ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ವಿಸರ್ಜನೆ; ಕೆಸಿಆರ್‌ ರಣತಂತ್ರಗಳೇನು?

ನಿರೀಕ್ಷೆಯಂತೆ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿ, ಹೊಸ ಜನಾದೇಶ ಪಡೆಯಲು ಸಜ್ಜಾಗಿದ್ದಾರೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್. ಇನ್ನೂ ಆರು ತಿಂಗಳ ಅಧಿಕಾರ ಬಾಕಿ ಇದ್ದಾಗಲೇ ಚುನಾವಣಾ ರಣೋತ್ಸಾಹ ಪ್ರಕಟಿಸಿದ್ದರ ಹಕೀಕತ್ತುಗಳು ಏನಿರಬಹುದು ಎನ್ನುವುದು ಕುತೂಹಲಕಾರಿ

ನಿರೀಕ್ಷೆಯಂತೆ ಅವಧಿಗೆ ಮೊದಲೇ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿರುವ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌, ಈ ನಿರ್ಧಾರದ ಬೆನ್ನಿಗೇ ಚುನಾವಣಾ ರಣೋತ್ಸಾಹ ಪ್ರಕಟಿಸಿದ್ದಾರೆ. ಗುರುವಾರ (ಸೆ.೬ ) ಮಧ್ಯಾಹ್ನ ಹೈದರಾಬಾದ್‌ನ ಪ್ರಗತಿ ಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜಿಸುವ ಮತ್ತು ೬ ತಿಂಗಳು ಮೊದಲೇ ಹೊಸ ಜನಾದೇಶ ಪಡೆಯುವ ನಿರ್ಣಯ ಕೈಗೊಂಡ ಕೆಸಿಆರ್‌, ಬಳಿಕ ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರನ್ನು ಭೇಟಿ ಮಾಡಿ ಸಂಪುಟದ ತೀರ್ಮಾನ ತಿಳಿಸಿದರು. ರಾಜ್ಯಪಾಲರು ಈ ಪ್ರಸ್ತಾಪಕ್ಕೆ ಒಪ್ಪಿಗೆಯ ಮುದ್ರೆ ಒತ್ತಿದ್ದೂ ಆಯಿತು. ಕೆಸಿಆರ್‌‌ ಅವರ ಇತ್ತೀಚಿನ ಅನೇಕ ನಿರ್ಧಾರ, ನಡೆಗಳು ಅವರು ಅವಧಿಗೆ ಮೊದಲೇ ಚುನಾವಣೆಗೆ ಹೋಗುತ್ತಾರೆನ್ನುವ ಅನುಮಾನಗಳನ್ನು ಮೂಡಿಸಿದ್ದವು. ಕಳೆದ ಭಾನುವಾರ (ಸೆ.೨) ನಡೆದ ಬೃಹತ್ ರ್ಯಾಲಿಯಲ್ಲಿ ಲಕ್ಷಾಂತರ ಜನರ ಎದುರೇ ಅವರು ವಿಧಾನಸಭೆ ವಿಸರ್ಜನೆಯ ಘೋಷಣೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಸಂಖ್ಯಾಶಾಸ್ತ್ರ ನಂಬುವ ಕೆಸಿಆರ್‌ ಅವರಿಗೆ‌ ೬ ಅದೃಷ್ಟ ಸಂಖ್ಯೆಯಂತೆ; ಅದಕ್ಕೇ ಸೆ.೬ರಂದು ಮಹತ್ವದ ನಿರ್ಣಯ ಪ್ರಕಟಿಸಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದಿಂದ ವಿಭಜನೆಗೊಂಡ ಬಳಿಕ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಅವರು, ೨೦೧೪ರ ಜೂನ್‌ ೧ರಂದು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ೨೦೧೯ರ ಜೂನ್‌ವರೆಗೆ ಈ ವಿಧಾನಸಭೆಯ ಅವಧಿ ಇತ್ತಾದರೂ, ಒಂಬತ್ತು ತಿಂಗಳು ಮೊದಲೇ ವಿಸರ್ಜನೆಗೊಂಡಿದೆ. ಡಿಸೆಂಬರ್‌ನಲ್ಲಿ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆ ಜೊತೆಗೆ ತೆಲಂಗಾಣಕ್ಕೂ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಅಲ್ಲಿವರೆಗೆ ಸಾಂವಿಧಾನಿಕ ಸಂಪ್ರದಾಯದಂತೆ ಹಂಗಾಮಿ ಸಿಎಂ ಆಗಿ ಕೆಸಿಆರ್ ಮುಂದುವರಿಯುತ್ತಾರೆ.

