ಮಿಷನ್ ಬಿಬಿಎಂಪಿಗಾಗಿ ಅಶೋಕ್‌ ಬದಲಿಗೆ ಸೋಮಣ್ಣ ಬೆನ್ನು ಹತ್ತಿತೇ ಬಿಜೆಪಿ?

ಬಿಬಿಎಂಪಿ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಳೆದ 2 ವರ್ಷಗಳಿಂದ ವಿಪಕ್ಷದಲ್ಲಿ ಕುಳಿತಿರುವ ಬಿಜೆಪಿ ಸೆಪ್ಟೆಂಬರ್‌ ೨೮ರಂದು ನಡೆವ ಮೇಯರ್‌ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹಠಕ್ಕೆ ಬಿದ್ದಿದೆ. ಈ ಕಾರಣಕ್ಕಾಗಿ ಮಿಷನ್ ಬಿಬಿಎಂಪಿ ಹೊಣೆಯನ್ನು ಸೋಮಣ್ಣಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ 

ಕಾಂಗ್ರೆಸ್‌-ಜೆಡಿಎಸ್‌ ನಾಯಕರ ರಾಜಕೀಯ ಪಟ್ಟುಗಳಿಂದ ಕಂಗೆಟ್ಟಿರುವ ಬಿಜೆಪಿಯು ಅಧಿಕಾರದ ಸಮೀಪಕ್ಕೆ ಬಂದರೂ ಅದನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಪದೇಪದೇ ಹಿನ್ನಡೆ ಅನುಭವಿಸುತ್ತಿದೆ. ಇದು ಪಕ್ಷದ ನಾಯಕರನ್ನು ಹತಾಶೆಗೆ ನೂಕಿದೆ. ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಹಿಡಿದು ಸೋಮವಾರ ಪ್ರಕಟಗೊಂಡ ೧೦೫ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲೂ ಬಿಜೆಪಿಗೆ ಹಿಡಿದಿರುವ ಗ್ರಹಣ ಬಿಡುವಂತೆ ಕಾಣುತ್ತಿಲ್ಲ. ಅತಂತ್ರ ಫಲಿತಾಂಶ ಬಂದ ಕಡೆ ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವುದರಿಂದ ಬಿಜೆಪಿ ಅನಿವಾರ್ಯವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಗಿದೆ. ತಂತ್ರಗಾರಿಕೆಯಲ್ಲಿ ಎದುರಾಳಿಗಳಿಗಿಂತ ಹಿಂದೆ ಬಿದ್ದಿರುವುದೇ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲು ಕಾರಣ ಎಂದರಿತಿರುವ ಬಿಜೆಪಿಯು ಬಿಬಿಎಂಪಿಯನ್ನು ತನ್ನ ತೆಕ್ಕೆಗೆ ಪಡೆಯಲು ದಂಡನಾಯಕನ ಬದಲಾವಣೆ ಮಾಡಿದೆ ಎನ್ನಲಾಗಿದೆ. ಸೆಪ್ಟೆಂಬರ್‌ ೨೮ಕ್ಕೆ ಬಿಬಿಎಂಪಿ ಮೇಯರ್ ಚುನಾವಣೆ ನಿಗದಿಯಾಗಿದ್ದು, ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಮಲ ಪಾಳೆಯವು ಇದರ ಹೊಣೆಯನ್ನು ಗೋವಿಂದರಾಜನಗರ ಶಾಸಕ ವಿ ಸೋಮಣ್ಣ ಅವರಿಗೆ ವಹಿಸಿದೆ. ಈ ಬದಲಾವಣೆಯು ಬಿಜೆಪಿಯಲ್ಲಿ “ಬೆಂಗಳೂರಿನ ಚಕ್ರವರ್ತಿ” ಎಂದು ಬಿಂಬಿತವಾಗಿದ್ದ ಆರ್‌ ಅಶೋಕ್‌ ಅವರ ಅಧಿಪತ್ಯಕ್ಕೆ ಹೊಡೆತ ನೀಡಿದೆ ಎನ್ನಲಾಗುತ್ತಿದೆ. ಅಶೋಕ್‌ ಅವರು ಮೇಯರ್‌ ಚುನಾವಣೆಯಲ್ಲಿ ಸಕ್ರಿಯವಾಗಿರುವಂತೆ ಬಿಂಬಿಸಿಕೊಂಡರೂ ಒಟ್ಟಾರೆ ಜವಾಬ್ದಾರಿಯು ಸೋಮಣ್ಣ ಅವರ ಬಳಿ ಕೇಂದ್ರೀಕೃತವಾಗಿದೆ ಎಂದು ತಿಳಿದು ಬಂದಿದೆ.

