ಕುಮಾರಸ್ವಾಮಿ ಕಿಂಗ್‌ಪಿನ್‌ ಆರೋಪಕ್ಕೆ ಬಿಜೆಪಿಯ ಮಾಸ್ಟರ್‌ಪಿನ್‌ ಪ್ರತ್ಯಾರೋಪ

ಸರ್ಕಾರ ಕೆಡವಲು ಬಿಜೆಪಿ ದಂಧೆಕೋರ ‘ಕಿಂಗ್‌ಪಿನ್’ಗಳನ್ನು ಬಳಸುತ್ತಿದೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ‘ಮಾಸ್ಟರ್‌ಪಿನ್‌’ ಆರೋಪ ಮಾಡಿದೆ. ಸ್ವಾರಸ್ಯವೆಂದರೆ, ದಶಕದ ನಂತರ ರಾಜ್ಯದ ‘ಕುಟಿಲ ರಾಜಕೀಯ ನಡೆಗಳ ಸನ್ನಿವೇಶದಲ್ಲಿ’ ಬಳ್ಳಾರಿ ರೆಡ್ಡಿ ಬಣದ ಹೆಸರು ಪ್ರಸ್ತಾಪವಾಗಿಲ್ಲ!

ಸರ್ಕಾರ ಉರುಳಿಸಲು ಬಿಜೆಪಿ ದಂಧೆಕೋರ ಕಿಂಗ್‌ಪಿನ್‌ಗಳ ಮೊರೆಹೋಗಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಿಗೇ ಬಿಜೆಪಿ ಮುಖಂಡರು, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಸಚಿವ ಡಿ ಕೆ ಶಿವಕುಮಾರ್‌ ಅವರನ್ನು ‘ಮಾಸ್ಟರ್‌ಪಿನ್‌’ಗಳು ಎಂದು ಆರೋಪಿಸಿದ್ದಾರೆ.

ಜೆಡಿಎಸ್‌-ಕಾಂಗ್ರೆಸ್‌ ನಾಯಕರು ಮಾಡಿದ ಸಮ್ಮಿಶ್ರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌ ರವಿಕುಮಾರ್‌,‌ “ಸಿಎಂ ಕುಮಾರಸ್ವಾಮಿ ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಆರೋಪ ಮಾಡಬಾರದು. ಅಧಿಕಾರದಲ್ಲಿರುವ ಅವರು ಕಿಂಗ್‌ಪಿನ್‌ಗಳ ಮೇಲೆ ಕ್ರಮ ಜರುಗಿಸಬಹುದು. ಅದರ ಬದಲು ಹುರುಳಿಲ್ಲದ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಪ್ರಜ್ವಲ್‌ ರೇವಣ್ಣ ‘ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ತೆಗೆದುಕೊಂಡು ಬಂದವರಿಗೆ ಮಾತ್ರ ಬೆಲೆ’ ಎಂದು ಹೇಳಿದ್ದರು. ಅದನ್ನು ಕುಮಾರಸ್ವಾಮಿ ಮೊದಲು ನೆನಪಿಸಿಕೊಳ್ಳಲಿ,” ಎಂದು ಹರಿಹಾಯ್ದಿದ್ದಾರೆ. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್ ಅವರ ವಿರುದ್ಧವೂ ಗುಡುಗಿದ್ದು, “ಕಿಂಗ್‌ಪಿನ್‌ಗಳಿರುವುದು ಗಾಂಧಿನಗರದಲ್ಲಿ. ಅಲ್ಲಿ ಎಲ್ಲವೂ ದಿನೇಶ್‌ ಗುಂಡೂ ರಾವ್‌ ಆಣತಿಯಂತೆ ನಡೆಯುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್‌ ಹಾಗೂ ಜಿ ಪರಮೇಶ್ವರ್‌ ಅವರು ಮಾಸ್ಟರ್‌ಪಿನ್‌ಗಳಿದ್ದಂತೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಬಿಜೆಪಿ ನಾಯಕರ ವಿರುದ್ಧ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಆರೋಪ ಮಾಡುತ್ತ, “ರಿಯಲ್‌ ಎಸ್ಟೇಟ್‌, ಮೀಟರ್‌ ಬಡ್ಡಿ, ಕಾಫಿ ಪ್ಲಾಂಟರ್‌ ಮತ್ತು ಇಸ್ಪೀಟ್‌ ದಂಧೆ ನಡೆಸುವವರನ್ನು ಮುಂದಿಟ್ಟುಕೊಂಡು ಬಿಜೆಪಿಯು ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದೆ. ಆ ಮೂಲಕ ಸರ್ಕಾರ ಉರುಳಿಸಲು ವ್ಯಾಪಕ ಪ್ರಯತ್ನ ಮಾಡುತ್ತಿದೆ. ಶಾಸಕರ ಖರೀದಿಗೆ ಹಣ ಸಂಗ್ರಹಿಸಲಾಗುತ್ತಿದ್ದು, ಅದರ ಹಿಂದಿನ ಕಿಂಗ್‌ಪಿನ್‌ಗಳ ಹಿನ್ನೆಲೆ ಏನೆಂಬುದು ನನಗೆ ಗೊತ್ತು. ಅವರನ್ನು ತಡೆಯಲು ಎಸಿಬಿಗೆ ದೂರು ನೀಡಿ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದ್ದರು.

ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಿಗೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್ ಅವರು, “ಕಪ್ಪುಹಣ ಬಳಸಿ ಶಾಸಕರ ಖರೀದಿಗೆ ಮುಂದಾಗಿರುವ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಕಿಂಗ್‌ಪಿನ್‌ ಆಗಿದ್ದು, ಅವರ ಜೊತೆ ಸಂಸದರಾದ ಪ್ರಭಾಕರ ಕೋರೆ, ಶೋಭಾ ಕರಂದ್ಲಾಜೆ, ಶಾಸಕರಾದ ಸತೀಶ್‌ ರೆಡ್ಡಿ, ಅಶ್ವಥ್ ನಾರಾಯಣ್‌, ಎಸ್‌ ಆರ್‌ ವಿಶ್ವನಾಥ ಮತ್ತು ಮಾಜಿ ಶಾಸಕ ಸಿ ಪಿ ಯೋಗೀಶ್ವರ್ ಇದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದರು. ಶಾಸಕರ ಖರೀದಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌ ಅವರು “ಕಾಂಗ್ರೆಸ್‌ ಶಾಸಕರಿಗೆ ಲಂಚದ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ಎಸಿಬಿ ಹಾಗೂ ಆಧಾಯ ತೆರಿಗೆ ಇಲಾಖೆಗೆ ದೂರು ನೀಡಲಾಗುವುದು,” ಎಂದು ತಿಳಿಸಿದ್ದರು.

ಇದನ್ನೂ ಓದಿ : ಕರಾವಳಿಗೆ ಬಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿರಿಸಿ ಹೋದರೇ ಕುಮಾರಸ್ವಾಮಿ?

