ಅಗಲಿದ ಅಟಲ್‌ ಹೆಗಲು, ಜೊತೆಗೊಂದು ಬಣ್ಣದ ಕನಸು; ಇದು ಬಿಜೆಪಿ ಚುನಾವಣಾ ತಯ್ಯಾರಿ! 

ಲೋಕಸಭಾ ಚುನಾವಣೆಗೆ ಭೂಮಿಕೆ ಕುರಿತು ಬಿಜೆಪಿ ನಾಯಕರು ಇತ್ತೀಚಿನ ಕಾರ್ಯಕಾರಿಣಿಯಲ್ಲಿ ಚರ್ಚಿಸಿದ್ದಾರೆ. ವಿಪಕ್ಷಗಳೆಡೆಗೆ ‘ಉಪೇಕ್ಷೆ ಭಾಷೆ’ ಬಳಸುತ್ತಿರುವ ಬಿಜೆಪಿ ವರಸೆ ನೋಡಿದರೆ ಮೇಲ್ನೋಟದ ಆತ್ಮವಿಶ್ವಾಸ ನಿಜಕ್ಕೂ ಪಕ್ಷದೊಳಗಿದೆಯೇ ಎಂಬ ಅನುಮಾನ ಮೂಡದೆ ಇರದು

ಭಾರತ ಸ್ವಾತಂತ್ರ್ಯಗೊಂಡು ೨೦೨೨ನೇ ಇಸವಿಗೆ ೭೫ ವರ್ಷ ಪೂರ್ಣಗೊಳ್ಳಲಿದ್ದು, ಆ ಹೊತ್ತಿಗೆ ನವ ಭಾರತವನ್ನು ನಿರ್ಮಿಸುವ ಗುರಿಯೊಂದಿಗೆ ‘ನವಭಾರತ-೨೦೨೨’ ಎನ್ನುವ ಹೊಸ ಕನಸೊಂದನ್ನು ಬಿತ್ತಲು ಬಿಜೆಪಿಯ ಕಾರ್ಯಕಾರಿಣಿಯಲ್ಲಿ ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ ೮ ಮತ್ತು ೯ರಂದು ನವದೆಹಲಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಲವು ಕಾರಣಗಳಿಗೆ ಮಹತ್ವ ಪಡೆದಿದೆ. ಕಾರ್ಯಕಾರಿಣಿಯುದ್ದಕ್ಕೂ ಪಕ್ಷದ ಪ್ರಮುಖ ನಾಯಕರು, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷ ಜಯಭೇರಿ ಬಾರಿಸುವ ಬಗ್ಗೆ ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕಾರ್ಯಕಾರಿಣಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಆತ್ಮವಿಶ್ವಾಸದ ಭಾಷೆಗಿಂತ ಹೆಚ್ಚಾಗಿ ವಿಪಕ್ಷಗಳೆಡೆಗಿನ ‘ಉಪೇಕ್ಷೆಯ ಭಾಷೆ’ಯೇ ಪ್ರಧಾನವಾಗಿ ಕಾಣಿಸಿದೆ.

