ಪಿಎಲ್‌ಡಿ ಬ್ಯಾಂಕ್ ಅಧಿಕಾರ ಲಕ್ಷ್ಮೀ ಕೈವಶ; ಬೆಳಗಾವಿ ರಾಜಕಾರಣದ 2ನೇ ಅಂಕ ಬಾಕಿ!

ಬೆಳಗಾವಿ ಸಕ್ಕರೆ ಮತ್ತು ಸಹಕಾರ ವಲಯದ ಮೇಲೆ ಹಿಡಿತ ಸಾಧಿಸುವ ಜಿದ್ದಿನಲ್ಲಿ ಸದ್ಯ ಲಕ್ಷ್ಮೀ ಹೆಬ್ಬಾಳ್ಕರ್ ಕೈ ಮೇಲಾದಂತೆ ತೋರಿದರೂ, ಜಾರಕಿಹೊಳಿ ಸೋದರರು ತಮ್ಮ ಸೋಲಿಗೆ ಪಡೆಯಲಿರುವ ಪ್ರತಿಫಲ ಏನೆಂಬುದರ ಮೇಲೆ ಈ ರಾಜಕೀಯ ನಾಟಕದ ದ್ವಿತೀಯಾರ್ಧದ ರೋಚಕತೆ ನಿರ್ಧಾರವಾಗಲಿದೆ

ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಬಿಕ್ಕಟ್ಟು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಶುಕ್ರವಾರ (ಆ.7) ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಣದವರೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು ೧೪ ನಿರ್ದೇಶಕರ ಆಡಳಿತ ಮಂಡಳಿಯಲ್ಲಿ ಒಂಬತ್ತು ಮಂದಿ ಲಕ್ಷ್ಮೀ ಅವರ ಬಣದಲ್ಲಿದ್ದರೆ, ಉಳಿದ ಐವರು ಜಾರಕಿಹೊಳಿ ಅವರ ಬಣದಲ್ಲಿದ್ದರು. ಶುಕ್ರವಾರ ಬೆಳಗ್ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅಂತಿಮ ಗಡುವು ಮುಗಿದ ಬಳಿಕ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ತಲಾ ಒಬ್ಬರು ಮಾತ್ರ ಕಣದಲ್ಲಿ ಉಳಿದಿದ್ದರು. ಹಾಗಾಗಿ, ಸಹಜವಾಗಿ ಅವರನ್ನೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಸಚಿವ ಈಶ್ವರ ಖಂಡ್ರೆ ಅವರ ಮಧ್ಯಸ್ಥಿಕೆಯ ಪರಿಣಾಮವಾಗಿ ಎರಡೂ ಬಣಗಳ ನಡುವಿನ ಮಾತುಕತೆ ಸಫಲವಾಗಿದ್ದು, ಅಧ್ಯಕ್ಷರಾಗಿ ಮಹದೇವ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಪುಸಾಬ ಜಮಾದಾರ ಆಯ್ಕೆಯಾಗುತ್ತಲೇ ಇಡೀ ವಿವಾದ ಮೇಲ್ನೋಟಕ್ಕೆ ಅಂತ್ಯ ಕಂಡಿತು.

ಹಲವು ದಶಕಗಳಿಂದ ಜಾರಕಿಹೊಳಿ ಅವರ ಕಡೆಯವರೇ ಅವಿರೋಧ ಆಯ್ಕೆಯ ಮೂಲಕ ಬೆಳಗಾವಿಯ ಸಕ್ಕರೆ ಮತ್ತು ಸಹಕಾರ ವಲಯದ ಪ್ರತಿಷ್ಠಿತ ಈ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದರು. ಆದರೆ, ಈ ಬಾರಿ, ಜಾರಕಿಹೊಳಿ ಕುಟುಂಬದ ಪಾರುಪತ್ಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸವಾಲೊಡ್ಡಿದ್ದು, ಪಿಎಲ್‌ಡಿ ಬ್ಯಾಂಕಿನ ಅಧಿಕಾರವನ್ನು ತಮ್ಮ ಕೈವಶ ಮಾಡಿಕೊಳ್ಳಲು ಮುಂದಾಗಿದ್ದರು. ಆ ಹಿನ್ನೆಲೆಯಲ್ಲಿ ಒಂದು ಸಣ್ಣ ಗ್ರಾಮೀಣ ಬ್ಯಾಂಕಿನ ಚುನಾವಣಾ ವಿಷಯ ಬೆಳಗಾವಿ ರಾಜಕಾರಣದ ಮೇಲಿನ ಹಿಡಿತದ ಪ್ರತಿಷ್ಠೆಯ ಪ್ರಶ್ನೆಯಷ್ಟೇ ಅಲ್ಲದೆ, ರಾಜ್ಯದ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನೇ ಡೋಲಾಯಮಾನ ಮಾಡಲಿದೆ ಎಂಬಂತಹ ಚರ್ಚೆಯನ್ನೂ ಹುಟ್ಟುಹಾಕಿತ್ತು.

