ಟ್ವಿಟರ್ ಸ್ಟೇಟ್ | ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿಜವಾಗಿ ಗೆದ್ದವರಾರು?

ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿಯ ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರು ವಿಜಯೋತ್ಸವ ಆಚರಿಸಿದ್ದಾರೆ. ಈ ನಾಯಕರ ಟ್ವೀಟ್‌ಗಳನ್ನು ಗಮನಿಸಿದಲ್ಲಿ ವಾಸ್ತವದಲ್ಲಿ ಯಾರು ಗೆದ್ದಿದ್ದಾರೆ ಎಂದು ಸಂಶಯ ಬರುವುದು ಸಹಜವೇ

ಸೋಮವಾರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಬಂದಾಗ ರಾಷ್ಟ್ರದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ರಾಜ್ಯ ನಾಯಕರು ಮತ್ತು ಕೇಂದ್ರದ ನಾಯಕರು ವಿಜಯೋತ್ಸವ ಆಚರಿಸಿದ್ದಾರೆ. ಈ ವಿಜಯೋತ್ಸವಕ್ಕೆ ಟ್ವಿಟರ್ ಸಾಮಾಜಿಕ ಜಾಲತಾಣ ಸಾಕ್ಷಿಯಾಗಿದೆ. ಬಿಜೆಪಿ ಪಕ್ಷವಂತೂ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಮ್ಮ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ದಿಗ್ವಿಜಯ’ ಸಾಧಿಸಿದೆ ಎಂದು ಟ್ವೀಟ್ ಮಾಡಿದೆ. ಇತ್ತ ಕಾಂಗ್ರೆಸ್ ನಾಯಕರೂ ತಮ್ಮ ಗೆಲುವಿನ ಸಂಭ್ರಮವನ್ನು ಟ್ವಿಟರ್ ಮೂಲಕ ಪ್ರಕಟಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು, ರಾಷ್ಟ್ರೀಯ ನಾಯಕರು ಹಾಗೂ ಕಾರ್ಯಕರ್ತರೂ ತಮ್ಮ ಗೆಲುವಿನ ಸಂಭ್ರಮವನ್ನು ಟ್ವೀಟ್‌ಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ.

ಈ ಟ್ವೀಟ್‌ಗಳನ್ನು ಗಮನಿಸಿದಲ್ಲಿ ವಾಸ್ತವದಲ್ಲಿ ಯಾರು ಗೆದ್ದಿದ್ದಾರೆ ಎಂದು ಸಂಶಯ ಬರುವುದು ಸಹಜವೇ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ "ನಮ್ಮ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗರಿಷ್ಠ ಸಂಖ್ಯೆ ಸ್ಥಾನಗಳನ್ನು ಪಡೆದುಕೊಂಡಿದೆ. ಇದಕ್ಕಾಗಿ ಶ್ರಮಪಟ್ಟ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿ, ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ೯೮೨ ವಾರ್ಡ್‌ಗಳನ್ನು ಬಹುಮತದಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್‌ಗೆ ಸಿಕ್ಕ ಒಟ್ಟು ಶೇಕಡಾವಾರು ಮತಗಳು ಶೇ. ೩೮. ಎಲ್ಲಾ ಮಾನದಂಡಗಳಲ್ಲಿ ನೋಡಿದರೂ ನಂಬರ್ ೧ ಆಗಿದ್ದೇವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿ, “ಬಿಜೆಪಿ ಕಾರ್ಯಕರ್ತರಿಗೆ ಮತ್ತು ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದ. ಈ ಬಾರಿಯ ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಅತ್ಯದ್ಭುತ ಪ್ರದರ್ಶನ ನೀಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನಗಳು ಕುಸಿಯುವ ಜೊತೆಗೆ ಬಿಜೆಪಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಪವಿತ್ರ ಮೈತ್ರಿಯ ವಿರುದ್ಧ ಜನರು ತಮ್ಮ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮಿತ್ ಶಾ ಅವರ ಟ್ವೀಟ್‌ಗೆ ಬಿ ಎಸ್ ಯಡಿಯೂರಪ್ಪ ಧನ್ಯವಾದ ಅರ್ಪಿಸಲು, “ಪ್ರತೀ ಚುನಾವಣೆಯಲ್ಲಿ ಬಿಜೆಪಿ ಕನ್ನಡಿಗರ ಹೃದಯದ ಸಮೀಪಕ್ಕೆ ತಲುಪುತ್ತಿದೆ” ಎಂದು ಮರು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನೀಡಿದ ‘ಮೈತ್ರಿ’ ಸಂದೇಶವೇನು?