ಸಂಪುಟ ಸಭೆ, ರಾಜ್ಯಪಾಲರ ಭೇಟಿ ಮುಂತಾದ ಪ್ರಕ್ರಿಯೆಗಳ ಬಳಿಕ ಸುದ್ದಿಗಾರರನ್ನು ಎದುರುಗೊಂಡ ೬೪ರ ಹರೆಯದ ಕಲ್ವಕುಂಟ್ಲ ಚಂದ್ರಶೇಖರ ರಾವ್‌, ಮುಂದಿನ ಚುನಾವಣೆಯಲ್ಲಿ ಪಕ್ಷ ಕಣಕ್ಕಿಳಿಸುವ ಹುರಿಯಾಳುಗಳ ಪಟ್ಟಿಯನ್ನೂ ಜೊತೆಯಲ್ಲಿ ತಂದಿದ್ದರು. ೧೦೫ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಅವರು, “ಇಬ್ಬರು ಹಾಲಿ ಶಾಸಕರಿಗಷ್ಟೇ ಟಿಕೆಟ್ ನಿರಾಕರಿಸಲಾಗಿದೆ. ಉಳಿದ ೧೪ ಅಭ್ಯರ್ಥಿಗಳನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ,’’ ಎಂದು ಹೇಳಿ ಅಚ್ಚರಿ ಮೂಡಿಸಿದರು. “ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಖಂಡಿತ ಆದಷ್ಟು ಬೇಗ ನಾವು ಮರಳಿ ಬರುತ್ತೇವೆ. ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ, ಶೀಘ್ರ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೇನೆ. ನವೆಂಬರ್‌ಗೆ ಚುನಾವಣೆ ನಡೆಯಬಹುದು,’’ ಎಂದೂ ಹೇಳಿದರು. “೨೦೧೪ಕ್ಕೆ ಮೊದಲು ರಾಜ್ಯ ಬಾಂಬ್‌ ಸ್ಫೋಟ, ಕೋಮು ಗಲಭೆ, ವಿದ್ಯುತ್ ಸಮಸ್ಯೆ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಈಗ ಅವೆಲ್ಲವುಗಳಿಂದಲೂ ತೆಲಂಗಾಣ ಮುಕ್ತವಾಗಿದೆ. ನಿಶ್ಚಿತವಾಗಿ ೧೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ,’’ ಎನ್ನುವುದು ಅವರ ದೃಢ ವಿಶ್ವಾಸ.

ಹಾಗೆ ನೋಡಿದರೆ, ೧೧೯ ಸದಸ್ಯ ಬಲದ ವಿಧಾನಸಭೆಯಲ್ಲಿ ಬರೊಬ್ಬರಿ ೯೦ ಶಾಸಕರನ್ನು, ಲೋಕಸಭೆಯಲ್ಲಿ ೧೧ ಸಂಸದರನ್ನು ಹೊಂದಿದ್ದ ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಪಕ್ಷಕ್ಕೆ ಮತ್ತು ಶಾಸಕಾಂಗ ಪಕ್ಷದ ನಾಯಕ ಕೆಸಿಆರ್‌ಗೆ ರಾಜಕೀಯವಾಗಿ ಯಾವುದೇ ಬಾಧಕಗಳು, ಸವಾಲುಗಳು ಸದ್ಯದ ಮಟ್ಟಿಗೆ ಇರಲೇ ಇಲ್ಲ. ೧೩ ಶಾಸಕ ಬಲವನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವೇ ಇಲ್ಲಿ ಎರಡನೇ ಅತಿದೊಡ್ಡ ಪಕ್ಷ. ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ-೭, ಬಿಜೆಪಿ-೫, ಟಿಡಿಪಿ-೩, ಸಿಪಿಐಎಂ-೧ ಶಾಸಕ ಸ್ಥಾನವನ್ನು ಹೊಂದಿದ್ದವು. ಅಂದರೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ಕೂಡ ಬಲವಾಗಿರಲಿಲ್ಲ. ಮಾತ್ರವಲ್ಲ, ೮೫ ಸಾವಿರ ಕೋಟಿ ರು. ವೆಚ್ಚದ ನೀರಾವರಿ ಯೋಜನೆ, ೩೮ ಲಕ್ಷ ರೈತರ ಸಾಲ ಮನ್ನಾ, ನೂರಾರು ಕೆರೆಗಳ ಪುನರುಜ್ಜೀವನ, ರೈತರಿಗೆ ೨೪ ತಾಸು ತಡೆರಹಿತ ಗುಣಾತ್ಮಕ ಉಚಿತ ವಿದ್ಯುತ್ ಪೂರೈಕೆ ಮತ್ತು ಈಚೆಗೆ ರೈತರ ಬೆಂಬಲಕ್ಕಾಗಿ ಘೋಷಿಸಿದ ರೈತಬಂಧು ಸಹಿತ ಅನೇಕ ಕಾರ್ಯಕ್ರಮಗಳು ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದವು. ಕಾರ್ಮಿಕರು ಮತ್ತು ಸರ್ಕಾರಿ ನೌಕರರಿಗೆ ಅನೇಕ ಕೊಡುಗೆಗಳನ್ನು ಘೋಷಿಸಿದ್ದರು.