ಇದು ಮೇಲ್ನೋಟಕ್ಕೆ ಕಳೆದ ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಬಹುಚರ್ಚಿತ ಈ ರಾಜಕೀಯ ವಿದ್ಯಮಾನ ಕೇವಲ ಒಂದು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಾಗಿ ಕಂಡುಬಂದರೂ, ವಾಸ್ತವವಾಗಿ ಅದು ಬೆಳಗಾವಿ ಜಿಲ್ಲೆಯ ರಾಜಕಾರಣ, ವ್ಯವಹಾರ, ಪ್ರತಿಷ್ಠೆ ಮುಂತಾದ ಹಲವು ಸಂಗತಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಎರಡು ಬಣಗಳ ನಡುವಿನ ಸಮರವಾಗಿತ್ತು. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಿಂದಲೇ ಈ ಪ್ರತಿಷ್ಠೆಯ ಪ್ರಶ್ನೆ ಬೆಳಗಾವಿಯ ರಾಜಕಾರಣದಲ್ಲಿ ಹೊಗೆಯಾಡುತ್ತಿದ್ದರೂ, ತೀರಾ ಬಹಿರಂಗವಾಗಿ ಸ್ಫೋಟವಾಗಿರಲಿಲ್ಲ. ಆಗ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ವಿರುದ್ಧ ಸ್ವತಃ ಅವರ ಸಹೋದರ ರಮೇಶ್ ಜಾರಕಿಹೊಳಿಯವರೇ ರಾಜಕೀಯ ಪೈಪೋಟಿಗಿಳಿದದ್ದು, ಆ ಸಹೋದರರ ಸವಾಲಿನ ಕಾರಣದಿಂದಾಗಿಯೇ ಸತೀಶ್ ಅವರು ಮಂತ್ರಿಗಿರಿ ಕಳೆದುಕೊಂಡದ್ದು ಈಗ ಇತಿಹಾಸ.

ಇದನ್ನೂ ಓದಿ : ರಾಜ್ಯ ಸರ್ಕಾರವನ್ನೇ ಅಲುಗಾಡಿಸಿದ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ರಾಜಕಾರಣ

ಸಹೋದರ ಸತೀಶ್ ವಿರುದ್ಧವೇ ರಮೇಶ್ ರಾಜಕಾರಣದ ದಾಳ ಉರುಳಿಸುತ್ತಿದ್ದ ಹೊತ್ತಲ್ಲಿ ಆಗ, ಅವರಿಗೆ ಸಾಥ್‌ ನೀಡಿದ್ದು ಇದೇ ಲಕ್ಷ್ಮೀ ಹೆಬ್ಬಾಳ್ಕರ್ ಎಂಬುದು ಬೆಳಗಾವಿ ರಾಜಕೀಯದ ಒಳಸುಳಿಗಳನ್ನು ಬಲ್ಲವರ ಮಾತು. ಆದರೆ, ಈಗ ಎಲ್ಲವೂ ಬದಲಾಗಿದೆ. ಜಿಲ್ಲೆಯ ಸಹಕಾರ ಮತ್ತು ಸಕ್ಕರೆ ಲಾಬಿಯಲ್ಲಿ ಸತೀಶ್ ಜಾರಕಿಹೊಳಿಗೆ ಹಿನ್ನಡೆಯಾಗುತ್ತಿದೆ, ಲಕ್ಷ್ಮೀ ಅವರ ಕೈ ಮೇಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ; ಅದು ಕೇವಲ ಜಿಲ್ಲೆಯ ಮಟ್ಟಿಗೆ ಅಲ್ಲದೆ, ರಾಜ್ಯಮಟ್ಟದಲ್ಲೂ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ಕೊಡಬಹುದು ಎಂಬ ಕಾರಣಕ್ಕೆ ಎಚ್ಚೆತ್ತ ರಮೇಶ್ ಜಾರಕಿಹೊಳಿ ಸಹೋದರ ಪರ ನಿಂತಿದ್ದಾರೆ.

