ಚಾಣಕ್ಯಪುರಿ | ರಾಜ್ಯ ಬಿಜೆಪಿ ಒಕ್ಕಲಿಗ ನಾಯಕರಲ್ಲಿ ಅಗ್ರಪಟ್ಟಕ್ಕಾಗಿ ಆಂತರಿಕ ಕಲಹ

ಒಕ್ಕಲಿಗ ಕೋಟಾದಲ್ಲಿ ಡಿಸಿಎಂ ಸ್ಥಾನಕ್ಕೇರಿದ ಆರ್‌ ಅಶೋಕ್‌ಗೆ ಅವರದೇ ಸಮುದಾಯದ ನಾಯಕರಿಂದ ಸ್ಪರ್ಧೆ ಏರ್ಪಟ್ಟಿದೆ. ಸದಾನಂದ ಗೌಡ ಅವರನ್ನು ಹಿಂದೆ ಹಾಕಲು ಅಶೋಕ್‌ ಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಈ ಬೆಳವಣಿಗೆಗಳು ನಡೆಯುತ್ತಿರುವುದು ಕುತೂಹಲಕ್ಕೆ ಕಾರಣ

ರಾಜ್ಯ ಬಿಜೆಪಿಯಲ್ಲಿ ಒಕ್ಕಲಿಗರ ಒಳಜಗಳ ಶುರುವಾಗಿದೆಯಂತೆ. ಬಿಜೆಪಿಯೊಳಗೆ ತಾನೇ ಸಾಮ್ರಾಟ್ ಆಗಬೇಕೆಂಬುದು ಮಾಜಿ ಡಿಸಿಎಂ ಆರ್ ಅಶೋಕ್ ಅವರ ಬಹಳ ವರ್ಷಗಳ‌ ಕನಸು. ಆದರೆ, ಈ ಕನಸಿಗೆ ಮೊದಲು ಕಲ್ಲು ಹಾಕಿದವರು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ನಿರ್ಮಲಾನಂದ ಸ್ವಾಮೀಜಿ ಜೊತೆ ಡಿವಿಎಸ್ ಬಹಳ ಚೆನ್ನಾಗಿರುವುದರಿಂದ ಅವರನ್ನು ತಡೆಯುವುದು ಅಶೋಕ್‌ಗೆ ಸಾಧ್ಯವಾಗಿಲ್ಲ.‌ ಈ ಸಲ ಹೇಗಾದರೂ ಮಾಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸದಾನಂದ ಗೌಡರಿಗೆ ಟಿಕೆಟ್ ತಪ್ಪಿಸಬೇಕೆಂಬುದು ಹೊಸ ಲೆಕ್ಕಾಚಾರ. ಅದಕ್ಕಾಗಿ ಈಗಾಗಲೇ ಅಭಿಪ್ರಾಯ ರೂಪಿಸುವ ಕೆಲಸ  ಮಾಡುತ್ತಿದ್ದಾರಂತೆ.‌ ಇತ್ತೀಚೆಗೆ ದೆಹಲಿಗೆ ಬಂದಿದ್ದ ಅಶೋಕ್, ಸದಾನಂದ ಗೌಡರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಸುದ್ದಿಯನ್ನು ದೆಹಲಿ ಪತ್ರಕರ್ತರ ಕಿವಿಗಳಿಗೂ ಅನಗತ್ಯವಾಗಿ ತುರುಕಿದ್ದರು.

