ಸರ್ಕಾರಿ ಕಚೇರಿ ಸ್ಥಳಾಂತರ; ಮಾಜಿ ಸಿಎಂ ಧರ್ಮಸಿಂಗ್‌ ಹಾದಿ ಹಿಡಿದರೇ ಎಚ್‌ಡಿಕೆ?

ಗ್ರಾಪಂಗಳಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಮಾಜಿ ಸಿಎಂ ಧರ್ಮಸಿಂಗ್‌ ಸರ್ಕಾರ ಕ್ರಾಂತಿಕಾರಕ ನಿಲುವು ತಳೆದಿತ್ತು. ಈಗ, ಉ.ಕರ್ನಾಟಕಕ್ಕೆ ಕೆಲವು ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸುವ ಎಚ್‌ಡಿಕೆ ನಿಲುವು ವಿಕೇಂದ್ರೀಕರಣದ ದೃಷ್ಟಿಯಿಂದ ಉತ್ತಮ ನಡೆಯೇ. ಆದರೆ, ಅನುಷ್ಠಾನದ್ದೇ ದೊಡ್ಡ ಸವಾಲು

ಪ್ರತ್ಯೇಕ ರಾಜ್ಯದ ಕೂಗನ್ನು ತಣಿಸುವ ನಿಟ್ಟಿನಲ್ಲಿ ಎಂಟು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸಂಪುಟ ಸಭೆ ಗುರುವಾರ ತೆಗೆದುಕೊಂಡಿದೆ. ಮೇಲ್ನೋಟಕ್ಕೆ ಕಣ್ಣೊರೆಸುವ ತಂತ್ರದಂತೆ ಕುಮಾರಸ್ವಾಮಿ ಅವರ ನಿರ್ಧಾರ ಗೋಚರಿಸಿದರೂ ದೂರಗಾಮಿ ನೆಲೆಯಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಬಲ್ಲದು. ಸಂವಿಧಾನದ ಆಶಯದಂತೆ ವಿಕೇಂದ್ರೀಕರಣ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸಮ್ಮಿಶ್ರ ಸರ್ಕಾರವು ಉತ್ತಮ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದು, ಇದೊಂದು ಪ್ರಬುದ್ಧ ನಿಲುವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಳೆದ ತಿಂಗಳು ಬಜೆಟ್‌ ಮಂಡನೆಯ ನಂತರ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಹಾಗೂ ಕೆಲವು ಸಂಘಟನೆಗಳು ಎಬ್ಬಿಸಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಕೂಗನ್ನು ಸರ್ಕಾರವು ಜವಾಬ್ದಾರಿಯುತವಾಗಿ ನಿಭಾಯಿಸಬೇಕಿತ್ತು. ಆದ್ದರಿಂದ, ಕುಮಾರಸ್ವಾಮಿ ಅವರು ವಿವಾದ ಸೃಷ್ಟಿಯಾದ ಸಂದರ್ಭದಲ್ಲಿ ಕೆಲವು ಪ್ರಮುಖ ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲಾಗುವುದು ಎಂಬುದೂ ಸೇರಿದಂತೆ ಆ ಭಾಗದ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ವಚನ ನೀಡಿದ್ದರು.

ಅಂತೆಯೇ, ಸಮ್ಮಿಶ್ರ ಸರ್ಕಾರದ ಏಳನೇ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಬಹುದಾದ ಕೃಷ್ಣ ಜಲಭಾಗ್ಯ ನಿಗಮದ ಕಚೇರಿ ಹಾಗೂ ನೋಂದಾಯಿತ ಕಚೇರಿ, ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಹಾಗೂ ನೋಂದಾಯಿತ ಕಚೇರಿಗಳು, ಸಕ್ಕರೆ ಅಭಿವೃದ್ಧಿ ನಿರ್ದೇಶನಾಲಯ, ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ, ಕರ್ನಾಟಕ ವಿದ್ಯುತ್‌ ಮಗ್ಗದ ನಿಗಮದ ಕಚೇರಿ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿಯನ್ನು ವಿಭಜಿಸಿ, ಉತ್ತರ ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ಸ್ಥಾಪನೆ, ಕರ್ನಾಟಕ ಮಾನವ ಹಕ್ಕು ಆಯೋಗದ ಒಬ್ಬರು ಸದಸ್ಯರ ಕಚೇರಿ ಸ್ಥಳಾಂತರ, ಇಬ್ಬರು ಮಾಹಿತಿ ಹಕ್ಕು ಆಯುಕ್ತರ ಕಚೇರಿ ಹಾಗೂ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ನಿರ್ದೇಶನಾಲಯಗಳನ್ನು ಬೆಳಗಾವಿ, ಹೊಸಪೇಟೆ, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಯಾವ ಕಚೇರಿಯನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಮತ್ತು ಸಾಧಕ-ಬಾಧಕ ಚರ್ಚಿಸಲು ಸಂಪುಟ ಉಪ ಸಮಿತಿ ರಚಿಸಿ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ.

