ಕ್ಷಮೆ ಯಾಚಿಸಿ ತಪ್ಪಿಸಿಕೊಳ್ಳುವ ಆಡಳಿತಾರೂಢರ ಪೈಕಿ ಬಿಜೆಪಿಗೆ ಅಗ್ರಸ್ಥಾನ

ಇಂದು ಆತುರದಲ್ಲಿ ಹೇಳಿಕೆ ನೀಡಿ, ನಂತರ ‘ಅಕಸ್ಮಾತ್ ಪ್ರಮಾದವಾಗಿದೆ, ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎನ್ನುತ್ತ ಕ್ಷಮೆ ಯಾಚಿಸುವುದು ದೇಶದ ರಾಜಕೀಯ ನಾಯಕರ ಸಾಮಾನ್ಯ ಪ್ರವೃತ್ತಿ ಆಗಿಬಿಟ್ಟಿದೆ. ಈ ನಡವಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ಮಿಕ್ಕೆಲ್ಲರನ್ನೂ ಮೀರಿಸಿದೆ

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಮುಗಿದಿದೆ. ಮುಂದಿನ ಚುನಾವಣೆಗೆ ಇನ್ನೂ ಒಂದು ವರ್ಷವೂ ಬಾಕಿ ಉಳಿದಿಲ್ಲ. ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದ ಬಿಜೆಪಿಯ ಮುಖಂಡರು ಸಿಕ್ಕ ಅಧಿಕಾರವನ್ನು ಅತ್ಯುತ್ತಮವಾಗಿ ಬಳಸಿಕೊಂಡು ಉತ್ತಮ ಆಡಳಿತ ನೀಡುವ ನಿರೀಕ್ಷೆ ಮತ್ತು ಭರವಸೆ ಬಿಜೆಪಿ ಪರವಾಗಿ ಮತ ಚಲಾಯಿಸಿದ ದೇಶದ ಶೇ.೩೧ರಷ್ಟು ಪ್ರಜೆಗಳಿಗಾದರೂ ಇತ್ತು. ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿ ಉತ್ತಮ ಆಡಳಿತ ನೀಡಿದೆಯೋ ಇಲ್ಲವೋ ಎನ್ನುವುದು ಆಯಾಯ ಕ್ಷೇತ್ರದ ವಿಶ್ಲೇಷಕರು ಮತ್ತು ಪರಿಣಿತರ ಅಭಿಪ್ರಾಯಕ್ಕೆ ಬಿಡುವುದು ಒಳಿತು. ದೇಶಕ್ಕೆ ನೀಡಿದ ಬಹಳಷ್ಟು ಭರವಸೆಗಳನ್ನು ಈಡೇರಿಸಿದೆ ಇರುವುದಕ್ಕಾಗಿ ಬಿಜೆಪಿ ನಾಯಕರು ಕ್ಷಮೆ ಯಾಚಿಸದೆ ಇರಬಹುದು; ಆದರೆ, ಇತರ ಬಹಳಷ್ಟು ವಿಚಾರದಲ್ಲಿ ಬಹಿರಂಗವಾಗಿ ದೇಶದ ಮುಂದೆ ಕ್ಷಮೆ ಯಾಚಿಸಿದ್ದಾರೆ. ಕೆಲವು ಬಿಜೆಪಿ ನಾಯಕರು ವಿಡಿಯೋ ಮೂಲಕ ಕ್ಷಮೆ ಯಾಚಿಸಿದರೆ, ಇನ್ನು ಕೆಲವರು ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ. ಕೆಲವರು ತಮ್ಮ ಮಕ್ಕಳು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದರೆ, ಇನ್ನು ಕೆಲವರು ತಪ್ಪಿ ಆಡಿದ ಮಾತಿಗಾಗಿ ಕ್ಷಮೆ ಯಾಚಿಸಿದ್ದಾರೆ.

