ಟ್ವಿಟರ್ ಸ್ಟೇಟ್ | ಬಿಜೆಪಿಯ ತೈಲ ಬೆಲೆ ಏರಿಕೆ ಸಮರ್ಥನೆ ಗ್ರಾಫ್‌ಗೆ ಟೀಕೆ

ಬಿಜೆಪಿಯ ‘ಗ್ರಾಫ್‌ ಸಮರ್ಥನೆ’ ಬಿಜೆಪಿ ಸರ್ಕಾರಕ್ಕೆ ‘ಫೋಟೋಶಾಪ್ ಸರ್ಕಾರ್‌’ ಎನ್ನುವ ಬಿರುದನ್ನು ಕಾಯಂಗೊಳಿಸಿದೆ. ಗ್ರಾಫ್‌ ಅನ್ನು ಚಿತ್ರ ವಿಚಿತ್ರವಾಗಿ ಬಿಡಿಸಿ ಜನರ ಮುಂದೆ ಸಮರ್ಥನೆಯನ್ನು ಹರಿಯಬಿಡಬಹುದಾದ ಸಂದರ್ಭದಲ್ಲಿ ವಾಸ್ತವಾಂಶಗಳಿಗೆ ಬೆಲೆ ಇಲ್ಲ ಎನ್ನುವ ಟೀಕೆ ಕೇಳಿಬಂದಿದೆ

ಮೋದಿ ಸರ್ಕಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಿಂದೆಂದೂ ಕಾಣದಂತೆ ಏರುಗತಿಯಲ್ಲಿ ಇರುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ‘ಭಾರತ್ ಬಂದ್’ ಆಯೋಜಿಸಿದ ಸಂದರ್ಭದಲ್ಲಿ ಬಿಜೆಪಿಯ ಅಧಿಕೃತ ಖಾತೆ ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿ ಅಂಕಿ ಅಂಶಗಳ ಗ್ರಾಫ್ ಚರ್ಚೆಗಳನ್ನು ಟ್ವೀಟ್ ಮಾಡಿರುವುದು ಟ್ವಿಟರ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಡಳಿತ ವೈಫಲ್ಯದ ಆರೋಪ ಬಂದಾಗಲೆಲ್ಲ ಬಿಜೆಪಿ ವಿಷಯವನ್ನು ತಿರುಚಿ ಸಮರ್ಥನೆ ಮಾಡಿಕೊಳ್ಳುವ ಬಗ್ಗೆ ಹಿಂದೆಯೂ ಸಾಕಷ್ಟು ಚರ್ಚೆಯಾಗಿದೆ. ಆದರೆ ಈ ಬಾರಿಯ ಬಿಜೆಪಿಯ ‘ಗ್ರಾಫ್‌ ಸಮರ್ಥನೆ’ ಬಿಜೆಪಿ ಸರ್ಕಾರಕ್ಕೆ ‘ಫೋಟೋಶಾಪ್ ಸರ್ಕಾರ್‌’ ಎನ್ನುವ ಬಿರುದನ್ನು ಖಾಯಂಗೊಳಿಸಿದೆ. ಗ್ರಾಫ್‌ ಅನ್ನು ಚಿತ್ರ ವಿಚಿತ್ರವಾಗಿ ಬಿಡಿಸಿ ಜನರ ಮುಂದೆ ಸಮರ್ಥನೆಯನ್ನು ಹರಿಯಬಿಡಬಹುದಾದ ಸಂದರ್ಭದಲ್ಲಿ ವಾಸ್ತವಾಂಶಗಳು ಏನು ಎನ್ನುವುದು ಯಾರಿಗೆ ಬೇಕಾಗುತ್ತದೆ?

