ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಕುರಿತ ಬಿಜೆಪಿ ಮುಖಂಡನ ಟ್ವೀಟ್ ರಹಸ್ಯ

ರಾಹುಲ್ ಮಾನಸ ಸರೋವರ ಯಾತ್ರೆಯ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು ಸರಣಿ ಟ್ವೀಟ್‌ಗಳನ್ನು ಹಾಕಿದ್ದ ಬಿಜೆಪಿ ಮುಖಂಡ ತರುಣ್ ವಿಜಯ್ ಈಗ ಪಾಸ್‌ವರ್ಡ್ ದುರ್ಬಳಕೆಯಾಗಿದೆ ಎನ್ನುತ್ತಿದ್ದಾರೆ. ಈ ಕುರಿತ ‘ದಿ ಟೆಲಿಗ್ರಾಫ್‌’ ಲೇಖನದ ಭಾವಾನುವಾದವಿದು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾನಸ ಸರೋವರ ಯಾತ್ರೆಯನ್ನು ಬೆಂಬಲಿಸಿ ಮತ್ತು ರಾಹುಲ್ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು ತಮ್ಮ ಟ್ವಿಟರ್ ಖಾತೆಯಲ್ಲಿ ಮಂಗಳವಾರ ರಾತ್ರಿ ಕಾಣಿಸಿಕೊಂಡಿದ್ದ ಟ್ವೀಟ್ ಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ತರುಣ್ ವಿಜಯ್, ತಮ್ಮ ಟ್ವಿಟರ್ ಖಾತೆಯ ‘ಪಾಸ್‌ವರ್ಡ್' ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ, ಬಿಜೆಪಿಯ ಕೆಲವು ಮುಖಂಡರು ಸೇರಿದಂತೆ ಹಲವು ಮಂದಿ ವಿಜಯ್ ಹೇಳಿಕೆಯನ್ನು ಪ್ರಶ್ನಿಸಿದ್ದು, ಈ ಟ್ವೀಟ್‌ಗಳು ಅವರ ಅಸಮಾಧಾನದ ಪ್ರದರ್ಶನವಾಗಿರಬಹುದು ಎಂದಿದ್ದಾರೆ. ತಮ್ಮ ರಾಜಕೀಯ 'ವರಿಷ್ಠರಿಗೆ' ಹೆದರದೇ ಮುಕ್ತವಾಗಿ ಮಾತನಾಡುವಂತೆ ಇತ್ತ ಕಾಂಗ್ರೆಸ್ ಪಕ್ಷವು ವಿಜಯ್ ಅವರನ್ನು ಪ್ರೋತ್ಸಾಹಿಸಿದೆ.

“ನಾನು ಆರ್ ಎಸ್ ಎಸ್ /ಬಿಜೆಪಿಯಲ್ಲಿ ಹುಟ್ಟಿದವನು. ಹೀಗಿರುವಾಗ ನಾನು ಈ ರೀತಿ ಮಾಡುತ್ತೇನೆ ಎಂದು ನೀವು ಊಹಿಸಬಹುದಾ?” ಎಂದು ವಿಜಯ್, ‘ದಿ ಟೆಲಿಗ್ರಾಫ್’ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚು ಮಾತನಾಡಲು ನಿರಾಕರಿಸಿದ ಅವರು, ನನ್ನ ಟ್ವಿಟರ್ ಪುಟದಲ್ಲಿ ನನ್ನ ಅನಿಸಿಕೆಗಳು ಇವೆ. ಈ ವಿಷಯವಾಗಿ ನಾನು ಯಾರ ಬಳಿಯೂ ಮಾತನಾಡುತ್ತಿಲ್ಲ ಎಂದಿದ್ದಾರೆ.

ನಿಮ್ಮ ಟ್ವಿಟರ್ ಖಾತೆಗೆ ಕನ್ನ ಹಾಕಲಾಗಿದೆಯೇ ಅಥವಾ ಇದು, ನಿಮ್ಮ ಸಾಮಾಜಿಕ ಮಾಧ್ಯಮ ಪುಟವನ್ನು ನಿರ್ವಹಿಸುತ್ತಿರುವ ವ್ಯಕ್ತಿ ಮಾಡಿದ ತಪ್ಪೇ ಎನ್ನುವ ಪ್ರಶ್ನೆಗೆ “ತನಿಖೆಯ ಬಳಿಕವೇ ಇದು ಸ್ಪಷ್ಟವಾಗಲಿದೆ” ಎಂದು ವಿಜಯ್ ಹಾರಿಕೆಯ ಉತ್ತರ ನೀಡಿದರು. ಅಲ್ಲದೇ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆಯೇ ಎನ್ನುವುದನ್ನು ಸ್ಪಷ್ಟಪಡಿಸದೆಯೇ ಫೋನ್ ಕಡಿತಗೊಳಿಸಿದರು.

