ವಿಡಿಯೋ | 371 ಜೆ ಅನುದಾನ ಬಿಡುಗಡೆಯಲ್ಲಿ ಗೊಂದಲ; ಅಸಮರ್ಪಕ ಅನುಷ್ಠಾನ ಆರೋಪ

ಈ ಹಿಂದಿನ ಸರ್ಕಾರ ಎಚ್‌ಕೆಆರ್‌ಡಿಬಿಗಾಗಿ 1,500 ಕೋಟಿ ಘೋಷಿಸಿತ್ತು. ಆದರೆ, ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಒಂದು ಸಾವಿರ ಕೋಟಿ ರುಪಾಯಿ ಅನುದಾನಕ್ಕಷ್ಟೇ ಬಜೆಟ್‌ನಲ್ಲಿ ಅನುಮೋದನೆ ಪಡೆದಿದೆ. ಹೀಗಾಗಿ ಹೈ-ಕ ಭಾಗಕ್ಕೆ ಅನುದಾನ ಲಭ್ಯತೆ ಕಡಿಮೆ ಆದಂತಾಗಿದೆ

ನಂಜುಂಡಪ್ಪ ವರದಿಯನ್ವಯ ಹಿಂದುಳಿದ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಬೇಡಿಕೆಯೊಂದಿಗೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ ಎಂಬ ಆರೋಪವನ್ನು ಈ ಭಾಗದ ಶಾಸಕರೊಬ್ಬರು ಮಾಡಿದ್ದಾರೆ.

ಎಚ್‌ಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲಿ ಅವೈಜ್ಞಾನಿಕ ನಡೆ ತೋರಲಾಗಿದೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ದದ್ದಲ್ ಬಸನಗೌಡ ಸ್ವತಃ ಸುದ್ದಿಗೊಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕ್ಷೇತ್ರಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿರುವ ಅವರು, ಕ್ಷೇತ್ರವಾರು ನೀಡಬೇಕಿದ್ದ ಅನುದಾನವನ್ನು ತಾಲೂಕುವಾರು ಹಂಚಿಕೆ ಮಾಡಲಾಗಿದೆ. ಇದರಿಂದ ರಾಯಚೂರು ತಾಲೂಕಿನಲ್ಲಿ ಬಹುತೇಕ ಅನುದಾನ ನಗರ ಕ್ಷೇತ್ರಕ್ಕೆ ಖರ್ಚಾಗಿದ್ದು, ಗ್ರಾಮೀಣ ಕ್ಷೇತ್ರ ಈವರೆಗೂ ಅಭಿವೃದ್ಧಿಯಿಂದ ವಂಚಿತಗೊಂಡಿದೆ,” ಎಂದು ದೂರಿದ್ದಾರೆ.

ತಾಲೂಕುವಾರು ಬದಲು ಕ್ಷೇತ್ರವಾರು ಅನುದಾನ ನೀಡಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾಗಿಯೂ ಅವರು ತಿಳಿಸಿದ್ದಾರೆ. “ನಂಜುಂಡಪ್ಪ ವರದಿಯ ಸಿಐಡಿ ಇಂಡೆಕ್ಸ್ ಆಧಾರದಡಿ 2018-19ನೇ ಸಾಲಿನಲ್ಲಿ ಮೈಕ್ರೊ ಯೋಜನೆಯಡಿ ಕ್ಷೇತ್ರವಾರು ಹಂಚಿಕೆಯಾದ ಅನುದಾನದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಕೇವಲ 7.86 ಕೋಟಿ ಬಂದಿದೆ. ಆದರೆ, 1999-2002 ಅವಧಿಯ ಅಭಿವೃದ್ಧಿ ಮಾನದಂಡ ಆಧರಿಸಿ ಸಿಐಡಿ ಇಂಡೆಕ್ಸ್ ಸಿದ್ಧಪಡಿಸಿದ್ದಾರೆ. ಈ ನಂತರದ ವರ್ಷಗಳಲ್ಲಿ ಜನಸಂಖ್ಯೆ, ಸೌಲಭ್ಯಗಳ ವಿಚಾರದಲ್ಲಿ ತಾಲೂಕು ಸಾಕಷ್ಟು ಬೆಳವಣಿಗೆ ಕಂಡಿದೆ. ಆದರೆ, ಹಿಂದಿನ ಮಾದರಿಯಲ್ಲಿಯೇ ಅನುದಾನ ಬರುತ್ತಿದ್ದು, ಅಭಿವೃದ್ಧಿಗೊಂಡ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹಂಚಿಕೆಯಾಗುತ್ತಿದೆ,” ಎಂದು ದೂರಿದ್ದಾರೆ.

