ರಾಜ್ಯ ಸರ್ಕಾರವನ್ನೇ ಅಲುಗಾಡಿಸಿದ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ರಾಜಕಾರಣ

ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸಹೋದರ ಸತೀಶ್ ಜಾರಕಿಹೊಳಿ ಬಣಕ್ಕೆ ಸೋಲುಂಟಾದಲ್ಲಿ ಉಗ್ರ ನಿರ್ಧಾರ ಕೈಗೊಳ್ಳುತ್ತೇವೆ, ಪರಿಣಾಮಕ್ಕೆ ನಾವು ಹೊಣೆಯಲ್ಲ ಎಂದೂ ರಮೇಶ್ ಮಾಧ್ಯಮಗಳ ಎದುರು ಹೇಳಿದ್ದಾರೆ. ಹೀಗಾಗಿ ಬೆಳಗಾವಿ ರಾಜಕೀಯ ರಾಜ್ಯ ಸರ್ಕಾರವನ್ನು ಅದುರಿಸತೊಡಗಿದೆ

ಬೆಳಗಾವಿಯ ಸ್ಥಳೀಯ ಪಿಎಲ್‌ ಡಿ ಬ್ಯಾಂಕ್ ಮುಖ್ಯಸ್ಥರ ಚುನಾವಣಾ ವಿಷಯ ಇದೀಗ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಾಗಿ ಬದಲಾಗಿದೆ. ಕೇವಲ ಶಾಸಕರ ಮಟ್ಟದ ಒಂದು ಸಣ್ಣ ವಿದ್ಯಮಾನ, ರಾಜ್ಯ ಕಾಂಗ್ರೆಸ್ಸಿನ ದೊಡ್ಡ ಬಿಕ್ಕಟ್ಟಾಗಿ ಬದಲಾಗಿದ್ದು, ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೇ ಪೆಟ್ಟು ಕೊಡಲಿದೆ ಎಂಬ ಮಾತುಗಳೂ ಕೇಳಿಬರತೊಡಗಿವೆ.

ಹೆಚ್ಚೆಂದರೆ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿರಬೇಕಿದ್ದ ಪಿಎಲ್ ಡಿ ಬ್ಯಾಂಕಿನ ಚುನಾವಣೆ ರಾಜ್ಯ ರಾಜಕಾರಣವನ್ನೇ ಅಲುಗಾಡಿಸುವ ಮಟ್ಟಿಗೆ ಬೆಳೆಯಲು ಕಾರಣ, ಅಲ್ಲಿನ ಜಾರಕಿಹೊಳಿ ಕುಟುಂಬ ಮತ್ತು ಇಡೀ ಜಿಲ್ಲೆಯಲ್ಲಿ ಕಳೆದ ಎರಡು ದಶಕದಿಂದ ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಆ ಕುಟುಂಬದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಎಂಬ ಪ್ರಭಾವಿ ಕಾಂಗ್ರೆಸ್ ನಾಯಕಿ ಈಗ ಸೆಡ್ಡು ಹೊಡೆದಿರುವುದು. ಸಕ್ಕರೆ ಕಾರ್ಖಾನೆ ರಾಜಕೀಯವೇ ಎಲ್ಲಾ ರಾಜಕಾರಣವನ್ನು ನಿಯಂತ್ರಿಸುವ ಮತ್ತು ನಿರ್ಧರಿಸುವ ಬೆಳಗಾವಿಯಲ್ಲಿ ಸಕ್ಕರೆ ಲಾಬಿಯೇ ಜಾರಕಿಹೊಳಿ ಕುಟುಂಬದ ಬಲ. ಈಗ ಅದೇ ಸಕ್ಕರೆ ಲಾಬಿಯ ಹಣಕಾಸು ಆಧಾರವಾಗಿರುವ ಪಿಎಲ್‌ಡಿ ಬ್ಯಾಂಕಿನ ಆಡಳಿತವನ್ನು ತಮ್ಮ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೊಳಿ ಕುಟುಂಬದ ಬಲದ ಮೂಲಕ್ಕೇ ಪೆಟ್ಟು ಕೊಡುವ ಸವಾಲು ಹಾಕಿದ್ದಾರೆ.