ಎರಡೂ ಪಕ್ಷಗಳ ಹಿರಿಯ ನಾಯಕರೂ ಮತ್ತು ಅಧಿಕೃತ ಟ್ವಿಟರ್ ಖಾತೆಗಳೂ ತಮ್ಮ ಪಕ್ಷಗಳು ಚುನಾವಣೆ ಗೆದ್ದಿರುವ ಬಗ್ಗೆ ವಿವಿಧ ಸಾಕ್ಷ್ಯಗಳನ್ನು ಮುಂದಿಟ್ಟು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಅತ್ಯಧಿಕ ವಾರ್ಡ್‌ಗಳನ್ನು ಗೆದ್ದಿರುವುದು ಮತ್ತು ಸಂಖ್ಯೆಯಲ್ಲಿ ತಾವು ಮುಂದಿದ್ದೇವೆ ಎಂದು ಸಮಾಧಾನ ಪಟ್ಟಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಳಪೆ ಪ್ರದರ್ಶನ ತೋರಿಸಿದೆ, ಬಿಜೆಪಿಗೆ ಹಿಂದಿನ ಚುನಾವಣೆಗೆ ಹೋಲಿಸಿದರೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂಭ್ರಮಪಡುತ್ತಿದ್ದಾರೆ. ಇದೇ ಸಂಭ್ರಮ ಮತ್ತು ಸಮಾಧಾನದ ಅಂಕಿ ಅಂಶಗಳನ್ನು ಟ್ವಿಟರ್‌ನಲ್ಲಿ ಹರಿಯಬಿಡುತ್ತಿರುವ ನಾಯಕರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಪರಸ್ಪರ ಧನ್ಯವಾದ ಮತ್ತು ಶುಭಾಶಯ ಹೇಳುತ್ತಿದ್ದಾರೆ. ಈ ಟ್ವೀಟ್‌ಗಳನ್ನು ನೋಡಿದಲ್ಲಿ ನಿಜವಾಗಿ ಗೆದ್ದವರು ಯಾರು ಮತ್ತು ಸೋತವರು ಯಾರು ಎನ್ನುವ ಗೊಂದಲ ಮೂಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಒಮ್ಮೆ ಪರಿಶೀಲಿಸಿದಲ್ಲಿ ರಾಜ್ಯದ ಮೂರು ಮಹಾನಗರ ಪಾಲಿಕೆ ಸೇರಿದಂತೆ ೧೦೫ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ೨೦೧೩ರ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಬಿಜೆಪಿ ಸುಧಾರಿತ ಪ್ರದರ್ಶನ ನೀಡುವ ಮೂಲಕ ಬಲ ಹೆಚ್ಚಿಸಿಕೊಂಡಿರುವುದು ಸ್ಪಷ್ಟವಾಗಿದೆ. ಒಟ್ಟಾರೆ ಗಳಿಕೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹಿಂದೆ ಇದ್ದರೂ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಹವಾಗಿ ಸಲ್ಲಬೇಕಿರುವುದು ಬಿಜೆಪಿಗೆ.

ಪ್ರಸಕ್ತ ಚುನಾವಣೆಯಲ್ಲಿ ೯೮೨ ವಾರ್ಡ್‌ ಗೆದ್ದಿರುವ ಕಾಂಗ್ರೆಸ್‌ ಅಗ್ರಸ್ಥಾನಿಯಾಗಿದೆ. ೨೦೧೩ರಲ್ಲಿ ೧,೦೬೪ ವಾರ್ಡ್‌ ಗೆದ್ದಿದ್ದ ಕಾಂಗ್ರೆಸ್‌, ಈ ಬಾರಿ ೮೨ ವಾರ್ಡ್‌ಗಳನ್ನು ಕಳೆದುಕೊಳ್ಳುವ ಮೂಲಕ‌ ಹಿನ್ನಡೆ ಅನುಭವಿಸಿದೆ. ಇದೇ ಅವಧಿಯಲ್ಲಿ ೪೦೩ ವಾರ್ಡ್‌ ಗೆದ್ದಿದ್ದ ಜೆಡಿಎಸ್‌, ೨೮ ಸ್ಥಾನಗಳಲ್ಲಿ ಸೋತು ೩೭೫ಕ್ಕೆ ಕುಸಿದಿದೆ. ಹಿಂದಿನ ಚುನಾವಣೆಯಲ್ಲಿ ೭೧೫ ವಾರ್ಡ್‌ಗಳಲ್ಲಿ ಗೆದ್ದಿದ್ದ ಬಿಜೆಪಿಯು, ಈ ಬಾರಿ ಹೆಚ್ಚುವರಿಯಾಗಿ ೨೧೪ ಸ್ಥಾನ ಗೆದ್ದು ಒಟ್ಟಾರೆ ಬಲವನ್ನು ೯೨೯ಕ್ಕೆ ಹೆಚ್ಚಿಸಿಕೊಂಡಿದೆ. ೨೦೧೩ರಲ್ಲಿ ೨೨೫ ವಾರ್ಡ್‌ಗಳಲ್ಲಿ ಗೆದ್ದಿದ್ದ ಪಕ್ಷೇತರರು ಈ ಬಾರಿ ೩೭೬ ಸ್ಥಾನ ಗೆದ್ದು ಜೆಡಿಎಸ್‌ಗಿಂತಲೂ ಒಂದು ಸ್ಥಾನ ಹೆಚ್ಚುವರಿಯಾಗಿ ಪಡೆದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More