ಹೀಗಾಗಿ, "2018-19ನೇ ಮ್ಯಾಕ್ರೋ ಯೋಜನೆಯಡಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕಲ್ಪಿಸಬೇಕು. 18 ವರ್ಷಗಳ ಸಿಐಡಿ ಇಂಡೆಕ್ಸ್ ಮಾನದಂಡ ಕೈಬಿಟ್ಟು ಪುನಃ ಸಮೀಕ್ಷೆ ನಡೆಸಿ ಹೊಸ ಇಂಡೆಕ್ಸ್ ಸಿದ್ಧಪಡಿಸಬೇಕು. ಆ ಮೂಲಕ, ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು,” ಎಂಬುದು ಅವರ ಒತ್ತಾಯ.

ಅಷ್ಟೇ ಅಲ್ಲ, “ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲೂ ಹಲವು ಗೊಂದಲ ಇರುತ್ತವೆ,” ಎನ್ನುತ್ತಾರೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮುಖಂಡ ರಜಾಕ್ ಉಸ್ತಾದ್. ಈ ಕುರಿತು ದಾಖಲೆ ಬಿಡುಗಡೆ ಮಾಡಿರುವ ಅವರು, “ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದಷ್ಟು ಅನುದಾನ ನೀಡುತ್ತಿಲ್ಲ,” ಎಂದು ದೂರಿದ್ದಾರೆ.

“ಹಿಂದಿನ ಸರ್ಕಾರ ಎಚ್‌ಕೆಆರ್‌ಡಿಬಿಗಾಗಿ 1500 ಕೋಟಿ ಘೋಷಿಸಿತ್ತು. ಆದರೆ, ಕುಮಾರಸ್ವಾಮಿ ಸರ್ಕಾರವು ಒಂದು ಸಾವಿರ ಕೋಟಿ ಅನುದಾನ ಮಾತ್ರ ಬಜೆಟ್‌ನಲ್ಲಿ ಅನುಮೋದನೆ ಪಡೆದಿದೆ. ಇದರಲ್ಲಿ 170.90 ಕೋಟಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್ಸಿಪಿ) ಹಾಗೂ ಗಿರಿಜನ ಉಪಯೋಜನೆಯ (ಟಿಎಸ್ಪಿ) ಅನುದಾನವನ್ನು ಸೇರಿಸಿ ಒಟ್ಟು 260.60 ಕೋಟಿ ಮಂಡಳಿಗೆ ವರ್ಗಾವಣೆ ಮಾಡಿದ್ದರಿಂದಾಗಿ ಹೈ-ಕ ಭಾಗದ ಜನರಿಗೆ ಹಣದ ಲಭ್ಯತೆ ಕಡಿಮೆ ಮಾಡಲಾಗಿದೆ. ಈ ಒಂದು ಸಾವಿರ ಕೋಟಿ ಅನುದಾನದಲ್ಲಿ 217.50 ಕೋಟಿ ನಂಜುಂಡಪ್ಪ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿ ಯೋಜನೆ (ಎಸ್ಡಿಪಿ) ಅನುದಾನ, ಎಸ್ಸಿಪಿಯ 257.96 ಕೋಟಿ, ಟಿಎಸ್ಪಿ 104.54 ಕೋಟಿ ಅನುದಾನವನ್ನೂ ಸೇರಿಸಿದೆ. 580 ಕೋಟಿ ಅನುದಾನವನ್ನು ವಿವಿಧ ಸಾಮಾನ್ಯ ಬಜೆಟ್ ಮೂಲಕ ಮಂಡಳಿಗೆ ವರ್ಗಾವಣೆ ಮಾಡಿ ಕೇವಲ 420 ಕೋಟಿ ಮಾತ್ರ ಹೆಚ್ಚುವರಿಯಾಗಿ ಸರ್ಕಾರ ಮಂಡಳಿಗೆ ಅನುದಾನ ನೀಡಿದಂತಾಗಿದೆ,” ಎಂದು ಆಕ್ಷೇಪ ಎತ್ತಿರುವ ರಜಾಕ್ ಉಸ್ತಾದ್, ಅನ್ಯಾಯ ಸರಿಪಡಿಸದಿದ್ದಲ್ಲಿ ಎಚ್‌ಕೆಆರ್‌ಡಿಬಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ವಿಶೇಷ ಸ್ಥಾನಮಾನದಡಿ ಬಿಡುಗಡೆಯಾಗುವ ಅನುದಾನ ಎಲ್ಲ ಕ್ಷೇತ್ರಗಳಿಗೆ ಸರಿಯಾಗಿ ಹಂಚಿಕೆ ಆಗಬೇಕಿದೆ. ಹಿಂದಿನ ಶಾಸಕರು ಯಾಕೆ ಈ ವಿಚಾರ ಗಮನಿಸಿಲ್ಲವೋ ನನಗೆ ಗೊತ್ತಿಲ್ಲ. ಆದರೆ, ನಾನು ಮಾತ್ರ ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದೇನೆ. 
ದದ್ದಲ್ ಬಸನಗೌಡ, ರಾಯಚೂರು ಗ್ರಾಮೀಣ ಶಾಸಕ
ಇದನ್ನೂ ಓದಿ : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವಿಫಲ; ಅಖಂಡ ಕರ್ನಾಟಕಕ್ಕೆ ಬಲ
ಸರ್ಕಾರ ಸಾಮಾನ್ಯ ಯೋಜನೆಗಳಿಗೆ ಬಿಡುಗಡೆ ಮಾಡುವ ಅನುದಾನವನ್ನು ಎಚ್‌ಕೆಆರ್‌ಡಿಬಿ ವ್ಯಾಪ್ತಿಗೆ ಸೇರಿಸುವುದು ಸರಿಯಲ್ಲ. ಈ ಭಾಗಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡಬೇಕು. ಎಲ್ಲ ಯೋಜನೆಗಳು ಬೇರೆ ಜಿಲ್ಲೆಗಳಂತೆ ಇಲ್ಲೂ ಜಾರಿಯಾಗಬೇಕು. ಆಗಷ್ಟೇ 371 ಜೆ ಕಲಂನಿಂದ ಈ ಭಾಗದ ಪ್ರಗತಿ ಸಾಧ್ಯ.
ರಜಾಕ್ ಉಸ್ತಾದ್, ಹೈ-ಕ ಹೋರಾಟ ಸಮಿತಿ ಮುಖಂಡ