ಕೆಲವು ಬಿಜೆಪಿ ಮುಖಂಡರು ಪ್ರಮಾದ ಮಾಡಿ ಕ್ಷಮೆ ಯಾಚಿಸದೆ ಇದ್ದರೂ, ಆದ ತಪ್ಪಿಗಾಗಿ ಸಮಜಾಯಿಶಿ ನೀಡುತ್ತಿದ್ದಾರೆ. ಉದಾಹರಣೆಗೆ, ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆಯ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು ಸರಣಿ ಟ್ವೀಟ್‌ ಹಾಕಿದ್ದ ಬಿಜೆಪಿ ಮುಖಂಡ ತರುಣ್ ವಿಜಯ್ ಈಗ ಪಾಸ್‌ವರ್ಡ್ ದುರ್ಬಳಕೆಯಾಗಿದೆ ಎಂದು ತಮ್ಮದೇ ಪಕ್ಷದ ಕ್ಷಮೆ ಯಾಚಿಸುವುದರಿಂದ ತಪ್ಪಿಸಿಕೊಂಡರು. ಹಾಗೆಯೇ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ರಾಹುಲ್ ಗಾಂಧಿಯವರ ಮಾನಸ ಸರೋವರದ ಫೋಟೋ ನಕಲಿ ಎಂದು ಬಹಿರಂಗವಾಗಿ ಘೋಷಿಸಿದರು! ಆದರೆ, ಅದು ನಕಲಿಯಲ್ಲ ಎನ್ನುವುದು ಸಾಬೀತಾದ ಮೇಲೂ ತಾನು ಹೇಳುತ್ತಿರುವುದೇ ನಿಜ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ, ತಪ್ಪು ಮಾಡಿದ್ದನ್ನೂ ಒಪ್ಪಿಕೊಂಡು ವಿವಾದವನ್ನು ತಣ್ಣಗೆ ಮಾಡಲು ಈ ವರ್ಷ ಹಲವು ಬಿಜೆಪಿ ಮುಖಂಡರು ಮುಂದಾದರು. ಅದರ ವಿವರ ಇಲ್ಲಿದೆ:

ರಾಮ್ ಕದಮ್, ಘಾಟ್‌ಕೋಪರ್ ಬಿಜೆಪಿ ಶಾಸಕ

ಕಳೆದ ವಾರ ಮಹಾರಾಷ್ಟ್ರದ ಘಾಟ್ಕೋಪರ್ ಶಾಸಕ ರಾಮ್‌ ಕದಮ್ ಅವರು ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಆಯೋಜಿಸಿದ್ದ ‘ದಹಿ ಹಂಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ, "ಯುವತಿಯರನ್ನು ಅಪಹರಿಸಲು ನೆರವಾಗುತ್ತೇನೆ,” ಎಂದು ಸಾರಿದ್ದರು! ಹೀಗೆ ಬಹಿರಂಗವಾಗಿ ಮಹಿಳೆಯರಿಗೆ ಅವಹೇಳನ ಮಾಡಿದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ. ಇದಕ್ಕೂ ಮುನ್ನ ಅವರು, “ನನ್ನ ಮೊಬೈಲ್ ನಂಬರ್ ತೆಗೆದುಕೊಳ್ಳಿ. 'ನಾನು ಈ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ. ಆದರೆ ಆಕೆಗೆ ನನ್ನ ಪ್ರೇಮ ಇಷ್ಟವಿಲ್ಲ. ದಯವಿಟ್ಟು ನೆರವಾಗಿ' ಎಂದು ನನಗೆ ತಿಳಿಸಿ. ಖಂಡಿತ ನಾನು ನೆರವಾಗುವೆ. ನಿಮ್ಮ ಹೆತ್ತವರನ್ನೂ ಕರೆತನ್ನಿ, ಅವರೂ ಯುವತಿಯನ್ನು ಒಪ್ಪಿದರೆ ಆಕೆಯನ್ನು ಅಪಹರಿಸಿ ನಿಮ್ಮ ಕೈಗೆ ಒಪ್ಪಿಸುವೆ,” ಎಂದು ರಾಜಾರೋಷವಾಗಿ ರಾಮ್ ಕದಮ್ ಭಾಷಣದಲ್ಲಿ ಹೇಳಿದ್ದರು. ಇಂತಹ ಶಾಸಕರು ಇರುವಾಗ ನಮ್ಮ ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಆಶ್ವಾಸನೆ ಸಿಗಲು ಸಾಧ್ಯವೇ ಎನ್ನುವ ಪ್ರಶ್ನೆ ಪ್ರಕರಣದ ಹಿನ್ನೆಲೆಯಲ್ಲಿ ಚರ್ಚೆಗೆ ಬಂದಿತ್ತು. ತಮ್ಮ ಈ ಹೇಳಿಕೆ ವಿವಾದ ಆಗುತ್ತಿದ್ದಂತೆಯೇ ರಾಮ್‌ ಕದಮ್ ಕ್ಷಮೆ ಯಾಚಿಸಿದರು.