ಸಹಜವಾಗೇ ಈ ಸವಾಲು ಜಾರಕಿಹೊಳಿ ಸಹೋದರರನ್ನು ಕೆರಳಿಸಿದೆ. ಅದರಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ದಶಕದ ಹಿಂದೆ ರಾಜಕೀಯ ಆಸರೆ ನೀಡಿದ್ದು ತಾವೇ ಎನ್ನುವ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ, ಅದೇ ನಾಯಕಿ ಈಗ ತಮ್ಮ ವಿರುದ್ಧವೇ ರಾಜಕಾರಣದ ಸವಾಲು ಒಡ್ಡಿದ್ದಾರೆ ಎಂಬ ಕಾರಣಕ್ಕೆ ವ್ಯಗ್ರರಾಗಿದ್ದಾರೆ.

ಅಷ್ಟಕ್ಕೂ ಲಕ್ಷ್ಮೀ ಚಂದ್ರಶೇಖರ್ ಅವರು ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯ ಸವಾಲು ಎಸೆಯಲು ಕಾರಣ, ಅವರಿಗೆ ಬೆಂಗಳೂರು ಮಟ್ಟದಲ್ಲಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಇತರ ನಾಯಕ ಬೆಂಬಲ ಎಂಬ ಮಾತುಗಳೂ ಇವೆ. ಈ ಹಿನ್ನೆಲೆಯಲ್ಲೇ ಈಗಾಗಲೇ ರಮೇಶ್ ಜಾರಕಿಹೊಳಿ ಅವರು ಡಿ ಕೆ ಶಿವಕುಮಾರ್ ವಿರುದ್ಧ ಬಹಿರಂಗ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಲ್ಲದೆ, ನೇರ ಎಚ್ಚರಿಕೆಯನ್ನೂ ನೀಡಿದ್ದಾರೆ. ಕಳೆದ ವಾರ ಎಐಸಿಸಿ ಕರ್ನಾಟಕದ ಉಸ್ತುವಾರಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿಯೇ ಈ ವಿಷಯವಾಗಿ ರಮೇಶ್ ಮತ್ತು ಡಿ ಕೆ ಶಿವಕುಮಾರ್ ನಡುವೆ ವಾಗ್ವಾದ ನಡೆದಿತ್ತು. ಇದೀಗ ಗುರುವಾರ ಕೂಡ, ಪತ್ರಿಕಾಗೋಷ್ಠಿಯಲ್ಲಿ “ಬೆಳಗಾವಿ ರಾಜಕಾರಣದ ವಿಷಯದಲ್ಲಿ ಡಿ ಕೆ ಶಿವಕುಮಾರ್ ತಲೆಹಾಕಿದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಡೆಯಲಿರುವ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಬಣಕ್ಕೆ ಸೋಲುಂಟಾದಲ್ಲಿ ನಾವು ಉಗ್ರ ನಿರ್ಧಾರ ಕೈಗೊಳ್ಳುತ್ತೇವೆ. ಮುಂದಿನ ಪರಿಣಾಮಕ್ಕೆ ನಾವು ಹೊಣೆಯಲ್ಲ ಎಂದೂ ರಮೇಶ್ ಮಾಧ್ಯಮಗಳ ಎದುರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್ ಅವರು, “ಯಾರ ವಿಷಯದಲ್ಲೂ ನಾನು ತಲೆ ಹಾಕಿಲ್ಲ. ಪಕ್ಷ ಮತ್ತು ಹೈಕಮಾಂಡ್ ವಹಿಸಿದ ಜವಾಬ್ದಾರಿ ನಿರ್ವಹಿಸಿದ್ದೇನೆ ಅಷ್ಟೇ. ಸಂದರ್ಭ ಬಂದರೆ, ನಾನೇನು ಎಂಬುದನ್ನು ತೋರಿಸುತ್ತೇನೆ,” ಎಂಬರ್ಥದ ಮಾತನಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಕಳೆದ ಮೂರು ದಿನಗಳಿಂದ, ಈ ವಿಷಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಶುಕ್ರವಾರದ ಚುನಾವಣೆಯ ಬಳಿಕ ಜಾರಕಿಹೊಳಿಯವರ ಆರೋಪಗಳಿಗೆ ಪ್ರತ್ಯುತ್ತರ ನೀಡುವುದಾಗಿ ಹೇಳಿದ್ದಾರೆ.

