ಬೀದರ್ ಲೋಕಸಭಾ‌ ಟಿಕೆಟ್‌ಗೆ ಈಶ್ವರ್‌ ಖಂಡ್ರೆ-ವಿಜಯ್‌ ಸಿಂಗ್‌ ಮಧ್ಯೆ ಸ್ಪರ್ಧೆ?

ಬೀದರ್ ಲೋಕಸಭಾ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್‌ ತಯಾರಿ ಆರಂಭಿಸಿದೆ. ನಾಲ್ವರು ಆಕಾಂಕ್ಷಿಗಳಿದ್ದು, ಬಿಜೆಪಿಯ ಭಗವಂತ್‌ ಖೂಬಾ ವಿರುದ್ಧ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಲೆಕ್ಕಾಚಾರ ಆರಂಭಿಸಿದೆ. ಟಿಕೆಟ್‌ಗಾಗಿ ನೇರ ಸ್ಪರ್ಧೆ ಇರುವುದು ಈಶ್ವರ್‌ ಖಂಡ್ರೆ-ವಿಜಯ್‌ ಸಿಂಗ್‌ ನಡುವೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳು ಹಾಗೂ ಸಂಭಾವ್ಯರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೈದರಾಬಾದ್‌ ಕರ್ನಾಟಕದಲ್ಲಿ ಐದು ಲೋಕಸಭಾ ಕ್ಷೇತ್ರಗಳಿದ್ದು, ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಮೀಸಲು ಕ್ಷೇತ್ರಗಳಾಗಿವೆ. ಬೀದರ್‌ ಮತ್ತು ಕೊಪ್ಪಳ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ರಾಯಚೂರು ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಅದರಲ್ಲೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಬೀದರ್‌ ಮತ್ತು ಕೊಪ್ಪಳದಲ್ಲಿ ಟಿಕೆಟ್‌ ನೀಡಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂದು ವರಿಷ್ಠರಿಗೆ ಸ್ಥಳೀಯ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲಾ ಪಕ್ಷಗಳಲ್ಲೂ ಹಾಲಿ ಸಂಸದರಿಗೆ ಟಿಕೆಟ್ ‌ಬಹುತೇಕ ನಿಚ್ಚಳವಾಗಿದೆ. ಅಂತೆಯೇ, ಬೀದರ್‌ನಲ್ಲಿ ಬಿಜೆಪಿಯಿಂದ ಭಗವಂತ್‌ ಖೂಬಾ ಸ್ಪರ್ಧೆ ಖಾತ್ರಿಯಾಗಿದೆ. ಈ ನಡುವೆ, ಕಳೆದ ತಿಂಗಳು ಬೀದರ್‌ನಲ್ಲಿ ಲೋಕಸಭಾ ಚುನಾವಣಾ ಪೂರ್ವ ತಯಾರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಿದ್ದರು. ರಾಹುಲ್‌ ಅವರು ಉತ್ತರ ಪ್ರದೇಶದ ಅಮೇಥಿಯ ಜೊತೆಗೆ ಬೀದರ್‌ನಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಚಾಲ್ತಿಗೆ ಬಂದಿದ್ದನ್ನು ಇಲ್ಲಿ ನೆನೆಯಬಹುದು. ಈ ಮಧ್ಯೆ, ಎಐಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಪುತ್ರ‌ ವಿಜಯ್‌ ಸಿಂಗ್‌, ಆಳಂದ ಮಾಜಿ ಶಾಸಕ ಬಿ ಆರ್‌ ಪಾಟೀಲ್ ಹಾಗೂ ಅಶೋಕ್‌ ಖೇಣಿ ಅವರು ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಅನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ್‌ ಖಂಡ್ರೆ ಅವರ ಹೆಸರೂ ಪ್ರಮುಖವಾಗಿ ಕೇಳಿಬಂದಿದೆ.

ಬೀದರ್‌ ಲೋಕಸಭಾ ಕ್ಷೇತ್ರವು ಬೀದರ್‌, ಬೀದರ್‌ ದಕ್ಷಿಣ, ಭಾಲ್ಕಿ, ಔರಾದ್‌, ಬಸವಕಲ್ಯಾಣ, ಹುಮ್ನಾಬಾದ್ ಹಾಗೂ ಕಲಬುರಗಿ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬೀದರ್‌ ದಕ್ಷಿಣ, ಔರಾದ್ ಹಾಗೂ ಆಳಂದ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್‌ ಶಾಸಕರೇ ಇದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯು ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ಮಾತುಗಳನ್ನಾಡುತ್ತಿರುವುದರಿಂದ ಬೀದರ್‌ ದಕ್ಷಿಣದ ಶಾಸಕ, ಹಾಲಿ ಸಚಿವ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್‌ ಅವರು ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ.

