ರಾಜಸ್ಥಾನದಲ್ಲಿ ‘ಸ್ವಾಭಿಮಾನ’ಕ್ಕಾಗಿ ನಡೆಯುತ್ತಿರುವ ರಾಜಕೀಯ ಸಮರವೊಂದರ ಸುತ್ತ

ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯ ಉಚ್ಛಾಟಿತ, ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಕಾಂಗ್ರೆಸ್ ಸೇರುವ ಲಕ್ಷಣಗಳು ಗೋಚರಿಸುತ್ತಿವೆ. ಆ ಮೂಲಕ ಜಸ್ವಂತ್ ಕುಟುಂಬ ಬಿಜೆಪಿಯೊಂದಿಗೆ ಬಹುಕಾಲ ಹೊಂದಿದ್ದ ನಂಟು ಕೂಡ ಕಳಚಿ ಬೀಳಲಿದೆ. ಈ ಕುರಿತು ‘ಮುಂಬೈ ಮಿರರ್’ ಪತ್ರಿಕೆ ಪ್ರಕಟಿಸಿರುವ ಬರಹದ ಭಾವಾನುವಾದ ಇಲ್ಲಿದೆ

ದೆಹಲಿಯ ತೀನ್ ಮೂರ್ತಿ ಮಾರ್ಗದ 15ನೇ ನಂಬರ್ ಮನೆಯೊಳಗೆ ಊಟದ ಮೇಜಿನ ಸುತ್ತ ಕುಳಿತಿದ್ದವರು ಗತದ ನೆನಪು ಮತ್ತು ಒಂದು ಬಗೆಯ ನೋವಿನಲ್ಲಿ ಮುಳುಗಿದ್ದರು. ಪಕ್ಷಕ್ಕೆ ಸೆಡ್ಡು ಹೊಡೆದ ಬಿಜೆಪಿ ನಾಯಕ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಪಕ್ಕದ ಕೋಣೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದರು. ಸೆಪ್ಟೆಂಬರ್ 22ರಂದು ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಪಚ್ ಪದ್ರಾದಲ್ಲಿ ನಡೆಯುವ ಸ್ವಾಭಿಮಾನ್ ಯಾತ್ರೆಯನ್ನು ನೆನೆದು ಜಸ್ವಂತ್ ಸಿಂಗ್ ಅವರ ಪತ್ನಿ ಶೀತಲ್ ಕನ್ವರ್, ಹಿರಿಯ ಪುತ್ರ ರಾಜಸ್ಥಾನ ಬಿಜೆಪಿ ಶಾಸಕ ಮನ್ವೇಂದ್ರ ಸಿಂಗ್, ಸೊಸೆ ಚಿತ್ರಾ, ಮೊಮ್ಮಗ ಹಮೀರ್ ಮೌನಕ್ಕೆ ಸರಿದರು. ಆ ಸಮಾವೇಶ ಔಪಚಾರಿಕವಾಗಿ ಬಿಜೆಪಿಯೊಂದಿಗೆ ಕುಟುಂಬದ ಸಂಬಂಧವನ್ನು ಕಡಿದು ಹಾಕಲಿದ್ದು ಜಸ್ವಂತ್ ಸಿಂಗ್ ಮತ್ತು ಅವರ ಪುತ್ರನಲ್ಲದೆ ದಶಕಗಳ ಕಾಲ ಬಿಜೆಪಿ ಪರ ಪ್ರಚಾರ ಕಾರ್ಯ ಕೈಗೊಂಡ ಅವರ ಪತ್ನಿಗೂ ನಿರ್ಣಾಯಕವಾಗಲಿದೆ.