ಈ ನಡುವೆ, ೧೪ ನಿರ್ದೇಶಕರ ಸ್ಥಾನವನ್ನು ಹೊಂದಿರುವ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರ ಹಿಡಿಯಲು ಎಂಟು ಮಂದಿಯ ಬೆಂಬಲ ಬೇಕಿದೆ. ಸದ್ಯ ಲಕ್ಷ್ಮೀ ಅವರ ಬಣದಲ್ಲಿ ೯ ಮಂದಿ ಇದ್ದು, ಜಾರಕಿಹೊಳಿ ಬಣದಲ್ಲಿ ಐವರು ನಿರ್ದೇಶಕರು ಇದ್ದಾರೆ. ಕಳೆದ ಆಗಸ್ಟ್ ೨೮ರಂದೇ ನಡೆಯಬೇಕಿದ್ದ ಚುನಾವಣೆ, ಕಡೇ ಗಳಿಗೆಯಲ್ಲಿ ನಿರ್ದೇಶಕರೊಬ್ಬರ ಅಪಹರಣದ ಆರೋಪದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆಗ ಚುನಾವಣೆ ಮುಂದೂಡಿದ ತಹಶೀಲ್ದಾರರ ಕ್ರಮ ವಿರೋಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಬಣದ ನಿರ್ದೇಶಕರೊಂದಿಗೆ ತಾಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಿದ್ದರು. ಈ ನಡುವೆ ಪ್ರಕರಣ ಹೈಕೋರ್ಟ್‌ ಧಾರವಾಡ ಪೀಠದ ಮೆಟ್ಟಿಲೇರಿತ್ತು. ತಹಶೀಲ್ದಾರರ ಆದೇಶ ರದ್ದುಪಡಿಸಿದ ಪೀಠ, ಸೆ.೭ರ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು.

ತಮ್ಮ ಬಣದ ಮೂವರನ್ನು ಹಣದ ಆಮಿಷವೊಡ್ಡಿ ಲಕ್ಷ್ಮೀ ಅವರು ತಮ್ಮ ಬಣಕ್ಕೆ ಸೆಳೆದುಕೊಂಡಿದ್ದಾರೆ ಎಂದು ಜಾರಕಿಹೊಳಿ ಸಹೋದರರು ಆರೋಪಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಲಕ್ಷ್ಮೀ ಅವರ ಕೈಮೇಲಾಗಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಆ ಹಿನ್ನೆಲೆಯಲ್ಲಿ ಒಂದು ವೇಳೆ ಪಿಎಲ್‌ಡಿ ಬ್ಯಾಂಕ್ ಆಡಳಿತ ತಮ್ಮ ಕೈತಪ್ಪಿದರೆ, ತಾವು ತಮ್ಮ ರಾಜಕೀಯ ಜೀವನದ ದೊಡ್ಡ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಈಗಾಗಲೇ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ, ಜಾರಕಿಹೊಳಿ ಸಹೋದರಿಬ್ಬರೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಕೂಡ ರಾಜಕೀಯ ವಲಯದಲ್ಲಿ ಸದ್ದುಮಾಡತೊಡಗಿದೆ.

ಇದನ್ನೂ ಓದಿ : ಲಕ್ಷ್ಮಿ ಹೆಬ್ಬಾಳ್ಕರ್‌- ಸತೀಶ್‌ ಜಾರಕಿಹೊಳಿ ಕಾದಾಟದ ಹಿಂದಿನ ಅಸಲಿಯತ್ತೇನು?