ಯುವ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿ, ೧೯೮೩ರಲ್ಲಿ ತೆಲಗು ದೇಶಂ ಪಕ್ಷ ಸೇರಿ ಎನ್‌ಟಿಆರ್‌ ಮತ್ತು ಚಂದ್ರಬಾಬು ನಾಯ್ಡು ಸಂಪುಟಗಳಲ್ಲಿ ಸಚಿವರಾಗಿದ್ದ ಕೆಸಿಆರ್‌, ೨೦೦೧ರಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಸ್ಥಾಪಿಸಿ, ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿ, ಯಶಸ್ಸು ಪಡೆದವರು. ಈ ಹೋರಾಟದ ಅಲೆಯಲ್ಲೇ ಮುಖ್ಯಮಂತ್ರಿಯಾಗಿ ಹೊಸ ರಾಜ್ಯದ ಅಧಿಕಾರ ಸೂತ್ರ ಹಿಡಿದಿದ್ದ ಅವರ ಜನಪ್ರಿಯತೆಯ ಗ್ರಾಫ್‌ ಈಗಲೂ ಮೇಲ್ತುದಿಯಲ್ಲೇ ಇದೆ. ಕಾಂಗ್ರೆಸ್, ಬಿಜೆಪಿ, ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್ ಸಹಿತ ಯಾವುದೇ ಪಕ್ಷ ಮತ್ತು ಅವುಗಳ ರಾಜ್ಯ ಮಟ್ಟದ ನಾಯಕರು ಕೆಸಿಆರ್‌ ಮತ್ತು ಟಿಆರ್‌ಎಸ್‌ ಪಕ್ಷಕ್ಕೆ ಸವಾಲೊಡ್ಡುವಂಥ ರಾಜಕೀಯ ಶಕ್ತಿಯನ್ನು ಗಳಿಸಿಕೊಂಡಿಲ್ಲ. ಹಾಗಿದ್ದೂ, ಒಂಬತ್ತು ತಿಂಗಳ ಅಧಿಕಾರ ಬಾಕಿ ಇದ್ದಾಗಲೇ ಯಾಕೆ ಇಷ್ಟೊಂದು ಅವಸರದಲ್ಲಿ ವಿಧಾನಸಭೆ ವಿಸರ್ಜಿಸಿದರು ಎನ್ನುವ ಕುತೂಹಲ ಸಹಜ. ಮಾತ್ರವಲ್ಲ, 'ಒಂದು ದೇಶ- ಒಂದು ಚುನಾವಣೆ’ ಎನ್ನುವ ಬಿಜೆಪಿ ಆಶಯವನ್ನು ಖರ್ಚುವೆಚ್ಚದ ಕಾರಣಕ್ಕೆ ಬಹಿರಂಗವಾಗಿ ಬೆಂಬಲಿಸಿದ್ದ ಕೆಸಿಆರ್, ಹೊಸ ರಾಜ್ಯದ ಮೇಲೆ ಅನಿರೀಕ್ಷಿತ ಚುನಾವಣೆಯ ಹೊರೆ ಹೇರಿದ್ದು ತರವೇ ಎನ್ನುವ ಪ್ರಶ್ನೆಯೂ ಮೂಡಿದೆ.

