ತುರ್ತಾಗಿ ಮುಖ್ಯಮಂತ್ರಿ ಆಗಿಬಿಡಬೇಕೆಂಬ ಯಡಿಯೂರಪ್ಪ ಕನಸು ನನಸಾಗಬಹುದೇ?

ಸಿಎಂ ಗದ್ದುಗೆ ಏರುವ ಯಡಿಯೂರಪ್ಪ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್‌ ಸೊಪ್ಪು ಹಾಕುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ನಾಯಕರು ಬಿಎಸ್‌ವೈ ಅವರನ್ನು ತಟಸ್ಥವಾಗಿರುವಂತೆ ತಾಕೀತು ಮಾಡುತ್ತಿದ್ದಾರೆ ಎನ್ನಲಾಗಿದೆ

ಬಿಜೆಪಿ ಕಾರ್ಯಕಾರಣಿ ಸಭೆಗೆ ಹಾಜರಾಗಲು ನವದೆಹಲಿಗೆ ತೆರಳಿದ್ದ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪನವರು ಸಭೆಗೆ ಹಾಜರಾಗದೆ ಬೆಂಗಳೂರಿಗೆ ವಾಪಸಾದ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ವಿಭಿನ್ನ ಚರ್ಚೆಗಳಿಗೆ ನಾಂದಿ ಹಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ಅವರು, “ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಸರ್ವ ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ತಮ್ಮ ಕಾರ್ಯಕ್ರಮ ಮೊಟಕುಗೊಳಿಸಿ ನವದೆಹಲಿಯಿಂದ ಬೆಂಗಳೂರಿಗೆ ಮರಳಿರುವ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಪ್ರಯತ್ನದಲ್ಲಿದ್ದಾರೆ,” ಎಂದು ವ್ಯಂಗವಾಡಿದ್ದಾರೆ. ಮುಂದುವರಿದ ಅವರು, “ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಡುವುದಿಲ್ಲ,” ಎಂದಿದ್ದಾರೆ.

ಇದೇ ವೇಳೆ, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ನಾಯಕರ ನಡುವಿನ ಮೊದಲ ಹಂತದ ಬಹಿರಂಗ ಗುದ್ದಾಟದಲ್ಲಿ ಮುಖಭಂಗ ಅನುವಿಸಿರುವ ಜಾರಕಿಹೊಳಿ ಸಹೋದರರು ಬಿಎಸ್‌ವೈ ಸಂಪರ್ಕದಲ್ಲಿದ್ದಾರೆ ಎಂಬ ಉಹಾಪೋಹಗಳು ಕೇಳಿಬಂದಿವೆ. ರಾಜ್ಯ ಕಾಂಗ್ರೆಸ್‌ನಲ್ಲಿ ಉಲ್ಬಣಗೊಂಡಿರುವ ಆಂತರಿಕ ಭಿನ್ನಮತವನ್ನು ಶಮನ ಮಾಡುವ, ಜಾರಕಿಹೊಳಿ ಸಹೋದರರನ್ನು ನಿಯಂತ್ರಿಸುವ ಶಕ್ತಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಬಿಟ್ಟರೆ ಬೇರೆ ಯಾರಿಗೂ ಇಲ್ಲ ಎನ್ನಲಾಗುತ್ತಿದೆ. ಆದರೆ, ಸಿದ್ದರಾಮಯ್ಯನವರು ಯುರೋಪ್‌ ಪ್ರವಾಸದಲ್ಲಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸದೆ ತಟಸ್ಥರಾಗಿ ಉಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, “ಲಕ್ಷ್ಮೀ ಹೆಬ್ಬಾಳ್ಕರ್‌-ಜಾರಕಿಹೊಳಿ ಸಹೋದರರ ನಡುವಿನ ಗುದ್ದಾಟ ಬೆಳಗಾವಿಯಿಂದ ಬೆಂಗಳೂರು ಪ್ರವೇಶಿಸಿ ಯುರೋಪ್‌ಗೆ ತಲುಪಲಿದೆ. ಅಲ್ಲಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ,” ಎಂದು ಹೇಳಿದ್ದರು.

