ಟ್ರಬಲ್ ಶೂಟರ್‌ಗಳಾದ ಡಿ ಕೆ ಸಹೋದರರು ತಳಮಳಗೊಂಡಿರುವುದೇಕೆ?

ಹಣಕಾಸು ಅಕ್ರಮ ಆರೋಪ ಎದುರಿಸುತ್ತಿರುವ ಸಚಿವ ಡಿಕೆಶಿ, ತನಿಖಾ ಸಂಸ್ಥೆಗಳ ಚಲನವಲನಗಳಿಂದ ಗಲಿಬಿಲಿಗೊಂಡಿದ್ದಾರೆ. ಏಕಕಾಲಕ್ಕೆ ರಾಜಕೀಯ ಮತ್ತು ಕಾನೂನಾತ್ಮಕ ಹೆಜ್ಜೆ ಇಡುವ ಮೂಲಕ ಆಪತ್ತಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಡಿಕೆ ಸಹೋದರರು ಆತಂಕಗೊಂಡಿರುವುದೇಕೆ?

ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರ ಬಂಧನ ಕುರಿತ ವಿಚಾರಗಳು ಕೆಲವು ದಿನಗಳಿಂದ ಭಾರಿ ಚರ್ಚೆಗೆ ಒಳಗಾಗಿವೆ. ಇದರ ಬೆನ್ನಿಗೇ, ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಡಿಕೆಶಿ‌ ಅವರ ಸಹೋದರ ಡಿ ಕೆ ಸುರೇಶ್‌‌ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ಆಡಿರುವ ಕೆಲವು ಮಾತುಗಳು ಉಭಯ ನಾಯಕರು ಬಂಧನ ಭೀತಿಗೆ ಒಳಗಾಗಿದ್ದು, ತಳಮಳಗೊಂಡಿದ್ದಾರೆ ಎಂಬುದಕ್ಕೆ ಪುಷ್ಟಿ ಒದಗಿಸಿವೆ ಎನ್ನಲಾಗುತ್ತಿದೆ. ಈ ನಡುವೆ, ಡಿ ಕೆ ಶಿವಕುಮಾರ್ ಅವರು ದೇಶದ ಪ್ರತಿಷ್ಠಿತ ‘ಲೀಗಲ್‌ ಈಗಲ್’‌ಗಳ ಜೊತೆ ಪ್ರಕರಣದ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಇದರರ್ಥ, ಶಿವಕುಮಾರ್‌ ಅವರು ಗಂಭೀರ ಸನ್ನಿವೇಶದಲ್ಲಿ ಸಿಲುಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದೆಲ್ಲದರ ನಡುವೆ, ಪಕ್ಷಾತೀತವಾಗಿ ಎಲ್ಲ ನಾಯಕರೂ ಗೌರವಿಸುವ ಗಣ್ಯರೊಬ್ಬರು ಡಿ ಕೆ ಶಿವಕುಮಾರ್‌ ಅವರ ಬೆನ್ನಿಗೆ ಪ್ರಬಲವಾಗಿ ನಿಂತಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿರುವ ಅವರು, ಡಿ ಕೆ ಶಿವಕುಮಾರ್‌ಗೆ ಸಮಸ್ಯೆ ಮಾಡದಂತೆ ಎಚ್ಚರಿಸಿದ್ದಾರೆ ಎನ್ನಲಾಗುತ್ತಿದೆ. ಈ ನೆಲೆಯಲ್ಲಿ ಡಿ ಕೆ ಶಿವಕುಮಾರ್‌ ಅವರಿಗೆ ಬಂಧನದಂಥ ಸ್ಥಿತಿ ಎದುರಾಗುವ ಸಾಧ್ಯತೆ ಕ್ಷೀಣ. ಆದರೆ, ಡಿ ಕೆ ಶಿವಕುಮಾರ್‌ ಅವರಿಗೆ ತಾವು ಸಿಲುಕಿರುವ ಸನ್ನಿವೇಶದ ಬಗ್ಗೆ ತಿಳಿವಳಿಕೆ ಇದ್ದು, ಪರಿಸ್ಥಿತಿ ಕಂಟಕವಾಗುವುದರ ಅರಿವೂ ಇದೆ. ಹಾಗಾಗಿ, ಏಕಕಾಲಕ್ಕೆ ಹಲವು ರೀತಿಯಲ್ಲಿ ಡಿ ಕೆ ಶಿವಕುಮಾರ್ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಈ ನೆಲೆಯಲ್ಲೇ ಅವರು, “ಬೆಂಗಳೂರಿಗೆ ಕಿವಿಗೆ ಹೂವು ಇಟ್ಟುಕೊಂಡು ಬಂದಿಲ್ಲ. ರಾಜಕೀಯ ಮಾಡಲು ಬಂದಿದ್ದೇನೆ,” ಎನ್ನುವ ಹೇಳಿಕೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ. ‌