ಬಿಜೆಪಿಯ ಪಾಲಿಗೆ ‘ಉಪೇಕ್ಷೆಯ ಭಾಷೆ’ ಹೊಸದಲ್ಲ. ಅದು ಅದರ ರಾಜಕೀಯ ಕಾರ್ಯತಂತ್ರದ ಭಾಗವಾಗಿಯೇ ಬೆಳೆದುಬಂದಿದೆ. ಎದುರಾಳಿಗಳನ್ನು ಲೆಕ್ಕಕ್ಕಿಡದೆ, ಅವರ ಸಾಮರ್ಥ್ಯಗಳನ್ನು ಸದಾಕಾಲ ವ್ಯಂಗ್ಯ, ಉಪೇಕ್ಷೆಗಳಿಂದ ಬದಿಗೆ ಸರಿಸುವ ಮೂಲಕ ಅದು ಎದುರಾಳಿಗಳು ಎತ್ತುವ ಪ್ರಶ್ನೆಗಳು ಗಂಭೀರವಾದುದಾಗಲೀ, ಪ್ರತಿಕ್ರಿಯಿಸುವುದಕ್ಕೆ ಅರ್ಹವಾದುದಾಗಲೀ ಅಲ್ಲ. ತಮ್ಮ ವಿರುದ್ಧ ಪ್ರಶ್ನೆ ಎತ್ತುವವರು ವಿಶ್ವಾಸಪಾತ್ರರಲ್ಲ ಎನ್ನುವ ಸಂದೇಶವನ್ನು ಜನತೆಗೆ ರವಾನಿಸಲು ಪ್ರಯತ್ನಿಸುತ್ತದೆ. “ವಿಪಕ್ಷಗಳಲ್ಲಿ ದೂರದೃಷ್ಟಿಯಾಗಲೀ, ತಂತ್ರಗಾರಿಕೆಯಾಗಲೀ, ನಾಯಕತ್ವವಾಗಲೀ ಇಲ್ಲ. ಮೋದಿಯವರು ಮತ್ತೆ ಅಧಿಕಾರಕ್ಕೆ ಏರುವುದನ್ನು ತಡೆಯುವುದೊಂದೇ ಅವುಗಳ ಏಕೈಕ ಉದ್ದೇಶ,” ಎಂದು ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ಕಾರ್ಯಕಾರಣಿಯ ನಿರ್ಣಯಗಳನ್ನು ವಿವರಿಸುವ ಸಂದರ್ಭದಲ್ಲಿ ಕುಟುಕಿರುವುದು ಸಹ ಅದನ್ನೇ ಹೇಳುತ್ತದೆ. ಕಾಂಗ್ರೆಸ್ ಪಕ್ಷದೊಳಗಿನ‌ ನಾಯಕತ್ವ ಎನ್ನುವುದು ಆ ಪಕ್ಷಕ್ಕೆ ಮಾತ್ರವೇ ಅಲ್ಲದೆ, ಮಿತ್ರ ಪಕ್ಷಗಳ ಪಾಲಿಗೂ ‘ಹೊರೆ’ಯಾಗಲಿದೆ ಎಂದೂ ಜಾವಡೇಕರ್ ಟೀಕಿಸಿದ್ದಾರೆ. ಇದು ಸಹ ಮೇಲಿನ ತಂತ್ರದ ಭಾಗವೇ ಆಗಿದೆ. ಬಿಜೆಪಿಯ ನಾಯಕರು ತಮ್ಮ ಈ ಮಾತುಗಳ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರದು ಅಪಕ್ವ ನಾಯಕತ್ವ ಎನ್ನುವ ಅರ್ಥ ಹೊಮ್ಮಿಸಲು ಪ್ರಯತ್ನಿಸಿದ್ದಾರೆ. ಅದೇ ವೇಳೆಗೆ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೂರದೃಷ್ಟಿ, ತಂತ್ರಗಾರಿಕೆ ಇದೆ ಎನ್ನುವುದನ್ನು ಸೂಚಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಪರ್ಯಾಯವಾಗುವುದಿರಲಿ, ಸ್ವತಃ ಅದರ ಮಿತ್ರಪಕ್ಷಗಳ ಪಾಲಿಗೇ ‘ಹೊರೆ’ಯಾಗಲಿದೆ ಎನ್ನುವ ಮೂಲಕ ಯುಪಿಎ ಮತ್ತಷ್ಟು ನಿಸ್ತೇಜಗೊಳ್ಳುತ್ತದೆ ಎಂದು ಸೂಚಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮಾತನಾಡುತ್ತ, “ಬಿಜೆಪಿ ೨೦೧೯ರಲ್ಲಿ ಗೆಲ್ಲುವುದು ಮಾತ್ರವೇ ಅಲ್ಲ, ಮುಂದಿನ ೫೦ ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ,” ಎಂದು ಹೇಳಿದ್ದಾರೆ. ಆ ಮೂಲಕ, ತಮಗೆ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. "ಬಿಜೆಪಿ ದೇಶವನ್ನು ಕಟ್ಟುತ್ತಿದ್ದರೆ, ಕಾಂಗ್ರೆಸ್‌ ದೇಶವನ್ನು ಕೆಡವುತ್ತಿದೆ,” ಎಂದೂ ಅವರು ಹೇಳಿದ್ದಾರೆ. ಇನ್ನು, ಪ್ರಧಾನಿ ಮೋದಿಯವರು ಕಾರ್ಯಕಾರಿಣಿಯನ್ನು ಉದ್ದೇಶಿಸಿ, ‘ಅಜೇಯ್‌ ಭಾರತ್, ಅಟಲ್‌ ಬಿಜೆಪಿ’ ಎನ್ನುವ ಘೋಷವಾಕ್ಯವನ್ನು ನೀಡಿದ್ದು, ತಮ್ಮ ಈ ನೂತನ ಘೋಷವಾಕ್ಯದ ಮೂಲಕ ಕಳೆದ ನಾಲ್ಕೂವರೆ ವರ್ಷದ ತಮ್ಮ ಆಡಳಿತದಲ್ಲಿ ಭಾರತವು ಅಜೇಯವಾಗಿದೆ, ಬಲಿಷ್ಠವಾಗಿದೆ, ಜಾಗತಿಕವಾಗಿ ಮನ್ನಣೆಗಳಿಸಿಕೊಂಡಿದೆ. ಬಿಜೆಪಿಯೂ ಸುಭದ್ರವಾಗಿ ನೆಲೆಯೂರಿದ್ದು, ತನ್ನ ಧ್ಯೇಯೋದ್ದೇಶಗಳಲ್ಲಿ ಅಚಲವಾಗಿದೆ ಎನ್ನುವುದನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅಗಲಿದ ಬಿಜೆಪಿಯ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಘೋಷವಾಕ್ಯದಲ್ಲಿ ಕೈದು ಮಾಡುವ ಮೂಲಕ ಜನತೆಯಲ್ಲಿ ಅವರ ನೆನಪು ಬರಲಿರುವ ಚುನಾವಣಾ ಕಾಲಘಟ್ಟದಲ್ಲಿ ಹಸಿರಾಗಿರುವಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ : ವಾಜಪೇಯಿಗೆ ಮಿಡಿವ ಮನಸ್ಸುಗಳು ಬಿಜೆಪಿ ಆಡಳಿತಾರೂಢರಿಗೆ ಹೇಳಿದ ಸಂದೇಶವೇನು?

ಬಿಜೆಪಿಯ ಎರಡು ದಿನಗಳ ಕಾರ್ಯಕಾರಿಣಿಯನ್ನು ಗಮನಿಸಿದರೆ, ಪ್ರತಿಪಕ್ಷಗಳು ತನ್ನ ಮೇಲೆ ಮಾಡುತ್ತಿರುವ ಆರೋಪಗಳಿಂದ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸುವ ‘ವಿಷಯಾಂತರದ ಉದ್ದೇಶವನ್ನು’ ಅದು ಹೊಂದಿರುವುದು ಸ್ಪಷ್ಟವಾಗುತ್ತದೆ. 