ಫ್ರೆಂಚ್ ಮಾಧ್ಯಮಗಳಲ್ಲೂ ಸದ್ದು ಮಾಡಿದ ರಫೇಲ್ ಡೀಲ್ ಒಪ್ಪಂದದ ಸುದ್ದಿ

ಸುಮಾರು ೫೯ ಸಾವಿರ ಕೋಟಿ ರೂ. ಮೊತ್ತದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಷಯದಲ್ಲಿ ವ್ಯಕ್ತವಾದ ಗಂಭೀರ ಅನುಮಾನಗಳಿಗೆ ಈವರೆಗೆ ಭಾರತ ಸರ್ಕಾರ ಉತ್ತರ ನೀಡಿಲ್ಲ. ಭಾರತೀಯ ಮುಖ್ಯವಾಹಿನಿ ಮಾಧ್ಯಮ ಆ ಬಗ್ಗೆ ಮುಗುಮ್ಮಾಗಿದೆ. ಇಂತಹ ಜಾಣಕುರುಡು ಹೊತ್ತಲ್ಲಿ, ಫ್ರಾನ್ಸ್‌ನ ಮಾಧ್ಯಮಗಳಲ್ಲಿ ವಿವಾದಿತ ಒಪ್ಪಂದ ಕುರಿತ ಸುದ್ದಿಗಳು ಸದ್ದು ಮಾಡತೊಡಗಿವೆ 

ಒಂದು ಕಡೆ ೫೯ ಸಾವಿರ ಕೋಟಿ ರೂ. ಮೊತ್ತದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ದೇಶದ ಸೇನಾ ಇತಿಹಾಸದಲ್ಲೇ ಅತಿದೊಡ್ಡ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡುತ್ತಿದ್ದರೆ, ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಈ ವ್ಯವಹಾರ ಇದೀಗ ಫ್ರೆಂಚ್ ಮಾಧ್ಯಮಗಳಲ್ಲೂ ಭಾರೀ ಸದ್ದು ಮಾಡತೊಡಗಿದೆ.

ಈ ಬಹುಕೋಟಿ ಹಗರಣದ ಕುರಿತು ಭಾರತೀಯ ಮುಖ್ಯವಾಹಿನಿ ಮಾಧ್ಯಮಗಳು ಒಂದು ರೀತಿಯ ಮುಗುಮ್ಮಾದ ವರಸೆಗೆ ಜಾರಿವೆ. ಪ್ರತಿಪಕ್ಷಗಳು ಮತ್ತು ಕೆಲವು ಆನ್‌ಲೈನ್ ಮಾಧ್ಯಮಗಳಲ್ಲಿ ಮಾತ್ರ ಸುಮಾರು ೩೬ ಸಾವಿರ ಕೋಟಿ ಮೊತ್ತದ ಅವ್ಯವಹಾರದ ಶಂಕೆ ಇರುವ ಈ ಹಗರಣದ ಕುರಿತು ಮಾತನಾಡುತ್ತಿವೆ. ಹಾಗೆ ಪ್ರಶ್ನೆಗಳನ್ನು ಎತ್ತಿದವರನ್ನು ಕೂಡ ಮಾನನಷ್ಟ ಮೊಕದ್ದಮೆಗಳ ಮೂಲಕ ಬೆದರಿಸಲಾಗುತ್ತಿದೆ. ಬಾಯಿ ಮುಚ್ಚಿಸಲಾಗುತ್ತಿದೆ. ಸಾರ್ವಜನಿಕ ತೆರಿಗೆ ಹಣದ ಕುರಿತ ಮಾಧ್ಯಮಗಳ ಸಹಜ ಶಂಕೆಯ ಪ್ರಶ್ನೆಗಳನ್ನು ಕಾನೂನಿನ ದಂಡಿಗೆ ತೋರಿಸಿ ಹೆದರಿಸುವ ಇಂತಹ ಪ್ರವೃತ್ತಿ ಭಾರತದಲ್ಲಿ ಹೆಚ್ಚುತ್ತಿರುವ ಹೊತ್ತಿಗೇ, ಆ ವ್ಯವಹಾರದ ಪಾಲುದಾರ ಸಂಸ್ಥೆಯ ತಾಯ್ನೆಲದಲ್ಲಿಯೇ ಪ್ರಕರಣದ ಕುರಿತು ಸಾರ್ವಜನಿಕ ಚರ್ಚೆ ಆರಂಭವಾಗಿದೆ.