ಕಳೆದ ಜೂನ್‌ನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ಮಾನದಂಡಗಳಿಗೆ ವಿರುದ್ಧವಾಗಿ ನಕಲಿ ದಾಖಲೆ ಹಾಗೂ ಮತದಾರರ ಚೀಟಿಗಳನ್ನು ಸೃಷ್ಟಿಸಿ ನೋಟು ಬದಲಾವಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಡಿ ಕೆ ಶಿವಕುಮಾರ್‌ ಸೇರಿದಂತೆ ಅವರ ೧೧ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೂ ಮುನ್ನವೇ ಸುದ್ದಿಗೋಷ್ಠಿ ನಡೆಸಿದ್ದ ಶಿವಕುಮಾರ್‌ ಅವರು, “ನಮ್ಮ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ,” ಎಂದು ಆರೋಪಿಸಿದ್ದರು. ದಾಳಿಗೂ ಮುನ್ನವೇ ಶಿವಕುಮಾರ್‌ ಅವರಿಗೆ ಮಾಹಿತಿ ದೊರೆತಿದ್ದು ಹೇಗೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಬ್ಬಿಬ್ಬಾಗಿದ್ದರಲ್ಲದೆ, ಆಂತರಿಕ ತನಿಖೆಯನ್ನೂ ನಡೆಸಿದ್ದರು. ಆಗಲೂ ಡಿ ಕೆ ಶಿವಕುಮಾರ್‌ ಆತಂಕಗೊಂಡೇ ಬೆಳ್ಳಂಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು ಎನ್ನಲಾಗಿತ್ತು.

ಇದಕ್ಕೂ ಮುನ್ನ, ೨೦೧೭ರ ಆಗಸ್ಟ್‌ನಲ್ಲಿ ಗುಜರಾತ್‌ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆತಂಕಗೊಂಡಿದ್ದ ಕಾಂಗ್ರೆಸ್, ತನ್ನ ೪೫ ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಡುವಿನ ಪ್ರತಿಷ್ಠೆಯ ಹೋರಾಟದಲ್ಲಿ ಸೋನಿಯಾ ಅವರ ಆಪ್ತರಾದ ಅಹ್ಮದ್‌ ಪಟೇಲ್‌ ಅವರನ್ನು ಗೆಲ್ಲಿಸುವಲ್ಲಿ ಡಿ ಕೆ ಶಿವಕುಮಾರ್‌ ಪ್ರಮುಖ ಪಾತ್ರ ನಿಭಾಯಿಸಿದ್ದರು. ಗುಜರಾತಿನ ಕಾಂಗ್ರೆಸ್‌ ಶಾಸಕರ ಆತಿಥ್ಯ ವಹಿಸಿಕೊಂಡಿದ್ದ ಶಿವಕುಮಾರ್‌, ಶಾಸಕರನ್ನು ಗುಜರಾತ್‌ಗೆ ಕರೆದೊಯ್ದು ಮತದಾನ ಮಾಡಿಸುವವರೆಗೂ ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.