ಫೋಟೋಶಾಪ್‌ ಗ್ರಾಫ್‌ನಲ್ಲಿ ಬಿಜೆಪಿ ೨೦೦೯, ೨೦೧೪ ಮತ್ತು ೨೦೧೮ರಲ್ಲಿ ಇಂಧನ ಬೆಲೆ ಏರಿಕೆಯನ್ನು ತೋರಿಸಿದೆ. ಆದರೆ ರು. ೫೬ರನ್ನು ದೊಡ್ಡದಾಗಿ ತೋರಿಸಿ ರು. ೭೨ನ್ನು ಸಣ್ಣದೆಂದು ತೋರಿಸಿರುವ ಗ್ರಾಫ್ ಬಹಳಷ್ಟು ಜನರಿಗೆ ಅರ್ಥವೂ ಆಗಿರುವುದಿಲ್ಲ. ಮಾತ್ರವಲ್ಲ, ೨೦೦೯ರಲ್ಲಿ ಇದ್ದ ರು. ೩೦ಕ್ಕಿಂತಲೂ ರು. ೭೨ ಕಡಿಮೆ ಎಂದು ತೋರಿಸಿದೆ. ಹೀಗೆ ಗ್ರಾಫ್ ಮೂಲಕ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಆಗಿರುವ ಬೆಲೆ ಏರಿಕೆಯನ್ನು ಬೇರೆ ರೀತಿಯಲ್ಲಿ ತಿರುಚಿ ತೋರಿಸಲು ಪ್ರಯತ್ನಿಸಿರುವುದು ಟ್ವೀಟಿಗರಿಂದ ಟೀಕೆಗೆ ಒಳಗಾಗಿದೆ. “ಒಂದು ಅಂಕಿ ಅಂಶ ಇಷ್ಟವಾಗದೆ ಇದ್ದರೆ, ನಾವು ಹೊಸ ರೀತಿಯಲ್ಲಿ ಅದನ್ನು ಮುಂದಿಡುತ್ತೇವೆ,” ಎಂದು ಪ್ರಾತ್ಯಕ್ಷಿಕೆ ತೋರಿಸಿಕೊಟ್ಟ ಮೋದಿ ಸರ್ಕಾರವನ್ನು ಟ್ವೀಟಿಗರು ಫೋಟೋಶಾಪ್ ಸರ್ಕಾರವೆಂದು ಬಣ್ಣಿಸಿ, ನೋಟು ಅಮಾನ್ಯ, ರಫೇಲ್ ಒಪ್ಪಂದ, ಜಿಯೋ ಇನ್‌ಸ್ಟಿಟ್ಯೂಟ್‌ಗೆ ಶ್ರೇಷ್ಠ ಸಂಸ್ಥೆ ಎನ್ನುವ ಮಾನ್ಯತೆ ನೀಡಿರುವುದು ಮೊದಲಾದ ವಿಚಾರಗಳನ್ನು ಮುಂದಿಟ್ಟು ಟೀಕಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಇಂಧನ ಬೆಲೆ ಏರಿಕೆ ಪ್ರಶ್ನಿಸಿದವರನ್ನೇ ತಪ್ಪಿತಸ್ಥರನ್ನಾಗಿಸುವ ಪ್ರಯತ್ನ

ಬಿಜೆಪಿ ಟ್ವೀಟ್ ಮಾಡಿದ ಗ್ರಾಫ್ ಬಗ್ಗೆ ಮೊದಲು ಟೀಕಿಸಿದ್ದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ. ನಿಮ್ಮ ಗ್ರಾಫ್‌ ಅನ್ನು ನಾವು ಸರಿಯಾಗಿ ಬದಲಿಸಿಕೊಟ್ಟಿದ್ದೇವೆ ಸ್ವೀಕರಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. “ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಅತೀ ಹೆಚ್ಚು ಇದ್ದಾಗಲೂ ಭಾರತ ಯುಪಿಎ ಅವಧಿಯಲ್ಲಿ ಭಾರತೀಯ ಬೆಲೆಯನ್ನು ಕಡಿಮೆಯೇ ಇಟ್ಟಿತ್ತು. ಆದರೆ ಮೋದಿ ಸರ್ಕಾರ ಈಗ ಅಂತಾರಾಷ್ಟ್ರೀಯ ತೈಲ ಬೆಲೆಗೂ ಮೀರಿ ಭಾರತದಲ್ಲಿ ಬೆಲೆಯನ್ನು ನಿಗದಿ ಮಾಡಿದೆ,” ಎನ್ನುವುದನ್ನು ಬಿಜೆಪಿಯ ಗ್ರಾಫ್ ಅನ್ನು ಸರಿಪಡಿಸುವ ಮೂಲಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಯುಪಿಎ ಸರ್ಕಾರ ದೇಶದ ಅರ್ಥವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸಿತ್ತು ಎನ್ನುವುದನ್ನು ಸಾಬೀತು ಮಾಡಲು ಕಾಂಗ್ರೆಸ್ ಅಂತಹುದೇ ಗ್ರಾಫ್ ಬಳಸಿ ಟ್ವೀಟ್‌ ಮಾಡಿದೆ. ಅಲ್ಲದೆ, ಫೋಟೋಶಾಪ್ ತಜ್ಞರು ಬಿಜೆಪಿಯ ಗ್ರಾಫ್‌ನ್ನು ತಮಾಷೆಯಾಗಿ ವಿಧ ವಿಧವಾಗಿ ಬದಲಿಸಿರುವುದನ್ನೂ ‘ಟ್ವೀಟಿಗರ ಸೃಜನಶೀಲ ಗ್ರಾಫ್‌ಗಳು’ ಎಂದು ಕಾಂಗ್ರೆಸ್‌ ಸರಣಿ ಟ್ವೀಟ್‌ಗಳಲ್ಲಿ ಮುಂದಿಟ್ಟಿದೆ.