ಈ ನಡುವೆ, ಜಾರಕಿಹೊಳಿ ಸಹೋದರರಿಗೆ ಆಪ್ತರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಹಾಗಾಗಿ, ಕಾಂಗ್ರೆಸ್ ಹೈಕಮಾಂಡ್ ಸದ್ಯ ಲಕ್ಷ್ಮಿ ಅವರಿಗೆ ತಮ್ಮ ಹಠ ತೊರೆದು, ಹಿಂದೆ ಸರಿಯುವಂತೆ ತಾಕೀತು ಮಾಡಿದೆ. ಸಿದ್ದರಾಮಯ್ಯ ಅವರು ವಿದೇಶದಿಂದ ವಾಪಸಾದ ಬಳಿಕ ಎರಡೂ ಕಡೆಯವನ್ನು ಮುಖಾಮುಖಿಯಾಗಿ ಕೂರಿಸಿಕೊಂಡು ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸುವ ಮಾತು ಕೊಟ್ಟಿದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿಯೇ ಲಕ್ಷ್ಮಿ ಮತ್ತು ಡಿ ಕೆ ಶಿವಕುಮಾರ್ ಅವರು ಈ ವಿಷಯದಲ್ಲಿ ಜಾರಕಿಹೊಳಿ ಸಹೋದರರ ಆರೋಪಗಳಿಗೆ ನೇರ ಪ್ರತಿಕ್ರಿಯೆ ನೀಡದೆ ಹಿಂಜರಿದಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ವಿದ್ಯಮಾನಗಳ ನಡುವೆ, ಸತೀಶ್ ಜಾರಕಿಹೊಳಿ ಅವರು, ಈ ಬೆಳವಣಿಗೆ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಪೆಟ್ಟು ನೀಡಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, “ಈಗಲೇ ಏನನ್ನೂ ಹೇಳುವುದಿಲ್ಲ. ನಮಗೆ ಸೋಲಾದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಶುಕ್ರವಾರದವರೆಗೆ ಕಾದುನೋಡಿ,” ಎಂದು ಮಾರ್ಮಿಕ ಉತ್ತರ ನೀಡಿದ್ದಾರೆ.

ಜಾರಕಿಹೊಳಿ ಸಹೋದರರ ರಾಜಕೀಯ ಬಲ್ಲವರು ಅವರ ಈ ಮಾತಿನ ಗೂಢಾರ್ಥ ಊಹಿಸಬಹುದು. ಸಚಿವ ಸ್ಥಾನದ ವಿಷಯದಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರದ ವೇಳೆಯಲ್ಲಿಯೇ ಸತೀಶ್ ಅವರು ಕಾಂಗ್ರೆಸ್‌ ತೊರೆಯುವ ಮನಸ್ಸು ಮಾಡಿದ್ದರು ಎಂಬುದು ಈಗ ಗುಟ್ಟೇನಲ್ಲ. ಆ ಬಳಿಕ ಸ್ವತಃ ಸಿದ್ದರಾಮಯ್ಯ ಅವರೇ ಸತೀಶ್ ಅವರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಈಗಲೂ ಅವರಲ್ಲಿ ಆ ಅಸಮಾಧಾನ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಪಾರುಪತ್ಯವೇ ನಡೆಯುತ್ತಿದ್ದ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸಿದ್ದು ತಾವು ಎಂಬ ಹಕ್ಕು ಮಂಡಿಸುವ ಜಾರಕಿಹೊಳಿ ಸಹೋದರರು, ಅದಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂಬುದನ್ನು ತಮ್ಮ ಎಂದಿನ ದಾಢಸೀತನದಿಂದಲೇ ಹೇಳುವುದು ವಾಡಿಕೆ. ಈಗಲೂ ಅವರು ಪಿಎಲ್ ಡಿ ಬ್ಯಾಂಕ್ ವಿಷಯದಲ್ಲಿ ಇಷ್ಟು ಜಿದ್ದಿಗೆ ಬೀಳಲು ಕಾರಣ ಕೂಡ ತಮ್ಮ ರಾಜಕೀಯ ಅಧಿಕಾರ ಮತ್ತು ಪ್ರಭಾವದ ಹಕ್ಕು ರಕ್ಷಣೆಯ ಉದ್ದೇಶವೇ.

ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ನಡುವಿನ ಈ ಹಗ್ಗಜಗ್ಗಾಟಕ್ಕೆ ನಾಳೆಯ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಫಲಿತಾಂಶ ನಿರ್ಣಾಯಕ ತಿರುವು ನೀಡುವುದಂತೂ ದಿಟ. ಹಾಗಾಗಿ ಸದ್ಯ ಎಲ್ಲರ ಕಣ್ಣು ನಾಳೆಯ ಚುನಾವಣೆಯ ಫಲಿತಾಂಶದ ಮೇಲೆ ನೆಟ್ಟಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More