ಕರಾವಳಿಗೆ ಬಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿರಿಸಿ ಹೋದರೇ ಕುಮಾರಸ್ವಾಮಿ?

ದೇವರ ದರ್ಶನ, ಪ್ರಗತಿ ಪರಿಶೀಲನೆಯಂಥ ವಿಚಾರ ಹೊರತುಪಡಿಸಿದರೆ ಎಚ್‌ಡಿಕೆ ಅವರ ಕರಾವಳಿ ಭೇಟಿಯಲ್ಲಿ ವಿಶೇಷವೇನೂ ಕಾಣಲಿಲ್ಲ. ಸಿಎಂ ಆದ ನಂತರದ ಅವರ ಮೊದಲ ಅಧಿಕೃತ ಪ್ರವಾಸದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಮಹತ್ವದ ಯಾವುದೇ ತೀರ್ಮಾನವೂ ಅವರಿಂದ ಹೊರಬೀಳಲಿಲ್ಲ

ಮುಖ್ಯಮಂತ್ರಿ ಗಾದಿಗೇರಿ ನೂರು ದಿನಗಳು ಪೂರೈಸಿದ ಬೆನ್ನಿಗೇ ಎಚ್‌ ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಕರಾವಳಿಯ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗೆ ಶುಕ್ರವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಕುಮಾರಸ್ವಾಮಿ ಕರಾವಳಿಗೆ ಭೇಟಿ ನೀಡುವುದನ್ನು ಹೇಗೆ ಬಯಸಿದ್ದರೋ ಹಾಗೆಯೇ ಕರಾವಳಿ ಜನತೆ ಕೂಡ ಅವರ ಆಗಮನವನ್ನು ಬಯಸಿತ್ತು. “ಸಾಲ ಮನ್ನಾ ಮಾಡುವಾಗ ಕರಾವಳಿ ಭಾಗದ ರೈತರನ್ನು ಪರಿಗಣಿಸಿಲ್ಲ”, “ಬಜೆಟ್ ವೇಳೆ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಲಾಗಿದೆ,” “ಕಸ್ತೂರಿ ರಂಗನ್ ವರದಿ ಜಾರಿಗೆ ತರುವ ಸಂಬಂಧ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಮ್ಮಿಶ್ರ ಸರ್ಕಾರ ವರ್ತಿಸುತ್ತಿದೆ,” “ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಎತ್ತಿನಹೊಳೆ ಯೋಜನೆ ಪರವಾಗಿ ಸಿಎಂ ಮಾತನಾಡಿದರು,” ಎಂಬೆಲ್ಲ ಆರೋಪಗಳ ನಡುವೆ ಅವರ ಪ್ರವಾಸ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು.

ಮಂಗಳೂರು ರೈಲ್ವೆ ವಿಭಾಗ ರಚನೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಭಿವೃದ್ಧಿ, ಬಜ್ಪೆ ವಿಮಾನ ನಿಲ್ದಾಣ ವಿಸ್ತರಣೆ, ಮೀನುಗಾರರ ಹಲವು ಬೇಡಿಕೆ, ಕರಾವಳಿ ನಿಯಂತ್ರಣ ವಲಯದ ಕೇಂದ್ರ ಕಚೇರಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರ ಬೇಡಿಕೆ, ವಾರಾಹಿ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನ, ವರ್ತುಲ ರಸ್ತೆ, ಮೆಟ್ರೋ ಸಾರಿಗೆ, ಕಂದಾಯ ಇಲಾಖೆ ಮತ್ತು ಭೂಪರಿವರ್ತನೆಯ ಸಮಸ್ಯೆಗಳಿಗೆ ಪರಿಹಾರ, ಮರಳು ನೀತಿ ಅನುಷ್ಠಾನ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚನೆ, ಔದ್ಯಮಿಕ ಪಾರ್ಕುಗಳ ಸ್ಥಾಪನೆ, ಸಾಗರ ಮಂಡಳಿ ರಚನೆ, ಹೀಗೆ ಹಲವು ಬೇಡಿಕೆಗಳ ದೊಡ್ಡ ಪಟ್ಟಿಯೇ ಕುಮಾರಸ್ವಾಮಿ ಅವರ ಮುಂದಿತ್ತು. ಬಜೆಟ್ ಮಂಡನೆ ವೇಳೆ ರೈತರನ್ನು ಅಲಕ್ಷಿಸಿದ್ದು, ಇತ್ತೀಚೆಗೆ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಉಡುಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ನೀಡದೆ ಇದ್ದದ್ದನ್ನು ಕೂಡ ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕಿತ್ತು.

