ಚಾಣಕ್ಯಪುರಿ | ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಮಾಧ್ಯಮಗಳು ಮುಚ್ಚಿಟ್ಟ ಸತ್ಯವಿದು!

ಬೆಳಗಾವಿ ಜಿಲ್ಲೆಯ ಸಣ್ಣದೊಂದು ಬ್ಯಾಂಕಿನ ವಿವಾದ ರಾಜ್ಯ ರಾಜಕಾರಣದಲ್ಲಿ ಮೂಡಿಸಿದ ಸಂಚಲನ ಈಗ ಹಳೆಯದು. ಇದರ ಹಿಂದಿನ ಪ್ರಮುಖ ಸಂಗತಿಯೊಂದನ್ನು ಮುಖ್ಯವಾಹಿನಿ ಮಾಧ್ಯಮಗಳು ಇದುವರೆಗೂ ಹೇಳಿಲ್ಲ. ಆದರೆ, ದೆಹಲಿಗೆ ಬಂದ ಬಿಜೆಪಿ ನಾಯಕರೊಬ್ಬರು ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ

ಬೆಳಗಾವಿ ಜಿಲ್ಲೆಯ ಸಣ್ಣದೊಂದು ಪಿಎಲ್‌ಡಿ ಬ್ಯಾಂಕಿನ ವಿಚಾರ ರಾಜ್ಯ ರಾಜಕಾರಣದಲ್ಲಿ ಮೂಡಿಸಿದ ಸಂಚಲನ ಈಗ ಹಳೆಯದು. ಇದರ ಹಿಂದೆ ಲಿಂಗಾಯತ ಲಾಬಿ ಇದೆ ಎಂಬುದು ಮುಖ್ಯವಾಹಿನಿ ಮಾಧ್ಯಮಗಳು ಮುಚ್ಚಿಟ್ಟ ಸತ್ಯ. "ಜಾರಕಿಹೊಳಿ ಸಹೋದರ ಮೇಲೆ ಬೆಳಗಾವಿ ಜಿಲ್ಲೆಯ ಲಿಂಗಾಯತ ನಾಯಕರಿಗೆ ಸಿಟ್ಟಿದೆ‌.‌ ಅದರಲ್ಲೂ, ಬುದ್ಧಿವಂತ ಎನ್ನುವ ಕಾರಣಕ್ಕೆ ಸತೀಶ್ ಜಾರಕಿಹೊಳಿ ಮೇಲೆ‌ ಸಿಕ್ಕಾಪಟ್ಟೆ ಸಿಟ್ಟಿದೆ. ಜಾರಕಿಹೊಳಿ ಸಹೋದರರು ಕುತಂತ್ರ ಮಾಡಿ ವೀರಶೈವ ನಾಯಕರಾದ ವಿ‌ ಎಸ್ ಕೌಜಲಗಿ ಅವರನ್ನು ಮೂಲೆಗುಂಪು ಮಾಡಿದರು. ಎ ಬಿ ಪಾಟೀಲ್ ರಾಜಕಾರಣದಿಂದ ದೂರ ಸರಿಯುವಂತೆ ಮಾಡಿದರು, ಪ್ರಭಾಕರ್ ಕೋರೆ ಕಾಂಗ್ರೆಸ್ ಬಿಡುವಂತಾಯಿತು. ಉಮೇಶ್ ಕತ್ತಿ ಕೂಡ ಸೋಲುಣ್ಣಬೇಕಾಯಿತು. ಸಕ್ಕರೆ ಕಾರ್ಖಾನೆಗಳಲ್ಲೂ ಜಾರಕಿಹೊಳಿ ಕುಟುಂಬದವರದ್ದೇ ಪಾರುಪತ್ಯ ಎಂಬುದು ಲಿಂಗಾಯತ ನಾಯಕರ ತಕರಾರು. ಇದರಿಂದ ಜಾರಕಿಹೊಳಿ ಕುಟುಂಬದವರು ವರ್ಸಸ್ ಲಿಂಗಾಯತರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ದೆಹಲಿಗೆ ಬಂದಿದ್ದ ಬಿಜೆಪಿ ನಾಯಕರರೊಬ್ಬರು ಸತ್ಯ ಬಿಚ್ಚಿಟ್ಟರು.

