ರಾಜಕೀಯ ಮೇಲುಗೈಗೆ ಯತ್ನಿಸುತ್ತಿದ್ದಾರೆಯೇ ಜಾರಕಿಹೊಳಿ ಸಹೋದರರು?

ಸೋತು ಗೆಲ್ಲಬೇಕು ಎಂಬ ಮಾತು ಜಾರಕಿಹೊಳಿ ಸಹೋದರರ ವಿಚಾರದಲ್ಲಿ ಸತ್ಯವಾಗುವಂತಿದೆ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಹಿನ್ನಡೆಯಾದರೂ ರಾಜ್ಯ ರಾಜಕೀಯದಲ್ಲಿ ಬಲ ಪ್ರದರ್ಶನಕ್ಕೆ ನಿಲ್ಲುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದರ ಪ್ರತಿಫಲದ ಮೇಲೆ ಗೆಲುವು ನಿರ್ಧಾರವಾಗಲಿದೆ

ಬೆಳಗಾವಿಯ ಪ್ರಾಥಮಿಕ ಭೂಅಭಿವೃದ್ಧಿ ಬ್ಯಾಂಕ್‌ (ಪಿಎಲ್‌ಡಿ) ಚುನಾವಣೆಯಲ್ಲಿ ಹಿನ್ನಡೆಗೊಳಗಾಗಿರುವ ಜಾರಕಿಹೊಳಿ ಸಹೋದರರು ಆತಂಕಗೊಂಡಿದ್ದಾರೆ. ಈ ವಿಚಾರವನ್ನು ಇಷ್ಟಕ್ಕೇ ನಿಲ್ಲಿಸಿಬಿಟ್ಟರೆ ಮುಂದಿನ ದಿನಗಳಲ್ಲಿ ಪಕ್ಷ ತಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕ್ಷೀಣ ಎಂದೆಣಿಸಿರುವ ಸತೀಶ್‌ ಮತ್ತು ರಮೇಶ್ ಜಾರಕಿಹೊಳಿ ಅವರು, ಪಕ್ಷದ ಮೇಲೆ ಹಿಡಿತ ಸಾಧಿಸಲು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆಗೂ ಮುನ್ನ ನಡೆದ ಕೆಲವು ಬೆಳವಣಿಗೆಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಮಾತುಗಳು ಜಾರಕಿಹೊಳಿ ಸಹೋದರರನ್ನು ಕೆರಳಿಸಿದೆ. ಸಮ್ಮಿಶ್ರ ಸರ್ಕಾರದ ಸ್ಥಿತಿಯನ್ನು ಚೆನ್ನಾಗಿ ಅರಿತಿರುವ ಜಾರಕಿಹೊಳಿ ಸಹೋದರರು ಹಿನ್ನಡೆ ಸೃಷ್ಟಿಸಿರುವ ಅವಕಾಶವನ್ನು ರಾಜಕೀಯ ಏಳ್ಗೆಗೆ ಬಳಸಿಕೊಳ್ಳಲು ರಾಜಕೀಯ ಪಟ್ಟುಗಳನ್ನು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂಪನ್ಮೂಲದ ದೃಷ್ಟಿಯಿಂದಲೂ ಜಾರಕಿಹೊಳಿ ಸಹೋದರರು ಪ್ರಬಲರಾಗಿದ್ದು, ಪಕ್ಷ ಸಂಘಟನೆಗೆ ಅಗತ್ಯವಾದ ಸಂಪನ್ಮೂಲ ಹೊಂದಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಣ ಮತ್ತು ಹಿಂದುಳಿದ ವರ್ಗಗಳ ಬಲ ಹೊಂದಿರುವುದರಿಂದ ಯಾರಿಗೂ ಬಾಗಬೇಕಿಲ್ಲ ಎನ್ನುವುದು ಜಾರಕಿಹೊಳಿ ಸಹೋದರರ ನಿಲುವಾಗಿದೆ. ಪಿಎಲ್ಡಿ ಬ್ಯಾಂಕ್‌ ಪ್ರಕರಣವು ಮೇಲ್ನೋಟಕ್ಕೆ ಜಾರಕಿಹೊಳಿ ಸಹೋದರರ ಸಮಸ್ಯೆ ಎನಿಸಿದರೂ ಕಾಂಗ್ರೆಸ್‌ನ ಎರಡು ಶಕ್ತಿ ಕೇಂದ್ರಗಳ ನಡುವಿನ ಸಂಘರ್ಷಕ್ಕೆ ಉದಾಹರಣೆ ಎಂಬ ಮಾತುಗಳು ಕೇಳಿಬಂದಿವೆ.

