ತೆಲಂಗಾಣ ಸಿಎಂ ಕೆಸಿಆರ್‌ಗೆ ದುಬಾರಿಯಾದ ಚುನಾವಣಾ ಅತ್ಯುತ್ಸಾಹ, ಹಗುರ ಮಾತು!

ತೆಲಂಗಾಣದಲ್ಲಿ ರಾಜಕೀಯ ಬಿಸಿ ಏರತೊಡಗಿದೆ. ಎದುರಾಳಿ ಪಕ್ಷಗಳು ಸಂಘಟಿತರಾಗಲು ಅವಕಾಶ ನೀಡಬಾರದೆಂದು ಅವಧಿಪೂರ್ವ ವಿಧಾನಸಭೆ ವಿಸರ್ಜಿಸಿರುವ ಕೆ ಚಂದ್ರಶೇಖರ ರಾವ್, ತಾವೇ ತಾವಾಗಿ ಆ ಎದುರಾಳಿಗಳು ಸಂಘಟಿತರಾಗಲು ವೇದಿಕೆ ಕಲ್ಪಿಸಿದ್ದಾರೆ. ಹಗುರ ಮಾತು ದುಬಾರಿ ಎನ್ನಿಸಿದೆ

ಆಡಳಿತ ಪಕ್ಷ ಅವಧಿಗೆ ಮುನ್ನ ವಿಧಾನಸಭೆಯನ್ನು ವಿಸರ್ಜಿಸಿ, ಚುನಾವಣೆ ಎದುರಿಸಲು ಅತ್ಯುತ್ಸಾಹ ಪ್ರಕಟಿಸಿದ ಬೆನ್ನಿಗೇ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅಧಿಕಾರಾವಧಿ ಇನ್ನೂ ಒಂಬತ್ತು ತಿಂಗಳು ಬಾಕಿ ಇದ್ದಾಗ್ಯೂ ರಾಜಕೀಯ ತಂತ್ರಗಾರಿಕೆ ಮೆರೆಯಲು ಮುಂದಾದ ಹಂಗಾಮಿ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ ರಾವ್ ಅವರಿಗೆ, ಹೂಡಿದ್ದ ಆ ತಂತ್ರವೇ ತಿರುಗಿ ಹೊಡೆಯುವ ಸಾಧ್ಯತೆ ಗೋಚರಿಸತೊಡಗಿದೆ. ಕೆಸಿಆರ್ ಅವರ ಅತ್ಯುತ್ಸಾಹದ ನಡೆ, ನುಡಿಗಳು ರಾಜಕೀಯ ಎದುರಾಳಿಗಳ ಬಾಯಿಗೆ ಟೀಕಾಸ್ತ್ರಗಳಾಗಿ ಪರಿಣಮಿಸಿವೆ. ಕೆಸಿಆರ್‌ ವಿರುದ್ಧ ಟೀಕಾ ಪ್ರಹಾರದ ಜೊತೆಗೆ ಕಾನೂನು ಸಮರವೂ ಆರಂಭಗೊಂಡಿದೆ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ ಸಂಗತಿ,ನಿಜ. ಆದರೆ, ಚುನಾವಣಾ ವೇಳಾ ಪಟ್ಟಿ ಕುರಿತು ಅವರಾಡಿದ ವ್ಯಾಪ್ತಿ ಮೀರಿದ ಮಾತು ತುಸು ದುಬಾರಿ ಎನ್ನಿಸಿದೆ.