ಈ ಮಧ್ಯೆ, ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಬೆಂಬಲವಾಗಿ ನಿಂತಿರುವ ಸಚಿವ ಡಿ ಕೆ ಶಿವಕುಮಾರ್‌ ಅವರನ್ನು ಐಟಿ, ಇಡಿ ಮತ್ತು ಸಿಬಿಐಗಳ ಮೂಲಕ ಕಟ್ಟಿಹಾಕಿ ಜಾರಕಿಹೊಳಿ ಸಹೋದರರನ್ನು ಓಲೈಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಇದಕ್ಕೆ ಪೂರಕವೆಂಬಂತೆ ಮಾತನಾಡಿರುವ ಡಿಕೆಶಿ ಸಹೋದರ ಸಂಸದ ಡಿ ಕೆ ಸುರೇಶ್‌, “ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಿಜೆಪಿ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಆ ಸಂಸ್ಥೆಗಳು ಇಡಿ ಮೋರ್ಚಾ, ಐಟಿ ಮೋರ್ಚಾ ಮತ್ತು ಸಿಬಿಐ ಮೋರ್ಚಾಗಳಾಗಿವೆ. ಅಧಿಕಾರಿಗಳು ನಮ್ಮನ್ನು ಬಂಧಿಸಲು ಮುಂದಾದರೂ, ನಾವು ಹೆದರದೆ ಕಾನೂನು ಹೋರಾಟ ಮುಂದುವರಿಸುತ್ತೇವೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ಕೆಡವಲು ರಾಜ್ಯ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಪಕ್ಷದ ಏಳು ಶಾಸಕರಿಗೆ ಬಿಜೆಪಿ ನಾಯಕರು ಆಮಿಷ ಒಡ್ಡಿದ್ದಾರೆ,” ಎಂದು ತಿಳಿಸಿದ್ದಾರೆ. ಇದೇ ವೇಳೆ, ಕಳೆದ ವರ್ಷ ಜನವರಿಯಲ್ಲಿ ಬಿಎಸ್‌ವೈ ಅವರು ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರಿಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಡಿ ಕೆ ಸುರೇಶ್‌ ಬಿಡುಗಡೆ ಮಾಡಿರುವ ಪತ್ರದ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಎಸ್‌ವೈ, “ಡಿಕೆ ಸಹೋದರರು ಬಿಡುಗಡೆ ಮಾಡಿರುವ ಪತ್ರ ನಕಲಿಯಾಗಿದೆ. ರಾಜ್ಯದಲ್ಲಿರುವ ಅಪವಿತ್ರ ಸರ್ಕಾರ ಉಳಿಸಲು ಕಾಂಗ್ರೆಸ್‌ ಪಕ್ಷವು ಹತಾಶೆಯಿಂದ ಈ ಕಾರ್ಯದಲ್ಲಿ ನಿರತವಾಗಿದೆ. ನಾನು ಇಂತಹ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ. ಇದು ಸಾಬೀತಾದರೆ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ,” ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಚಾಣಕ್ಯಪುರಿ | ಸಮ್ಮಿಶ್ರ ಸರ್ಕಾರ ಕೆಡವಲು ಬಿಎಸ್‌ವೈ ಸನ್ನದ್ಧ, ಹೈಕಮಾಂಡ್‌ಗಿಲ್ಲ ಒಲವು!

ಆದರೆ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿ, ಸಿಎಂ ಗದ್ದುಗೆ ಏರುವ ಬಿಎಸ್‌ವೈ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್‌ ಸೊಪ್ಪು ಹಾಕುತ್ತಿಲ್ಲ ಎನ್ನುವ ಮಾತುಗಳೂ ಕೇಳಿಬಂದಿವೆ. 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ನಾಯಕರು ಬಿಎಸ್‌ವೈ ಅವರನ್ನು ತಟಸ್ಥವಾಗಿರುವಂತೆ ತಾಕೀತು ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರ ಹಿಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಅದರ ಲಾಭ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ಗೆ ದೊರೆಯಲಿದೆ. ಇಂತಹ ನಡೆಯಿಂದ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನೆಡೆಯೇ ಆಗಲಿದೆ ಎನ್ನುವ ಅಭಿಪ್ರಾಯ ಕೇಂದ್ರ ಬಿಜೆಪಿ ನಾಯಕರಲ್ಲಿದೆ.

2019ರ ಲೋಕಸಭಾ ಚುನಾವಣೆಯಲ್ಲದೆ, ಇದೇ ವರ್ಷ ನಡೆಯುವ ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಗಳ ಬಗ್ಗೆಯೂ ಕೇಂದ್ರ ಬಿಜೆಪಿ ನಾಯಕರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವು ಅಧಿಕಾರ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಎರಡೂ ರಾಜ್ಯಗಳ ಮೇಲೆ ನಿಗಾ ಇಟ್ಟಿದ್ದು, ಈಗಿನ ಮಟ್ಟಿಗೆ ಕರ್ನಾಟಕ ರಾಜಕೀಯ ಅವರ ಆದ್ಯತೆ ಆಗಿಲ್ಲ ಎಂದು ತಿಳಿದುಬಂದಿದೆ. ಈ ಎಲ್ಲ ಕಾರಣಗಳಿಂದ ಕೇಂದ್ರ ಬಿಜೆಪಿ ನಾಯಕರು ಸದ್ಯದ ಮಟ್ಟಿಗೆ ಕರ್ನಾಟಕ ರಾಜಕಾರಣದ ಬಗ್ಗೆ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂಬ ಅಭಿಪ್ರಾಯಗಳನ್ನು ತಳ್ಳಿಹಾಕುವಂತಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More