ಕೊಪ್ಪಳದಲ್ಲಿ ಬಿಜೆಪಿಯ ಕರಡಿ ಸಂಗಣ್ಣ ವಿರುದ್ಧ ಕೈ ಪಾಳೆಯದ ಕಣದ ಕಲಿ ಯಾರು?

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹ್ಯಾಟ್ರಿಕ್‌ ಕನಸನ್ನು ಭಗ್ನಗೊಳಿಸಲು ಕಾಂಗ್ರೆಸ್‌ ರಣತಂತ್ರ ಹೆಣೆಯುತ್ತಿದೆ. ಗೆಲುವಿನ ಅಜೇಯ ಓಟದ ವಿಶ್ವಾಸ ಹೊಂದಿರುವ ಬಿಜೆಪಿಯ ಕರಡಿ ಸಂಗಣ್ಣ ವಿರುದ್ಧ ಸ್ಪರ್ಧೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 8 ಮಂದಿಯ ಹೆಸರು ಪ್ರಸ್ತಾಪವಾಗಿವೆ

ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗಕ್ಕೆ ಎರಡು ಕ್ಷೇತ್ರಗಳು ಮೀಸಲಾಗಿದ್ದು, ಈ ಪೈಕಿ ಕೊಪ್ಪಳವೂ ಒಂದು. ೨೦೦೯ ಮತ್ತು ೨೦೧೪ರ ಲೋಕಸಭಾ ಚುನಾವಣೆಗಳಲ್ಲಿ ಕೊಪ್ಪಳದಲ್ಲಿ ಗೆಲುವಿನ ನಗೆ ಬೀರಿರುವ ಬಿಜೆಪಿಯು ಈ ಬಾರಿ ಹ್ಯಾಟ್ರಿಕ್‌ ಕನಸು ಕಾಣುತ್ತಿದೆ. ಬಿಜೆಪಿಯ ಆಸೆ ನುಚ್ಚುನೂರು ಮಾಡಿ ಕ್ಷೇತ್ರ ಕೈವಶಪಡಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನ ಆರಂಭಿಸಿದೆ. ಬಿಜೆಪಿಯಿಂದ ಹಾಲಿ ಸಂಸದರಾಗಿರುವ ಕರಡಿ ಸಂಗಣ್ಣ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಂಟು ಮಂದಿಯ ಹೆಸರುಗಳು ಪ್ರಸ್ತಾಪವಾಗಿವೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಮತಗಳು ಹೆಚ್ಚಾಗಿರುವುದರಿಂದ ದಶಕಗಳಿಂದಲೂ ಈ ಸಮುದಾಯದವರಿಗೆ ವಿವಿಧ ಪಕ್ಷಗಳು ಮಣೆ ಹಾಕುತ್ತ ಬಂದಿವೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಕುರುಬ ಸಮುದಾಯದವರಾದ ಕಾಂಗ್ರೆಸ್‌ ಕೊಪ್ಪಳ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ್‌ ಹಿಟ್ನಾಳ್‌ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕೆ ವಿರೂಪಾಕ್ಷಪ್ಪ, ಪರಿಶಿಷ್ಟ ಪಂಗಡಕ್ಕೆ ಸೇರಿದ ಶಿವರಾಮೇಗೌಡ ಶಿವನಗೌಡ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಲಿಂಗಾಯತ ಸಮುದಾಯದವರಾದ ಮಾಜಿ ಸಚಿವ ಬಸವರಾಜ ರಾಯರಡ್ಡಿ, ಸಿಂಧನೂರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಸೋದರಳಿಯ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಬಸವಗೌಡ ಬಾದರ್ಲಿ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಸಂಬಂಧಿ ಶರಣೇಗೌಡ ಬಯ್ಯಾಪುರ ಟಿಕೆಟ್ ಆಕಾಂಕ್ಷಿಗಳಿದ್ದಾರೆ.

೨೦೦೯ರಲ್ಲಿ ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌ ಓಟಕ್ಕೆ ತಡೆಯೊಡ್ಡಿದ್ದ ಶಿವರಾಮೇಗೌಡ ಹಾಗೂ ೨೦೦೪ರಲ್ಲಿ ಕೊನೆಯ ಬಾರಿಗೆ ಕಾಂಗ್ರೆಸ್‌ ಸಂಸದರಾಗಿ ಆಯ್ಕೆಯಾಗಿದ್ದ ಹಾಗೂ ತೀರಾ ಇತ್ತೀಚಿನವರೆಗೂ ಬಿಜೆಪಿಯ ನಾಯಕ ಕೆ ಎಸ್‌ ಈಶ್ವರಪ್ಪ ಅವರ ಜೊತೆಯಲ್ಲಿ ಗುರುತಿಸಿಕೊಂಡಿದ್ದ ವಿರೂಪಾಕ್ಷಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದರು. ಬಿಜೆಪಿಯಲ್ಲಿ ತಮ್ಮ ಅಸ್ತಿತ್ವ ಪ್ರದರ್ಶಿಸಲು ಈಶ್ವರಪ್ಪ ಪೋಷಿಸಿ ಬೆಳೆಸಿದ್ದ ರಾಯಣ್ಣ ಬ್ರಿಗೇಡ್‌ ಅನ್ನು ಮುನ್ನಡೆಸಿದ್ದವರು ವಿರೂಪಾಕ್ಷಪ್ಪ ಎಂಬುದನ್ನು ಇಲ್ಲಿ ನೆನೆಯಬಹುದು. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಪರಾಜಿತರಾದ ರಾಯರಡ್ಡಿ ಅವರೂ ಟಿಕೆಟ್‌ಗೆ‌ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಕಳೆದ ಚುನಾವಣೆಯಲ್ಲಿ ಕೊಪ್ಪಳ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ಈ ಬಾರಿಯೂ ಜೆಡಿಎಸ್‌ ವಲಯದಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಸ್ತಾಪವಾಗಿಲ್ಲ. “ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಪೂರಕವಾದ ವಾತಾವರಣವಿದೆ. ಇಬ್ಬರು ಮಾಜಿ ಸಂಸದರು ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ಪಕ್ಷದ ಬಲ ಹೆಚ್ಚಿದೆ. ಕೇಂದ್ರ ಸರ್ಕಾರವು ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗಲಿದೆ,” ಎನ್ನುತ್ತಾರೆ ಕೊಪ್ಪಳ ಶಾಸಕ ಹಾಗೂ ಬಸವರಾಜ್‌ ಹಿಟ್ನಾಳ್‌ ಅವರ ಪುತ್ರ ರಾಘವೇಂದ್ರ ಹಿಟ್ನಾಳ್‌.‌‌

ಇದನ್ನೂ ಓದಿ : ಬೀದರ್ ಲೋಕಸಭಾ‌ ಟಿಕೆಟ್‌ಗೆ ಈಶ್ವರ್‌ ಖಂಡ್ರೆ-ವಿಜಯ್‌ ಸಿಂಗ್‌ ಮಧ್ಯೆ ಸ್ಪರ್ಧೆ?

ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಗಂಗಾವತಿ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಸಿಂಧನೂರು ಹಾಗೂ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಕೊಪ್ಪಳ, ಕುಷ್ಟಗಿ ಮತ್ತು ಮಸ್ಕಿಯಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಸಿಂಧನೂರಿನಲ್ಲಿ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಇದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುವ ಚರ್ಚೆ ನಡೆಯುತ್ತಿರುವುದರಿಂದ ಕಾಂಗ್ರೆಸ್‌-ಬಿಜೆಪಿ ಸಮಬಲದ ಹೋರಾಟ ಕಂಡುಬರುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯದ ವೆಂಕರಾವ್‌ ನಾಡಗೌಡ ಅವರು ಪಶುಸಂಗೋಪನಾ ಸಚಿವರೂ ಆಗಿರುವುದರಿಂದ ಮೈತ್ರಿಕೂಟವೂ ಗೆಲುವಿನ ಕನಸು ಕಾಣುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕೊಪ್ಪಳ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್‌ ತಂಗಡಗಿ, “ಹಲವು ಮಂದಿ ಆಕಾಂಕ್ಷಿಗಳಿರುವುದರಿಂದ ಸಿದ್ದರಾಮಯ್ಯ ಅವರನ್ನು ಸ್ಪರ್ಧಿಸುವಂತೆ ಮನವಿ ಮಾಡಿದ್ದೆವು. ಆದರೆ, ಅವರಿಗೆ ಚುನಾವಣಾ ರಾಜಕೀಯದಲ್ಲಿ ಒಲವಿಲ್ಲ. ಸಮೀಕ್ಷೆಯ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷ ನಿರ್ಣಯಿಸಿದೆ. ಈ ಬಾರಿ ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಗೆಲುವು ಖಚಿತ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

೨೦೧೪ರಲ್ಲಿ ಕರಡಿ ಸಂಗಣ್ಣ ವಿರುದ್ಧ ಬಸವರಾಜ್‌ ಹಿಟ್ನಾಳ್‌ ಅವರು ಶೇ.೩ರಷ್ಟು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ೧೯೯೧ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೊಪ್ಪಳದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ, 2,29,979 ಮತ ಪಡೆದು ಕಾಂಗ್ರೆಸ್‌ನ ಬಸವರಾಜ್‌ ಪಾಟೀಲ್‌ ಅನ್ವಾರಿ (೨,೪೧,೧೭೬) ವಿರುದ್ಧ 11,197 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈಗ ಅನ್ವಾರಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More