ ಬಿಜೆಪಿಯು ಹಿಂದೆ ಗೆದ್ದಿದ್ದ ಹಲವು ಕ್ಷೇತ್ರಗಳಲ್ಲಿ ಪರಾಭವ ಹೊಂದಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬಿಜೆಪಿ ಪಾಲಿನ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ಪಕ್ಷವು ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಶಿವಸೇನೆಯು ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಟೀಕಿಸುತ್ತಲೇ ಬಂದಿದ್ದು, ಮುಂದಿನ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೊತೆ ಎದುರಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಇದು ಬಿಜೆಪಿಗೆ ಹಿನ್ನೆಡೆ ಮಾಡಲಿದೆ ಎಂದು ಹೇಳಲಾಗಿದೆ.

ಒಂದು ವೇಳೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಕಾಂಗ್ರೆಸ್‌ ಪಕ್ಷಗಳ ಹೊಂದಾಣಿಕೆ ಮಾಡಿಕೊಂಡರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಒಲಿದಿದ್ದ 71 ಸ್ಥಾನಗಳು ಅಪಾಯದ ಅಂಚಿನಲ್ಲಿ ಇರಲಿವೆ ಎನ್ನಲಾಗಿದೆ.

ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವಾಣ್‌ ನೇತೃತ್ವದ ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ಹಾಗೂ ಭ್ರಷ್ಟಾಚಾರ ಆರೋಪಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂದು ಹೇಳಲಾಗಿದೆ. ಇನ್ನು ಕಳೆದ ಭಾರಿ ರಾಜಸ್ಥಾನದ ಎಲ್ಲ 25 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಸುಂದಾರ ರಾಜೇ ನೇತೃತ್ವದ ಸರ್ಕಾರವೂ ಸಹ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎನ್ನಲಾಗಿದೆ. ಹಿಂದಿನ ವರ್ಷ ನಡೆದಿದ್ದ 3 ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆ ಮೂಲಕ ಕಾಂಗ್ರೆಸ್‌ ಯುವ ನಾಯಕ ಸಚಿನ್‌ ಪೈಲಟ್‌ ಅವರ ಜನಪ್ರಿಯತೆ ಹೆಚ್ಚುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮುನ್ನೆಡೆ ಸಾಧಿಸಬಹುದೆಂದು ಹೇಳಲಾಗಿದೆ.

ಇದನ್ನೂ ಓದಿ : ರಫೇಲ್‌ ಯುದ್ಧವಿಮಾನ ಹಗರಣದಲ್ಲಿ ಬಿಜೆಪಿ ಹಣಿಯಲು ಮೈಕೊಡವಿ ನಿಂತ ಕಾಂಗ್ರೆಸ್‌

ದಕ್ಷಿಣದ ಇತರ ರಾಜ್ಯಗಳಾದ ಕೇರಳ, ತಮಿಳು ನಾಡು, ಪಾಂಡಿಚೇರಿ, ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಒಟ್ಟು 102 ಲೋಕಸಭಾ ಸ್ಥಾನಗಳಿವೆ. 2014 ರ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಬಿಜೆಪಿ ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಜಯಸಾಧಿಸಿತ್ತು. ಆಂಧ್ರ ಪ್ರದೇಶದ 2 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿ, ಕಳೆದ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಹೊಂದಿತ್ತು. ಆದರೆ, ಟಿಡಿಪಿಯು ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಆಂದ್ರದ ಯಾವುದೇ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಅಸಾಧ್ಯವೆನ್ನಲಾಗುತ್ತಿದೆ.

ಈ ಎಲ್ಲ ಜನಾಭಿಪ್ರಾಯ ಮತ್ತು ಸಮೀಕ್ಷೆಗಳು ಹೇಳುವ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಬಹುಮತ(272) ಸಾಧಿಸುವಲ್ಲಿ ವಿಫಲವಾಗಲಿದೆ. ಒಂದು ವೇಳೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮಿತ್ರ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಬೇಕಾದ ಪರಿಸ್ಥಿತಿ ಎದುರಾದರೆ, ಮೋದಿಯವರು ಪ್ರಧಾನಿ ಸ್ಥಾನದಲ್ಲಿ ಉಳಿಯುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿಯೊಂದಿಗೆ ಅಸಮಾಧಾನ ಹೊಂದಿರುವ ಮಿತ್ರ ಪಕ್ಷಗಳು ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಒಪ್ಪಲಾರವೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮುಂದಿನ ಚುನಾವಣೆ ಬಿಜೆಪಿಯ ಪಾಲಿಕೆ ಸುಗಮದ ಹಾದಿಯಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More