ಸರ್ಕಾರದ ಉದ್ದೇಶ ಸರಿಯಾಗಿದ್ದರೂ ಅದು ಈಡೇರಬೇಕಾದರೆ ಅಧಿಕಾರಿಗಳು ತಳವೂರಿ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವಂತೆ ಮಾಡುವ ರಾಜಕೀಯ ಬದ್ಧತೆ ಪ್ರದರ್ಶನವಾಗಬೇಕಿದೆ. ಪ್ರಮುಖ ಕಚೇರಿಗಳನ್ನು ಪ್ರಾದೇಶಿಕ ಪ್ರಾಮುಖ್ಯತೆ ಅರಿತು ಸ್ಥಳಾಂತರ ಮಾಡುವುದರಿಂದ ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಕಚೇರಿ ಸ್ಥಳಾಂತರವಾಗಿ ಅಧಿಕಾರಿಗಳು ನೆಲೆಗೊಳ್ಳಲು ಕನಿಷ್ಠ ಎರಡು ವರ್ಷ ಅಗತ್ಯವಿದೆ ಎನ್ನಲಾಗುತ್ತಿದೆ. ಸರ್ಕಾರಿ ಕಚೇರಿ ಸ್ಥಳಾಂತರ ವಿಚಾರ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಹಿಂದಿನ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಉತ್ತರ ಕರ್ನಾಟಕದ ಗದಗ, ಬಾಗಲಕೋಟೆ ಮತ್ತಿತರ ಕಡೆ ಹೆಚ್ಚಿನ ಕೈಮಗ್ಗಗಳು ಇರುವುದನ್ನು ಗಮನದಲ್ಲಿಟ್ಟುಕೊಂಡು ೯೦ರ ದಶಕದ ಅಂತ್ಯದಲ್ಲಿ ಜೆ ಎಚ್‌ ಪಟೇಲ್‌ ನೇತೃತ್ವದ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಎಂ ಎಸ್‌ ಪಾಟೀಲ್ ಅವರು ಕೈಮಗ್ಗ ಅಭಿವೃದ್ಧಿ ನಿಗಮವನ್ನು ಹುಬ್ಬಳ್ಳಿಗೆ ಸ್ಥಳಾಂತರಗೊಳ್ಳುವಂತೆ ಮಾಡಿದ್ದರು. ಆದರೆ, ಅಧಿಕಾರಿಗಳ ನಿರಾಸಕ್ತಿ ಮತ್ತಿತರ ಕಾರಣಗಳಿಂದ ಅದು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ, ಮತ್ತೊಂದು ಆಡಳಿತಾತ್ಮಕ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ. ಇದರಿಂದ ಸರ್ಕಾರಕ್ಕೆ ಖರ್ಚುವೆಚ್ಚ ಹೆಚ್ಚಾಗಿದ್ದು, ಒಟ್ಟಾರೆ ಆಶಯಕ್ಕೆ ಹಿನ್ನಡೆಯಾಗಿದೆ.

ಈಗ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗುತ್ತಿರುವ ಕಚೇರಿಗಳ ಸ್ಥಿತಿಯು ಮುಂದಿನ ಕೆಲವು ವರ್ಷಗಳಲ್ಲಿ ಅದೇ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎನ್ನುವ ಆತಂಕ ವ್ಯಕ್ತವಾಗಿದೆ. ಈ ಮಧ್ಯೆ, ಹಿರಿಯ ಪತ್ರಕರ್ತ ಪಾಟೀಲ್‌ ಪುಟ್ಟಪ್ಪ, “ಉತ್ತರ ಕರ್ನಾಟಕದ ಜನರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಆಯ್ದ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಸಮ್ಮತಿಸಿರುವುದು ಸ್ವಾಗತಾರ್ಹ. ಆಡಳಿತಾಶಾಹಿ ಎಷ್ಟರಮಟ್ಟಿಗೆ ಜನರಿಗೆ ಹತ್ತಿರವಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಸರ್ಕಾರದ ನಿರ್ಧಾರದ ಸಾಫಲ್ಯತೆ ಅಡಗಿದೆ,” ಎಂದಿದ್ದಾರೆ.

