ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್‌ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಬಹುಮೂಲಗಳಿಂದ ತಿಳಿದುಬಂದಿದೆ ಎಂದು ‘ದಿ ವೈರ್‌’ ಹೇಳಿದೆ. ಮುಂದಿನ ದಿನಗಳಲ್ಲಿ ವಿಶೇಷ ಚಿಕಿತ್ಸೆಗಾಗಿ ಅನಂತ್‌ಕುಮಾರ್‌ ಅಮೆರಿಕಗೆ ತೆರಳುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ

“ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ. ಸಂಸದೀಯ ವ್ಯವಹಾರ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಗಳನ್ನು ಹೊಂದಿರುವ ಅನಂತ್ ಕುಮಾರ್‌ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಬಹುಮೂಲಗಳಿಂದ ತಿಳಿದುಬಂದಿದೆ,” ಎಂದು ‘ದಿ ವೈರ್‌’ ಹೇಳಿದೆ. ಮುಂದಿನ ದಿನಗಳಲ್ಲಿ ವಿಶೇಷ ಚಿಕಿತ್ಸೆಗಾಗಿ ಅನಂತ್‌ ಕುಮಾರ್‌ ಅವರು ಅಮೆರಿಕಗೆ ತೆರಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ, ಅನಂತ್‌ ಕುಮಾರ್‌ ಅವರು ಲಂಡನ್‌ನಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿದ್ದಾರೆಂಬುದು ಕೇವಲ ವದಂತಿ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

ಈ ಹಿಂದೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್ ಅವರು‌ ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದಾಗಲೂ ಕೇಂದ್ರ ಸರ್ಕಾರ ಆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಳೆದ ಎರಡು ವಾರಗಳ ಹಿಂದೆ ಸಚಿವ ಅನಂತ್‌ ಕುಮಾರ್ ಅನಾರೋಗ್ಯದ ಕಾರಣ ಲಂಡನ್‌ಗೆ ತೆರಳಿದರೂ ಸಂಸದೀಯ ವ್ಯವಹಾರ ಸಚಿವಾಲಯದಿಂದಾಗಲೀ, ಕೇಂದ್ರ ಸರ್ಕಾರದ ಅಧಿಕೃತ ಮೂಲಗಳಿಂದಾಗಲೀ ಯಾವುದೇ ಮಾಹಿತಿ ಹೊರಬರದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಟೀಕೆಗಳು ಕೇಳಿಬಂದಿವೆ.

ಗೋವಾ ಸಿಎಂ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್‌ ಪರ್ರಿಕರ್‌ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಕೆಲ ತಿಂಗಳಿಂದ ಚಿಕೆತ್ಸೆ ಪಡೆಯುತ್ತಿರುವುದರ ಬಗ್ಗೆ ಯಾವುದೇ ಮಾಹಿತಿ ಕೇಂದ್ರ ಸರ್ಕಾರ ನೀಡಿಲ್ಲ. ಮುಖ್ಯಮಂತ್ರಿ ಸೇರಿದಂತೆ, ಹಲವು ಪ್ರಮುಖ ಖಾತೆ ಹೊಂದಿರುವ ಪರ್ರಿಕರ್‌ ಅವರು ತಮ್ಮ ಕಚೇರಿಗೆ ಗೈರುಹಾಜರಾದ ಕಾರಣ ಯಾವುದೇ ಕಡತಗಳಿಗೆ ಸಹಿ ಮಾಡಿಲ್ಲ. ಸದ್ಯ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮತ್ತೆ ಅಮೆರಿಕಗೆ ತೆರಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ. ಆ ಕಾರಣ, ಪ್ರಧಾನಿ ಮೋದಿ ಅವರು ಗೋವಾ ಸಿಎಂ ಸ್ಥಾನವನ್ನು ಬೇರೆಯವರಿಗೆ ವಹಿಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈಗ ಅನಂತ್‌ ಕುಮಾರ್‌ ಅವರ ಅನಾರೋಗ್ಯದ ಬಗ್ಗೆ ಮೌನ ವಹಿಸಿರುವ ಕೇಂದ್ರ ಸರ್ಕಾರ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಕಿಡ್ನಿ ಶಸ್ತ್ರಚಿಕಿತ್ಸೆಯ ಬಗ್ಗೆಯೂ ಮೌನ ವಹಿಸಿದ್ದನ್ನು ಇಲ್ಲಿ ನೆನಸಿಕೊಳ್ಳಬಹುದು. ಆ ಸಮಯದಲ್ಲಿ ಕೇಂದ್ರ ಸರ್ಕಾರ ಜೇಟ್ಲಿ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ‌ತಮ್ಮ ಸ್ಥಿತಿಯ ಬಗ್ಗೆ ಖುದ್ದಾಗಿ ಅರುಣ್‌ ಜೇಟ್ಲಿಯವರೇ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವವರೆಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಹಣಕಾಸು ಸಚಿವಾಲಯದಿಂದ ಹೊರಬಂದಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಜೇಟ್ಲಿ ಅವರು ಕೆಲ ವಾರಗಳ ಕಾಲ ಕಚೇರಿಗೆ ಹಾಜರಾಗದೆ ಇರುವ ಬಗ್ಗೆ ಮಾಧ್ಯಮಗಳೂ ಮೌನ ವಹಿಸಿದ್ದನ್ನು ಇಲ್ಲಿ ಗಮನಿಸಬಹುದು.