‘ಫ್ರಾನ್ಸ್ ೨೪’ ಎಂಬ ಫ್ರಾನ್ಸಿನ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ, ‘ಲೆ ಮೊಂಡೆ’ ಎಂಬ ದೈನಿಕ ಮಾಧ್ಯಮಗಳಲ್ಲಿ ಕಳೆದ ವಾರ ರಫೇಲ್ ಡೀಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳ ಕುರಿತ ವಿಶ್ಲೇಷಣೆ ಪ್ರಮುಖವಾಗಿ ಕಾಣಿಸಿಕೊಂಡಿದೆ.

ಫ್ರಾನ್ಸ್ ೨೪ ಭಾರತದ ರಾಜಕಾರಣದಲ್ಲಿ ಸದ್ಯ ನಿತ್ಯ ಅತ್ಯಂತ ಹೆಚ್ಚು ಚರ್ಚೆಗೊಳಗಾಗಿರುವ ಹಗರಣವೆಂದು ರಫೇಲ್ ಒಪ್ಪಂದವನ್ನು ಬಣ್ಣಿಸಿದೆ. ೩೬ ಯುದ್ಧ ವಿಮಾನಗಳ ಖರೀದಿಯ ಈ ಒಪ್ಪಂದದಿಂದಾಗಿ ಪ್ರಧಾನಿ ಮೋದಿಯವರ ಆಪ್ತರಿಗೆ ಲಾಭವೇ ವಿನಃ; ದೇಶಕ್ಕಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ೨೦೧೫ರ ಈ ಒಪ್ಪಂದದಲ್ಲಿ ದೇಶದ ಮಿಲಿಟರಿ ಇತಿಹಾಸದಲ್ಲೇ ಅತಿದೊಡ್ಡ ಹಗರಣ ನಡೆದಿರುವ ಬಗ್ಗೆ ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ ಎಂಬುದನ್ನು ಪ್ರಸ್ತಾಪಿಸಿದೆ. ಅಲ್ಲದೆ, ೨೦೧೫ರಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ ಫ್ರಾನ್ಸ್ ಭೇಟಿಯಲ್ಲೇ ಈ ಒಪ್ಪಂದವನ್ನು ಘೋಷಿಸಿದ್ದರು. ಆಗ ಅತ್ಯಂತ ಶೀಘ್ರದಲ್ಲೇ ಒಪ್ಪಂದ ಜಾರಿಗೆ ಬರಲಿದೆ ಮತ್ತು ಯುದ್ಧ ವಿಮಾನ ಪೂರೈಕೆ ಪ್ರಕ್ರಿಯೆ ಆರಂಭವಾಗಿಯೇ ಬಿಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇದೀಗ ಮೂರು ವರ್ಷ ಕಳೆದರೂ ಒಪ್ಪಂದದ ವಾಸ್ತವವಾಗಿ ಜಾರಿಗೆ ಬಂದಿಲ್ಲ ಎಂಬ ಅಂಶದ ಬಗ್ಗೆಯೂ ವಾಹಿನಿ ಗಮನ ಸೆಳೆದಿದೆ.