ವಿಧಾನಸಭೆ ಚುನಾವಣೆ ಪ್ರಕಟವಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಶಕ್ತಿಕೇಂದ್ರಗಳ ಸ್ಥಾನಪಲ್ಲಟವಾಗಿತ್ತು. ಚುನಾವಣೆಗೂ ಮುನ್ನ ಕ್ವೀನ್ಸ್‌ ರೋಡ್‌ನಲ್ಲಿರುವ ಪಕ್ಷದ ಕಚೇರಿಯ ಮೇಲೆ ಹಿಡಿತ ಸಾಧಿಸಿದ್ದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌ ಹಾಗೂ ಡಿ ಕೆ ಶಿವಕುಮಾರ್‌ ಅವರ ಬಣವು ಈಗ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದೆ. ಅಧಿಕಾರ ಸೂತ್ರ ಹಿಡಿದಿದ್ದ ಸಿದ್ದರಾಮಯ್ಯ ನೇತೃತ್ವದ ಬಣವು ಪಕ್ಷದ ಮೇಲೆ ಹಿಡಿತ ಸಾಧಿಸಿದೆ. ಹಿರಿಯ ನಾಯಕ ಎಚ್‌ ಕೆ ಪಾಟೀಲ್‌ ಮತ್ತು ಕೋಲಾರ ಸಂಸದ ಕೆ ಎಚ್‌ ಮುನಿಯಪ್ಪ ಸೇರಿದಂತೆ ಹಲವರು ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದರಿಂದ ಹೈಕಮಾಂಡ್‌ ಸಂಕಟ ಸೂತ್ರವೆನ್ನುವಂತೆ ದಿನೇಶ್‌ ಗುಂಡೂರಾವ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆಗಲೂ ಸಿದ್ದರಾಮಯ್ಯ ಅವರ ಬಣವೇ ಮೇಲುಗೈ ಸಾಧಿಸಿತ್ತು ಎಂದು ವ್ಯಾಖ್ಯಾನಿಸಲಾಗಿತ್ತು. ಈಗ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ ಕೆ ಶಿವಕುಮಾರ್‌ ಮಧ್ಯಪ್ರವೇಶಿಸಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಪಕ್ಷದ ಮೇಲೆ ಪ್ರಭುತ್ವ ಸಾಧಿಸಲು ಜಾರಕಿಹೊಳಿ ಸಹೋದರರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಲಕ್ಷ್ಮಿ ಹೆಬ್ಬಾಳ್ಕರ್‌- ಸತೀಶ್‌ ಜಾರಕಿಹೊಳಿ ಕಾದಾಟದ ಹಿಂದಿನ ಅಸಲಿಯತ್ತೇನು?