ಕಿಡ್ನಿ ಶಸ್ತ್ರಚಿಕೆತ್ಸೆಗೆ ಒಳಗಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಈ ಹಿಂದೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆಯಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ಕೆಲ ತಿಂಗಳುಗಳ ಕಾಲ ಸುಷ್ಮಾ ಸ್ವರಾಜ್‌ ಅವರು ಕಾಣಿಸಿಕೊಂಡಿರಲಿಲ್ಲ. ವಿದೇಶಾಂಗ ಖಾತೆಯ ಹೊಣೆಯನ್ನು ಕೇಂದ್ರ ಸರ್ಕಾರ ಬೇರೆ ಯಾರಿಗೂ ವಹಿಸಿರಲಿಲ್ಲ. ಸುಷ್ಮಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿತ್ತು.

ಇದನ್ನೂ ಓದಿ : ಯಜಮಾನನಿಲ್ಲದೆ ಅನಾಥವಾಗಿದೆ ಕೇಂದ್ರ ಹಣಕಾಸು ಸಚಿವಾಲಯ!

ಅನಂತ್‌ ಕುಮಾರ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿಯಲ್ಲಿ ತೀವ್ರ ಏರುಪೇರು ಕಂಡುಬಂದಿರುವುದು ನಿಜವೇ ಆಗಿದ್ದಲ್ಲಿ, ಮುಂಬರುವ ಚಳಿಗಾಲ ಅಧಿವೇಶನಕ್ಕೆ ಅವರು ಹಾಜರಾಗುವ ಸಾಧ್ಯತೆಗಳು ಕ್ಷೀಣಿಸಿವೆ ಎನ್ನಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು ಅವಿಶ್ವಾಸ ನಿರ್ಣಯ ಮಂಡನೆಯ ಕಾರಣ ಅನಂತ್‌ ಕುಮಾರ್‌ ಅವರ ಚಿಕಿತ್ಸೆ ತಡವಾಗಿದೆ ಎಂದು ಹೇಳಲಾಗುತ್ತಿದೆ.

ಜಗತ್ತಿನ ಹಲವು ಪ್ರಜಾತಂತ್ರ ರಾಷ್ಟ್ರಗಳಲ್ಲಿ ಪ್ರಮುಖ ಖಾತೆ ಹೊಂದಿರುವ ರಾಜಕೀಯ ನಾಯಕರ ಅನಾರೋಗ್ಯ ಬಗೆಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ನೈತಿಕ ಹೊಣೆ ಸರ್ಕಾರಗಳ ಮೇಲಿರುತ್ತದೆ ಹಾಗೂ ಬಹುತೇಕ ದೇಶಗಳು ಅದನ್ನು ಸರಿಯಾಗಿ ನಿರ್ವಹಿಸುತ್ತವೆ. ಸಾರ್ವಜನಿಕ ವಲಯದಲ್ಲಿರುವ ರಾಜಕೀಯ ನಾಯಕರ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳುವುದು ನಾಗರಿಕರ ಹಕ್ಕೆಂದು ಅಲ್ಲಿ ಪರಿಗಣಿಸಲಾಗುತ್ತದೆ. ಆ ನಿಟ್ಟಿನಲ್ಲಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಹೊಣೆಯನ್ನು ಅರಿತು ನಡೆಯಬೇಕೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More