ಸದಾನಂದ ಗೌಡರ ವರಸೆಗಳಿಗೆ ಸುಸ್ತಾಗಿದ್ದ ಅಶೋಕ್ ಅವರಿಗೆ ಈಗ ಸಿ ಟಿ ರವಿ, ಸಿ ಪಿ ಯೋಗೇಶ್ವರ್ ಮತ್ತು ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ಅವರ ಕಾಟ ಕೂಡ ಶುರುವಾಗಿದೆಯಂತೆ‌. ಯಡಿಯೂರಪ್ಪ ನಂತರ ತಾನೇ ರಾಜ್ಯಾಧ್ಯಕ್ಷ ಆಗಬೇಕೆಂದು ಸಿ ಟಿ ರವಿ ಈಗಿನಿಂದಲೇ ಲಾಬಿ ನಡೆಸುತ್ತಿದ್ದಾರಂತೆ. ಇದು ಗೊತ್ತಾದಾಗಿನಿಂದ ಅಶೋಕ್ ಸಿಕ್ಕಾಪಟ್ಟೆ ಅಲರ್ಟ್ ಆಗಿದ್ದಾರಂತೆ. ರವಿ ರಾಜ್ಯಾಧ್ಯಕ್ಷ ಆಗಿಬಿಟ್ಟರೆ ನನ್ನ ಕತೆ ಮುಗಿದೇಹೋಯಿತು ಅಂತ ಚಡಪಡಿಸುತ್ತಿದ್ದಾರಂತೆ. ಜೊತೆಗೆ, 'ಆಪರೇಷನ್ ರವಿ' ಕೆಲಸ ಕೈಗೆತ್ತಿಕೊಂಡಿದ್ದಾರಂತೆ. 'ಆಪರೇಷನ್ ರವಿ' ಎಂದರೆ, ಹೇಗಾದರೂ ಮಾಡಿ ಸಿ ಟಿ ರವಿ ರಾಜ್ಯಾಧ್ಯಕ್ಷ ಆಗುವುದನ್ನು ತಪ್ಪಿಸುವುದು. ಅದಕ್ಕಾಗಿ ಕೇಂದ್ರ ಸಚಿವ ಅನಂತ ಕುಮಾರ್ ಮೊರೆಹೋಗಿದ್ದಾರಂತೆ. ಅನಂತ ಕುಮಾರ್ ಮೂಲಕ ಆರೆಸ್ಸೆಸ್ ನಾಯಕರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರಂತೆ.

ದೆಹಲಿ ಪತ್ರಕರ್ತರೆದುರು ಅಶೋಕ್-ರವಿ ನಾಯಕತ್ವ ಪ್ರದರ್ಶನ

ಇತ್ತೀಚೆಗೆ ದೆಹಲಿ ಪತ್ರಕರ್ತರಿಗೆ ಅಚಾನಕ್ಕಾಗಿ ಅಶೋಕ್ ಮತ್ತು ಸಿ ಟಿ ರವಿ ಒಟ್ಟಿಗೆ ಸಿಕ್ಕಿದ್ದರು. ಆಗಲೂ ರಾಜ್ಯ ಬಿಜೆಪಿಯಲ್ಲಿ ತಾನೇ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳಲು ಅಶೋಕ್ ಏನೇನೋ‌ ಕತೆ ಹೇಳಿದರು.‌ ಆಗ ಒಂದು ಕ್ಷಣ ಸಿ ಟಿ ರವಿ ಮುಖ ಸಣ್ಣಗಾಗಿದ್ದು ಸುಳ್ಳಲ್ಲ. ಸ್ವಲ್ಪ‌ಹೊತ್ತಿನ ಬಳಿಕ ಸುಧಾರಿಸಿಕೊಂಡ ಸಿ ಟಿ ರವಿ, "ಕೆಲವರು ತಾನು ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಾನು ಮಾತ್ರ ಸಿದ್ಧಾಂತದ ಮೂಲಕ ಗುರುತಿಸಿಕೊಳ್ಳುತ್ತೇನೆ,” ಎಂದು ತಿರುಗೇಟು ನೀಡಿದರು. ಸಿ ಟಿ ರವಿ ಮಾತುಗಳು ಈಟಿಯಲ್ಲಿ ಇರಿದಂತಿದ್ದವು. ಕೆಲ ಹೊತ್ತಿನ ಬಳಿಕ ಅಶೋಕ್ ಹೇಳದೆ ಕೇಳದೆ ಎದ್ದು ಹೋಗೇಬಿಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷ ಆಗುತ್ತಾರಂತೆ ಸಿ ಟಿ ರವಿ