'ತೈಲ ಉತ್ಪನ್ನಗಳ ಸಹಿತ ಹೆಚ್ಚುತ್ತಿರುವ ಬೆಲೆ ಏರಿಕೆ, ವಿವಾದಾತ್ಮಕ ರಫೇಲ್ ಒಪ್ಪಂದ, ಗುರಿಸಾಧನೆಯಾಗದ ನೋಟು ರದ್ದತಿ, ಸೃಷ್ಟಿಯಾಗದ ಉದ್ಯೋಗಗಳು, ಹರಿದುಬರದ ಬಂಡವಾಳ’ ಮುಂತಾದ ವಿಷಯಗಳನ್ನು ಪ್ರತಿಪಕ್ಷಗಳು ಪ್ರಮುಖವಾಗಿ ಎತ್ತುತ್ತಿವೆ. ಆದರೆ, ಇದಕ್ಕೆಲ್ಲ ಹೇಗೆ ಉತ್ತರಿಸಬೇಕು ಎನ್ನುವುದನ್ನು ಕಾರ್ಯಕಾರಿಣಿಯಲ್ಲಿ ಚರ್ಚಿಸುವ ಗೊಡವೆಗೇ ನಾಯಕರು ಹೋಗಿಲ್ಲ. ಬದಲಿಗೆ, ಇವುಗಳಿಗೆ ಉತ್ತರಿಸುತ್ತ ಹೋದಂತೆಲ್ಲ ತಾನು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎನ್ನುವುದನ್ನು ಅರಿತಿರುವ ಬಿಜೆಪಿ, ಆ ಸುಳಿಗೆ ಸಿಲುಕದೆ ಇರಲು ಎಚ್ಚರಿಕೆ ತೋರಿದೆ. ಇದೇ ವೇಳೆ, ದೇಶ ಕಳೆದ ೪೮ ತಿಂಗಳಲ್ಲಿ ಮಾಡಿರುವ ಸಾಧನೆ, ಈ ಹಿಂದಿನ ೪೮ ವರ್ಷಗಳಲ್ಲಿ ಮಾಡಿರುವ ಸಾಧನೆಗಿಂತ ಹೆಚ್ಚು ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿದೆ. ಖುದ್ದು ಮೋದಿಯವರೂ ಕಾರ್ಯಕಾರಿಣಿಯಲ್ಲಿ ವಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಸುಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಇನ್ನು, ‘ನವಭಾರತ-೨೦೨೨’ ಎನ್ನುವ ಕನಸೊಂದನ್ನು ಬಿತ್ತುವ ಮೂಲಕ ಹಾಗೂ ಅದನ್ನು ವ್ಯಾಪಕವಾಗಿ ಚರ್ಚಿಸುವ ಮೂಲಕ, ಈ ಹಿಂದೆ ತಾನು ನೀಡಿದ್ದ ಆಶ್ವಾಸನೆಗಳ ಬಗ್ಗೆ ಜನತೆ ಹೆಚ್ಚು ಗಮನಹರಿಸದೆ, ಮತ್ತೊಂದು ಹೊಸ ಕನಸಿನ ಬೆನ್ನು ಹತ್ತುವಂತೆ ಮಾಡುವ ಉದ್ದೇಶವನ್ನು ಪಕ್ಷ ಹೊಂದಿರುವಂತೆ ತೋರುತ್ತಿದೆ. ಕಾರ್ಯಕಾರಿಣಿಯಲ್ಲಿ ಬಿಜೆಪಿಯ ಪ್ರಮುಖರು ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಯ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರಾದರೂ, ಅದನ್ನು ಜನರಿಗೆ ವಿವರಿಸಬಲ್ಲೆವು ಎನ್ನುವ ವಿಶ್ವಾಸ ಅವರಲ್ಲಿದ್ದಂತೆ ತೋರುತ್ತಿಲ್ಲ. ಹಾಗಾಗಿಯೇ, ಅಗಲಿದ ಅಟಲ್‌ ಅವರ ಹೆಗಲು, ಮತ್ತೊಂದು ಬಣ್ಣದ ಕನಸು, ಅತಿ ಎನಿಸುವಷ್ಟು ಆತ್ಮವಿಶ್ವಾಸ, ಆತ್ಮಪ್ರಶಂಸೆಯ ಮಾತುಗಳಿಗೆ ಮಾತ್ರವೇ ಬಿಜೆಪಿಯ ನಾಯಕರು ಸೀಮಿತವಾಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More