ಆರಂಭದಲ್ಲಿ ಇದೇ ಜಾರಕಿಹೊಳಿ ಸಹೋದರರ ನೆರಳಿನಲ್ಲಿಯೇ ರಾಜಕಾರಣದ ಪಟ್ಟು ಕಲಿಯುತ್ತ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಒಂದೊಂದೇ ಮೆಟ್ಟಿಲು ಏರುತ್ತ ಬಂದ ಲಕ್ಷ್ಮೀ ಅವರು, ಇದೀಗ ತಮ್ಮ ಬೆಂಗಳೂರು ಕೆಪಿಸಿಸಿ ಮತ್ತು ಎಐಸಿಸಿ ಮಟ್ಟದ ತಮ್ಮ ಪ್ರಭಾವದ ಬಲದ ಮೇಲೆ ರಾಜ್ಯ ಮಟ್ಟದ ಪ್ರಭಾವಿ ನಾಯಕಿಯಾಗಿ ಬೆಳೆದಿದ್ದಾರೆ. ಆ ಮೂಲಕ, ಬೆಳಗಾವಿಯ ರಾಜಕಾರಣವನ್ನು ಇಡಿಯಾಗಿ ತಮ್ಮ ಕೈವಶ ಮಾಡಿಕೊಳ್ಳುವ ಉಮೇದಿನಲ್ಲಿ ಅಲ್ಲಿನ ಸಕ್ಕರೆ ಮತ್ತು ಸಹಕಾರ ವಲಯದ ಮೇಲೆ ಹಿಡಿತ ಸಾಧಿಸುವ ಯತ್ನಕ್ಕೆ ಕೈಹಾಕಿದ್ದರು. ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಕಿತ್ತಾಟ ಕೂಡ ಲಕ್ಷ್ಮಿ ಅವರ ರಾಜಕೀಯ ಪ್ರವರ್ಧಮಾನಕ್ಕೆ ಪರೋಕ್ಷವಾಗಿ ಒದಗಿಬಂದಿತ್ತು ಕೂಡ.

ಆದರೆ, ಜಾರಕಿಹೊಳಿ ಸಹೋದರರು ಪಕ್ಷವನ್ನೇ ತೊರೆದುಹೋಗಲು ತೀರ್ಮಾನಿಸಿದ್ದಾರೆ ಎಂಬ ಧಾಟಿಯ ಎಚ್ಚರಿಕೆಯ ಮಾತುಗಳಿಂದಾಗಿ ಪಿಎಲ್‌ಡಿ ಬ್ಯಾಂಕ್ ಚುನಾವಣಾ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳ್ಕರ್ ನಡುವಿನ ಸವಾಲು-ಪ್ರತಿಸವಾಲಿನ ಹಗ್ಗಜಗ್ಗಾಟ ಪಕ್ಷದ ಹೈಕಮಾಂಡ್‌ವರೆಗೆ ತಲುಪಿತ್ತು ಮತ್ತು ಹೈಕಮಾಂಡ್ ಸಕಾಲಿಕ ಎಚ್ಚರಿಕೆಯ ಹೆಜ್ಜೆಯ ಮೂಲಕ ವಿಷಯದಲ್ಲಿ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ಸದ್ಯಕ್ಕೆ ಬಗೆಹರಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ಬೆಳಗಾವಿಗೆ ತೆರಳಿದ್ದ ಸಚಿವ ಈಶ್ವರ ಖಂಡ್ರೆ, ಎರಡೂ ಕಡೆಯವರೊಂದಿಗೆ ಸಭೆ ನಡೆಸಿ, ಸಂಧಾನ ಸೂತ್ರ ಮಂಡಿಸಿದ್ದಾರೆ. ಹೈಕಮಾಂಡ್ ನೀಡಿದ್ದ ಆ ಸೂತ್ರಕ್ಕೆ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಒಪ್ಪುವ ಮೂಲಕ ವಿವಾದ ಸುಖಾಂತ್ಯ ಕಂಡಿದೆ.