ಉಮಾ ದೇವಿ ಖಾಟಿಕ್‌, ಮಧ್ಯಪ್ರದೇಶದ ಬಿಜೆಪಿ ಶಾಸಕಿ

ಕಳೆದ ವಾರ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಉಮಾ ದೇವಿ ಖಾಟಿಕ್ ಅವರ ಮಗ ಪ್ರಿನ್ಸ್‌ದೀಪ್ ಖಾಟಿಕ್, ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬಹಿರಂಗವಾಗಿ ಫೇಸ್‌ಬುಕ್ ಮೂಲಕ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ, ದೇವಿ ತಮ್ಮ ಮಗನ ಪರವಾಗಿ ಕ್ಷಮೆ ಯಾಚಿಸಿದ್ದಾರೆ. “ಜ್ಯೋತಿರಾದಿತ್ಯ ಸಿಂಧಿಯಾ ದೇಹದಲ್ಲಿ ಜಿವಾಜಿರಾವ್ ರಕ್ತ ಹರಿಯುತ್ತಿದೆ. ಜಿವಾಜಿರಾವ್ ಅವರು ಜಾನ್ಸಿಯ ರಾಣಿಯನ್ನು ಕೊಂದವರು. ನೀನು ಮಧ್ಯಪ್ರದೇಶದ ಹಟ್ಟಾ ಪಟ್ಟಣದ ಕಡೆಗೆ ಒಂದು ಹೆಜ್ಜೆ ಮುಂದಿಟ್ಟರೂ ನಾನು ನಿನಗೆ ಗುಂಡು ಹೊಡೆಯುವೆ. ಇಬ್ಬರಲ್ಲಿ ಒಬ್ಬರು ಸಾಯಬೇಕು,” ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಿನ್ಸ್‌ದೀಪ್ ಬರೆದಿದ್ದರು. ಈ ಬಗ್ಗೆ ಕ್ಷಮೆ ಯಾಚಿಸಿದ ಉಮಾದೇವಿ, ಸ್ವತಃ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದಾಗಿ ತಿಳಿಸಿದರು.

ಸುದರ್ಶನ್‌ ಗುಪ್ತಾ, ಇಂದೋರ್‌ ಬಿಜೆಪಿ ಶಾಸಕ

ಇದೇ ಜೂನ್‌ನಲ್ಲಿ ಮಧ್ಯಪ್ರದೇಶದ ಇಂದೋರ್ ಬಿಜೆಪಿ ಶಾಸಕ ಸುದರ್ಶನ್ ಗುಪ್ತಾ ಅವರು ಮಂಡಸೂರು ಅತ್ಯಾಚಾರದ ಸಂತ್ರಸ್ತೆಯ ಬಗ್ಗೆ ಕೀಳಾಗಿ ಮಾತನಾಡಿ ನಂತರ ಕ್ಷಮೆ ಯಾಚಿಸಿದ್ದರು. ಮಂಡಸೂರು ಆಸ್ಪತ್ರೆಗೆ ಅಲ್ಲಿನ ಸಂಸದೆ ಸುಧೀರ್ ಗುಪ್ತಾ ಜೊತೆಗೆ ಸಂತ್ರಸ್ತೆಯನ್ನು ಭೇಟಿಯಾಗಲು ಹೋದ ಸುದರ್ಶನ ಗುಪ್ತಾ ಮಾಧ್ಯಮದ ಮುಂದೆ, “ಸಂಸದರಿಗೆ ಧನ್ಯವಾದ ಅರ್ಪಿಸಿ. ಅವರು ವಿಶೇಷವಾಗಿ ನಿಮ್ಮನ್ನು ಭೇಟಿಯಾಗಲೆಂದೇ ಬಂದಿದ್ದರು,” ಎಂದು ಹೇಳಿದ್ದರು. ಸಂತ್ರಸ್ತೆಯನ್ನು ಭೇಟಿಯಾಗಲು ಬಂದು ಸಂಸದರು ಅತೀ ದೊಡ್ಡ ಔದಾರ್ಯ ತೋರಿದ್ದಾರೆ ಎನ್ನುವ ಚಿತ್ರಣವನ್ನು ಕೊಟ್ಟದ್ದಕ್ಕಾಗಿ ಶಾಸಕರ ಮಾತು ವಿವಾದಕ್ಕೆ ಕಾರಣವಾಗಿತ್ತು. ನಂತರ ಅವರು ಸಂತ್ರಸ್ಥೆಯ ಕುಟುಂಬದ ಭಾವನೆಗಳಿಗೆ ಘಾಸಿಕೊಳಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದರು.