೧೯೮ ಸದಸ್ಯ ಬಲದ ಬಿಬಿಎಂಪಿಯಲ್ಲಿ ಒಟ್ಟಾರೆ ೨೫೯ ಮತಗಳಿದ್ದು, ಸರಳ ಬಹುಮತಕ್ಕೆ ೧೩೦ ಮತಗಳು ಬೇಕು. ೧೦೦ ಪಾಲಿಕೆ ಸದಸ್ಯರು, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಬಿಜೆಪಿಯು ೧೨೩ ಮತಗಳನ್ನು ಹೊಂದಿದೆ. ಕಾಂಗ್ರೆಸ್‌ ೭೫ ಪಾಲಿಕೆ ಸದಸ್ಯರು, ಜೆಡಿಎಸ್‌ ೧೫ ಪಾಲಿಕೆ ಸದಸ್ಯರು ಸೇರಿದಂತೆ ಮೈತ್ರಿಕೂಟದ ಬಲವು ೧೨೭ ಇದೆ. ೮ ಮಂದಿ ಪಕ್ಷೇತರ ಶಾಸಕರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಪೈಕಿ ಐವರು ಪಕ್ಷೇತರ ಸದಸ್ಯರು ಕಾಂಗ್ರೆಸ್‌ನ ಬಿಟಿಎಂ ಲೇಔಟ್‌ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ತೆಕ್ಕೆಯಲ್ಲಿರುವುದರಿಂದ ಬಿಜೆಪಿಯು ನಾಯಕತ್ವ ಬದಲಾವಣೆಗೆ ಮಾಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಆರ್‌ ಅಶೋಕ್‌ ಅವರು ಪಕ್ಷವು ತಮಗೆ ನೀಡಿದ ಜವಾಬ್ದಾರಿಗಳಲ್ಲಿ ಸಮರ್ಥವಾಗಿ ನಿಭಾಯಿಸಲು ವಿಫಲವಾಗಿರುವುದು ಹಾಗೂ ರಾಜಕೀಯ ಸಮೀಕರಣ ಬದಲಾಗಿರುವುದರಿಂದ ಬಿಜೆಪಿಯು ಸೋಮಣ್ಣ ಅವರಲ್ಲಿ ಹೊಸ ಸಾರಥಿಯನ್ನು ಕಾಣಲು ಮುಂದಾಗಿದೆ ಎನ್ನಲಾಗುತ್ತಿದೆ.

ಕಳೆದ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯು ಪರಿವರ್ತನಾ ಯಾತ್ರೆ ಕೈಗೊಂಡಿತ್ತು. ಇದಕ್ಕೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಸಂಘಟಿಸಿದ್ದ ಬೃಹತ್‌ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದ ಚಾಲನೆ ನೀಡುವಂತೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಲಕ್ಷಾಂತರ ಕಾರ್ಯಕರ್ತರನ್ನು ಸೇರಿಸುವುದು ಸೇರಿದಂತೆ ಉದ್ಘಾಟನಾ ಜವಾಬ್ದಾರಿಯನ್ನು ಅಶೋಕ್‌ ಅವರಿಗೆ ವಹಿಸಲಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನರು ಪಾಲ್ಗೊಳ್ಳದೇ ಇದ್ದುದರಿಂದ ಯಾತ್ರೆ ಆರಂಭ ಆಘಾತ ಅನುಭವಿಸಿತ್ತು. ಇದರಿಂದ ಅಮಿತ್‌ ಶಾ ಅವರಿಗೆ ತೀವ್ರ ಮುಖಭಂಗವಾಗಿತ್ತಲ್ಲದೇ, ವಿರೋಧ ಪಕ್ಷಗಳ ಕುಹಕ, ವ್ಯಂಗ್ಯಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಚುನಾವಣಾ ತಯಾರಿ ಆರಂಭದಲ್ಲೇ ಹಿನ್ನಡೆಯಾಗಿದ್ದರಿಂದ ಅಮಿತ್‌ ಶಾ ಅವರು ಅಶೋಕ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. “ಬೆಂಗಳೂರಿನ ಶಾಸಕರು ಹಾಗೂ ಪಕ್ಷದ ಕಾರ್ಪೊರೇಟರ್‌ಗಳನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಅಶೋಕ್‌ ವಿಫಲರಾಗಿದ್ದಾರೆ. ಅಶೋಕ್‌ ನಾಯಕತ್ವದ ವೈಫಲ್ಯದಿಂದಾಗಿ ರಾಷ್ಟ್ರೀಯ ಅಧ್ಯಕ್ಷರು ಮುಖಭಂಗ ಅನುಭವಿಸುವಂತಾಯಿತು” ಎಂದು ಪಕ್ಷದ ಕೆಲವರು ಹೈಕಮಾಂಡ್‌ಗೆ ದೂರಿದ್ದರು.