ಆದರೆ ಈ ನಡುವೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಮತ್ತು ಎಐಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಎಚ್ಚರಿಕೆ ನೀಡಿದ್ದು, ಪ್ರತಿಷ್ಠೆ ಬಿಟ್ಟು ರಾಜ್ಯ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಸಂಧಾನಕ್ಕೆ ಮುಂದಾಗಿ ಎಂದು ತಾಕೀತು ಮಾಡಿದ್ದರು. ಜೊತೆಗೆ, ಸತೀಶ್ ಜಾರಕಿಹೊಳಿ ಅವರಿಗೂ ಸಂಪುಟದಲ್ಲಿ ಅವಕಾಶ ನೀಡುವ ಭರವಸೆ ನೀಡಿ ಸಮಾಧಾನಪಡಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ, ಈಶ್ವರ ಖಂಡ್ರೆ ಅವರ ಸಂಧಾನ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿರಲಿಲ್ಲ. ಅವರು ಬೆಳಗಿನಿಂದಲೂ ಚುನಾವಣೆ ಮತ್ತು ಆ ಸಂಬಂಧದ ಎಲ್ಲ ವಿದ್ಯಮಾನಗಳಿಂದ ದೂರವೇ ಉಳಿದಿದ್ದರು ಎಂಬ ವರದಿಗಳೂ ಇವೆ. ಹಾಗಾಗಿ, ಈ ವಿಷಯದಲ್ಲಿ ಕಳೆದ ಎರಡು-ಮೂರು ದಿನದಿಂದ ಸಾಕಷ್ಟು ಬಿರುಸಿನ ಹೇಳಿಕೆಗಳನ್ನು ನೀಡಿದ್ದ ರಮೇಶ್ ಅವರ ನಿಲುವು ಈಗೇನು ಎಂಬುದು ಕುತೂಹಲ ಹುಟ್ಟಿಸಿದೆ.

ಜೊತೆಗೆ, ಜಿಲ್ಲೆಯಲ್ಲಿ ದಶಕಗಳ ಕಾಲ ಕಟ್ಟಿ ಬೆಳೆಸಿದ ಪಕ್ಷವನ್ನೇ ತೊರೆಯುತ್ತಾರೆ ಎಂಬ ಚರ್ಚೆಗೆ ಗ್ರಾಸವಾಗುವ ಮಟ್ಟಿಗಿನ ಉಗ್ರ ನಿಲುವು ತಳೆಯುವ ಹೇಳಿಕೆ ನೀಡಿದ್ದ ಜಾರಕಿಹೊಳಿ ಸಹೋದರರು, ಪಿಎಲ್‌ಡಿ ಬ್ಯಾಂಕ್ ಆಡಳಿತದ ಚುಕ್ಕಾಣಿಯನ್ನು ಬಿಟ್ಟುಕೊಟ್ಟದ್ದಕ್ಕೆ ಪ್ರತಿಫಲವಾಗಿ ಏನು ಪಡೆಯಲಿದ್ದಾರೆ? ಅವರಿಗೆ ಈ ಸಂಧಾನದ ವೇಳೆ ನೀಡಲಾಗಿರುವ ಭರವಸೆಯನ್ನು ಹೈಕಮಾಂಡ್ ಉಳಿಸಿಕೊಳ್ಳುವುದೇ? ಒಂದು ವೇಳೆ, ತಮ್ಮ ಬೇಡಿಕೆ ಈಡೇರದೆ ಇದ್ದಲ್ಲಿ ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನು? ಲಕ್ಷ್ಮೀ ಹೆಬ್ಬಾಳ್ಕರ್ ಪರ ನಿಲುವು ತಳೆದ ಕಾರಣಕ್ಕೆ ಸಚಿವ ಡಿ ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಉಂಟಾಗಿರುವ ವೈಮನಸ್ಯದ ಮುಂದಿನ ಪರಿಣಾಮಗಳೇನು? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಆ ಉತ್ತರಗಳೇ ಭವಿಷ್ಯದ ಬೆಳಗಾವಿ ರಾಜಕಾರಣ ಮತ್ತು ರಾಜ್ಯ ರಾಜಕಾರಣದ ಮೇಲಿನ ಅದರ ಪರಿಣಾಮಗಳನ್ನು ನಿರ್ಧರಿಸಲಿವೆ.

ಆ ದೃಷ್ಟಿಯಿಂದ ಇದೀಗ ಪಿಎಲ್‌ಡಿ ಬ್ಯಾಂಕ್ ಚುನಾವಣೆಯನ್ನು ಸದ್ಯಕ್ಕೆ ಬಗೆಹರಿಸಿರುವ ಕಾಂಗ್ರೆಸ್ ಹೈಕಮಾಂಡ್ ನಾಟಕದ ಮೊದಲಾರ್ಧವನ್ನಷ್ಟೇ ಯಶಸ್ವಿಯಾಗಿ ಪೂರೈಸಿದೆ, ದ್ವಿತೀಯಾರ್ಧದ ರೋಚಕತೆ ಇನ್ನಷ್ಟೇ ಬಾಕಿ ಇದೆ ಎಂದರೆ ತಪ್ಪಾಗಲಾರದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More