“ಇಂಥ ಸಿಟ್ಟಿರುವುದರಿಂದಲೇ ಎಲ್ಲ ಸೇರಿಕೊಂಡು ಜಾರಕಿಹೊಳಿ ಸಹೋದರರನ್ನು ಹಣಿಯಲು ಪ್ರಯತ್ನಪಟ್ಟಿದ್ದರು. ಆದರೆ ಈ ಹಿಂದೆ ಪ್ರಯೋಜನ ಆಗಿರಲಿಲ್ಲ.‌ ಈಗ ಕಾಲ ಕೂಡಿಬಂದಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಮುಖ ಇಟ್ಟುಕೊಂಡು ಬೇರೆಯವರು ಮಸಲತ್ತು ನಡೆಸುತ್ತಿದ್ದಾರೆ. ಇಷ್ಟು ದಿನ ಬೆಳಗಾವಿ ಜಿಲ್ಲೆಯ ಲಿಂಗಾಯತರಲ್ಲಿ ಇಷ್ಟರ ಮಟ್ಟಗಿನ ಒಗ್ಗಟ್ಟು ಮೂಡಿರಲಿಲ್ಲ. ಈಗ ಒಂದಾಗಿದ್ದಾರೆ. ಸತೀಶ್ ಜಾರಕಿಹೊಳಿಯವರನ್ನು ರಾಜಕೀಯವಾಗಿ ಮುಗಿಸಿಯೇ ತೀರಬೇಕೆಂಬುದೇ ವಿರೋಧಿಗಳ ಗುರಿ,” ಎನ್ನುತ್ತಾರವರು.

ಸತೀಶ್ ಜಾರಕಿಹೊಳಿ ಬಗ್ಗೆ ಭವಿಷ್ಯ ನುಡಿದಿದ್ದರಂತೆ ಜೆ ಎಚ್ ಪಟೇಲ್

ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಉಮೇಶ್ ಕತ್ತಿ‌ ಮತ್ತು ಎ ಬಿ ಪಾಟೀಲ್ ಹಾವು-ಮುಂಗುಸಿ ರೀತಿ ಇದ್ದರಂತೆ. ಒಮ್ಮೆ ಎ ಬಿ ಪಾಟೀಲ್ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾಗ, ಅವರಿಗೆ ಟಿಕೆಟ್ ತಪ್ಪಿಸಲು ಉಮೇಶ್ ಕತ್ತಿ ಲಾಬಿ ಮಾಡುತ್ತಿದ್ದರಂತೆ‌. ಇದರ ಭಾಗವಾಗಿ ಒಮ್ಮೆ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ನಾಯಕರನ್ನೆಲ್ಲ ಸೇರಿಸಿಕೊಂಡು ಜೆ ಎಚ್ ಪಟೇಲ್ ಬಳಿಯೂ ಹೋಗಿದ್ದರಂತೆ. ಎ ಬಿ ಪಾಟೀಲ್ ಬದಲು ಹಣಬಲ‌ವುಳ್ಳ ಉದ್ಯಮಿ ಸತೀಶ್ ಜಾರಕಿಹೊಳಿಗೆ ಕೊಡಿ ಎಂದು ಕೇಳಿದರಂತೆ. ಉಮೇಶ್ ಕತ್ತಿ ಮಾತು ಕೇಳಿಸಿಕೊಂಡ ಜೆ ಎಚ್ ಪಟೇಲ್, ಎಲ್ಲರನ್ನೂ ಹೊರಗೆ ಕಳಿಸಿ ಉಮೇಶ್ ಕತ್ತಿಗೆ ಬೈದಿದ್ದರಂತೆ. "ಬೇಕಿದ್ದರೆ ಅವರ ಉದ್ಯಮಕ್ಕೆ ಸಹಾಯ ಮಾಡು. ಆದರೆ ಅಧಿಕಾರದ ದಾರಿ ತೋರಿಸಬೇಡ," ಅಂತ ಬುದ್ಧಿವಾದ ಹೇಳಿದ್ದರಂತೆ.

ಇದನ್ನೂ ಓದಿ : ಚಾಣಕ್ಯಪುರಿ | ಸಮ್ಮಿಶ್ರ ಸರ್ಕಾರ ಕೆಡವಲು ಬಿಎಸ್‌ವೈ ಸನ್ನದ್ಧ, ಹೈಕಮಾಂಡ್‌ಗಿಲ್ಲ ಒಲವು!