ಭಾರತದಲ್ಲಿ ರಫೇಲ್ ಒಪ್ಪಂದ ಇದೀಗ ಸ್ವಜನಪಕ್ಷಪಾತ, ಲಜ್ಜೆಗೇಡಿ ಬಂಡವಾಳಶಾಹಿಯ ಮೇಲಾಟ ಮತ್ತು ಪಾರದರ್ಶಕವಲ್ಲದ ರಾಜಕೀಯ ಹುನ್ನಾರಗಳಿಗೆ ಒಂದು ಜ್ವಲಂತ ನಿದರ್ಶನವಾಗಿ ಬಳಕೆಯಾಗುತ್ತಿದೆ. ‘ರಫೇಲ್ ಅಫೇರ್’ ಎಂದೇ ಜನಜನಿತವಾಗಿರುವ ಈ ಹಗರಣ ಭಾರತದ ಆಳುವ ಪಕ್ಷ ಮತ್ತು ಪ್ರಧಾನಿಗೆ ಅಷ್ಟೇ ಅಲ್ಲ; ಫ್ರೆಂಚ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಏವಿಯೇಷನ್ ಕಂಪನಿಗೂ ಮಸಿ ಬಳಿದಿದೆ. ವಾಸ್ತವವಾಗಿ ಮೂಲ ಒಪ್ಪಂದದ ಪ್ರಕಾರ; ವಿಮಾನ ತಯಾರಿಕಾ ವಲಯದಲ್ಲಿ ೭೮ ವರ್ಷಗಳ ಅನುಭವ ಹೊಂದಿರುವ ಭಾರತ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಸಂಸ್ಥೆ ಈ ವ್ಯವಹಾರದ ಸಹಜ ಪಾಲುದಾರನಾಗಬೇಕಿತ್ತು. ಆದರೆ, ಪ್ರಧಾನಿ ಮೋದಿಯವರು ಹಳೆಯ ಒಪ್ಪಂದವನ್ನು ರದ್ದು ಮಾಡಿ, ಹೊಸದಾಗಿ ಮಾಡಿಕೊಂಡು ಒಪ್ಪಂದದ ಪ್ರಕಾರ, ಅಂಬಾನಿ ಸಮೂಹದ ರಿಲೆಯನ್ಸ್ ಡಿಫೆನ್ಸ್ ಸಂಸ್ಥೆ ಪಾಲುದಾರಿಕೆ ಪಡೆದಿದೆ. ರಿಲೆಯನ್ಸ್ ಡಿಫೆನ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದದ್ದೇ ನರೇಂದ್ರ ಮೋದಿಯವರು ರಫೇಲ್ ಒಪ್ಪಂದಕ್ಕೆ ಸಹಿ ಮಾಡುವ ಕೇವಲ ೧೩ ದಿನಗಳ ಮುನ್ನವಷ್ಟೇ! ರಕ್ಷಣಾ ವಲಯದಲ್ಲಿ ಯಾವುದೇ ಅನುಭವವೇ ಇಲ್ಲದ ಮತ್ತು ದೀರ್ಘ ಇತಿಹಾಸವೂ ಇರದ ಆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಹೊಸ ಸಂಸ್ಥೆಗೆ ದಿಢೀರ್ ಆಗಿ ಬಹುಕೋಟಿ ವಹಿವಾಟಿನ ಜಾಗತಿಕ ವ್ಯವಹಾರದಲ್ಲಿ ಪಾಲುದಾರಿಕೆ ನೀಡಲಿದೆ ಎಂದೂ ಫ್ರಾನ್ಸ್ ೨೪ ವಿಶ್ಲೇಷಿಸಿದೆ.