ಆನಂತರ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ೧೧ ಸ್ಥಾನ ಗೆಲ್ಲಲಷ್ಟೇ ಶಕ್ತವಾಯಿತು. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಷ್ಟು ಸ್ಥಾನಗಳನ್ನು ಬಿಜೆಪಿ ಉಳಿಸಿಕೊಳ್ಳಲು ವಿಫಲವಾಗಿತ್ತು. ಬೆಂಗಳೂರು ಜವಾಬ್ದಾರಿ ವಹಿಸಿಕೊಂಡಿದ್ದ ಅಶೋಕ್‌ ಅವರು ಪಕ್ಷದೊಳಗಿನ ಭಿನ್ನ ಧ್ವನಿಗಳನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಲು ವಿಫಲರಾಗಿದ್ದರು ಎಂದು ದೂರಲಾಗಿತ್ತು. ಅಕ್ರಮ ಗುರುತಿನ ಚೀಟಿ ಸಂಗ್ರಹ ವಿವಾದಿಂದ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಹಾಗೂ ಪಕ್ಷದ ಅಭ್ಯರ್ಥಿ ವಿಜಯಕುಮಾರ್ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಅಶೋಕ್‌ ಅವರು ಚಾಣಕ್ಷತನದಿಂದ ಕಾರ್ಯತಂತ್ರ ರೂಪಿಸಲಿಲ್ಲ. ಅಶೋಕ್‌ ಅವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಪಕ್ಷ ಹಿನ್ನಡೆ ಅನುಭವಿಸಿತಲ್ಲದೇ, ರಾಜ್ಯದ ಚುಕ್ಕಾಣಿ ಹಿಡಿಯುವಲ್ಲಿ ಪರೋಕ್ಷವಾಗಿ ಹಿನ್ನಡೆಗೆ ಕಾರಣವಾಯಿತು ಎಂಬ ಆರೋಪ ಅವರ ಮೇಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ತಮ್ಮ ಬೆಂಬಲಿಗರ ಮೇಲೆ ಕ್ರಮಕೈಗೊಳ್ಳಲು ಅಶೋಕ್‌‌ ಬಿಡುತ್ತಿಲ್ಲ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ರೂಪದಲ್ಲಿ ಪ್ರಬಲ ಒಕ್ಕಲಿಗ ನಾಯಕರಿದ್ದಾರೆ. ಇಂಥ ಸನ್ನಿವೇಶದಲ್ಲಿ ಒಕ್ಕಲಿಗ ಸಮುದಾಯವು ಬಿಜೆಪಿ ಬೆಂಬಲಕ್ಕೆ ನಿಲ್ಲುತ್ತದೆ ಎನ್ನುವ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ವಿಶ್ವಾಸವಿಲ್ಲ. ಈ ಕಾರಣಕ್ಕಾಗಿ ಅಶೋಕ್‌ ಅವರನ್ನು ಹಿಂಬದಿಗೆ ಸರಿಸಲು ಪಕ್ಷ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಇದಕ್ಕೆ ಪ್ರತಿಯಾಗಿ ಸೋಮಣ್ಣ ಅವರು ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಲ್ಲಿಯೂ ಕೆಲಸ ಮಾಡಿರುವುದರಿಂದ ಅವರಿಗೆ ಎಲ್ಲಾ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಮಿಗಿಲಾಗಿ ಬಿಬಿಎಂಪಿ ಸದಸ್ಯರಾಗುವ ಮೂಲಕ ಸೋಮಣ್ಣ ಅವರು ರಾಜಕೀಯ ಜೀವನ ಆರಂಭಿಸಿರುವುದರಿಂದ ತಳಮಟ್ಟದ ರಾಜಕಾರಣದಲ್ಲಿ ಅವರು ಪಳಗಿದ್ದಾರೆ. ವಿವಿಧ ಪಕ್ಷಗಳ ಕಾರ್ಪೊರೇಟರ್‌ಗಳು ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಸೋಮಣ್ಣ ಅವರ ಜೊತೆ ನಿಕಟ ಸಂಪರ್ಕ ಹೊಂದಿರುವ ಕಾಂಗ್ರೆಸ್‌, ಜೆಡಿಎಸ್‌ ಕಾರ್ಪೊರೇಟರ್‌ಗಳು ಇದ್ದಾರೆ. ಅವರಲ್ಲಿ ಕೆಲವರನ್ನು ಸೆಪ್ಟೆಂಬರ್‌ ೨೮ರಂದು ನಡೆಯುವ ಚುನಾವಣೆಯಲ್ಲಿ ಗೈರಾಗುವಂತೆ ನೋಡಿಕೊಳ್ಳುವ ಮೂಲಕ ಪಾಲಿಕೆ ವಶಕ್ಕೆ ಪಡೆಯಲು ಸೋಮಣ್ಣ ತಂತ್ರ ಹೊಸೆದಿದ್ದಾರೆ ಎನ್ನಲಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರೊಂದಿಗೂ ಉತ್ತಮ ಸಂಬಂಧ ಹೊಂದಿರುವ ಅವರು ರಾಜಕೀಯ ದಾಳ ಉರುಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅಶೋಕ್‌ ಅವರ ಸ್ಥಾನಕ್ಕೆ ಸೋಮಣ್ಣ ಅವರನ್ನು ತರಲಾಗಿದೆ ಎನ್ನಲಾಗಿದೆ. ಆದರೆ, ಇದನ್ನು ನಿರಾಕರಿಸಿರುವ ಸೋಮಣ್ಣ ಅವರು “ಪಕ್ಷದಲ್ಲಿ ಸಾಕಷ್ಟು ಹಿರಿಯ ಮತ್ತು ದೊಡ್ಡ ನಾಯಕರಿದ್ದಾರೆ. ಅಂಥ ದೊಡ್ಡ ಜವಾಬ್ದಾರಿಯನ್ನು ನನಗೆ ನೀಡಿಲ್ಲ. ನನ್ನಷ್ಟಕ್ಕೆ ನಾನಿದ್ದೇನೆ” ಎಂದು ‘ದಿ ಸ್ಟೇಟ್‌’ಗೆ ತಿಳಿಸಿದರು. ೨೦೧೫ರಿಂದಲೂ ಬಿಬಿಎಂಪಿ ಪ್ರತಿಪಕ್ಷ ನಾಯಕರಾಗಿರುವ ಅಶೋಕ್‌ ಅವರ ಬೆಂಬಲಿಗರಾದ ಪದ್ಮನಾಭ ರೆಡ್ಡಿ ಅವರನ್ನು ಬದಲಿಸಿ ತಮ್ಮ ನಿಷ್ಠರಿಗೆ ವಿಪಕ್ಷ ನಾಯಕನ ಸ್ಥಾನ ಕಲ್ಪಿಸಬೇಕು ಎಂದು ಸೋಮಣ್ಣ ಒತ್ತಡ ಹೇರಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.

ಇದನ್ನೂ ಓದಿ : ಚಾಣಕ್ಯಪುರಿ | ದೇವೇಗೌಡರು ಮನೆಗೆ ಬರುತ್ತೇನೆ ಎಂದಿದ್ದಕ್ಕೇ ಬೆಚ್ಚಿದ ಬಿಜೆಪಿ ಸಂಸದ!