ಇದನ್ನೂ ಓದಿ : ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಕುರಿತ ಬಿಜೆಪಿ ಮುಖಂಡನ ಟ್ವೀಟ್ ರಹಸ್ಯ

ಮಂಜಿಂದರ್ ಸಿಂಗ್ ಸಿರ್ಸಾ, ದೆಹಲಿ ಬಿಜೆಪಿ ಶಾಸಕ

ಬಿಜೆಪಿ ಶಾಸಕ ಮನ್‌ಜಿಂದರ್‌ ಸಿಂಗ್ ಸಿರ್ಸಾ ಇದೇ ಏಪ್ರಿಲ್‌ನಲ್ಲಿ ಜಾತಿವಾದಿ ಹೇಳಿಕೆ ನೀಡಿ ನಂತರ ಕ್ಷಮೆ ಯಾಚಿಸಿದ್ದರು. ದಲಿತರನ್ನು ಕೆಳಜಾತಿ ಎಂದು ಹೇಳಿದ ಸಿರ್ಸಾ ವಿರುದ್ಧ ದೆಹಲಿ ರಾಜ್ಯದ ಆಡಳಿತ ಪಕ್ಷ ಆಪ್‌ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ ನಂತರ ಅವರು ಕ್ಷಮೆ ಯಾಚಿಸಿದರು.

ಎಸ್‌ ವಿ ಶೇಖರ್‌, ತಮಿಳುನಾಡು ಬಿಜೆಪಿ ಮುಖಂಡ

ಇದೇ ವರ್ಷ ಏಪ್ರಿಲ್‌ನಲ್ಲಿ ತಮಿಳುನಾಡಿನ ಬಿಜೆಪಿ ಮುಖಂಡ ಎಸ್‌ ವಿ ಶೇಖರ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್‌ ಮಾಡಿ ವಿವಾದ ಸೃಷ್ಟಿಸಿ ನಂತರ ಕ್ಷಮೆ ಯಾಚಿಸಿದ್ದರು. “ಮಾಧ್ಯಮ ಮಂದಿ ತಮಿಳುನಾಡಿನ ಅತೀ ಅಗ್ಗದ, ಕೆಳಮಟ್ಟದ, ಅಸಹ್ಯ ವ್ಯಕ್ತಿಗಳು,” ಎಂದು ಅವರು ಹೇಳಿದ್ದರು. ನಂತರ ಅಕಸ್ಮಾತ್ ಆದ ತಪ್ಪಿನಿಂದಾಗಿ ಇಂತಹ ಹೇಳಿಕೆ ಪೋಸ್ಟ್ ಆಗಿದೆ ಎಂದು ಕ್ಷಮೆ ಯಾಚಿಸಿದ್ದರು.

ನೇಪಾಲ್ ಸಿಂಗ್, ಬಿಜೆಪಿ ಸಂಸದ

ಇದೇ ವರ್ಷದ ಜನವರಿಯಲ್ಲಿ ರಾಂಪುರದ ಬಿಜೆಪಿ ಸಂಸದ ನೇಪಾಲ್ ಸಿಂಗ್ ಸೈನಿಕರ ಬಗ್ಗೆ ಉಡಾಫೆಯ ಮಾತುಗಳನ್ನಾಡಿ ವಿವಾದ ಸೃಷ್ಟಿಸಿದ್ದರು. “ಸೈನಿಕರು ಸೇನೆಯಲ್ಲಿ ನಿತ್ಯವೂ ಸಾಯುತ್ತಾರೆ. ಸೇನೆಯ ಸಂಘರ್ಷದಲ್ಲಿ ಸಿಬ್ಬಂದಿ ಸಾಯದೆ ಇರುವ ಯಾವುದಾದರೂ ಒಂದು ದೇಶವಿದ್ದರೆ ಹೇಳಿ. ಗ್ರಾಮದಲ್ಲೂ ಸಂಘರ್ಷವಾದರೆ ಒಬ್ಬರಲ್ಲ ಒಬ್ಬರು ಸಾಯುತ್ತಾರೆ. ವ್ಯಕ್ತಿಗಳು ಸಾಯದೆ ಇರುವ ಒಂದು ಸಾಧನವಿದ್ದರೆ ಹೇಳಿ. ಗುಂಡು ತಗಲಿದಾಗ ಗಾಯವಾಗದೆ ಇರುವ ಒಂದು ವಸ್ತು ಇದ್ದರೆ ತಿಳಿಸಿ, ಅದನ್ನು ಮಾಡಿಸೋಣ,” ಎಂಬ ನೇಪಾಲ್ ಸಿಂಗ್ ಅವರ ಮಾತುಗಳು ಸೇನೆಯನ್ನು ಮುಂದಿಟ್ಟು ತಮ್ಮ ರಾಷ್ಟ್ರಭಕ್ತಿಯನ್ನು ಘೋಷಿಸುತ್ತಿದ್ದ ಬಿಜೆಪಿಗೆ ದೊಡ್ಡ ಮುಜುಗರವಾಗಿತ್ತು. ನಂತರ ಕ್ಷಮೆ ಯಾಚಿಸಿದ ಸಿಂಗ್, ತಮ್ಮ ಮಾತನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದರು.