ಪಾಪು ಅವರ ವಿಚಾರವನ್ನು ವಿಸ್ತರಿಸಿರುವ ಹಿರಿಯ ವಕೀಲ ಹಾಗೂ ಮಹದಾಯಿ ಹೋರಾಟಗಾರರಲ್ಲಿ ಒಬ್ಬರಾದ ಬಿ ವಿ ಸೋಮಾಪುರ, “ಸರ್ಕಾರ ಪ್ರಸ್ತಾಪಿಸಿರುವ ಎಂಟು ಸರ್ಕಾರಿ ಕಚೇರಿಗಳು ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಾಗಿ ಈ ಭಾಗಕ್ಕೆ ಸ್ಥಳಾಂತರವಾಗಬೇಕು. ಬೆಳಗಾವಿಯಲ್ಲಿ ಎಸ್‌ ನಿಜಲಿಂಗಪ್ಪ ಕಬ್ಬು ಸಂಶೋಧನಾ ಕೇಂದ್ರವಿದ್ದು, ಅದಕ್ಕೆ ಪೂರಕವಾದ ಸಂಸ್ಥೆಗಳನ್ನು ಇಲ್ಲಿಗೆ ವರ್ಗಾಯಿಸುವುದು ಉತ್ತಮ ನಡೆಯಾಗಬಲ್ಲದು. ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯನ್ನು ವಿಭಜಿಸಿ ಉತ್ತರ ಕರ್ನಾಟಕದಲ್ಲಿ ಮತ್ತೊಂದು ಮಂಡಳಿ ಸ್ಥಾಪನೆ ಮಾಡುವುದು ನಿಜಕ್ಕೂ ಶ್ಲಾಘನೀಯ. ಇನ್ನಷ್ಟು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವರ್ಗಾಯಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ, ಆಡಳಿತಾತ್ಮಕ ದೃಷ್ಟಿಯಿಂದ ಭಾರತದ ಇತಿಹಾಸದಲ್ಲೇ ಬೇರಾವುದೇ ರಾಜ್ಯ ಕೈಗೊಳ್ಳದ ಐತಿಹಾಸಿಕ ನಿರ್ಧಾರವನ್ನು ೨೦೦೪ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ ಅವರು ಕೈಗೊಂಡಿದ್ದರು. ಸಂವಿಧಾನದ ೭೩ ಮತ್ತು ೭೪ನೇ ವಿಧಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಪಂಚಾಯತ್ ರಾಜ್‌ ಇಲಾಖೆಗೆ ಶಕ್ತಿ ತುಂಬುವ ಕೆಲಸಕ್ಕೆ ಅವರು ಕೈಹಾಕಿದ್ದರು. ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸ್ಥಳೀಯ ಪಂಚಾಯಿತಿಗಳ ಮುಖಂಡರಿಗೆ ನೀಡಲಾಗಿತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸಬೇಕಾದರೂ ಸ್ಥಳೀಯ ಸಂಸ್ಥೆಯ ಅನುಮತಿ ಪಡೆಯುವುದು ಅಗತ್ಯ. ಸರ್ಕಾರದ ಬಹುತೇಕ ಯೋಜನೆಗಳೂ ಗ್ರಾಮ ಪಂಚಾಯಿತಿಯ ಮೂಲಕವೇ ಅನುಷ್ಠಾನವಾಗುವಂತೆ ಮಾಡುವುದು ಆ ನಿರ್ಧಾರದ ತಿರುಳಾಗಿತ್ತು. ಈ ಸಂಬಂಧ ೨೦೦೪ರ ಅಕ್ಟೋಬರ್‌ ೧೬ರಂದು ಸರ್ಕಾರ ಆದೇಶವನ್ನು ಹೊರಡಿಸಿತ್ತು. ಈ ಆದೇಶದಂತೆ, ಅಂದಿನ ಕಾಲಕ್ಕೆ ೩ ಸಾವಿರ ಕೋಟಿ ಅನುದಾನವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಗೆ ಹಂಚಿಕೆಯಾಗಿತ್ತು. ಈ ಪೈಕಿ, ೧,೫೮೮ ಕೋಟಿ ರುಪಾಯಿ ಪಂಚಾಯಿತಿಗಳಿಗೆ ನೇರವಾಗಿ ಹರಿದುಹೋಗಲಾರಂಭಿಸಿತ್ತು.