ಇದನ್ನೂ ಓದಿ : ಎಲ್ಲರ ಮೇಲೂ ಕಣ್ಣಿಡುವ ಮಾಧ್ಯಮಗಳ ಮೇಲೆಯೇ ಮೋದಿ, ಅಮಿತ್ ಶಾ ಕಣ್ಣು!

ರಾಹುಲ್ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಟೀಕಿಸುತ್ತಿರುವವರ ಕುರಿತಾಗಿ ಮಂಗಳವಾರ ರಾತ್ರಿ 10 ಗಂಟೆ ಬಳಿಕ ವಿಜಯ್ ಅವರ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟುಗಳು ಬರಲು ಶುರುವಾದವು. “ರಾಹುಲ್ ಯಾತ್ರೆ ಕುರಿತು ಟೀಕೆ ಮಾಡುವುದು, ಅಣಕ ಮಾಡುವುದು, ಕೀಳಾಗಿ ಮಾತನಾಡುವುದು ಸರಿಯಲ್ಲ. ಇದು ಹಿಂದುವೊಬ್ಬ ಮಾಡುವ ಕೆಲಸವಲ್ಲ. ಅಷ್ಟಕ್ಕೂ ಇದು ರಾಹುಲ್ ಹಾಗೂ ಶಿವನಿಗೆ ಸಂಬಂಧಿಸಿದ್ದು. ಶಿವನಿಗಿಂತ ಯಾರೂ ದೊಡ್ಡವರಾಗುವುದಕ್ಕೆ ಸಾಧ್ಯವಿಲ್ಲ. ನಾನು ಮೂರು ಬಾರಿ ಕೈಲಾಸ ಮಾನಸ ಸರೋವರಕ್ಕೆ ಹಾಗೂ ಮಾನಸ ಸರೋವರ ಯಾತ್ರೆ ಸಂಘದ ಅಧ್ಯಕ್ಷರನ್ನು ಭೇಟಿ ಮಾಡುವುದಕ್ಕೆ ಅದೃಷ್ಟ ಮಾಡಿದ್ದೇನೆ,” ಎಂದು ಈ ಪೈಕಿ ಒಂದು ಟ್ವೀಟ್‌ನಲ್ಲಿ ಹೇಳಲಾಗಿತ್ತು.

ತರುಣ್ ವಿಜಯ್ ಅವರು ಇದೇ ಮೊದಲು ತಮ್ಮ ಟ್ವಿಟರ್ ಖಾತೆಯ ಕಾರಣದಿಂದಾಗಿ ಸಂಧಿಗ್ದತೆ ಎದುರಿಸುತ್ತಿಲ್ಲ. ಹಿಂದೆಯೂ ಅವರು ಬಿಜೆಪಿ ವಿರೋಧಿ ಟ್ವೀಟ್ ಮಾಡಿ ಸಮಸ್ಯೆ ಸೃಷ್ಟಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ, ವ್ಯಕ್ತಿಯೊಬ್ಬರಿಗೆ “ಸೊಕ್ಕು ಮಾಡಬೇಡಿ,” ಎಂದು ಅವರು ನೀಡಿದ ಸಲಹೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. “ಹಲೋ, ನೀವು ತುಂಬಾ ಜನಪ್ರಿಯರು ಎನ್ನುವ ಕಾರಣಕ್ಕೆ ನೀವು ಈ ಸ್ಥಾನದಲ್ಲಿ ಇಲ್ಲ. ನೀವು ಯಾಕೆ ಇಲ್ಲಿದ್ದೀರಿ ಎಂದರೆ ನರೇಂದ್ರ ಮೋದಿ ನಿಮ್ಮ ಹಿಂದೆ ಇದ್ದಾರೆ. ನಿಮ್ಮ ಸೊಕ್ಕು ಬಿಡಿ, ಅಯ್ಯೋ ದೇವರೇ, ನೀವು ತುಂಬಾ ಜನಪ್ರಿಯರು ಎಂದು ತಿಳಿಯುತ್ತೀ,ರಿ” ಎಂದು ಟ್ವೀಟ್ ಮಾಡಲಾಗಿತ್ತು.