ಮೊನ್ನೆ ಗುರುವಾರ ಸಚಿವ ಸಂಪುಟ ಸಭೆ ನಡೆಸಿ, ವಿಧಾನಸಭೆ ವಿಸರ್ಜನೆಯ ನಿರ್ಣಯ ಕೈಗೊಂಡು, ಅದನ್ನು ರಾಜ್ಯಪಾಲರಿಗೆ ತಲುಪಿಸಿ,೧೦೫ ಅಭ್ಯರ್ಥಿಗಳ ಹುರಿಯಾಳುಗಳ ಪಟ್ಟಿ ಜೊತೆ ಸುದ್ದಿಗೋಷ್ಠಿಗೆ ಬಂದ ಕೆಸಿಆರ್ ತಂತ್ರಗಳು ಅಲ್ಲಿಯವರೆಗೆ ನಿಖರವಾಗಿಯೇ ಇದ್ದಂತಿದ್ದವು. ಬಿಜೆಪಿ, ಕಾಂಗ್ರೆಸ್ ಸಹಿತ ಯಾವುದೇ ಪಕ್ಷ ಅಥವಾ ಮಿತ್ರಕೂಟದ ಶಕ್ತಿ ಏಕತ್ರಗೊಳ್ಳುವ ಮತ್ತು ಹೊಸ ವಿವಾದಗಳು ಸುತ್ತಿಕೊಳ್ಳುವ ಮೊದಲೇ ಮತ್ತೊಮ್ಮೆ ತೆಲಂಗಾಣದ ಅಧಿಕಾರ ಹಿಡಿಯುವುದು ಅವರ ತಂತ್ರಗಳಲ್ಲೊಂದು. ಆದರೆ, ಸುದ್ದಿಗೋಷ್ಠಿಯಲ್ಲಿ ನೀಡಿದ ಕೆಲವು ಹೇಳಿಕೆಗಳೇ ವಿವಾದಕ್ಕೆ ಕಾರಣವಾದವು. ಮರು ಆಯ್ಕೆ ವಿಷಯದಲ್ಲಿ ಅತ್ಯಂತ ಆತ್ಮವಿಶ್ವಾಸ ತೋರುತ್ತಿರುವ ರಾವ್‌, “ಚುನಾವಣಾ ಆಯೋಗದ ಜೊತೆ ಮಾತನಾಡಿದ್ದೇನೆ. ಅಕ್ಟೋಬರ್‌ ನಲ್ಲಿ ಚುನಾವಣೆ ಘೋಷಣೆಯಾಗಿ, ನವೆಂಬರಿನಲ್ಲಿ ಮತದಾನ ನಡೆದು, ಡಿಸೆಂಬರ್‌ ನಲ್ಲಿ ಫಲಿತಾಂಶ ಬರಬಹುದು,’’ ಎಂದು ಹೇಳಿದ್ದಂತೂ ವ್ಯಾಪಕ ಟೀಕೆಗೆ ಮತ್ತು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಯಿತು.

“ಚುನಾವಣೆ ವೇಳಾಪಟ್ಟಿ ಹೇಳಲು ಆಯೋಗವಷ್ಟೆ ಸಮರ್ಥ. ಮುಖ್ಯಮಂತ್ರಿಗೆ ಆ ಹಕ್ಕು ನೀಡಿದವರು ಯಾರು?’’ ಎಂದು ಕಾಂಗ್ರೆಸ್, ಸಿಪಿಐ ಪಕ್ಷಗಳು ಪ್ರಶ್ನಿಸಿದವು. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಟಿಆರ್‌ಎಸ್‌ ನೇತೃತ್ವದ ತೆಲಂಗಾಣ ಸರ್ಕಾರದ ನಡುವಿನ ಮ್ಯಾಚ್‌ ಫಿಕ್ಸಿಂಗ್‌ ಅನ್ನು ಮುಖ್ಯಮಂತ್ರಿ ಹೇಳಿಕೆ ಬಿಂಬಿಸುತ್ತದೆ,’’ ಎಂದಿತು ಕಾಂಗ್ರೆಸ್. “ವಿಧಾನಸಭೆ ವಿಸರ್ಜನೆಯ ಬೆನ್ನಿಗೇ ಮುಖ್ಯಮಂತ್ರಿ ಮಾಡಿದ ಪ್ರಕಟಣೆ ಆಕ್ಷೇಪಾರ್ಹ,’’ ಎಂದ ಸಿಪಿಐ, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಿತು. ರಾಜಕೀಯ ಪಕ್ಷಗಳ ಮೇಲಾಟ, ಸಿಕ್ಕುಗಳಲ್ಲಿ ಆಯೋಗ ಸಿಲುಕುತ್ತಿರುವುದನ್ನು ಗಮನಿಸಿದ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್, “ಚುನಾವಣೆ ಯಾವಾಗ ನಡೆಯುತ್ತದೆನ್ನುವುದು ಯಾರಿಗೂ ಗೊತ್ತಿಲ್ಲ. ಆದಾಗ್ಯೂ, ಹಂಗಾಮಿ ಮುಖ್ಯಮಂತ್ರಿ ಉದ್ದೇಶಿತ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ರೀತಿಯನ್ನು ಆಯೋಗ ಖಂಡಿಸುತ್ತದೆ,’’ ಎಂದರು. ಚಂದ್ರಶೇಖರ ರಾವ್‌ ಅಥವಾ ಅವರ ಸರ್ಕಾರದ ಅಧಿಕಾರಿಗಳು ಆಯೋಗದ ಜೊತೆ ಚರ್ಚೆ ನಡೆಸಿದ್ದಾರೆ ಎನ್ನುವುದನ್ನೂ ರಾವತ್‌ ನಿರಾಕರಿಸಿದರು. “ಚುನಾವಣಾ ವೇಳಾ ಪಟ್ಟಿ ಕುರಿತಂತೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ನೇತೃತ್ವದ ಅಧಿಕಾರಿಗಳ ತಂಡ ಸೆ.೧೧ರಂದು ತೆಲಂಗಾಣಕ್ಕೆ ತೆರಳುತ್ತದೆ. ಈ ತಂಡ ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು,’’ ಎಂದರು ರಾವತ್.