ಆದರೆ, ಅವರ ಕರಾವಳಿ ಭೇಟಿ ಕೇವಲ ಕೃಷ್ಣಮಠದ ಭೇಟಿಗೆ ಮಾತ್ರವೇ ಸೀಮಿತವಾಯಿತೇ ಎಂಬ ಪ್ರಶ್ನೆ ಮೂಡಿದೆ. ತಮ್ಮ ಮೊದಲ ಅಧಿಕೃತ ಭೇಟಿಯಲ್ಲಿ ಅವರು ಕರಾವಳಿ ಜನರ ನಿರೀಕ್ಷೆಗಳಿಗೆ ದೊಡ್ಡಮಟ್ಟದಲ್ಲಿ ಸ್ಪಂದಿಸಿದಂತೆ ತೋರುತ್ತಿಲ್ಲ. ‘ಸಭೆ ಕರೆಯಲಾಗುವುದು’, ‘ಸೂಕ್ತ ಪರಿಹಾರಕ್ಕೆ ಮುಂದಾಗಲಾಗುವುದು’, ‘ಸೂಚಿಸುತ್ತೇವೆ’, ‘ಚರ್ಚಿಸುತ್ತೇವೆ’ ಎಂಬ ಮಾತುಗಳ ಆಚೆಗೆ ಕುಮಾರಸ್ವಾಮಿ ಅವರ ನಿರ್ಧಾರಗಳು ಹರಳುಗಟ್ಟಲಿಲ್ಲ. ಎರಡೂ ಜಿಲ್ಲೆಗಳ ಪ್ರಗತಿ ಪರಿಶೀಲನೆಯನ್ನು ಮೀರಿ ಕರಾವಳಿಗೆ ಅಗತ್ಯವಾಗಿದ್ದ ವಿಶೇಷ ಘೋಷಣೆಗಳನ್ನಾಗಲೀ ಮಾಡಲಿಲ್ಲ. ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದ್ದು ಬಿಟ್ಟರೆ ಇದೊಂದು ಸಾಮಾನ್ಯ ಭೇಟಿಯಾಗಿಯೇ ಉಳಿಯಿತು.