ಅದೇನಿದ್ದರೂ, ಕೆಸಿಆರ್ ನಿರ್ಣಯದ ಹಿಂದೆ ಅವರದ್ದೇ ರಾಜಕೀಯ ತಂತ್ರಗಾರಿಕೆ ಇರುವುದು ಎದ್ದುಕಾಣುತ್ತದೆ. “ತುಂಬಾ ಎಚ್ಚರಿಕೆಯ, ಲೆಕ್ಕಾಚಾರದ ನಡೆ ಇದು,’’ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಕೆಸಿಆರ್ ನಿರ್ಧಾರಕ್ಕೆ ಕಾರಣವಾದ ಕೆಲವು ಅಂಶಗಳು ಮತ್ತು ರಾಜಕೀಯ‌ ತಂತ್ರಗಳನ್ನು ಹೀಗೆ ಸಂಕಲಿಸಬಹುದು:

  1. ಅವಧಿಗೆ ಮುನ್ನ ಚುನಾವಣೆ ಎದುರಿಸುವ ಮೂಲಕ ಈಗಿರುವ ಜನಪ್ರಿಯತೆಯನ್ನು ಮುಂದಿನ ೫ ವರ್ಷಕ್ಕೆ ನಗದು ಮಾಡಿಕೊಳ್ಳುವುದು. ಅವಧಿ ಮುಗಿಯುವವರೆಗೆ ಕಾಯ್ದರೆ ಜನಾಭಿಪ್ರಾಯ ಬದಲಾಗಬಹುದು ಅಥವಾ ಆಡಳಿತ ವಿರೋಧಿ ಅಲೆಗೆ ಕಾರಣವಾಗುವಂಥ ವಿವಾದಾತ್ಮಕ ವಿದ್ಯಮಾನ ಘಟಿಸಬಹುದೆನ್ನುವ ಮುನ್ನೆಚ್ಚರಿಕೆ ಈ ನಿರ್ಧಾರದ ಹಿಂದಿದೆ.
  2. ಮುಂದಿನ ಜೂನ್‌ಗೆ ಅವಧಿ ಮುಗಿಯುತ್ತಿದ್ದುದರಿಂದ, ಲೋಕಸಭೆಯ ಜೊತೆಗೇ ಚುನಾವಣೆಯನ್ನು ಎದುರಿಸಬೇಕಾಗುತ್ತಿತ್ತು. ಹಾಗಾದರೆ, ತಮ್ಮ ಮತ್ತು ಸರ್ಕಾರದ ವರ್ಚಸ್ಸಿಗಿಂತ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹವಾ ಕೆಲಸ ಮಾಡೀತು ಎನ್ನುವುದು ಅವರ ಇನ್ನೊಂದು ಆತಂಕ. ಈಗಲೇ ರಾಜ್ಯವನ್ನು ಚುನಾವಣೆಗೆ ಒಡ್ಡಿ ಗೆದ್ದರೆ, ಲೋಕಸಭಾ ಚುನಾವಣೆಯಲ್ಲಿಯೂ ಪ್ರಕ್ಷ ಪ್ರಾಬಲ್ಯ ಮೆರೆಯಬಹುದು ಎನ್ನುವುದು ಇನ್ನೊಂದು ಲೆಕ್ಕಾಚಾರ.
  3. ಈಗಲೇ ವಿಧಾನಸಭೆ ವಿಸರ್ಜಿಸಿದರೆ ಬರುವ ಡಿಸೆಂಬರ್‌ನಲ್ಲಿ ನಡೆಯುವ ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಚತ್ತೀಸ್‌ಗಢ ರಾಜ್ಯಗಳ ಚುನಾವಣೆ ಜೊತೆಗೇ ಚುನಾವಣೆ ಎದುರಿಸಿ, ಸುಲಭವಾಗಿ ಗೆಲ್ಲಬಹುದು. ಇದರಿಂದ, ಈ ಎಲ್ಲ ರಾಜ್ಯಗಳ ಚುನಾವಣೆಯ ಫಲಿತಾಂಶ ತೆಲಂಗಾಣ ರಾಜಕೀಯದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳಿಂದಲೂ ಬಚಾವಾಗಬಹುದು.