ಹೀಗೆ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆಯುತ್ತಿದ್ದರೂ, ಹೆಚ್ಚೂಕಡಿಮೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಂಥದ್ದೊಂದು ರಾಜಕೀಯ ಸನ್ನಿವೇಶದಲ್ಲಿ ಇದೇ ಮೊದಲ ಬಾರಿಗೆ ಬಳ್ಳಾರಿಯ ರೆಡ್ಡಿ ಬಣದ ಹೆಸರನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ! ಜಾರಕಿಹೊಳಿ ಸಹೋದರರೊಟ್ಟಿಗೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಅಣತಿಯಂತೆ ಜಾರಕಿಹೊಳಿ ಬಣವನ್ನು ಸೆಳೆಯಲು ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿಗಳು ಈ ಮುನ್ನ ಹರಿದಾಡಿದ್ದವು. ಅದೇನೇ ಇದ್ದರೂ, ಬಿಜೆಪಿಯು ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಸೆಳೆಯಲು ಮುಂದಾಗಿದೆ, ದೊಡ್ಡ ಮೊತ್ತದ ಆಮಿಷ ಒಡ್ಡುತ್ತಿದೆ ಎನ್ನುವಂತಹ ಆರೋಪಗಳನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಮಾಡುವಾಗ ಬಳ್ಳಾರಿ ಬಣದ ನಾಯಕರ ಹೆಸರು ಎಲ್ಲಿಯೂ ಕೇಳಿಬರಲಿಲ್ಲ. ಬದಲಿಗೆ, ಈ ಆರೋಪದಲ್ಲಿ ಪ್ರಮುಖವಾಗಿ ಕೇಳಿಬಂದಿದ್ದು ಬೆಂಗಳೂರು ಮೂಲದ ಬಿಜೆಪಿ ಶಾಸಕರ ಹೆಸರುಗಳು. ರೆಡ್ಡಿ ಬಣವನ್ನು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಹೆಚ್ಚು ಕಾಣುವಂತೆ ಬಳಸಿದಷ್ಟೂ ಅದರಿಂದ ಅಪಖ್ಯಾತಿಯೇ ಹೆಚ್ಚು. ಇದು ಅಂತಿಮವಾಗಿ ಸರ್ಕಾರ ಆಂತರಿಕ ಸಂಘರ್ಷಗಳಿಂದ ಕುಸಿಯಿತು ಎನ್ನುವುದಕ್ಕಿಂತ, ಬಿಜೆಪಿಯ ಅಧಿಕಾರದಾಸೆಗೆ ಸರ್ಕಾರ ಬಲಿಯಾಯಿತು ಎನ್ನುವ ಅಭಿಪ್ರಾಯಕ್ಕೆ ಕಾರಣವಾಗುತ್ತದೆ. ಇಂತಹ ವಿಚಾರಗಳಲ್ಲಿ ರೆಡ್ಡಿ ಬಣಕ್ಕಿರುವ ಕುಖ್ಯಾತಿಯಿಂದಾಗಿ ಸಾರ್ವಜನಿಕವಾಗಿ ಬಿಜೆಪಿಯ ವರ್ಚಸ್ಸಿಗೂ ಧಕ್ಕೆಯಾಗಲಿದೆ. ಹಾಗಾಗಿ, ಸಾಧ್ಯವಾದಷ್ಟೂ ಈ ಕೆಲಸವನ್ನು ತೆರೆಮರೆಯ ಹಿಂದೆ ನಿಭಾಯಿಸುವುದು ಒಳಿತು ಎನ್ನುವ ಉದ್ದೇಶದಿಂದ ಯಡಿಯೂರಪ್ಪನವರ ಅಣತಿಯಂತೆ ಬೆಂಗಳೂರು ಮೂಲದ ಶಾಸಕರನ್ನು ಮುಂದಿಟ್ಟುಕೊಂಡು, ರೆಡ್ಡಿಗಳ ಸಂಪನ್ಮೂಲವನ್ನು ನೆಚ್ಚಿಕೊಳ್ಳದೆಯೇ ಕಾರ್ಯವನ್ನು ಸಾಧಿಸುವ ಉದ್ದೇಶ ಬಿಜೆಪಿಯ ಮುಖಂಡರಿಗಿತ್ತು ಎನ್ನುವ ಮಾತುಗಳು ಕೇಳಿಬಂದಿವೆ.

ಇತ್ತ, ಕುಮಾರಸ್ವಾಮಿಯವರ ಆರೋಪವು ಬಿಜೆಪಿಯು ಈ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳಿಗೆ ತಾತ್ಕಾಲಿಕ ಹಿನ್ನಡೆಯನ್ನಂತೂ ಉಂಟುಮಾಡಿದೆ. ಇನ್ನೇನಿದ್ದರೂ ಸಂಪುಟ ವಿಸ್ತರಣೆಯ ಸಂದರ್ಭದವರೆಗೂ ಸುಮ್ಮನಿದ್ದು, ಆಗ ಉಂಟಾಗುವ ಬಿಕ್ಕಟ್ಟನ್ನು ಜಾಣತನದಿಂದ ಬಳಸಿಕೊಳ್ಳುವತ್ತ ಪಕ್ಷದ ಮುಖಂಡರು ಗಮನ ಹರಿಸಲಿದ್ದಾರೆ ಎನ್ನಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More