ಸಾಮಾನ್ಯವಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅತೀ ಕಡಿಮೆ ಟ್ವೀಟ್ ಮಾಡುವ ಬಾಲಿವುಡ್‌ನ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಮತ್ತು ದಕ್ಷಿಣದ ಬಹುಭಾಷಾ ನಟ ಸಿದ್ದಾರ್ಥ್ ಅವರೂ ಬಿಜೆಪಿಯ ಗ್ರಾಫ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಆಕಾಶವೆಲ್ಲಿ, ಭೂಮಿಯೆಲ್ಲಿ ಎನ್ನುವುದೇ ಗೊತ್ತಿಲ್ಲ. ಈ ಗ್ರಾಫ್ ಮಾಡಿದ ವ್ಯಕ್ತಿ ಅನಾಮಧೇಯ ವಿಶ್ವವಿದ್ಯಾಲಯದಿಂದ ಪತ್ತೆ ಮಾಡಲಾಗದ ‘ಮೂರ್ಖನಾಗಿಸುವ ಗ್ರಾಫಿಕ್ ಸೈನ್ಸ್‌’ ಪದವಿ ಪೆಡದಿರಬೇಕು,” ಎಂದು ವಿಶಾಲ್ ದದ್ಲಾನಿ ಟ್ವೀಟ್ ಮಾಡಿದ್ದಾರೆ. ಸಿದ್ಧಾರ್ಥ್ ಟ್ವೀಟ್ ಮಾಡಿ, “ಗೋಬರ್ ಗ್ಯಾಸ್ ಮಾಡಲು ಹಿಂದೆ ಹಣ ಖರ್ಚಾಗುತ್ತಿತ್ತು. ಆದರೆ, ಟ್ವಿಟರ್‌ನಲ್ಲಿ ಇಂದು ಅದು ಉಚಿತವಾಗಿ ಸಿಗುತ್ತದೆ. ಇಂತಹ ಅಗ್ಗದ ಗ್ರಾಫ್ ಮಾಡುವುದೇ ನಿಜಕ್ಕೂ ದೊಡ್ಡ ವ್ಯಂಗ್ಯ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯವಾದಿ ಸಿದ್ ಟ್ವೀಟ್ ಮಾಡಿ, “ಇಂತಹ ಗ್ರಾಫ್‌ ಮಾಡುವವರು ಭಾರತದ ಅರ್ಥವ್ಯವಸ್ಥೆಯನ್ನು ನಿಭಾಯಿಸುತ್ತಿರುವುದು ಭಯ ತರಿಸುತ್ತದೆ. ಇದು ತಮಾಷೆ ಮಾಡುವ ವಿಚಾರವಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಲೇಖಕ ಸಲೀಲ್ ತ್ರಿಪಾಠಿ ಅವರೂ ಇಂತಹ ಕಾಲ್ಪನಿಕ ಗ್ರಾಫ್ ರಚನೆಯನ್ನು ಟೀಕಿಸಿದ್ದಾರೆ. ಪತ್ರಕರ್ತರಾದ ಶಿವಂ ವಿಜ್, ಅಭಿಸಾರ್ ಶರ್ಮಾ, ರೋಹಿಣಿ ಸಿಂಗ್, ಝೇನಾಬ್ ಸಿಕಂದರ್ ಮೊದಲಾದವರೂ ಬಿಜೆಪಿಯ ಇಂತಹ ಗ್ರಾಫ್ ರಾಜಕೀಯವನ್ನು ಟೀಕಿಸಿದ್ದಾರೆ. “ಬಿಜೆಪಿಯ ಐಟಿ ಶಾಖೆ ಇಂತಹ ಟ್ವೀಟ್ ಮಾಡಿ ತಮ್ಮದೇ ಪ್ರಧಾನಿಯನ್ನು ಟೀಕಿಸುತ್ತಿದ್ದಾರೆ,” ಎಂದು ರೋಹಿಣಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕೇರಳ ಮೂಲದ ಎಂಜಿನಿಯರ್ ಜೇಮ್ಸ್ ವಿಲ್ಸನ್ ಅವರು ಬಿಜೆಪಿ ಪದೇಪದೇ ಇಂತಹ ಅಂಕಿ-ಅಂಶಗಳನ್ನು ಮುಂದಿಟ್ಟು ಜನರನ್ನು ಮೂರ್ಖರಾಗಿಸಲು ಪ್ರಯತ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನಿಮಗೆ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಕೊಡುವುದಾಗಿ ಬಿಜೆಪಿ ಇದೇ ರೀತಿ ಲೆಕ್ಕ ಹಾಕಿದೆ. ನೋಟು ಅಮಾನ್ಯದ ಲಾಭವನ್ನೂ ಹೀಗೆಯೇ ಮುಂದಿಟ್ಟಿದೆ. ಏಕೆಂದರೆ, ಬಿಜೆಪಿಯ ದುರಹಂಕಾರ ಎಷ್ಟಿದೆ ಎಂದರೆ, ತಾನು ಏನೇ ಮಾಡಿದರೂ ಜನ ನಂಬುತ್ತಾರೆ ಎನ್ನುವ ಭ್ರಮೆಯಲ್ಲಿದೆ. ಬಿಜೆಪಿ ಕಾರ್ಯಯೋಜನೆ ರೂಪಿಸುತ್ತದೆ. ಪತ್ರಕರ್ತರು ಅದನ್ನು ಸಾಬೀತು ಮಾಡಲು ಹೊಸ ಸಿದ್ಧಾಂತ ಮತ್ತು ಗಣಿತ, ಸಂಖ್ಯಾಶಾಸ್ತ್ರವನ್ನು ಸೇರಿಸುತ್ತಾರೆ. ಹೀಗೆಯೇ ಪ್ರತಿಯೊಬ್ಬರೂ ಗುಜರಾತ್ ಮಾದರಿ ಬಗ್ಗೆ ಭ್ರಮೆಗಳನ್ನು ಮೂಡಿಸಿಕೊಂಡಿದ್ದರು,” ಎಂದು ಜೇಮ್ಸ್ ವಿಲ್ಸನ್ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಬಹುತೇಕ ಟ್ವಿಟರ್‌ನಲ್ಲಿ ಬಿಜೆಪಿ ಪರವಾಗಿ ಟ್ವೀಟ್ ಮಾಡುವವರೂ ಈ ಗ್ರಾಫ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾದಂಬರಿಕಾರ ಚೇತನ್ ಭಗತ್‌ ಟ್ವೀಟ್ ಮಾಡಿ, “ಸ್ವಯಂ ಸಾಧನೆಯ ಟ್ವೀಟ್? ಆದರೆ ಕ್ಷಮಿಸಿ ನನಗೆ ಈ ಗ್ರಾಫ್ ಅರ್ಥವಾಗಿಲ್ಲ. ಈ ಹಳದಿ ಪಟ್ಟಿ ಹೆಚ್ಚು ಮೌಲ್ಯವಿದ್ದೂ ಸಣ್ಣ ಗಾತ್ರದಲ್ಲಿರುವುದು ಏಕೆ ಎಂದು ವಿವರಿಸುವಿರಾ?” ಎಂದು ಪ್ರಶ್ನಿಸಿದ್ದಾರೆ. ಬಹುತೇಕ ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಗ್ರಾಫ್ ಅನ್ನು ಟೀಕಿಸಿ ಟ್ವೀಟ್‌ಗಳನ್ನು ಹಾಕಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More