  4. ಟಿಆರ್‌ಎಸ್‌ಗೆ ಕಾಂಗ್ರೆಸ್‌ ಪಕ್ಷವೇ ಪ್ರಮುಖ ಎದುರಾಳಿ. ಆದ್ದರಿಂದಲೇ ಕಾಂಗ್ರೆಸ್ ಮಿತ್ರಕೂಟದಿಂದ ಕೆಸಿಆರ್‌ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಕೂಡ ಟಿಆರ್‌ಎಸ್‌‌ ವರ್ಚಸ್ಸು ಕುಗ್ಗಿಸಲು ಪ್ರಯತ್ನ ಮಾಡುತ್ತಲೇ ಇದೆ. ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್, ಟಿಡಿಪಿ ಮುಂತಾದ ಪಕ್ಷಗಳು ಒಂದು ರಂಗದಡಿ ಎದುರಾಳಿಗಳಾದರೆ ತೆಲಂಗಾಣದಲ್ಲಿಯೂ ಸವಾಲು ಹೆಚ್ಚಬಹುದು. ಪ್ರತ್ಯೇಕ ರಾಜ್ಯಕ್ಕೆ ಅಂಕಿತ ಬೀಳಲು ಕಾರಣವಾಗಿದ್ದು ಕಾಂಗ್ರೆಸ್ ಎನ್ನುವ ಸಂಗತಿಯನ್ನು ಮುನ್ನೆಲೆಗೆ ತಂದಲ್ಲಿ ಅದು ಒಂದಷ್ಟು ಮತ ವಿಭಜನೆಗೆ ಕಾರಣವಾಗಬಹುದು. ಹಾಗೆಂದೇ, ಯಾವುದೇ ಮಿತ್ರಕೂಟ ಸ್ಪಷ್ಟ ರೂಪ ಪಡೆಯುವ ಮುನ್ನ ತೆಲಂಗಾಣದಲ್ಲಿ ಹೊಸ ಜನಾದೇಶ ಪಡೆಯಲು ಕೆಸಿಆರ್‌ ನಿರ್ಧರಿಸಿದಂತಿದೆ.

ಇಷ್ಟು ಮಾತ್ರವಲ್ಲ, ತೆಲಂಗಾಣದ ಮೇಲಿನ ರಾಜಕೀಯ ಹಿಡಿತವನ್ನು ಕಾಯ್ದುಕೊಳ್ಳುವ ಜೊತೆಗೆ ರಾಷ್ಟ್ರ ರಾಜಕಾರಣದಲ್ಲಿಯೂ ಪ್ರಾದೇಶಿಕ ಪಕ್ಷವಾಗಿ ತಮ್ಮ ವರ್ಚಸ್ಸು, ಪ್ರತಿಷ್ಠೆಯನ್ನು ಕಾಪಿಟ್ಟುಕೊಳ್ಳಲು ಕೆಸಿಆರ್‌ ಬಯಸಿದ್ದಾರೆ. ಆದ್ದರಿಂದಲೇ ಚುನಾವಣಾಪೂರ್ವ ರಾಜಕೀಯ ಮೈತ್ರಿಗಳ ಕುರಿತು ಅವರು ಈವರೆಗೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. 'ಒಂದು ದೇಶ- ಒಂದು ಚುನಾವಣೆ' ಎನ್ನುವ ಮೋದಿ ಸರ್ಕಾರದ ಆಶಯವನ್ನು ಬೆಂಬಲಿಸಿದ್ದು, ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಬಿಜೆಪಿ ಪರ ಮತ ಚಲಾಯಿಸಿದ್ದು, ರಾಜ್ಯಸಭೆಯ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿಗೆ ಬೆಂಬಲ ಪ್ರಕಟಿಸಿದ್ದು ಮತ್ತು ಈಚೆಗೆ ಎರಡು ಬಾರಿ ಮೋದಿಯನ್ನು ಭೇಟಿ ಮಾಡಿದ್ದು ಇವೆಲ್ಲ, “ಕೆಸಿಆರ್ ಬಿಜೆಪಿ ಜೊತೆ ಸಖ್ಯ ಸಾಧಿಸುತ್ತಿದ್ದಾರೆ,’’ ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದೆ. ಆದರೆ, “ಎನ್‌ಡಿಎ ಜೊತೆ ಕೂಡ ಚುನಾವಣಾ ಪೂರ್ವ ಸಂಬಂಧ ಸಾಧಿಸಲು ಅವರಿಗೆ ಇಷ್ಟವಿಲ್ಲ. ಚುನಾವಣೆ ನಂತರ ಅವಶ್ಯ ಎನಿಸಿದರೆ ಮೈತ್ರಿ ಭಾಗವಾಗಿ, ಪ್ರಾದೇಶಿಕವಾಗಿ ತನ್ನ ತನ ಮತ್ತು ಗಟ್ಟಿತನವನ್ನು ಕಾಯ್ದುಕೊಳ್ಳುವ ಇರಾದೆ ಹೊಂದಿದ್ದಾರೆ,’’ ಎನ್ನಲಾಗಿದೆ.