ಇವು ಈ ವರ್ಷ ಬಿಜೆಪಿ ಮುಖಂಡರು ಯಾಚಿಸಿರುವ ಕ್ಷಮಾ ಪ್ರಕರಣಗಳು. ಕಳೆದ ನಾಲ್ಕು ವರ್ಷಗಳಲ್ಲಿ ಇನ್ನೂ ಹಲವು ಪ್ರಕರಣಗಳಲ್ಲಿ ಬಿಜೆಪಿ ನಾಯಕರು ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಕ್ಷಮೆ ಯಾಚಿಸಿದ್ದರು. ೨೦೧೭ರಲ್ಲಿ ಕರ್ನಾಟಕದ ಎಂಎಲ್‌ಸಿ ಮಹಾಂತೇಶ್ ಕವಟಗಿಮಠ ಸಾರ್ವಜನಿಕವಾಗಿ ಬಳಸುವ ವಾಟ್ಸಪ್‌ ಗುಂಪಿನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿ ಕ್ಷಮೆ ಯಾಚಿಸಿದ್ದರು. ೨೦೧೭ರ ಏಪ್ರಿಲ್‌ನಲ್ಲಿ ಬಿಜೆಪಿಯ ತರುಣ್ ವಿಜಯ್ ದಕ್ಷಿಣ ಭಾರತೀಯರ ಬಗ್ಗೆ ಜನಾಂಗೀಯ ತಾರತಮ್ಯದ ಹೇಳಿಕೆ ನೀಡಿ ನಂತರ ಕ್ಷಮೆ ಯಾಚಿಸಿದ್ದರು. ೨೦೧೬ರಲ್ಲಿ ಉತ್ತರ ಪ್ರದೇಶದ ಚುನಾವಣೆಯ ಸಂದರ್ಭ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರನ್ನು '‘ವೇಶ್ಯೆಗಿಂತಲೂ ಕೀಳು,” ಎಂದು ಹೇಳಿದ ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ನಂತರ ಕ್ಷಮೆ ಯಾಚಿಸಿದ್ದರು. ಈ ಪ್ರಕರಣದಲ್ಲಿ ಅರುಣ್ ಜೇಟ್ಲಿ ಮೊದಲಾದ ಹಿರಿಯ ಬಿಜೆಪಿ ಮುಖಂಡರೂ ತಮ್ಮ ಸಹೋದ್ಯೋಗಿಯ ಹೇಳಿಕೆಗೆ ಮಾಯಾವತಿಯವರ ಬಳಿ ಕ್ಷಮೆ ಯಾಚಿಸಿದ್ದರು. ೨೦೧೫ರಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಆಗಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬಗ್ಗೆ ನೀಡಿದ ಹೇಳಿಕೆಗಾಗಿ ಕೇಂದ್ರದ ಬಿಜೆಪಿ ಸರ್ಕಾರವೇ ಕ್ಷಮೆ ಯಾಚಿಸಿತ್ತು. ೨೦೧೪ರಲ್ಲಿ ಬಿಜೆಪಿ ಮುಖಂಡ ದೂದ್ ಕುಮಾರ್, "ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೈ ಕಡಿಯಬೇಕು," ಎನ್ನುವ ಹೇಳಿಕೆ ನೀಡಿ ನಂತರ ಕ್ಷಮೆ ಯಾಚಿಸಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ನಾಯಕರು ಕ್ಷಮೆ ಯಾಚಿಸಿದ ಪ್ರಕರಣಗಳನ್ನು ಪಟ್ಟಿ ಮಾಡುತ್ತ ಹೋದರೆ ಪುಟಗಟ್ಟಲೆ ಬರೆಯಬಹುದು. ನಕಲಿ ಪೋಸ್ಟ್‌ಗಳು, ನಕಲಿ ಸುದ್ದಿಗಳು ಮತ್ತು ತಾರತಮ್ಯ, ಜನಾಂಗೀಯ ದ್ವೇಷದ ಮಾತುಗಳನ್ನು ಆಡುವುದು ರಾಜಕೀಯ ಮುಖಂಡರಿಗೆ ಸುಲಭದ ಕೆಲಸವಾಗುತ್ತಿದೆ. ವಿರೋಧ ಪಕ್ಷಗಳೂ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೆ. ಆದರೆ, ಆಡಳಿತದಲ್ಲಿರುವ ಪಕ್ಷ ಈ ನಿಟ್ಟಿನಲ್ಲಿ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More