ಪಂಚಾಯಿತಿಯೊಂದು ವರ್ಷಕ್ಕೆ ೩-೪ ಲಕ್ಷ ರುಪಾಯಿ ಅನುದಾನ ಪಡೆಯುವುದು ದುರ್ಲಭವಾಗಿದ್ದ ಕಾಲದಲ್ಲಿ ಧರ್ಮಸಿಂಗ್‌ ಸರ್ಕಾರದ ನಿರ್ಣಯದಿಂದ ವರ್ಷಕ್ಕೆ ಗರಿಷ್ಠ ೩೦-೪೦ ಲಕ್ಷ ರುಪಾಯಿ ಪಡೆಯುವಂತಾಯಿತು. ಈಗ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ಹಲವು ಪಟ್ಟು ಹೆಚ್ಚಾಗಿದ್ದು, ಸಾಕಷ್ಟು ಸುಧಾರಣೆಯೂ ಆಗಿದೆ. ಅಂತೆಯೇ ಸಾಕಷ್ಟು ಲೋಪದೋಷಗಳೂ ಇವೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಸ್ಥಳೀಯ ಶಾಸಕರ ನೇರ ಹಸ್ತಕ್ಷೇಪಕ್ಕೆ ತಡೆಬಿದ್ದಿತ್ತು. ಈ ನೆಲೆಯಲ್ಲಿ ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು.

ಇದನ್ನೂ ಓದಿ : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವಿಫಲ; ಅಖಂಡ ಕರ್ನಾಟಕಕ್ಕೆ ಬಲ

ಅಂದಹಾಗೆ, ಧರ್ಮಸಿಂಗ್ ಸರ್ಕಾರವು ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವಂಥ ಮಹತ್ವದ ನಿರ್ಧಾರ ಕೈಗೊಳ್ಳಲು ಕಾರಣವಾಗಿದ್ದವರ ಪೈಕಿ ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಸಹ ಒಬ್ಬರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿದ್ದ ಚಿರಂಜೀವಿ ಸಿಂಗ್‌ ಅವರು ನಕ್ಸಲ್‌ ಉಪಟಳವಿದ್ದ ಮಲೆನಾಡು ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಅವರಿಗೆ ಶಾಲೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆಯ ಬಗ್ಗೆ ಜನರು ದೂರು ನೀಡುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು, ಸ್ಥಳೀಯ ಪಂಚಾಯಿತಿಗಳಿಗೆ ಅಧಿಕಾರ ನೀಡಿದರೆ ಸರ್ಕಾರದ ಜವಾಬ್ದಾರಿ ಕಡಿಮೆ ಆಗುವುದಲ್ಲದೆ ಅಲ್ಲಿನ ಜನರಿಗೆ ಅಗತ್ಯವಾದದ್ದನ್ನು ಮಾಡಿಕೊಳ್ಳಲು ಅವರಿಗೆ ಸ್ವಾತಂತ್ರ್ಯ ನೀಡಿದಂತಾಗುತ್ತದೆ ಎಂದು ಸರ್ಕಾರಕ್ಕೆ ವರದಿ ನೀಡುತ್ತಾರೆ. ಇದನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಧರ್ಮಸಿಂಗ್‌ ಸರ್ಕಾರ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿತ್ತು.

ಭಿನ್ನಮತ, ಅಸ್ಥಿರತೆ ಮತ್ತಿತರ ರಾಜಕೀಯ ಕಾರಣಗಳಿಂದಾಗಿ ಕ್ರಾಂತಿಕಾರಕ ನಿರ್ಧಾರ ಕೈಗೊಂಡರೂ ಧರ್ಮಸಿಂಗ್‌ ಸರ್ಕಾರವು ಅದರಿಂದ ಪ್ರಚಾರ ಪಡೆಯಲು ಮುಂದಾಗಿರಲಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿದ್ದ ಅವರು, “ಗ್ರಾಮೀಣ ಭಾಗದ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ನಮ್ಮ ನಿರ್ಣಯಗಳು ಫಲ ನೀಡಲು ಸಮಯದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸ್ವಆಡಳಿತದ ವಿಚಾರದಲ್ಲಿ ಇಡೀ ಭಾರತಕ್ಕೆ ಕರ್ನಾಟಕ ಮಾದರಿಯಾಗಲಿದೆ,” ಎಂದು ನುಡಿದಿದ್ದರು.

ಧರ್ಮಸಿಂಗ್‌ ಅವರ ನಂತರ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಕುಮಾರಸ್ವಾಮಿ ಅವರು, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿದರು ಎಂಬ ಆರೋಪವಿದೆ. ಇದರಿಂದ ವಿಕೇಂದ್ರೀಕರಣದ ಆಶಯಕ್ಕೆ ಹೊಡೆತ ಬಿದ್ದಿತ್ತು. ಆದರೆ ಇದೀಗ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಅದೇ ಕುಮಾರಸ್ವಾಮಿ ಅವರು ಅಧಿಕಾರ ವಿಕೇಂದ್ರೀಕರಣದ ಹಾದಿಯಲ್ಲಿ ಕೆಲವು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿರುವುದು ಗಮನಾರ್ಹ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More