“ಶಿಕ್ಷಣ, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು, ಬೇರೆ ಜಿಲ್ಲೆಗಳಲ್ಲಿ ಶೇ.8ರಷ್ಟು ಮೀಸಲಾತಿ ನೀಡಬೇಕಿದೆ. ಆದರೆ, ಅದು ಶಿಕ್ಷಣದಲ್ಲಿ ಅದು ಕೊಂಚ ಮಟ್ಟಿಗೆ ಅನುಷ್ಠಾನವಾಗಿದ್ದು, ಉದ್ಯೋಗದಲ್ಲಿ, ಮುಂಬಡ್ತಿಯಲ್ಲಿ ಮಾತ್ರ ಈವರೆಗೆ ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ,” ಎಂದಿರುವ ಅವರು, “ಕಳೆದ ಐದು ವರ್ಷದಲ್ಲಿ ಎಚ್‌ಕೆಆರ್‌ಡಿಬಿಗೆ ಬಿಡುಗಡೆಯಾದ ಅನುದಾನ 4,300 ಕೋಟಿಯಾದರೆ, ಅದರಲ್ಲಿ 2 ಸಾವಿರ ಕೋಟಿ ಮಾತ್ರ ಖರ್ಚಾಗಿದೆ. ಇನ್ನೂ ಶೇ.50ಷ್ಟು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕೆಲವು ಪ್ರಗತಿಯಲ್ಲಿದ್ದರೆ, ಸಾಕಷ್ಟು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ವಿಶೇಷ ಸ್ಥಾನಮಾವನ್ನು ಸರಿಯಾಗಿ ಅನುಷ್ಠಾನ ಮಾಡಬೇಕಿದೆ,” ಎಂದೂ ಒತ್ತಾಯ ಮಾಡಿದ್ದಾರೆ.

ಒಟ್ಟಾರೆ ಈ ಭಾಗದಲ್ಲಿ 371 ಜೆ ಕಲಂ ಸಮರ್ಪಕವಾಗಿ ಅನುಷ್ಠಾನವಾಗದಿದ್ದಲ್ಲಿ ಈ ಸೌಲಭ್ಯ ಸಿಕ್ಕರೂ ಪ್ರಯೋಜನ ಇಲ್ಲದಂತಾಗುತ್ತದೆ. ಈ ಬಗ್ಗೆ ಈ ಭಾಗದ ಜನರೊಂದಿಗೆ ಜನಪ್ರತಿನಿಧಿಗಳು ಕೂಡ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More