ತಂತ್ರಗಾರಿಕೆಯಿಂದ ರಾಜಕಾರಣಿಯಾಗಿ ಪದೋನ್ನತಿ ಪಡೆದ ಪ್ರಶಾಂತ್‌ ಕಿಶೋರ್‌

ಚುನಾವಣಾ ತಂತ್ರಗಾರನಾಗಿ ಯಶಸ್ವಿಯಾಗಿರುವ ಪ್ರಶಾಂತ್‌ ಕಿಶೋರ್ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ. ಜೆಡಿಯುನೊಂದಿಗೆ ರಾಜಕೀಯ ಬದುಕು ಆರಂಭಿಸಿರುವ ಅವರಿಗೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಬಿಹಾರದಲ್ಲಿ ಸೀಟು ಹಂಚಿಕೆ ಜವಾಬ್ದಾರಿ ವಹಿಸಲಾಗಿದೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ನಂತರ ಸ್ಥಳೀಯವಾಗಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಅಧಿಕಾರಕ್ಕೆ ತಂದು ನಿಲ್ಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸೇರ್ಪಡೆಯಾಗಿದ್ದಾರೆ. ಜೆಡಿಯು ರಾಜ್ಯ ಕಾರ್ಯಕಾರಿಣಿಗೂ ಮುನ್ನ ಕಿಶೋರ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ನಿತೀಶ್‌ ಕುಮಾರ್‌, “ಕಿಶೋರ್‌ ಭವಿಷ್ಯದ ನಾಯಕ,” ಎಂದು ಬಣ್ಣಿಸಿದ್ದಾರೆ. ಜೆಡಿಯು ಸೇರ್ಪಡೆಗೂ ಮುನ್ನ ಟ್ವೀಟ್‌ ಮಾಡಿದ್ದ ಕಿಶೋರ್, “ಬಿಹಾರದಿಂದ ಹೊಸ ಪ್ರಯತ್ನ ಆರಂಭಿಸಲು ಉತ್ಸುಕನಾಗಿದ್ದೇನೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ೨೦೧೫ರಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಜೆಡಿಯು, ಲಾಲೂ ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ, ಕಾಂಗ್ರೆಸ್‌ ಒಳಗೊಂಡ ಮಹಾಮೈತ್ರಿ ಅಧಿಕಾರಕ್ಕೆ ತರುವಲ್ಲಿ ಪ್ರಶಾಂತ್‌ ಕಿಶೋರ್ ಮಹತ್ತರ ಪಾತ್ರ ನಿಭಾಯಿಸಿದ್ದನ್ನು ಇಲ್ಲಿ ನೆನೆಯಬಹುದು.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಜೊತೆ ಸೇರಲು ನಿತೀಶ್‌ ಕುಮಾರ್ ಒಲವು ಹೊಂದಿದ್ದರು. ಮೈತ್ರಿ ಸಾಧಿಸುವ ಜವಾಬ್ದಾರಿಯನ್ನು ಕಿಶೋರ್‌ಗೆ ನೀಡಿದ್ದರು. ಆದರೆ, ಲಾಲು ಪುತ್ರ ತೇಜಸ್ವಿ ಯಾದವ್‌ ಅವರು ನಿತೀಶ್‌ ಕುಮಾರ್‌ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಪ್ರಯತ್ನ ಕೈಗೂಡಲಿಲ್ಲ. ಹಾಗಾಗಿ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೀಟು ಹಂಚಿಕೆ ಜವಾಬ್ದಾರಿಯನ್ನು ಪ್ರಶಾಂತ್ ಕಿಶೋರ್‌ಗೆ ನಿತೀಶ್‌ ಕುಮಾರ್‌ ವಹಿಸಿದ್ದಾರೆ ಎನ್ನಲಾಗಿದೆ.

೨೦೧೪ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಕಿಶೋರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಅವರು ಆಡಳಿತ ಪಕ್ಷದಿಂದ ದೂರ ಸರಿದಿದ್ದರು. ಆನಂತರ ಇಂಡಿಯನ್‌ ಪೊಲಿಟಿಕಲ್‌ ಆಕ್ಷನ್ ಕಮಿಟಿ (ಐ-ಪ್ಯಾಕ್‌) ಹುಟ್ಟುಹಾಕಿದ್ದ ಕಿಶೋರ್‌ಗೆ, ೨೦೧೫ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಜವಾಬ್ದಾರಿ ವಹಿಸಲಾಗಿತ್ತು. ಮಹಾಮೈತ್ರಿಗೆ ಗೆಲುವು ದೊರೆತಿದ್ದರಿಂದ ಕಿಶೋರ್‌ಗೆ ನಿತೀಶ್‌ ಕುಮಾರ್‌ ಅವರು ಸಂಪುಟ ದರ್ಜೆ ಸ್ಥಾನಮಾನ ನೀಡಿ, ಕಾರ್ಯಕ್ರಮ ಯೋಜನೆ ಮತ್ತು ಅನುಷ್ಠಾನ ಜವಾಬ್ದಾರಿ ನೀಡಿದ್ದರು.

ಕಳೆದ ವಾರ ಹೈದರಾಬಾದ್‌ನ ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಶಾಂತ್, “೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ ಕೆಲಸ ಮಾಡುವುದಿಲ್ಲ. ಜನರ ಜೊತೆ ಕೆಲಸ ಮಾಡಲು ಬಯಸಿದ್ದೇನೆ,” ಎಂದು ಹೇಳಿದ್ದರು.

ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಯಲ್ಲಿ ಭಿನ್ನಮತದ ಹೊಗೆ?

ಸದ್ಯ ಕಿಶೋರ್‌ ಅವರು ಆಂಧ್ರಪ್ರದೇಶದ ಜಗನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಜೊತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಪಂಜಾಬ್‌ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರವಾಗಿ ತಂತ್ರಗಾರಿಕೆ ರೂಪಿಸುವ ಕೆಲಸ ಮಾಡಿದ್ದರು.

ಸಾರ್ವಜನಿಕ ಆರೋಗ್ಯ ತಜ್ಞರಾದ ಪ್ರಶಾಂತ್‌ ಕಿಶೋರ್‌, ವಿಶ್ವಸಂಸ್ಥೆಯ ಜೊತೆಗೂ ಕೆಲಸ ಮಾಡಿದ್ದಾರೆ. ಆನಂತರ ೨೦೧೨ರ ಗುಜರಾತ್‌ ವಿಧಾನಸಭಾ ಚುನಾವಣೆ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ನರೇಂದ್ರ ಮೋದಿ ೨೦೧೨ರಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವಂತೆ ಮಾಡುವಲ್ಲಿ ಶ್ರಮಿಸಿದ್ದ ಪ್ರಶಾಂತ್, ೨೦೧೪ರ ಲೋಕಸಭಾ ಚುನಾವಣೆ ನಂತರ ಪ್ರವರ್ಧಮಾನಕ್ಕೆ ಬಂದರು. ೨೦೧೪ರಲ್ಲಿ ವಿವಿಧ ವಲಯಗಳಲ್ಲಿದ್ದ ವೃತ್ತಿಪರರನ್ನು ಸೇರಿಸಿ ಹೊಣೆಗಾರಿಕೆಯ ಆಡಳಿತಕ್ಕೆ ನಾಗರಿಕರು (ಸಿಎಜಿ) ಎಂಬ ಸಂಘಟನೆ ಹುಟ್ಟುಹಾಕಿದ್ದರು. ಆನಂತರ ಇದುವೇ ಐ-ಪ್ಯಾಕ್‌ ಆಗಿ ರೂಪುಗೊಂಡಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More