ಬೇರೆ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚು. ತಂದೆಯವರು ಇದ್ದಾಗಿನಿಂದಲೂ ಕ್ಷೇತ್ರದ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ನನ್ನ ಶಕ್ತಿ, ಸಾಮರ್ಥ್ಯವನ್ನೂ ವರಿಷ್ಠರಿಗೆ ತಿಳಿಸಿದ್ದೇನೆ. ಒಟ್ಟಾಗಿ ಪಕ್ಷ ಗೆಲ್ಲಿಸಲು ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ಗೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ
ವಿಜಯ್‌ ಸಿಂಗ್‌, ಬೀದರ್‌ ಲೋಕಸಭಾ ಟಿಕೆಟ್‌ ಆಕಾಂಕ್ಷಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಶೋಕ್‌ ಖೇಣಿ ಅವರು ಬಂಡೆಪ್ಪ ಕಾಶೆಂಪುರ್‌ ವಿರುದ್ಧ ಸೋಲನುಭವಿಸಿದ್ದರು. ಆಳಂದ ಮಾಜಿ ಕಾಂಗ್ರೆಸ್‌ ಶಾಸಕರಾದ ಬಿ ಆರ್‌ ಪಾಟೀಲ್ ಅವರು ೬೦೦ಕ್ಕೂ ಕಡಿಮೆ ಮತಗಳಿಂದ ಬಿಜೆಪಿಯ ಸುಭಾಷ್‌ ಗುತ್ತೇದಾರ್‌ ವಿರುದ್ಧ ಪರಾಭವಗೊಂಡಿದ್ದಾರೆ. ವಿಜಯ ಸಿಂಗ್‌ ಅವರು ಬೀದರ್‌ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯರಾಗಿ ೨೦೧೫ರಲ್ಲಿ ಆಯ್ಕೆಯಾಗಿದ್ದು, ಅವರ ಅವಧಿಯು ಇನ್ನೂ ಮೂರು ವರ್ಷ ಬಾಕಿ ಇದೆ. ಈಶ್ವರ್‌ ಖಂಡ್ರೆ ಅವರು ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಈಶ್ವರ್‌ ಖಂಡ್ರೆ ಅವರು ವೀರಶೈವ-ಲಿಂಗಾಯತ ಸಮುದಾಯದ ನಾಯಕನಾಗಿ ಗುರುತಿಸಿಕೊಂಡಿದ್ದು, ಬಿಜೆಪಿಯ ಖೂಬಾ ವಿರುದ್ಧ ಅವರು ಪ್ರಬಲ ಸ್ಪರ್ಧಿಯಾಗಬಲ್ಲರು ಎನ್ನುವ ಮಾತುಗಳು ಪಕ್ಷದ ವಲಯದಲ್ಲಿದೆ.

ಇದನ್ನೂ ಓದಿ : ಹೊಂದಾಣಿಕೆ ಆಟದಲ್ಲಿ ಜೆಡಿಎಸ್‌ ಪ್ರಸ್ತಾವಕ್ಕೆ ಹೂಂಗುಟ್ಟಿ ತ್ಯಾಗಕ್ಕೆ ಸಿದ್ಧವಾಗಲಿದೆಯೇ ಕಾಂಗ್ರೆಸ್‌?