ಅಂದರೆ, ಚುನಾವಣೆ ವಿಷಯದಲ್ಲಿ ಕೆಸಿಆರ್‌ ಅಗತ್ಯಕ್ಕಿಂತ ಹೆಚ್ಚು ಉತ್ಸುಕತೆ ತೋರಿದ್ದೇ ಈ ಪ್ರಮಾದಕ್ಕೆ ಕಾರಣವಾಯಿತು ಮತ್ತು ಅವರ ಅವಸರಕ್ಕೆ ಬ್ರೇಕ್‌ ಬೀಳುವುದು ನಿಶ್ಚಿತ ವಾಯಿತು. ಚುನಾವಣೆಯನ್ನು ನಡೆಸಬಹುದಾದಷ್ಟು ಸಿದ್ಧತೆ ನಡೆದಿದೆ ಎಂದು ಆಯೋಗದ ತಂಡವು ದೃಢಪಡಿಸಿದರೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ ಗಢ, ಮಿಜೋರಾಂ ಜೊತೆ ಡಿಸೆಂಬರ್‌ ೧೫ರೊಳಗೆ ತೆಲಂಗಾಣದಲ್ಲಿಯೂ ಆಯೋಗ ಚುನಾವಣೆ ನಡೆಸಬಹುದು. “ಇನ್ನೂ ಸಿದ್ದತೆಯ ಅಗತ್ಯವಿದೆ,’’ ಎಂದು ವರದಿ ನೀಡಿದರೆ ಮುಂದಿನ ವರ್ಷದ ಜನವರಿಯಲ್ಲಿ ಚುನಾವಣೆ ಆಗಬಹುದು. ಈ ಮಧ್ಯೆ, ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಏಳು ಮತ್ತು ಆಂಧ್ರದಿಂದ ತೆಲಂಗಾಣಕ್ಕೆ ೩ ಮಂಡಲಗಳನ್ನು ವರ್ಗಾವಣೆ ಮಾಡುವ ಸಂಬಂಧ ಕೇಂದ್ರ ಗೃಹಸಚಿವಾಲಯ ಹೊರಡಿಸುವ ತಿದ್ದುಪಡಿಗಾಗಿ ಚುನಾವಣಾ ಆಯೋಗ ಕಾಯುತ್ತಿದೆ. “ಸಚಿವಾಲಯ ಈ ಮೊದಲು ತಿದ್ದುಪಡಿ ಪ್ರಕಟಿಸಿತ್ತಾದರೂ, ಅದರಲ್ಲಿ ಕೆಲವು ನ್ಯೂನತೆಗಳಿದ್ದವು. ಕೆಲವೆ ದಿನಗಳಲ್ಲಿ ಅಂತಿಮ ತಿದ್ದುಪಡಿ ಆಗಬಹುದು,’’ ಎಂದಿದ್ದಾರೆ ರಾವತ್. ಇದು ಮತ್ತು ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಚುನಾವಣಾ ಘೋಷಣೆಯ ವಿಷಯದಲ್ಲಿ ನಿರ್ಣಾಯಕವಾಗುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ : ಮುದ್ದಿ ಕಿ ಬಾತ್ | ಜ್ಯೋತಿಷಿಗಳು ಹೇಳಿದಂತೆ ನಡೆಯಬೇಕಂತೆ ತೆಲಂಗಾಣ ಚುನಾವಣೆ!