ಈ ಮಧ್ಯೆ ,ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭ ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಪದಗ್ರಹಣಕ್ಕೆ ಸಜ್ಜಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಶುಭ ಹಾರೈಸಿ ತೆರಳಿದ್ದರು. ಆದರೆ, ಅದೇ ಸಂದರ್ಭ ಎಚ್ಡಿಕೆ ಪ್ರಮಾಣವಚನ ವೇದಿಕೆಯಲ್ಲಿ ನಡೆದ 'ಗ್ರೂಪ್‌’ ಫೋಟೋ (ಸೋನಿಯಾ, ರಾಹುಲ್,‌ ಮಾಯಾ, ಮಮತಾ, ನಾಯ್ಡು ಮುಂತಾದವರ ಜೊತೆ) ಸೆಷನ್‌ನಲ್ಲಿ ಕಾಣಿಸಿಕೊಳ್ಳುವ ಆಸಕ್ತಿಯನ್ನು ಅವರು ತೋರಿರಲಿಲ್ಲ. ಗೌಡರ ಜೊತೆ ಸಖ್ಯ ಸಾಧಿಸುವ ಮನಸ್ಸಿದ್ದರೂ, ಯುಪಿಎ ಕೂಟದ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಮತ್ತು ಇತರ ಕೆಲವರ ಜೊತೆ ದೂರವನ್ನು ಕಾಯ್ದುಕೊಂಡದ್ದು ಎದ್ದುಕಂಡಿತ್ತು.

ಕಾಂಗ್ರೆಸ್ ಕೂಡ ತೆಲಂಗಾಣದಲ್ಲಿ ಕೆಸಿಆರ್ ಅಬ್ಬರಕ್ಕೆ ತೊಡರುಗಾಲು‌ ಹಾಕುವ ಸರ್ವ ಪ್ರಯತ್ನ ಮಾಡುತ್ತಲೇ ಇದೆ. ಅವಧಿಗೆ ಮುನ್ನ ಚುನಾವಣೆಗೆ ಹೋಗುವ ನಿರ್ಧಾರ ತಳೆದಿರುವ ಈ ಸಂದರ್ಭ ಕೂಡ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಿದರಲ್ಲ, ಅಷ್ಟೊಂದು ಹಣ ಎಲ್ಲಿಂದ ಬಂತು?’’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡರು, “ನಕಲಿ ಮತದಾರರ ಪಟ್ಟಿಯನ್ನು ಟಿಆರ್‌ಎಸ್‌ ಸಿದ್ದಪಡಿಸಿಕೊಂಡಿದೆ. ಹಾಗಾಗಿ, ಬೇರೆ ರಾಜ್ಯಗಳ ಜೊತೆ ತೆಲಂಗಾಣ ಚುನಾವಣೆ ನಡೆಸಬಾರದು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ. ನಮ್ಮ ಮನವಿಯನ್ನು ಆಯೋಗ ಪುರಸ್ಕರಿಸದಿದ್ದರೆ ನ್ಯಾಯಾಲಯಕ್ಕೆ ಹೋಗುತ್ತೇವೆ,’’ ಎಂದು ಎಚ್ಚರಿಸಿದ್ದಾರೆ. ಈ ಯಾವ ಆರೋಪ, ಪ್ರತಿರೋಧಗಳನ್ನು ಲೆಕ್ಕಿಸದೆ ವಿಧಾನಸಭೆ ವಿಸರ್ಜಿಸಿರುವ ಕೆಸಿಆರ್ ಕಾಂಗ್ರೆಸ್ ನಾಯಕರಿಗೆ ನೀಡಿರುವ ಪಂಥಾಹ್ವಾನ ಹೀಗಿದೆ: “ಕದನ ಕಣಕ್ಕೆ ಬನ್ನಿ. ಚುನಾವಣೆಯನ್ನು ಎದುರಿಸಿ. ಜನ ತಕ್ಕ ಉತ್ತರ ನೀಡುತ್ತಾರೆ.’’ ಸದ್ಯದ ಮಟ್ಟಿಗೆ ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಅದಕ್ಕೆ ಕಾರಣವಾದ ಅಂಶಗಳು ಅವಧಿಪೂರ್ವ ಚುನಾವಣೆಗೆ ಸಜ್ಜುಗೊಳಿಸಿವೆ ಕೂಡ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More