ಜಾರಕಿಹೊಳಿ ಸಹೋದರರನ್ನು ಮುಂದಿಟ್ಟುಕೊಂಡು ಪರಮೇಶ್ವರ್ ಹಾಗೂ ಡಿ ಕೆ ಶಿವಕುಮಾರ್‌ ಅವರಿಗೆ ಬಿಸಿ ಮುಟ್ಟಿಸುವ ಕೆಲಸ ನಡೆಯುತ್ತಿದೆ. ವಿದೇಶದಲ್ಲಿದ್ದರೂ ಸಿದ್ದರಾಮಯ್ಯ ಅವರು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎನ್ನುವ ವಿಚಾರಗಳು ಹರಿದಾಡುತ್ತಿವೆ. ವಿದೇಶದಿಂದ ಬಂದು ಪರಿಸ್ಥಿತಿಯನ್ನು ಹದಕ್ಕೆ ತರುವ ಸನ್ನಿವೇಶವನ್ನು ಸಿದ್ದರಾಮಯ್ಯ ಅವರು ನಿರ್ಮಿಸಿಕೊಂಡಿರಬಹುದು ಎಂಬ ಮಾತುಗಳಿವೆ. “ಸಿದ್ದರಾಮಯ್ಯ ಅವರು ವಿದೇಶ ಪ್ರವಾಸಕೈಗೊಳ್ಳುವ ಮುನ್ನವೇ ಬೆಳಗಾವಿಯ ಪಿಎಲ್‌ಡಿ ವಿವಾದ ಭುಗಿಲೆದ್ದಿತ್ತು. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಾರಕಿಹೊಳಿ ಸಹೋದರರನ್ನು ಸಮಾಧಾನಪಡಿಸುವ ಜವಾಬ್ದಾರಿಯನ್ನು ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ನೀಡಿತ್ತು. ಪ್ರವಾಸ ಮುಗಿಸಿ ಬರುವ ತನಕ ತಾಳ್ಮೆವಹಿಸುವಂತೆ ಜಾರಕಿಹೊಳಿ ಸಹೋದರರಿಗೆ ಸೂಚಿಸಿದ್ದಾಗಿ ಸಿದ್ದರಾಮಯ್ಯ ಹೇಳಿದ್ದರು. ಈ ನಡುವೆ ಪ್ರತ್ಯೇಕವಾಗಿ ಜಾರಕಿಹೊಳಿ ಸಹೋದರರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆಗ ಉಭಯ ನಾಯಕರ ನಡುವೆ ಮಾತುಕತೆ ನಡೆದಿರಬಹುದು. ಅಂದಮಾತ್ರಕ್ಕೆ ಸಿದ್ದರಾಮಯ್ಯ ಅವರು ಈ ವಿವಾದ ಸೃಷ್ಟಿಸಿದ್ದಾರೆ ಎಂದು ಭಾವಿಸಬೇಕಿಲ್ಲ. ಕ್ಲಿಷ್ಟ ಸಂದರ್ಭದಲ್ಲಿ ಪರಮೇಶ್ವರ್‌ ಮತ್ತು ಡಿ ಕೆ ಶಿವಕುಮಾರ್‌ ಅವರು ಯಾವ ರೀತಿ ಸಮಸ್ಯೆ ಬಗೆಹರಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿಯುವಂತಾಗಿದೆ,” ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ.

ಇನ್ನು, ಬೆಳವಣಿಗೆಗಳ ಗೋಜಲಿನಲ್ಲಿ ಸಿಲುಕಲು ಒಲ್ಲದ ಕಾಂಗ್ರೆಸ್‌ ಉಪಾಧ್ಯಕ್ಷ ಬಿ ಎಲ್‌ ಶಂಕರ್ ಅವರು “ಜಾರಕಿಹೊಳಿ ಸಹೋದರರ ವಿವಾದದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಎಲ್ಲವೂ ಬಗೆಹರಿಯಲಿದೆ,” ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಪರಮೇಶ್ವರ್‌ ಅವರನ್ನು ಭೇಟಿ ಮಾಡಿರುವ ಜಾರಕಿಹೊಳಿ ಅವರು ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದಿದ್ದು, ಸೆಪ್ಟೆಂಬರ್ ೧೬ರೊಳಗೆ ಪರಿಹಾರ ಸೂಚಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಈ ವೇಳೆಗೆ ಸಿದ್ದರಾಮಯ್ಯ ಅವರೂ ವಿದೇಶದಿಂದ ವಾಪಸಾಗುತ್ತಿದ್ದು, ಸಾಕಷ್ಟು ಕುತೂಹಲ ಮನೆ ಮಾಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More