ರಿಲೆಯನ್ಸ್ ಉದ್ಯಮ ಮತ್ತು ರಫೇಲ್ ವ್ಯವಹಾರದ ನಡುವಿನ ಸಂಬಂಧದ ಕುರಿತು ಹೇಳುತ್ತಾ, “೫೯ ವರ್ಷದ ಬಿಲಿಯನೇರ್ ಉದ್ಯಮಿ ಟೆಲಿಕಾಂ ವಲಯದಲ್ಲಿ ಸಣ್ಣ ಮಟ್ಟದ ಯಶಸ್ಸು ಗಳಿಸಿದ್ದರೂ, ವಿಮಾನ ತಯಾರಿಕಾ ವಲಯದಲ್ಲಿ ಯಾವುದೇ ಅನುಭವ ಹೊಂದಿಲ್ಲ. ಆದರೆ, ಹಿಂದೂ ರಾಷ್ಟ್ರೀಯವಾದಿ ಪ್ರಧಾನಿಯೊಂದಿಗೆ ಅವರಿಗೆ ಆಪ್ತ ಸಖ್ಯವಿದೆ” ಎಂದು ವಾಹಿನಿ ಬಣ್ಣಿಸಿದೆ.

ಅಲ್ಲದೆ, ಮೋದಿ ಮತ್ತು ಅಂಬಾನಿ ನಡುವಿನ ಆಪ್ತ ಸಂಬಂಧದ ಕುರಿತು ವಿವರಿಸುತ್ತಾ, “ಕೆಲವೊಮ್ಮೆ ಇಬ್ಬರ ನಡುವಿನ ಪರಸ್ಪರ ಮೆಚ್ಚುಗೆಯ ಮಾತುಗಳು ಮುಜುಗರ ತರುವಮಟ್ಟಿಗೂ ಇರುತ್ತವೆ. ಅದಕ್ಕೆ ೨೦೧೬ರ ಹುಟ್ಟುಹಬ್ಬದ ಸಂದರ್ಭದಲ್ಲಿ ಮೋದಿಯವರಿಗೆ ಶುಭಾಷಯ ಕೋರುತ್ತಾ, ಅಂಬಾನಿ, “ಲೀಡರ್ ಆಫ್ ದಿ ಲೀಡರ್”, “ಕಿಂಗ್ ಆಫ್ ಕಿಂಗ್ಸ್” ಮತ್ತು “ಕಣ್ಣು ತೆರೆದೇ ಕನಸು ಕಾಣುವ ನಾಯಕ” ಎಂದು ಹಾಡಿಹೊಗಳಿದ್ದರು ಎಂದಿದೆ. ಅಲ್ಲದೆ, ಖಾಸಗೀ ಕಾರ್ಪೊರೇಟ್ ಸಂಸ್ಥೆಗಳಿಂದ ಭಾರೀ ಪ್ರಮಾಣದ ರಾಜಕೀಯ ದೇಣಿಗೆ ಪಡೆದದ್ದೂ ಸೇರಿದಂತೆ ೨೦೧೪ರಿಂದ ಮೋದಿಯವರ ಆಡಳಿತ ‘ಬಂಡವಾಳಶಾಹಿ’ ಪರ ಸರ್ಕಾರವಾಗಿದೆ ಎಂಬ ಆರೋಪಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ರಫೇಲ್ ಹಗರಣವನ್ನು ೧೯೮೯ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಅಧಿಕಾರವನ್ನು ಬಲಿತೆಗೆದುಕೊಂಡ ಬೋಫೋರ್ಸ್ ಹಗರಣಕ್ಕೆ ಹೋಲಿಸಿರುವ ವಾಹಿನಿ, “ಈಗ ಮತ್ತೊಮ್ಮೆ ೨೦೧೯ರಲ್ಲಿ ಇತಿಹಾಸ ಮರುಕಳಿಸಿದರೂ ಅಚ್ಚರಿಯಿಲ್ಲ” ಎಂದಿದೆ.