ಕ್ಷೇತ್ರ ಪುನರ್ ವಿಂಗಡಣೆಯ ನಂತರ ಬೀದರ್‌ ಲೋಕಸಭಾ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಮೊದಲ ಚುನಾವಣೆಯಲ್ಲಿ ಧರ್ಮಸಿಂಗ್‌ ಆಯ್ಕೆಯಾಗಿದ್ದರು. ಆದರೆ, ೨೦೧೪ರಲ್ಲಿ ಧರ್ಮಸಿಂಗ್‌ ಸೋಲನುಭವಿಸಿದ್ದರು. ತಂದೆಯ ಕ್ಷೇತ್ರದಲ್ಲಿ ರಾಜಕೀಯ ಬದುಕು ರೂಪಿಸಿಕೊಳ್ಳುವ ಉದ್ದೇಶದಿಂದ ವಿಜಯ್‌ ಸಿಂಗ್‌ ಅವರು ಜಿಲ್ಲೆಯಿಂದಲೇ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಈಗ ನೇರ ಚುನಾವಣೆಗೆ ಧುಮುಕುವ ಒಲವನ್ನು ಅವರು ಹೊಂದಿದ್ದಾರೆ. ಲಿಂಗಾಯತ ಸಮುದಾಯದ ಮತಗಳು ಹೆಚ್ಚಿರುವುದು ರಜಪೂತ ಸಮುದಾಯಕ್ಕೆ ಸೇರಿದ ವಿಜಯ್‌ ಸಿಂಗ್‌ ಅವರಿಗೆ ವಿರುದ್ಧ ಅಂಶ ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್‌ನ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಅದೃಷ್ಟ ಪರೀಕ್ಷೆಗೆ ಇಳಿಯಲು ವಿಜಯ್‌ ಸಿಂಗ್‌ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ವಿಧಾನ ಸಭಾ ಚುನಾವಣೆ ವೇಳೆ ತಮ್ಮ ಸಂಬಂಧಿ ಚಂದ್ರಾ ಸಿಂಗ್‌ ಅವರಿಗೆ ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ ಕೊಡಿಸಲು ವಿಜಯ್‌ ಸಿಂಗ್‌ ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಆಗಷ್ಟೇ ಕಾಂಗ್ರೆಸ್‌ ಸೇರಿದ್ದ ಉದ್ಯಮಿ ಅಶೋಕ್‌ ಖೇಣಿ ಬೆನ್ನಿಗೆ ಪಕ್ಷದ ಹಿರಿಯ ನಾಯಕರು ನಿಂತಿದ್ದರಿಂದ ವಿಜಯ್‌ ಸಿಂಗ್ ಆಸೆ ಕೈಗೂಡಲಿಲ್ಲ.

ತಮ್ಮ ಸ್ಪರ್ಧೆ ಕುರಿತು ‘ದಿ ಸ್ಟೇಟ್’‌ ಜೊತೆ ಮಾತನಾಡಿದ ಬಿ ಆರ್‌ ಪಾಟೀಲ್‌, “ಬೀದರ್‌ ಕ್ಷೇತ್ರದ ಸುತ್ತಲೂ ಮಹಾರಾಷ್ಟ್ರದ ಸೊಲ್ಲಾಪುರ, ಲಾತೂರು, ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿವೆ. ದಶಕಗಳ ನಂತರ ಬೀದರ್‌ ಸಾಮಾನ್ಯ ಕ್ಷೇತ್ರವಾಗಿರುವುದರಿಂದ ಲಿಂಗಾಯತ ಸಮುದಾಯದವರಿಗೆ ನೀಡಿದರೆ ಗೆಲುವು ನಿಚ್ಚಳ. ಈ ನೆಲೆಯಲ್ಲಿ ಲೋಕಸಭಾ ಟಿಕೆಟ್‌ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ” ಎನ್ನುತ್ತಾರೆ ಬಿ ಆರ್‌ ಪಾಟೀಲ್‌. ಆದರೆ, ಕಲಬುರಗಿ ರಾಜಕಾರಣದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಬಿ ಆರ್‌ ಪಾಟೀಲ್‌ ಅವರಿಗೆ ಬೀದರ್‌ ರಾಜಕೀಯದ ಮೇಲೆ ಹಿಡಿತವಿಲ್ಲ. ಇದು ಅವರಿಗೆ ನಕಾರಾತ್ಮಕ ಅಂಶ ಎನ್ನಲಾಗುತ್ತಿದೆ. ಇನ್ನು ಖೇಣಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವುದರಿಂದ ಅವರಿಗೆ ಕಾಂಗ್ರೆಸ್‌ ಮಣೆಹಾಕುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ, ಬೀದರ್‌ ಟಿಕೆಟ್‌ಗಾಗಿನ ನೇರ ಪೈಪೋಟಿ ಇರುವುದು ಈಶ್ವರ್ ಖಂಡ್ರೆ ಮತ್ತು ವಿಜಯ್‌ ಸಿಂಗ್‌ ಎದುರು ಎನ್ನುವ ಮಾತುಗಳಿವೆ. ಡಿಸೆಂಬರ್‌ ವೇಳಗೆ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್‌ ನಾಯಕರು ಹೇಳಿರುವುದರಿಂದ ಅಲ್ಲಿಯವರೆಗೆ ಕಾಯಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More