ಅದೇ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಕುರಿತಂತೆ ಕೆಸಿಆರ್ ಆಡಿದ ಹಗುರ ಮಾತು ಕಾಂಗ್ರೆಸಿಗರು ವ್ಯಗ್ರಗೊಳ್ಳುವಂತೆ ಮಾಡಿದೆ. “ರಾಹುಲ್‌ ದೇಶದ ದೊಡ್ಡ ವಿದೂಷಕ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಂಸತ್ತಿನಲ್ಲಿ ಅವರು ಹೇಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಹೋದರು; ಹೇಗೆ ಅವರನ್ನು ತಬ್ಬಿದರು ಎನ್ನುವುದನ್ನು ಇಡೀ ದೇಶ ನೋಡಿದೆ. ಅವರು ನಮ್ಮ ‘ಆಸ್ತಿ.’ ಅವರು ತೆಲಂಗಾಣಕ್ಕೆಹೆಚ್ಚು ಬಂದಷ್ಟು ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ,” ಎಂದು ರಾವ್‌ ವ್ಯಂಗ ಮಾಡಿದರು. ಸಂಸತ್ತಿನಲ್ಲಿ ಮೋದಿಯವರನ್ನು ರಾಹುಲ್‌ ಅಪ್ಪಿಕೊಂಡ ಸಂದರ್ಭ, ಕಾರಣವಾದ ಅಂಶಗಳು ಅಪಾರ ಮೆಚ್ಚುಗೆ, ವ್ಯಾಪಕ ಟೀಕೆ ಎರಡಕ್ಕೂ ಪಾತ್ರವಾಗಿವೆ. ಮೋದಿ ವಿರೋಧಿಗಳು ರಾಹುಲ್‌ ನಡೆಯನ್ನು ಮೆಚ್ಚಿದರೆ, ಮೋದಿ ಭಕ್ತರು ಅದನ್ನು ಜರಿದಿದ್ದರು. ಈ ವರೆಗೆ ತಮ್ಮ ಪಕ್ಷ ಟಿಆರ್‌ಎಸ್‌ ಯಾವ ಮೈತ್ರಿ ಜೊತೆಗೂ ಇಲ್ಲ ಎನ್ನುತ್ತಿದ್ದ ಕೆ.ಚಂದ್ರಶೇಖರ ರಾವ್‌, ರಾಹುಲ್‌ ಅವರನ್ನು ‘ವಿದೂಷಕ’ನಂತೆ ಬಿಂಬಿಸಲು ಅವರ ‘ಅಪ್ಪಿಕೊ’ ಮಾದರಿಯನ್ನು ಬಳಿಸಿಕೊಂಡಿದ್ದು, ರಾವ್‌ ಯಾರ ಪರ ಎನ್ನುವುದನ್ನು ಜಾಹೀರು ಗೊಳಿಸಿದೆ. ಮಾತ್ರವಲ್ಲ, ಕೆಸಿಆರ್‌ ಬಿಡುಗಡೆ ಮಾಡಿದ ೧೦೫ ಅಭ್ಯರ್ಥಿಗಳ ಪಟ್ಟಿ ಕೂಡ ಬಿಜೆಪಿ ಜತೆ ಚುನಾವಣಾ ಮೈತ್ರಿ ಸಾಧಿಸುವ ಸೂಚನೆ ನೀಡಿದೆ ಎನ್ನುತ್ತವೆ ಕೆಲವು ಮಾಧ್ಯಮ ವರದಿಗಳು.ಕೆಲವು ಭ್ರಷ್ಟರು, ವಿವಾದಾಸ್ಪದ ವ್ಯಕ್ತಿಗಳಿಗೂ ಟಿಆರ್‌ಎಸ್ ಟಿಕೆಟ್‌ ಪ್ರಕಟಿಸಿಲಾಗಿದೆ. ಅಲ್ಲದೇ ರಾಜಕಾರಣ ಕುಟುಂಬಕ್ಕೂ ಅವರು ಮನ್ನಣೆ ನೀಡಿದ್ದಾರೆ ಎನ್ನುವ ಆಕ್ಷೇಪಗಳು ವ್ಯಕ್ತವಾಗತೊಡಗಿವೆ.