‘ಲೆ ಮಾಂಡೆ’ ಎಂಬ ಫ್ರೆಂಚ್ ಪ್ರಭಾವಿ ದೈನಿಕದಲ್ಲಿ ಕೂಡ ರಫೇಲ್ ಡೀಲ್ ವಿಷಯ ಭಾರತದ ರಾಜಕಾರಣದ ಸದ್ಯದ ಭಾರೀ ವಿವಾದದ ಸಂಗತಿಯಾಗಿದೆ ಎಂಬುದನ್ನು ಉಲ್ಲೇಖಿಸಿದೆ. ೩೬ ಯುದ್ಧ ವಿಮಾನ ಖರೀದಿಯ ಹೊಸ ಒಪ್ಪಂದಕ್ಕೆ ನರೇಂದ್ರ ಮೋದಿಯವರು ಸಹಿ ಹಾಕಿದ ಎರಡು ವರ್ಷಗಳ ಬಳಿಕ ವಿವಾದ ಭಾರತೀಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ಹಗರಣ ಮತ್ತು ಮೋದಿ ಸರ್ಕಾರದ ಭ್ರಷ್ಟಾಚಾರದ ಪ್ರಸ್ತಾಪವಿಲ್ಲದೆ ಒಂದೇ ಒಂದು ದಿನ ಕೂಡ ಉರುಳುವುದಿಲ್ಲ ಎಂಬಷ್ಟರಮಟ್ಟಿಗೆ ರಫೇಲ್ ನಿತ್ಯದ ಆರೋಪ- ಪ್ರತ್ಯಾರೋಪದ ವಿಷಯವಾಗಿದೆ ಎಂದು ಲೆ ಮಾಂಡೆ ವಿಶ್ಲೇಷಿಸಿದೆ.

ದೇಶದ ಮುಂಚೂಣಿ ವಿಮಾನ ತಯಾರಿಕಾ ಸಂಸ್ಥೆಯಾಗಿರುವ ಡಸಾಲ್ಟ್ ಏವಿಯೇಷನ್ ಪ್ರತಿಷ್ಠೆಗೂ ಈ ಹಗರಣ ಮಸಿ ಬಳಿಯುವ ಸಾಧ್ಯತೆ ಇದೆ ಎಂದಿರುವ ಪತ್ರಿಕೆ, ಸದ್ಯ ಭಾರತ ಸರ್ಕಾರ ಆಹ್ವಾನಿಸಿರುವ ೧೧೦ ವಿಮಾನ ಪೂರೈಕೆ ಕುರಿತ ಟೆಂಡರಿನಲ್ಲಿಯೂ ಇತರ ಆರು ವಿವಿಧ ಸಂಸ್ಥೆಗಳೊಂದಿಗೆ ಡಸಾಲ್ಟ್ ಕೂಡ ಆಸಕ್ತಿ ವ್ಯಕ್ತಪಡಿಸಿದೆ. ಆದರೆ, ಖಂಡಿತವಾಗಿಯೂ ರಾಫೇಲ್ ಒಪ್ಪಂದದ ಕುರಿತ ವಿವಾದ ಸಂಸ್ಥೆಯ ಇತರ ವ್ಯವಹಾರಗಳ ಮೇಲೆಯೂ ಪರಿಣಾಮ ಬೀರಬಹುದು ಎಂದಿದೆ.

೨೦೧೫ರಲ್ಲಿ ಮೋದಿಯವರ ಸಹಿ ಮಾಡಿದ ಒಪ್ಪಂದದ ಪ್ರಕಾರ ಭಾರತೀಯ ಮೂಲದ ರಿಲೆಯನ್ಸ್ ಡಿಫೆನ್ಸ್ ಸಂಸ್ಥೆಯೊಂದಿಗೆ ‘ಆಫ್‌ಸೆಟ್’‌ ವ್ಯವಹಾರ ಕಡ್ಡಾಯವಾಗಿದೆ. ಇದೀಗ ಇಡೀ ವಿವಾದದ ಕೇಂದ್ರಬಿಂದುವಾಗಿರುವುದೇ ಈ ಅಂಶ. ತಮ್ಮ ಆಪ್ತರಿಗೆ ಅನುಕೂಲಮಾಡಿಕೊಡಲು ೨೦೧೨ರ ಮೂಲ ಒಪ್ಪಂದವನ್ನು ಕೈಬಿಟ್ಟು, ಸರ್ಕಾರಿ ಸ್ವಾಮ್ಯದ ಅನುಭವಿ ಸಂಸ್ಥೆಯನ್ನು ಕೈಬಿಟ್ಟು ಖಾಸಗೀ ವಲಯದ ಅನನುಭವಿ ಸಂಸ್ಥೆಯೊಂದಿಗೆ ಪಾಲುದಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದು ಪ್ರತಿಪಕ್ಷಗಳ ಆರೋಪ ಎಂದೂ ಪತ್ರಿಕೆ ಹೇಳಿದೆ.