ಮಧ್ಯರಾತ್ರಿ 12.11 ಹೊತ್ತಿಗೆ ವಿಜಯ್ ಪುಟದಲ್ಲಿ ಇನ್ನೊಂದು ಟ್ವೀಟ್ ಕಾಣಿಸಿಕೊಂಡಿತು: “ನಾನು ಬೆಳಗಿನ ವಾಯು ವಿಹಾರಕ್ಕೆ ಹೊರಟಿದ್ದೇನೆ. ನಾನು ಚೆನ್ನಾಗಿದ್ದೇನೆ. ನನ್ನ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ವಜಾ ಮಾಡಿದ್ದೇನೆ,” ಎಂದು ಅದರಲ್ಲಿ ಹೇಳಲಾಗಿತ್ತು. ಇದನ್ನು ನೋಡಿ ಟ್ವೀಟಿಗರು ಅಚ್ಚರಿಗೊಂಡರು ಮತ್ತು ಮೆಮೆಗಳನ್ನು ಹಾಕಲು ಶುರುಮಾಡಿದರು. “ಈ ಬೆಳಗಿನಂತೆಯೇ ನಾನು ರಾತ್ರಿ ಎದ್ದೆ,” ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಲೆಳೆದಿದ್ದಾರೆ. ಈ ಟ್ವೀಟ್‌ ಮೂಲಕ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸುತ್ತಿದ್ದಾರೆ ಎನ್ನುವ ಬಗ್ಗೆ ಚರ್ಚೆಯಾಗಿತ್ತು.

ಮಾನಸ ಸರೋವರದ ರಾಹುಲ್ ಯಾತ್ರೆಯ ಬಗ್ಗೆ ಟ್ವೀಟ್‌ಗಳನ್ನು ತಾವು ಮಾಡಿಲ್ಲ ಎಂದು ಈಗ ವಿಜಯ್ ಹೇಳುತ್ತಿದ್ದಾರೆ. ಬುಧವಾರ ಬೆಳಿಗ್ಗೆ 7.57 ಸಮಯದಲ್ಲಿ ವಿಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಸ್ಪಷ್ಟೀಕರಣ ಹಾಕಿದರು. “ಸ್ನೇಹಿತರೇ, ತಪ್ಪು ಟ್ವೀಟುಗಳನ್ನು ನಂಬದೆ ನಮ್ಮ ಮೇಲೆ ವಿಶ್ವಾಸ ತೋರಿಸಿದ್ದಕ್ಕೆ ನಿಮಗೆ ಕೃತಜ್ಞತೆಗಳು. ನಾವು ಮನೆ ಬದಲಾಯಿಸುತ್ತಿದ್ದಾಗ ಹೀಗಾಯಿತು. ಪಾಸ್‌ವರ್ಡ್ ದುರ್ಬಳಕೆಯಾಗಿದೆ. ನಾನು ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ಪಾಸ್‌ವರ್ಡ್ ಬದಲಾಯಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತ ಸ್ನೇಹಿತರೆಲ್ಲರಿಗೂ ಕೃತಜ್ಞತೆಗಳು. ಧನ್ಯವಾದ,” ಎಂದು ಅವರು ಟ್ವೀಟ್ ಮಾಡಿದರು.

ಬುಧವಾರ ಬೆಳಗ್ಗೆ ವಿಜಯ್, ಮೋದಿಯವರ ಟ್ವೀಟುಗಳನ್ನು ಮರು ಟ್ವೀಟ್ ಮಾಡಲು ಹಾಗೂ ಬಿಜೆಪಿ ಪರವಾದ ಹೇಳಿಕೆಗಳನ್ನು ಪೋಸ್ಟ್ ಮಾಡಲು ಶುರುಮಾಡಿದರು.