ಉಡುಪಿಯಲ್ಲಿ ಬಿದ್ದ ಬೂದಿಮಳೆ, ಎತ್ತಿನಹೊಳೆ ಯೋಜನೆ, ಕಸ್ತೂರಿ ರಂಗನ್ ವರದಿಯಂತಹ ಪರಿಸರದ ವಿಚಾರಗಳ ಬಗ್ಗೆಯೂ ಅವರ ಮಾತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆಯೇ ಇತ್ತು. “ಬೂದಿಮಳೆ ಆಗಿದ್ದರೆ ತಾಂತ್ರಿಕ ಸಮಿತಿ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ,” ಎನ್ನುವ ಅವರ ಮಾತು ವಿಷಯದ ಗಂಭೀರತೆಯನ್ನು ಸರ್ಕಾರ ಅರಿತಿಲ್ಲ ಎಂಬುದನ್ನು ಸಾರುತ್ತಿತ್ತು. ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಬಗ್ಗೆಯೂ ಅವರು ಬಹಳ ಜಾಣ್ಮೆಯ ಮಾತುಗಳನ್ನಾಡಿದ್ದಾರೆ. “ಪ್ರವಾಹ ವಿಕೋಪದಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಮೊದಲು ಅದನ್ನು ಪರಿಹರಿಸಲೋ ಅಥವಾ ಎತ್ತಿನಹೊಳೆ ವಿಚಾರ ಕೈಗೆತ್ತಿಕೊಳ್ಳಲೋ?” ಎಂದು ಮಂಗಳೂರಿನಲ್ಲಿ ಸುದ್ದಿಗಾರರಿಗೆ ಮರುಪ್ರಶ್ನೆ ಎಸೆದರು. ಎರಡೂ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಅಕ್ರಮ ಮರಳುಗಾರಿಕೆ ತಡೆ ನಿಟ್ಟಿನಲ್ಲಿ ಒಂದು ದೃಢ ನಿರ್ಧಾರವನ್ನಾದರೂ ಪ್ರಕಟಿಸುತ್ತಾರೆ ಎಂಬ ನಿರೀಕ್ಷೆಯನ್ನೂ ಎಚ್‌ಡಿಕೆ ಹುಸಿಯಾಗಿಸಿದರು. ಮರಳು ನೀತಿ ಬಗ್ಗೆ ಅವರಿಂದ ಸ್ಪಷ್ಟ ನಿರ್ಧಾರ ಹೊರಬೀಳಲಿಲ್ಲ. ಬದಲಿಗೆ, ಈ ಬಗ್ಗೆ ಬೆಂಗಳೂರಿನಲ್ಲಿ ಶಾಸಕರ ಸಭೆ ನಡೆಸುವುದಾಗಿ ಹೇಳುವುದಕ್ಕೆ ಅವರ ಮಾತುಗಳು ಸೀಮಿತವಾದವು.

ಇದನ್ನೂ ಓದಿ : ಸ್ಥಳೀಯ ಸಂಸ್ಥೆಗಳ ಚುನಾವಣೆ: ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಾರುಪತ್ಯ, ಬಿಜೆಪಿ ಚಿಗುರು

ಇದೆಲ್ಲದರ ನಡುವೆ, ಇನ್ನೆರಡು ವಾರ ಬಿಟ್ಟು ಪುನಃ ಕರಾವಳಿಗೆ ಆಗಮಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆಗ ಅವರು ಕೈಗೊಳ್ಳಬಹುದಾದ ನಿರ್ಧಾರಗಳನ್ನು ಊಹಿಸುವ ಸರದಿ ಈಗ ಕರಾವಳಿ ಜನರದ್ದು. ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದು ಅವರಿಗೆ ರಾಜಕೀಯವಾಗಿ ಕೂಡ ಮುಖ್ಯವಾಗಿದೆ. ಅವರ ಎದುರಾಳಿಗಳ ಬಾಯಿ ಮುಚ್ಚಿಸಲು ಕರಾವಳಿಯ ಅಭಿವೃದ್ಧಿ ಉತ್ತಮ ಅಸ್ತ್ರ. ಅದನ್ನು ಸ್ವತಃ ಕುಮಾರಸ್ವಾಮಿ ಬಲ್ಲರು. ಅವರ ಮರುಭೇಟಿಯ ಉದ್ದೇಶವೂ ರಾಜಕೀಯ ನೆಲೆಯಲ್ಲಿ ಅದನ್ನೇ ಸಾರುತ್ತಿದೆ. ಆದರೆ ದೃಢ ನಿರ್ಧಾರ, ಗಟ್ಟಿ ತೀರ್ಮಾನಗಳೊಂದಿಗೆ ಅವರು ಮತ್ತೆ ಕರಾವಳಿಗೆ ಹೆಜ್ಜೆ ಇಡಬೇಕಿದೆ. ಘಟ್ಟದ ಕೆಳಗಿನ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ನೆಲೆ ಕಲ್ಪಿಸುವ ದೃಷ್ಟಿಯಿಂದಲೂ ಅಂತಹ ನಿರ್ಧಾರ ಮುಖ್ಯವಾಗಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More