ಡಿ ಕೆ ಶಿವಕುಮಾರ್‌ ಪದೇಪದೇ ಅತಿರೇಕದ ಹೇಳಿಕೆಗಳಿಗೆ ಮೊರೆ ಹೋಗುವುದೇಕೆ?

“ನಾನೊಬ್ಬ ಚೆಸ್‌ ಆಟಗಾರ ಎಂದು ಈಗಾಗಲೇ ಹೇಳಿದ್ದೇನೆ. ಬಿಜೆಪಿಯವರು ಒಂದೇ ಒಂದು ದಾಳವನ್ನು ಉರುಳಿಸಲಿ ನೋಡೋಣ” ಎಂದು ಸಚಿವ ಡಿ ಕೆ ಶಿವಕುಮಾರ್ ಮಂಗಳವಾರ ಎಂದಿನ ಶೈಲಿಯಲ್ಲಿ ಸವಾಲು ಎಸೆದಿದ್ದಾರೆ. ಸಾರ್ವಜನಿಕವಾಗಿ ಅವರು ನೀಡುತ್ತಿರುವ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತವಾಗಿದೆ

ಸಮ್ಮಿಶ್ರ ಸರ್ಕಾರದ ಸುತ್ತ ಕಳೆದ ಕೆಲವು ದಿನಗಳಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕಾರಣಿಗಳು ವಿವಿಧ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಅವರು “ನಾನೊಬ್ಬ ಚೆಸ್‌ ಆಟಗಾರ ಎಂದು ಈಗಾಗಲೇ ಹೇಳಿದ್ದೇನೆ. ಇದು ರಾಜಕೀಯ. ಏನು ಬೇಕಾದರೂ ಆಗಬಹುದು. ಬಿಜೆಪಿಯವರು ಒಂದೇ ಒಂದು ದಾಳವನ್ನು ಉರುಳಿಸಲಿ ನೋಡೋಣ. ಆಮೇಲೆ, ನಾವು ಯಾವ ದಾಳವನ್ನು ಹೇಗೆ ಉರುಳಿಸುತ್ತೇವೋ ಕಾದು ನೋಡಿ. ನಾನು ಟಾರ್ಗೆಟ್‌ ಆದರೂ ಅಡ್ಡಿ ಇಲ್ಲ,” ಎಂಬ ಅವರ ಹೇಳಿಕೆ ಚರ್ಚೆಗೆ ಈಡಾಗಿದೆ. ಅಂದಹಾಗೆ, ಅವರು ಹೊಸ ಹೇಳಿಕೆಯನ್ನೇನೂ ನೀಡಿಲ್ಲ. ತಮ್ಮ ಹಿಂದಿನ ಗತ್ತಿನ ಶೈಲಿಯನ್ನು ಮುಂದುವರೆಸಿದ್ದಾರೆ ಅಷ್ಟೆ. ಆದರೆ, ರಾಜ್ಯದ ಅತ್ಯುನ್ನತ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಾಯಕರೊಬ್ಬರು ಸಾರ್ವಜನಿಕವಾಗಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದು, ಅತಿರೇಕ ಎಂಬರ್ಥದಲ್ಲಿ ಆಡುತ್ತಿರುವ ಮಾತುಗಳ ಬಗ್ಗೆ ಅವರದೇ ಪಕ್ಷದ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಮುನ್ನುಗ್ಗುವ ಛಾತಿಯಿಂದ ಹೆಸರುಗಳಿಸಿರುವ ಶಿವಕುಮಾರ್‌ ಅವರ ಮೇಲೆ ಹಲವು ಗಂಭೀರ ಆರೋಪಗಳಿವೆ. ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವ ಅವರು ಸಿಕ್ಕುಗಳಿಂದ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯಾಸಪಡುತ್ತಿದ್ದಾರೆ. ಈ ನಡುವೆ ತಮ್ಮ ಅಸ್ತಿತ್ವ ಮತ್ತು ಪ್ರಾಮುಖ್ಯತೆಯನ್ನು ಸಾಬೀತುಪಡಿಸಲು ಡಿಕೆಶಿ ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳು ಅವರ ವರ್ಚಸ್ಸಿಗೆ ಹೊಡೆತ ನೀಡುವಂತಿವೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹಿಂದೊಮ್ಮೆ ಡಿಕೆಶಿಯವರು ತಮ್ಮ ವ್ಯಕ್ತಿತ್ವವನ್ನು ‘ಮ್ಯಾಗ್ನೆಟಿಕ್‌ ಪರ್ಸನಾಲಿಟಿ’, ‘ಚುಂಬಕ ವ್ಯಕ್ತಿತ್ವ’ ಎಂದಿದ್ದರು. ಆ ಮೂಲಕ ಪಕ್ಷ ರಾಜಕಾರಣದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಮೆರೆಯಲು ಪ್ರಯತ್ನಿಸಿದ್ದರು. ಡಿಕೆಶಿ ಅವರ ನಡೆ-ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌ ಅವರಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಆದರೂ ಅವರು ತಮ್ಮ ನಡವಳಿಕೆ ಸರಿಪಡಿಸಿಕೊಂಡಂತಿಲ್ಲ.