ಎದುರಾಳಿಗಳು ಏಕತ್ರಗೊಳ್ಳಲು ಸಮಯಾವಕಾಶ ನೀಡಬಾರದೆನ್ನುವ ಕೆಸಿಆರ್‌ ತಂತ್ರಗಾರಿಕೆಯೇ ಈಗ ಆ ಎಲ್ಲ ರಾಜಕೀಯ ಎದುರಾಳಿಗಳು ಒಂದಾಗಿ ದಾಳಿ ನಡೆಸಲು ತಕ್ಕ ವೇದಿಕೆ ಕಲ್ಪಿಸಿದೆ. “ಕೆಸಿಆರ್ ಮೇಲೆ ಅನೇಕ ಆರೋಪಗಳಿವೆ. ಉಸ್ತುವಾರಿ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ತೆಗೆದು ತೆಲಂಗಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು,’’ ಎಂದು ಕಾಂಗ್ರೆಸ್, ಟಿಡಿಪಿ, ಸಿಪಿಐ ಮತ್ತಿತರ ಪಕ್ಷಗಳ ಮುಖಂಡರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.ಇನ್ನೂ ೯ ತಿಂಗಳು ಬಾಕಿ ಇದ್ದಾಗಲೇ ವಿಧಾನಸಭೆ ವಿಸರ್ಜಿಸಿದ್ದನ್ನು ಪ್ರಶ್ನಿಸಿ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಬಿಜೆಪಿ ಸದ್ಯ ಕೆಸಿಆರ್‌ ವಿರೋಧಿ ಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆಯಾದರೂ, ಅದರ ಮುಂದಿನ ತಂತ್ರಗಾರಿಕೆ ಏನಿರಬಹುದೆನ್ನುವ ಅನುಮಾನ ಇದ್ದೇ ಇದೆ.

ಈ ಮಧ್ಯೆ, ಮುಂದಿನ ೫೦ ದಿನಗಳಲ್ಲಿ ನೂರಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಸಂಘಟಿಸುವುದಾಗಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪ್ರಕಟಿಸಿದೆ. ಬೆನ್ನಿಗೇ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೂ ಪ್ರಚಾರದ ಸಿದ್ಧತೆ ಆರಂಭಿಸಿವೆ. “ಈ ಮಾಸಾಂತ್ಯದೊಳಗೆ ಉತ್ತರ ಮತ್ತು ದಕ್ಷಿಣ ತೆಲಂಗಾಣಗಳಲ್ಲಿ ತಲಾ ಒಂದರಂತೆ ಎರಡು ಬೃಹತ್‌ ಸಮಾವೇಶ ನಡೆಯಲಿದ್ದು, ಅಮಿತ್‌ ಶಾ, ನರೇಂದ್ರ ಮೋದಿ ಆಗಮಿಸುವರು,’’ ಎಂದಿದ್ದಾರೆ ಬಿಜೆಪಿ ಮುಖಂಡ ಎನ್‌ ರಾಮಚಂದರ್ ರಾವ್. ರಾಹುಲ್‌ ಕುರಿತ ಕೆಸಿಆರ್‌ ಹಗುರ ಮಾತಿನಿಂದ ಸಿಟ್ಟಿಗೆದ್ದಿರುವ ಕಾಂಗ್ರೆಸ್ ಕೂಡ ಚುನಾವಣಾ ರ್ಯಾಲಿಗಳನ್ನು ನಡೆಸಲು ಸಜ್ಜಾಗುತ್ತಿದೆ. “ಈ ಚುನಾವಣೆ ಕೆಸಿಆರ್‌ ಕುಟುಂಬ ಮತ್ತು ತೆಲಂಗಾಣ ಜನರ ಮಧ್ಯೆ ನಡೆಯಲಿದೆ. ನಾವು ಖಂಡಿತಾ ಸರ್ಕಾರ ರಚಿಸುತ್ತೇವೆ. ಪಕ್ಷದ ಎಲ್ಲಾ ರಾಷ್ಟ್ರೀಯ ಮುಖಂಡರು ಚುನಾವಣಾ ಸಭೆಗಳಲ್ಲಿ ಭಾಗವಹಿಸುವರು,’’ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಪೊನ್ನಂ ಪ್ರಭಾಕರ್.