ರಜಪೂತ ಸಮುದಾಯದ ಸದಸ್ಯರು, ಜಸ್ವಂತ್ ಮತ್ತು ಮನ್ವೇಂದ್ರರ ಬೆಂಬಲಿಗರು ಶೀಘ್ರದಲ್ಲೇ ಸಭೆ ಸೇರಲಿದ್ದಾರೆ. ಭವಿಷ್ಯದ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ. ಮನ್ವೇಂದ್ರ ಅವರ ನಡೆ ಬಹಳ ನಿರ್ಣಾಯಕವಾಗಿರಲಿದೆ. ಮುಂದಿನ ಹಾದಿ ಅವರನ್ನು ಕಾಂಗ್ರೆಸ್ಸಿನತ್ತ ಕೊಂಡೊಯ್ಯಬಹುದು. ಅಥವಾ ಏಕಾಂಗಿಯಾಗಿ ಅವರೇ ಪ್ರತ್ಯೇಕ ನಿರ್ಣಯಕ್ಕೆ ಬರಬಹುದು.

"ಬಿಜೆಪಿ ನಮಗೆ ಎರಡು ಬಾರಿ ದ್ರೋಹ ಬಗೆದಿದೆ. ಒಮ್ಮೆ ನನ್ನ ಗಂಡ (ಪಾಕಿಸ್ತಾನ ರಾಷ್ಟ್ರಪಿತ) ಜಿನ್ನಾ ಕುರಿತು ಪುಸ್ತಕ ಬರೆದಾಗ. ಮತ್ತೊಮ್ಮೆ ಅವರು ಕೊನೆಯ ಬಾರಿ ಸ್ಪರ್ಧಿಸಲು ನಿರ್ಧರಿಸಿದಾಗ. ಟಿಕೆಟ್ ನೀಡುವುದಾಗಿ ಮಾತು ಕೊಟ್ಟಿದ್ದರೂ ಅದರಂತೆ ಬಿಜೆಪಿ ನಡೆದುಕೊಳ್ಳಲಿಲ್ಲ,” ಎನ್ನುವ ಶೀತಲ್ "ಪುಸ್ತಕ ಬಿಡುಗಡೆಯಾದಾಗ ಅದನ್ನು ಓದಲು ಯಾರಿಗೂ ತೊಂದರೆ ಆಗಲಿಲ್ಲ. ಆದರೆ ಪಕ್ಷದಿಂದ ಉಚ್ಛಾಟಿಸುವಾಗ ತೊಂದರೆ ಕಾಣಿಸಿತು. ಉಚ್ಛಾಟನೆ ಮಾಡಿದ್ದೇವೆ ಎಂದು ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಈ ಸುದ್ದಿಯನ್ನು ಜಸ್ವಂತ್ ಅವರಿಗೆ ಖುದ್ದಾಗಿ ನಾನೇ ತಿಳಿಸಿದ್ದು ನೆನಪಾಗುತ್ತಿದೆ. ಕೆಲ ವರ್ಷಗಳ ನಂತರ ಪಕ್ಷಕ್ಕೆ ಮರಳುವಂತೆ ಕೋರಲಾಯಿತು. ನಾನದನ್ನು ಬಲವಾಗಿ ವಿರೋಧಿಸಿದೆ ಮತ್ತು ಅವರು ನಂಬಿಕೆಗೆ ಅರ್ಹರಲ್ಲ ಎಂದೆ. ಆದರೆ 2014ರ ಚುನಾವಣೆಯಲ್ಲಿ ಏನಾಯಿತು ನೋಡಿ. ಇಷ್ಟೆಲ್ಲಾ ನಡೆದರೂ ಮನ್ವೇಂದ್ರ ಬಿಜೆಪಿಯೊಂದಿಗೆ ಮುಂದುವರಿದರೆ ನಾನದನ್ನು ಒಪ್ಪುವುದಿಲ್ಲ” ಎನ್ನುತ್ತಾರೆ ಅವರು.