ಇನ್ನು ಕಾಂಗ್ರೆಸ್‌ ವಲಯದಲ್ಲಿ ಬೆಂಗಳೂರು ಹಾಗೂ ಬಿಬಿಎಂಪಿ ಮೇಲೆ ಬಿಗಿ ಹಿಡಿತ ಹೊಂದಿರುವ ರಾಮಲಿಂಗಾ ರೆಡ್ಡಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕಲ್ಪಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಬೃಹತ್‌ ಕೈಗಾರಿಕಾ ಸಚಿವ ಹಾಗೂ ಸರ್ವಜ್ಞ ನಗರದ ಶಾಸಕರಾದ ಕೆ ಜೆ ಜಾರ್ಜ್‌ ಅವರನ್ನು ಬೆಂಗಳೂರಿನ ವ್ಯವಹಾರಗಳಿಂದ ದೂರ ಇಟ್ಟಿರುವುದು ಕಾಂಗ್ರೆಸ್‌ ವಲಯದಲ್ಲಿ ತಳಮಳ ಸೃಷ್ಟಿಸಿದೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಗೆ ಬೆಂಗಳೂರು ನಗಾರಾಭಿವೃದ್ಧಿ ಹಾಗೂ ಬೆಂಗಳೂರು ಉಸ್ತುವಾರಿ ನೀಡಿರುವುದು ರಾಮಲಿಂಗಾ ರೆಡ್ಡಿ ಹಾಗೂ ಕೆ ಜೆ ಜಾರ್ಜ್‌ ಮಾತ್ರವಲ್ಲದೇ ಬೆಂಗಳೂರಿನ ಬಹುತೇಕ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರಿನ ಹೊರಗಿನವರಿಗೆ ಇಲ್ಲಿನ ಜವಾಬ್ದಾರಿ ನೀಡಿರುವುದು ಸರಿಯಲ್ಲ ಎಂದು ಹಲವರು ಪಕ್ಷದ ನಾಯಕರ ಮುಂದೆ ಅಳಲು ತೋಡಿಕೊಂಡಿದ್ದೂ ಇದೆ. ಈ ಮಧ್ಯೆ, “ಬಿಬಿಎಂಪಿ ಮೇಯರ್ ಆಯ್ಕೆ ಜವಾಬ್ದಾರಿಯನ್ನು ಪರಮೇಶ್ವರ್ ನೋಡಿಕೊಳ್ಳಲಿದ್ದಾರೆ” ಎನ್ನುವ ಮೂಲಕ ರಾಮಲಿಂಗಾ ರೆಡ್ಡಿ ಅವರು ತೆರೆಗೆ ಸರಿಯಲು ಮುಂದಾಗಿರುವುದು ಕಾಂಗ್ರೆಸ್‌-ಜೆಡಿಎಸ್‌ ವಲಯದಲ್ಲಿ ಲಘು ಭೂಕಂಪಕ್ಕೆ ಕಾರಣವಾಗಿದೆ. ಸೆಪ್ಟೆಂಬರ್‌ ೨೭ರೊಳಗೆ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿದ್ದು, ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಕಲ್ಪಿಸಿದರೆ ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆಯಾಗಲಿದೆ ಎನ್ನಲಾಗಿದೆ. ಮೈತ್ರಿ ಸರ್ಕಾರಕ್ಕೆ ಬಿಬಿಎಂಪಿ ಮೇಯರ್‌ ಆಯ್ಕೆಯು ಮತ್ತೊಂದು ಪರೀಕ್ಷೆಯಾಗಿದೆ. ಇತ್ತ ಸತತ ಹಿನ್ನಡೆಗಳಿಂದ ಬಸವಳಿದಿರುವ ಬಿಜೆಪಿಯು ಸೋಮಣ್ಣ ಅವರು ಉರುಳಿಸುವ ದಾಳದಲ್ಲಿ ಅಧಿಕಾರ ಹಿಡಿಯಲಿದೆಯೇ ಎಂಬುದು ಮಾಸಾಂತ್ಯಕ್ಕೆ ನಿರ್ಧಾರವಾಗಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More