ಕೆಸಿಆರ್‌ ಅವರ ಆಡಳಿತ ವೈಖರಿ, ಅಭಿವೃದ್ಧಿ ಕೆಲಸಗಳನ್ನು ರಾಜಕೀಯ ವಿರೋಧಿಗಳು ವಿಮರ್ಶೆಗೆ ಒಡ್ಡಲಾರಂಭಿಸಿದ್ದಾರೆ. “ಹಿಂದೆಂದೂ ಆಗದಷ್ಟು ಕೆಲಸವನ್ನು ತೆಲಂಗಾಣದಲ್ಲಿ ಮಾಡಿರುವುದಾಗಿ ಕೆಸಿಆರ್‌ ಹೇಳಿಕೊಳ್ಳುತ್ತಿದ್ದಾರೆ. ಅಷ್ಟೊಂದು ಕೆಲಸ ಮಾಡಿದ್ದರೆ ೫೦ ದಿನದಲ್ಲಿ ನೂರು ಸಾರ್ವಜನಿಕ ಪ್ರಚಾರ ಸಭೆಗಳನ್ನು ಆಯೋಜಿಸುವ ಅಗತ್ಯವೇನಿತ್ತು. ಕೆಸಿಆರ್‌ ಸರ್ಕಾರ ಕಳೆದ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ ಎನ್ನುವುದನ್ನಿದು ಸೂಚಿಸುತ್ತದೆ. ಆದರೂ, ೧ ಲಕ್ಷ ಕೋಟಿ ಸಾಲವನ್ನು ರಾಜ್ಯದ ಮೇಲೆ ಹೊರಿಸಿದ್ದಾರೆ,’’ ಎನ್ನುವುದು ಕಾಂಗ್ರೆಸ್ ಪಕ್ಷದ ಪ್ರಧಾನ ಆಕ್ಷೇಪ. ಆದರೆ, ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಪೆಟ್ಟು ನೀಡಲು ಕೆಸಿಆರ್‌ ಪಡೆ ಮುಂದಾಗಿದೆ.‌ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರದ ಮಾಜಿ ಸ್ಪೀಕರ್‌ ಮತ್ತು ಹಿರಿಯ ರಾಜಕಾರಣಿ ಕೆ ಆರ್‌ ಸುರೇಶ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಟಿಆರ್‌ಎಸ್‌ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ. “ಕೆಸಿಆರ್‌ ನೇತೃತ್ವದ‌ ಸರ್ಕಾರ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳು ಹಳಿ ತಪ್ಪಬಾರದು. ಕಾರು ವೇಗವಾಗಿ ಚಾಲನೆ ಗೊಳ್ಳುತ್ತಿರುವ ಇಂಥ ಸಂದರ್ಭದಲ್ಲಿ ಚಾಲಕನನ್ನು ಬದಲಿಸಬಾರದು. ಮತ್ತೊಂದು ಅವಧಿ ಅವರಿಗೆ ಅವಕಾಶ ನೀಡಬೇಕು,’’ ಎಂದಿದ್ದಾರೆ ರೆಡ್ಡಿ. ೨೦೦೯-೨೦೧೪ ರ ಮಧ್ಯೆ ಆಂಧ್ರ ವಿಧಾನಸಭೆಯ ಸ್ಪೀಕರ್‌ ಆಗಿದ್ದ ಸುರೇಶ್ ರೆಡ್ಡಿ ಅವರ ಕುಟುಂಬದ ಮೂರು ತಲೆ ಮಾರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿತ್ತು. ಈಗ ಆ ನಿಷ್ಠೆ ಬದಲಿಸಿ, ಕೆಸಿಆರ್‌ ನಾಯಕತ್ವಕ್ಕೆ ಜೈ ಎಂದಿದ್ದಾರೆ. ಹೀಗೆ, ಎದುರಾಳಿ ಪಕ್ಷಗಳನ್ನು ದುರ್ಬಲಗೊಳಿಸಿ ತಾವು ಬಲಗೊಳ್ಳುವ ರಾಜಕೀಯ ಮೇಲಾಟ; ಇದರ ಲಾಭ ಪಡೆಯುವ ಆಯಾರಾಂ-ಗಯಾರಾಂಗಳ ಯಾದಿ ತೆಲಂಗಾಣ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಯುವ ಸಾಧ್ಯತೆ ತೆಲಂಗಾಣದಲ್ಲಿ ಕಾಣುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More