ಇದನ್ನೂ ಓದಿ : ರಫೇಲ್ ಹಗರಣ: ಗೌಪ್ಯತೆ ಒಪ್ಪಂದದ ಮಾಹಿತಿ ಬಹಿರಂಗಪಡಿಸಲು ಸರ್ಕಾರಕ್ಕೇಕೆ ಹಿಂಜರಿಕೆ?

ಹಿಂದಿನ ಒಪ್ಪಂದ ಮತ್ತು ಹಾಲಿ ಒಪ್ಪಂದದ ನಡುವೆ ಇರುವ ಯುದ್ಧ ವಿಮಾನಗಳ ಬೆಲೆಯಲ್ಲಿನ ಭಾರೀ ವ್ಯತ್ಯಾಸ, ಸಾಕಷ್ಟು ಉದ್ಯೋಗಾವಕಾಶಗಳಿಗೆ ಅವಕಾಶವಿದ್ದು ಸರ್ಕಾರಿ ಸಂಸ್ಥೆಯೊಂದಿಗೆ ಸಹ ಉತ್ಪಾದನೆಯ ಕರಾರಿಗೆ ಬದಲಾಗಿ ಆ ವಲಯದಲ್ಲಿ ಅನುಭವವೇ ಇಲ್ಲದ ಖಾಸಗಿ ಕಂಪನಿಗೆ ಅವಕಾಶ ಮಾಡಿಕೊಟ್ಟಿರವುದು, ಅಂದಿನ ರಕ್ಷಣಾ ಖರೀದಿಗೆ ಸಂಬಂಧಪಟ್ಟ ಉನ್ನತ ಸಮಿತಿಯ ಒಪ್ಪಿಗೆಯಾಗಲೀ, ಸ್ವತಃ ರಕ್ಷಣಾ ಸಚಿವಾಲಯದ ಒಪ್ಪಿಗೆಯಾಗಲೀ ಪಡೆಯದೆ ನೇರವಾಗಿ ಪ್ರಧಾನಿಯೇ ಈ ವ್ಯವಹಾರವನ್ನು ಅಂತಿಮಗೊಳಿಸಿದ್ದು ಯಾಕೆ? ಮುಂತಾದ ಸಮರ್ಪಕ ಉತ್ತರವಿಲ್ಲದ ಪ್ರಶ್ನೆಗಳ ಹೊರತಾಗಿಯೂ ಭಾರತೀಯ ಮುಖ್ಯವಾಹಿನಿ ಟಿವಿ ಮತ್ತು ಪತ್ರಿಕೆಗಳು ಆ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ದನಿ ಎತ್ತುತ್ತಿಲ್ಲ. ನಮ್ಮ ಮಾಧ್ಯಮಗಳ ಇಂತಹ ಮುಗುಮ್ಮಾದ ವರಸೆಯ ಹೊತ್ತಲ್ಲಿ, ವ್ಯವಹಾರದ ಪಾಲುದಾರ ಫ್ರಾನ್ಸ್‌ನ ಮಾಧ್ಯಮಗಳಲ್ಲಿ ವಿವಾದಿತ ಒಪ್ಪಂದದ ಕುರಿತು ಸುದ್ದಿಗಳು ಇದೀಗ ಸ್ಥಾನ ಪಡೆಯತೊಡಗಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More