2014ರಲ್ಲಿ ಪಕ್ಷದೊಳಗೆ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದ ಜಸ್ವಂತ್ ಅವರಿಗೆ ಬಾರ್ಮೆರ್-ಜೈಸಲ್ಮೇರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದಂತೆ ಬಿಜೆಪಿ ಟಿಕೆಟ್ ನಿರಾಕರಿಸಿತು. ತಮ್ಮ ಬದುಕಿನ ಕೊನೆಯ ಚುನಾವಣೆ ಅದಾದುದರಿಂದ ಕಣಕ್ಕಿಳಿಯಬೇಕೆಂದು ನಿರ್ಧರಿಸಿದ ಜಸ್ವಂತ್ ರಾಜಕೀಯ ಜೀವನದ ಮೊದಲ ದಿನಗಳಂತೆ ಸ್ವತಂತ್ರವಾಗಿ ಸ್ಪರ್ಧಿಸಿದರು. ಕಡೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ಸೋನಾಲಾಲ್ ಚೌಧರಿ ಅವರ ವಿರುದ್ಧ ಕೆಲವೇ ಮತಗಳ ಅಂತರದಿಂದ ಸೋಲನುಭವಿಸಿದರು. ಆರಂಭದ ದಿನಗಳಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋಲನುಭವಿಸದಂತೆ ಕಡೆಯ ಹೋರಾಟದಲ್ಲೂ ಮಣಿದರು. ಇತ್ತ ಮೋದಿ ಅಲೆಯಲ್ಲಿ ಮತದಾರರು ತೇಲಿದ ಪರಿಣಾಮ ರಾಜಸ್ತಾನದ ಎಲ್ಲಾ 25 ಸ್ಥಾನಗಳು ಬಿಜೆಪಿ ತೆಕ್ಕೆಗೆ ಬಂದವು. ತಂದೆಯಂತೆ ತಮ್ಮನ್ನೂ ಬಿಜೆಪಿ ರಾಷ್ಟ್ರೀಯ ಕಾರ್ಯಕರಣಿಯಿಂದ ತೆಗೆದುಹಾಕಿದ್ದಲ್ಲದೆ ಪಕ್ಷದಿಂದಲೇ ಉಚ್ಛಾಟಿಸಿದ್ದರಿಂದ ಬಾರ್ಮೆರ್ ಜಿಲ್ಲೆಯ ಶಿಯೋ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿದ್ದ ಮನ್ವೇಂದ್ರ ಸಿಂಗ್ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲಿಲ್ಲ.

ರಾಜಸ್ಥಾನ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮನ್ವೇಂದ್ರ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ಧರಿಸಿದ್ದಾರೆ. ಪಕ್ಷದೊಂದಿಗೆ ಮುಂದುವರಿಯಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಿದ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ 2019ರ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

“ಹೆಸರೇ ಸೂಚಿಸುವಂತೆ ಸ್ವಾಭಿಮಾನಿ ಯಾತ್ರೆ ಸ್ವಾಭಿಮಾನಕ್ಕೆ ಸಂಬಂಧಿಸಿದ್ದು,” ಎಂದರು ಮನ್ವೇಂದ್ರ. “2014ರಲ್ಲಿ ನನ್ನ ತಂದೆಯೊಟ್ಟಿಗೆ ನಿಂತಿದ್ದ ಅವರ ಬೆಂಬಲಿಗರು ಅನುಯಾಯಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯೂ ಅವರು ನನ್ನೊಂದಿಗೆ ಇರಲಿದ್ದಾರೆ ಎಂಬ ಭರವಸೆ ಇದೆ. ನನ್ನ ಭವಿಷ್ಯದ ಬಗ್ಗೆ ಅಲ್ಲಿ ಸೇರುವವರಿಗೆ ಯಾವುದು ಒಳಿತಾಗಿ ಕಾಣುತ್ತದೋ ಹಾಗೆ ನಿರ್ಣಯ ಕೈಗೊಳ್ಳಲಿದ್ದೇನೆ. ಇದು ನಿಜವಾಗಿಯೂ ಪ್ರಜಾತಾಂತ್ರಿಕ ಧ್ವನಿಯಾಗಲಿದೆ” ಎಂದರು ಅವರು. ನಂತರ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ತಾಯಿಯನ್ನು ಗಮನಿಸಿದ ಮನ್ವೇಂದ್ರ ನಗುತ್ತಾ, “ಅಮ್ಮನನ್ನು ನೋಡಿದಿರಾ? ನಿನಗೆ ಬಿಜೆಪಿಯಲ್ಲಿ ಉಳಿಯಲು ಎಷ್ಟು ಧೈರ್ಯ ಎಂಬಂತಿಲ್ಲವೇ ಆ ನೋಟ?” ಎಂದರು.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಮಮತಾ ವಿರುದ್ಧ ಸಮರ ಸಾರಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ

ಜಸ್ವಂತ್ ಸಿಂಗ್ ಅವರೇ ಒಂದು ಕಾಲದಲ್ಲಿ ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಬರುವ ಭಾವನಾತ್ಮಕ ಸನ್ನಿವೇಶವನ್ನು ಎದುರಿಸುವುದು ಹೇಗೆ ಎಂಬ ಸಂದಿಗ್ಧ ಸ್ಥಿತಿಯಲ್ಲಿದೆ ಕುಟುಂಬ. ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೊಂದಿಗೆ ಸಂಬಂಧ ಹದಗೆಟ್ಟಿದೆ. ಈ ಮಧ್ಯೆ ಸೊಸೆ ಚಿತ್ರಾ ಈ ಬಾರಿ ಕಣಕ್ಕಿಳಿಯಲಿದ್ದಾರೆ, ಸ್ಥಳೀಯ ಕ್ಷತ್ರೀಯ ಸಮುದಾಯದ ಸಭೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಮಾತನಾಡಿದ ಚಿತ್ರಾ, “ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಇದು ತಪ್ಪು ಮಾಹಿತಿ. ನಾನು ನನ್ನ ಗಂಡ ಮತ್ತು ಮಾವನವರ ಬೆಂಬಲಕ್ಕೆ ಸದಾ ನಿಂತಿದ್ದೇನೆ. ಮುಂದೆಯೂ ನಿಲ್ಲುತ್ತೇನೆ,” ಎಂದರು. ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಜಸ್ವಂತ್ ಪರ ವ್ಯಾಪಕ ಪ್ರಚಾರ ನಡೆಸಿದ್ದರು.

ಇಷ್ಟಾದರೂ ಮನ್ವೇಂದ್ರ ಪಕ್ಷ ಸೇರುತ್ತಾರೆಯೇ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಿಲ್ಲ. ಹಾಗೆಯೇ ಮುಂದಿನ ಯಾತ್ರೆ ಬಳಿಕ ಉಂಟಾಗುವ ಪರಿಣಾಮಗಳನ್ನು ಊಹಿಸಲು ಕೂಡ ಮುಂದಾಗಿಲ್ಲ. ಒಂದು ವೇಳೆ ಮನ್ವೇಂದ್ರ ಕಾಂಗ್ರೆಸ್ ಸೇರಿದರೆ 2019ರ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವವರು ಸಹಜವಾಗಿಯೇ ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ. ಒಂದು ಬಾರಿ ಮನ್ವೇಂದ್ರ ಗೆದ್ದದ್ದು ಬಿಟ್ಟರೆ (2004-2009) ಸ್ವಾತಂತ್ರ್ಯ ಬಂದ ಬಳಿಕ ಬಾರ್ಮೆರ್- ಜೈಸಲ್ಮೇರ್ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಬಿಜೆಪಿಯ ಬಹುದೊಡ್ಡ ನಾಯಕರೊಬ್ಬರ ಪುತ್ರ, ಸ್ವತಃ ಬಿಜೆಪಿ ಶಾಸಕರಾಗಿರುವವರು, ಒಮ್ಮೆ ಅದೇ ಪಕ್ಷದಿಂದ ಸಂಸದರೂ ಆಗಿದ್ದವರು ಪಕ್ಷ ತೊರೆದು ಎದುರಾಳಿಗಳನ್ನು ಸೇರಿಕೊಳ್ಳುವುದು ಒಂದು ರೂಪಕದಂತೆ ಕಾಣುತ್ತಿದೆ.

ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌ರಿಂದ ಬಿಎಸ್‌ವೈಗೆ ಬುದ್ಧಿವಾದ
ಯಡಿಯೂರಪ್ಪನವರ ಇತ್ತೀಚಿನ ಸಾಹಸಗಳಿಗೆ ನಿಜವಾದ ಕಾರಣವೇನು?
ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
Editor’s Pick More