ಗಾಳಿಯಲ್ಲಿ ಗುಂಡು ಹೊಡೆದ ಸಿ ಟಿ ರವಿ, ಈಶ್ವರಪ್ಪ

ರಾಜಕಾರಣಿಗಳು ಮಾಧ್ಯಮಗಳನ್ನು ಎಷ್ಟು ಲಘುವಾಗಿ ಪರಿಗಣಿಸುತ್ತಾರೆ ಮತ್ತು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಘಟನೆ ೧: ಮೊನ್ನೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಯಡಿಯೂರಪ್ಪ ದಿಢೀರನೆ ಬೆಂಗಳೂರಿಗೆ ವಾಪಸಾಗಿದ್ದರು. ಈ ದಿಢೀರ್ ಬೆಳವಣಿಗೆಯನ್ನು ಮಾಧ್ಯಮಗಳು ತಮ್ಮಗಿಷ್ಟ ಬಂದಂತೆ ಬಣ್ಣಿಸುತ್ತಿದ್ದವು‌. ಇದೇ ವೇಳೆ, ದೆಹಲಿ ಪತ್ರಕರ್ತರಿಗೆ ಸಿಕ್ಕ ಸಿ ಟಿ ರವಿ ಅವರೂ ಯಡಿಯೂರಪ್ಪ ವಾಪಸಾದ ಬಗೆಗೆ ಪ್ರಶ್ನೆ ಎದುರಿಸಬೇಕಾಯಿತು. ‌ವಿಷಯ ಗೊತ್ತಿಲ್ಲದಿದ್ದರೂ ಅವರೇನೂ ವಿಚಲಿತರಾಗಲಿಲ್ಲ. “ಯಡಿಯೂರಪ್ಪ ಪ್ರಮುಖ ಕಾರಣವೊಂದರ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸಾಗಿದ್ದಾರೆ," ಎಂದು ಸತ್ಯದ ತಲೆಯ ಮೇಲೆ‌ ಹೊಡೆದಂತೆ ಹೇಳಿಬಿಟ್ಟರು. ಬೈಟ್ ಮುಗಿದು ಕ್ಯಾಮೆರಾ ಆಫ್ ಆದ ಬಳಿಕ, "ಯಡಿಯೂರಪ್ಪ ಏಕೆ ಬೆಂಗಳೂರಿಗೆ ವಾಪಸಾದರು?" ಅಂತ ಪತ್ರಕರ್ತರ ಬಳಿಯೇ ವಿಚಾರಿಸಿದರು!

ಘಟನೆ ೨: ಬಿಜೆಪಿ ಕಾರ್ಯಕಾರಣಿಯಲ್ಲಿ ದೆಹಲಿಗೆ ಆಗಮಿಸಿದ ಕೆ ಎಸ್ ಈಶ್ವರಪ್ಪ ಅವರಿಗೆ ಕ್ಯಾಮೆರಾಗಳು ಎದುರಾದವು. ಪ್ರಶ್ನೆಗಳಿದ್ದದ್ದು ಮಾತ್ರ ರಾಜ್ಯ ಸರ್ಕಾರದ ಅಸ್ಥಿರತೆ ಬಗ್ಗೆಯೇ. ಊಹೆಯೇ ಮಾಡಿಲ್ಲದ ಪ್ರಶ್ನೆ ಎದುರಾದ ಮಾತ್ರಕ್ಕೆ ಎದೆಗುಂದುವರೇ ಈಶ್ವರಪ್ಪ? ಹಿಂದೆ ಮುಂದೆ ನೋಡದೆ, "ಇನ್ನೆರಡು ದಿನ ಕಾದುನೋಡಿ, ಗೊತ್ತಾಗುತ್ತದೆ," ಎಂಬ ಬಾಂಬ್ ಸಿಡಿಸಿದರು. ಎರಡು ದಿನದಲ್ಲಿ ಏನಾಗುತ್ತೆ? ಡಿ ಕೆ ಶಿವಕುಮಾರ್ ಬಂಧನವಾಗುತ್ತಾ ಅಥವಾ ರಾಜ್ಯ ಸರ್ಕಾರ ಬಿದ್ದೋಗುತ್ತಾ ಅಂತ ಮಾತ್ರ ಬಿಡಿಸಿ ಹೇಳಲಿಲ್ಲ. ಕೆದಕಿ ಕೇಳಿದಾಗ ಕಾಲು ಕಿತ್ತುಬಿಟ್ಟರು.

ಸಿ ಟಿ ರವಿ ಹೇಳಿಕೆಯಂತೆ, ಯಡಿಯೂರಪ್ಪ ಬೆಂಗಳೂರಿಗೆ ತೆರಳಿದ್ದು ಯಾವ ಪ್ರಮುಖ ಕಾರಣಕ್ಕೆ ಅಂತ ಈಗ ಜಗಜ್ಜಾಹೀರಾಗಿದೆ. ಈಶ್ವರಪ್ಪ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ 'ಏನಾಯಿತು' ಎಂಬುದು ಕೂಡ ಬಹಿರಂಗವಾಗಿದೆ!

ಡಿಸ್ಟರ್ಬ್ ಆಗಿದ್ದ ಡಿಕೆಶಿ ನಿರಾಳರಾಗಿದ್ದು ಹೀಗೆ!

ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ವಿವಾದದಲ್ಲಿ ತಮ್ಮ‌ ಹೆಸರು ತಳುಕು‌ ಹಾಕಿಕೊಂಡಿದ್ದಾಗಲೇ ಹೈರಾಣಾಗಿದ್ದ ಡಿ ಕೆ ಶಿವಕುಮಾರ್, ಬಳಿಕ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಲಿದೆ ಎಂಬ ವಿಷಯ ಕೇಳಿ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದರಂತೆ. ಕೂಡಲೇ ಹಿರಿಯ ವಕೀಲರ ಜೊತೆ ಮತ್ತು ಸ್ವಾಮೀಜಿಯೊಬ್ಬರ ಜೊತೆ ಮಾತನಾಡಿದರಂತೆ. ಹಾಗೆ ಮಾತನಾಡಿದ ಬಳಿಕವಷ್ಟೇ ನಿಟ್ಟುಸಿರು ಬಿಟ್ಟರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More