ಮೇ ೨೩ರಂದು ನಡೆದಿದ್ದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪದಗ್ರಹಣ ಸಮಾರಂಭಕ್ಕೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್‌ ಶಾಸಕರು ಹಾಗೂ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿದ್ದರು. ಈ ವೇಳೆ, “ಡಿಕೆಶಿ ಸಮ್ಮಿಶ್ರ ಸರ್ಕಾರ ತನ್ನಿಂದಲೇ ಅಸ್ತಿತ್ವಕ್ಕೆ ಬಂದಿದೆ ಎಂಬ ರೀತಿಯಲ್ಲಿ ಬಿಂಬಿಸಿಕೊಂಡಿದ್ದರ ಬಗ್ಗೆ ಕೆಂಡಾಮಂಡಲವಾಗಿದ್ದರು. ಇತಿಮಿತಿಯಲ್ಲಿ ವರ್ತಿಸುವಂತೆ ಡಿಕೆಶಿ ಅವರಿಗೆ ಸೋನಿಯಾ ಹಾಗೂ ರಾಹುಲ್‌ ಖಡಕ್ ಎಚ್ಚರಿಕೆ ನೀಡಿದ್ದರು” ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ‘ದಿ ಸ್ಟೇಟ್‌’ನೊಂದಿಗೆ ಹಿಂದಿನ ಘಟನಾವಳಿಯನ್ನು ಹಂಚಿಕೊಂಡರು.

ಆದರೆ, ಆನಂತರವೂ ಶಿವಕುಮಾರ್‌ ಅವರು ತಮ್ಮ ನಡವಳಿಕೆಯನ್ನು ಬದಲಿಸಿಕೊಂಡಿಲ್ಲ. ರಾಜಕೀಯವಾಗಿ ಅವರನ್ನು ಒತ್ತರಿಸುವಂತಹ ಪ್ರಸಂಗಗಳು ಎದುರಾದಾಗಲೆಲ್ಲಾ ಅವರು ಆಕ್ರಮಣಶೀಲರಾಗಿ ಮಾತನಾಡುತ್ತಾರೆ. ಇತ್ತೀಚೆಗೆ ಅವರು ನೀಡಿರುವ ಹೇಳಿಕೆಗಳೂ ಸಹ ಇದನ್ನೇ ಎತ್ತಿ ಹಿಡಿಯುತ್ತಿವೆ. ಅಷ್ಟಕ್ಕೂ ಶಿವಕುಮಾರ್‌ ಅವರು ಸಾರ್ವಜನಿಕ ನೀಡಿದ ಹೇಳಿಕೆಗಳೇನು? ಇಲ್ಲಿವೆ ಅವರಿಂದ ಹೊರಬಿದ್ದ ಮಾತುಗಳು.

ಇದನ್ನೂ ಓದಿ : ಟ್ರಬಲ್ ಶೂಟರ್‌ಗಳಾದ ಡಿ ಕೆ ಸಹೋದರರು ತಳಮಳಗೊಂಡಿರುವುದೇಕೆ?

ನಾನೊಬ್ಬ ಚೆಸ್‌ ಆಟಗಾರ ಎಂದು ಈಗಾಗಲೇ ಹೇಳಿದ್ದೇನೆ. ಇದು ರಾಜಕೀಯ. ಏನು ಬೇಕಾದರೂ ಆಗಬಹುದು. ಬಿಜೆಪಿಯವರು ಒಂದೇ ಒಂದು ದಾಳವನ್ನು ಉರುಳಿಸಲಿ ನೋಡೋಣ. ಆಮೇಲೆ, ನಾವು ಯಾವ ದಾಳವನ್ನು ಹೇಗೆ ಉರುಳಿಸುತ್ತೇವೋ ಕಾದು ನೋಡಿ. ನಾನು ಟಾರ್ಗೆಟ್‌ ಆದರೂ ಅಡ್ಡಿ ಇಲ್ಲ.

ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದಕ್ಕೆ ಪ್ರತಿಕ್ರಿಯೆ (೧೨ ಸೆಪ್ಟೆಂಬರ್‌ ೨೦೧೮)

ನಾನು ಕಾನೂನು ಉಲ್ಲಂಘಿಸಿಲ್ಲ. ಉಲ್ಲಂಘಿಸುವುದೂ ಇಲ್ಲ. ಇಡೀ ಪ್ರಕರಣದ ಹಿಂದೆ ಕೆಲವು ನಾಯಕರ ಕೈವಾಡ ಇದೆ. ನಾನು ಕಿವಿಯಲ್ಲಿ ಹೂ ಇಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ. ರಾಜಕಾರಣ ಮಾಡುವುದಕ್ಕಾಗಿ ಬಂದಿದ್ದೇನೆ. ರಾಜಕೀಯದಲ್ಲಿ ಗೇಮ್‌ ಆಡುವುದಕ್ಕೆ ನನಗೂ ಬರುತ್ತದೆ. ೮೦ ವಕೀಲರ ಜೊತೆ ದಿನಾ ಚರ್ಚೆ ಮಾಡುತ್ತಿದ್ದೇನೆ.