ತಮ್ಮ ಖಾತೆ 'ದುರ್ಬಳಕೆಯಾಗಿದೆ’ ಎನ್ನುವ ತರುಣ್ ವಿಜಯ್ ಹೇಳಿಕೆಯನ್ನು @IronyOfIndia ಎನ್ನುವ ಹೆಸರಿನ ಟ್ವಿಟರ್ ಬಳಕೆದಾರೊಬ್ಬರು ಪ್ರಶ್ನಿಸಿದ್ದಾರೆ. ವಿಜಯ್ ತಾವು ಬರೆದಿಲ್ಲ ಎಂದು ಹೇಳಿಕೊಂಡಿರುವ ಟ್ವೀಟುಗಳಲ್ಲಿ ಬಳಕೆಯಾದ ‘bec’ (ಏಕೆಂದರೆ) ಪದವನ್ನು ಗಮನಿಸಿರುವ ಈ ವ್ಯಕ್ತಿ, ವಿಜಯ್ ತಮ್ಮ ಈ ಹಿಂದಿನ ಟ್ವೀಟುಗಳಲ್ಲಿಯೂ 'because’ ಪದವನ್ನು 'bec' ಎಂದು ಬರೆದಿದ್ದರು ಎಂದಿದ್ದಾರೆ. “ನಿಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿ ಕೂಡ ನೀವು ಬರೆಯುವ ರೀತಿಯಲ್ಲಿಯೇ 'bec' ಎಂದು ಬರೆಯುತ್ತಾರಾ? ನಿಮ್ಮ ಪಕ್ಷವನ್ನು ಎದುರಿಸುವುದಕ್ಕೆ ನೀವು ಯಾಕೆ ಭಯಪಡುತ್ತಿದ್ದೀರಿ? ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ. ಭಯಪಡಬೇಡಿ,” ಎಂದೂ ಹೇಳಿದ್ದಾರೆ.

ಸ್ವತಃ ವಿಜಯ್ ಅವರೇ ಈ ಟ್ವೀಟುಗಳನ್ನು ಮಾಡಿರುವಂತಿತ್ತು ಎಂದು ಬಿಜೆಪಿಯೊಳಗಿನವರು ಹೇಳುತ್ತಾರೆ. ತಾವು ಎಲ್ಲೆ ಮೀರಿ ಹೋಗಿರುವುದು ಅವರಿಗೆ ಕೊನೆಗೆ ಅರಿವಾಗಿರಬೇಕು. ಆದ ಕಾರಣ ಅವರು ಈ ಟ್ವೀಟುಗಳು ತಮ್ಮದಲ್ಲ ಎಂದು ನಿರಾಕರಿಸಿದರು ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

“ನನಗೆ ತಿಳಿದಿರುವಂತೆ ತರುಣ್ ವಿಜಯ್ ತಮ್ಮ ಟ್ವಿಟರ್ ಖಾತೆಯನ್ನು ಖುದ್ದು ನಿರ್ವಹಿಸುತ್ತಾರೆ. ಇದಕ್ಕಾಗಿ ಅವರು ಯಾರನ್ನೂ ನೇಮಿಸಿಕೊಂಡಿಲ್ಲ,” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಮೋದಿ-ಅಮಿತ್ ಶಾ ಆಡಳಿತದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಕಾರಣಕ್ಕೆ ವಿಜಯ್ ಅಸಮಾಧಾನಗೊಂಡಿರಬಹುದು ಎಂದೂ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವದಲ್ಲಿ ಹಿಂದೆ ಅಮಿತ್ ಶಾ ವಿಚಾರವಾಗಿ 'ವ್ಯಕ್ತಿಯೊಬ್ಬರಿಗಾಗಿ ಬರೆದ ಟ್ವೀಟ್‌'ನಿಂದಾಗಿ ತರುಣ್ ವಿಜಯ್ ಮೂಲೆಗುಂಪಾಗಿದ್ದಾರೆ ಎನ್ನುವ ಅನುಮಾನವೂ ಇದೆ.

ಈ ನಡುವೆ, ವಿಜಯ್ ಬೆನ್ನಿಗೆ ನಿಂತಿರುವ ಕಾಂಗ್ರೆಸ್, “ನಿಮ್ಮ ವರಿಷ್ಠರಿಗೆ ಭಯಪಡಬೇಡಿ,” ಎಂದು ಸಲಹೆ ನೀಡಿದೆ. “ಈ ದಿಟ್ಟತನ ಉಳಿಸಿಕೊಳ್ಳಿ. ನಿರ್ಭೀತಿಯಿಂದ ಸತ್ಯವನ್ನು ಬೆಂಬಲಿಸಿ. ರಾಹುಲ್ ಕೈಲಾಸ ಯಾತ್ರೆ ಕುರಿತಂತೆ ನೀವು ಬರೆದ ಟ್ವೀಟುಗಳನ್ನು ನಿಮ್ಮ ವರಿಷ್ಠರಿಗೆ ಹೆದರಿಕೊಂಡು ಅಳಿಸಿಹಾಕಬೇಡಿ. ಸತ್ಯಂ ಶಿವಂ ಸುಂದರಂ. ಶಿವನೇ ಸತ್ಯ,” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More