ಇದನ್ನೂ ಓದಿ : ಡಿ ಕೆ ಶಿವಕುಮಾರ್ ಪರ ನಿಂತ ಒಕ್ಕಲಿಗರ ಸಂಘ ಹೊಮ್ಮಿಸಿದ ಕೇಡಿನ ಸಂದೇಶವೇನು?

ಬೆಂಗಳೂರಿನಲ್ಲಿ ಗುಜರಾತ್ ಕಾಂಗ್ರೆಸ್‌ ಶಾಸಕರನ್ನು ಈಗಲ್ಟನ್‌ ರೆಸಾರ್ಟ್‌ನಲ್ಲಿ ಉಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್‌ ಸೇರಿದಂತೆ ಅವರ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಈಗಲ್ಟನ್‌ ರೆಸಾರ್ಟ್‌ನಲ್ಲಿದ್ದ ಶಿವಕುಮಾರ್‌ ಅವರು ತಮ್ಮ ಕೈಯಲ್ಲಿದ್ದ ಕೆಲವು ದಾಖಲೆಗಳನ್ನು ನಾಶಪಡಿಸಿದ್ದರು. ಅಲ್ಲದೆ, ಡಿ ಕೆ ಶಿವಕುಮಾರ್‌ ಅವರ ದೆಹಲಿ ನಿವಾಸದಲ್ಲಿ ಅಂದಾಜು ೮ ಕೋಟಿ ರುಪಾಯಿ ಪತ್ತೆಯಾಗಿತ್ತು ಎನ್ನಲಾಗಿದೆ. ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಯು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿತ್ತು. ಆದಾಯ ತೆರಿಗೆ ಇಲಾಖೆ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಈಗ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಆತಂಕಗೊಂಡಿರುವ ಡಿ ಕೆ ಶಿವಕುಮಾರ್‌ ಮತ್ತು ಡಿ ಕೆ ಸುರೇಶ್‌ ತಮ್ಮ ಮೇಲಿನ ಆರೋಪಗಳನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂಬ ಆರೋಪವು ಬಿಜೆಪಿ ವಲಯದಲ್ಲಿದೆ.

ಇಷ್ಟಾಗಿಯೂ, ಡಿ ಕೆ ಶಿವಕುಮಾರ್‌ ಮತ್ತು ಅವರ ಆಪ್ತರ ಮೇಲಿನ ದಾಳಿಗಳಲ್ಲಿ ರಾಜಕೀಯವಿಲ್ಲ ಎಂದೇನಿಲ್ಲ. ಬಿಜೆಪಿಯ ಅಧಿಕಾರದ ಕನಸನ್ನು ದೂರ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಕುಮಾರ್‌ ಅವರ ಮೇಲೆ ಬಿಜೆಪಿ ನಾಯಕರಿಗೆ ಸಿಟ್ಟಿದೆ. ಗುಜರಾತ್ ಶಾಸಕರಿಗೆ ಆಶ್ರಯ ನೀಡಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದಕ್ಕೆ ಸಾಕಷ್ಟು ಬಲವಾದ ವಾದಗಳಿದ್ದವು. ಈಗ, ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಶತಾಯಗತಾಯ ಅಧಿಕಾರ ಪಡೆಯಲೇಬೇಕೆಂಬ ಹಠಕ್ಕೆ ಬಿಜೆಪಿ ಬಿದ್ದಿರುವುದರಿಂದ ಇಲ್ಲಿಯೂ ರಾಜಕೀಯದ ವಾಸನೆ ಅಡರಿದೆ. ಡಿ ಕೆ ಶಿವಕುಮಾರ್‌ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕುವ ಕೆಲಸವನ್ನು ಅವರದೇ ಪಕ್ಷದ ನಾಯಕರು ಮಾಡುವುದಿಲ್ಲ. ಇನ್ನು, ಬಿಜೆಪಿಯ ರಾಜಕೀಯ ಕಾರ್ಯಸೂಚಿಯ ಬಗ್ಗೆ ಅನುಮಾನ ಇದ್ದೇ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More