ತನಿಖಾ ಸಂಸ್ಥೆಗಳಿಂದ ಬಂಧನ ಭೀತಿಗೆ ಸಂಬಂಧಿಸಿದ ಪ್ರತಿಕ್ರಿಯೆ (೯ ಸೆಪ್ಟೆಂಬರ್‌ ೨೦೧೮)

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಷ್ಮಾ ರಾಜಗೋಪಾಲರೆಡ್ಡಿ ನೆಪಕ್ಕೆ ಮಾತ್ರ ಅಭ್ಯರ್ಥಿ. ರಾಹುಲ್‌ ಗಾಂಧಿ ಹಾಗೂ ನಾನೇ ಇಲ್ಲಿ ಅಭ್ಯರ್ಥಿ.

ಸುಷ್ಮಾ ರಾಜಗೋಪಾಲ್‌ ರೆಡ್ಡಿ ಪರ ಪ್ರಚಾರ ಸಭೆಯಲ್ಲಿನ ಭಾಷಣ (೨೧ ಏಪ್ರಿಲ್‌ ೨೦೧೮)

ಒಂದು ಸೀಟು ಗೆಲ್ಲುವವರೂ ಒಂದೇ. ಇಡೀ ರಾಜ್ಯ ಗೆಲ್ಲುವವರೂ ಒಂದೆಯೇ? ಕಳೆದ ಎಂಟು ವರ್ಷಗಳಿಂದ ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಕೆಲವು ದಿನಗಳಿಂದ ಕೆಪಿಸಿಸಿ ಸ್ಥಾನ ತ್ಯಾಗ ಮಾಡುವುದಾಗಿ ಹೇಳುತ್ತಿದ್ದಾರೆ. ಇದನ್ನು ಪಡೆಯಲು ಎಂಟು ವರ್ಷಗಳಿಂದ ಕೆಲವು ನಾಯಕರು ತುದಿಗಾಲ ಮೇಲೆ ನಿಂತಿದ್ದಾರೆ. ನಾನು ಆ ಥರದ ವ್ಯಕ್ತಿಯಲ್ಲ. ಎಲ್ಲದಕ್ಕೂ ಮುಹೂರ್ತ ಇರುತ್ತೆ. ಸಮಯ ಬರಬೇಕು. ಸನ್ಯಾಸ ಪಡೆಯಲು ರಾಜಕೀಯಕ್ಕೆ ಬಂದಿಲ್ಲ. ಫುಟ್‌ಬಾಲ್‌ ಆಡುವುದಿಲ್ಲ ಚೆಸ್‌ ಆಡುತ್ತೇನೆ. ನಾನು ಏನು ಮಾಡಬೇಕು ಎಂಬಬುದನ್ನು ಪಕ್ಷ ನಿರ್ಧರಿಸುತ್ತದೆ. ಅದಕ್ಕಾಗಿ ಕಾದು ನೋಡುತ್ತೇನೆ.

ಎಚ್‌ ಡಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್‌ ಪದಗ್ರಹಣದ (೨೪ ಮೇ ೨೦೧೮)

ಇಬ್ಬರು ಶಾಸಕರನ್ನು ಬಿಜೆಪಿ ನಾಯಕರು ತಮ್ಮ ವಶದಲ್ಲಿರಿಸಿಕೊಂಡಿದ್ದರು. ಆದರೆ, ನನ್ನದೇ ಮೂಲಗಳ ನೆರವಿನಿಂದ ಶಾಸಕರ ಜೊತೆ ಸಂಪರ್ಕ ಸಾಧಿಸಿ, ಅವರನ್ನು ಸದನಕ್ಕೆ ಕರೆತಂದೆ. ನನ್ನ ಮ್ಯಾಗ್ನಟಿಕ್ ಪರ್ಸನಾಲಿಟಿಯು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ನೆರವಾಯಿತು.

ಸದನದಲ್ಲಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸದೇ ನಿರ್ಗಮಿಸಿದ ನಂತರ ಹೇಳಿದ್ದು (೨೧ ಮೇ ೨೦೧೮)

ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರನ್ನು ಖಳನಾಯಕ ಎಂದು ಸಂಬೋಧಿಸಿದಾಗ ತಕ್ಷಣ ಸ್ಪಷ್ಟನೆ ನೀಡಿದ ಅವರು, ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಆಜ್ಞೆಯಂತೆ ಕೆಲಸ ಮಾಡಿದ್ದೇನೆ ವಿನಃ ನಾನು ಖಳ ನಾಯಕನ ಕೆಲಸ ಮಾಡಿಲ್ಲ ಎಂದು ಹೇಳಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More