ಸಿ ಟಿ ರವಿ ಒಂದಲ್ಲ ಒಂದು ದಿನ ಬಿಜೆಪಿ ರಾಜ್ಯಾಧ್ಯಕ್ಷ ಆಗೇ ಆಗ್ತಿನಿ ಅಂತ ಬಲವಾಗಿ ನಂಬಿದ್ದಾರೆ. ದೆಹಲಿ ಪತ್ರಕರ್ತರ ಬಳಿಯೂ ತಮ್ಮ ಆಸೆ, ವಿಶ್ವಾಸ ತೋಡಿಕೊಂಡಿದ್ದಾರೆ. ‌ಇತ್ತೀಚೆಗೆ ಆರೆಸ್ಸೆಸ್ ಪ್ರಮುಖರೊಬ್ಬರು, "ರಾಜ್ಯದಲ್ಲಿ ಸರ್ಕಾರ ಬಂದರೆ ಯಡಿಯೂರಪ್ಪ ತಕ್ಷಣವೇ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಆಗ ನೀನು ರಾಜ್ಯಾಧ್ಯಕ್ಷ ಆಗುವೆಯೋ ಅಥವಾ ಮಂತ್ರಿಯಾಗಲು ಬಯಸುವೆಯೋ?” ಎಂದು ಕೇಳಿದರಂತೆ. ಸಿ ಟಿ ರವಿ ತಕ್ಷಣವೇ, "ರಾಜ್ಯಾಧ್ಯಕ್ಷ ಆಗುವೆ. ನನಗೆ ಮಂತ್ರಿಗಿರಿಗಿಂತ ಪಕ್ಷದ ಕೆಲಸ ಮುಖ್ಯ,” ಎಂದರಂತೆ. "ಸಂಘದ ಪ್ರಮುಖರು ಇದೇ ರೀತಿ ಬೇರೆಯವರಿಂದಲೂ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಬೇರೆಯವರೆಲ್ಲ ಮಂತ್ರಿ ಆಗುವ ಮಹದಾಸೆ ಇಟ್ಟುಕೊಂಡಿದ್ದಾರೆ. ಹಾಗಾಗಿ ರಾಜ್ಯಾಧ್ಯಕ್ಷ ಆಗುವ ಅವಕಾಶ ನನಗೇ ಹೆಚ್ಚಿದೆ,” ಎನ್ನುವುದು ರವಿ ಲೆಕ್ಕಾಚಾರ.

ಇದನ್ನೂ ಓದಿ : ಚಾಣಕ್ಯಪುರಿ | ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಮಾಧ್ಯಮಗಳು ಮುಚ್ಚಿಟ್ಟ ಸತ್ಯವಿದು!

ಯೋಗೇಶ್ವರ್‌ಗೆ ಟಿಕೆಟ್ ತಪ್ಪಿಸಿ ಹಣಿಯುವ ಶತಪ್ರಯತ್ನ

ಈಗ ಸಿ ಪಿ ಯೋಗೇಶ್ವರ್ ಸರದಿ.‌ ಈ ಹಿಂದೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಬೇಕೆಂದು ಪಕ್ಷದೊಳಗೆ ಒಂದು ಬಣ ಭಾರಿ ಪ್ರಯತ್ನಪಟ್ಟಿತ್ತು. ಆಗ ರೆಡ್ ಸಿಗ್ನಲ್ ತೋರಿದ್ದವರು ಇದೇ ಅಶೋಕ್. ಚಲುವರಾಯಸ್ವಾಮಿ ಪಕ್ಷಕ್ಕೆ ಬಂದರೆ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಮುಖ್ಯವಾಗಿ ಬೆಂಗಳೂರು ನಗರದ ಒಕ್ಕಲಿಗರ ಉಸಾಬರಿ ಅವರ ಹೆಗಲಿಗೆ ಹೋಗಿಬಿಡುತ್ತದೆ ಎನ್ನುವುದನ್ನು ಬಿಟ್ಟರೆ ಬೇರೆ ಕಾರಣಗಳಿರಲಿಲ್ಲ. ಅದರಿಂದಾಗಿ ಕಡೆಗೂ ಚಲುವರಾಯಸ್ವಾಮಿ ಬರುವುದನ್ನು ತಡೆದರು. ಆದರೆ, ಸೈಲೆಂಟಾಗಿ ಸಿ ಪಿ ಯೋಗೇಶ್ವರ್ ಪಕ್ಷದೊಳಕ್ಕೆ ಬಂದುಬಿಟ್ಟಿದ್ದರು. ಅಷ್ಟೇ ಅಲ್ಲ, ಕಳೆದ ವಿಧಾನಸಭಾ ಚುನಾವಣೆ ವೇಳೆ ತಮ್ಮ ಆಪ್ತರಿಗೂ ಟಿಕೆಟ್ ಕೊಡಿಸಲು ಪ್ರಯತ್ನಪಟ್ಟಿದ್ದರು. ಆಗಲೇ ಯೋಗೇಶ್ವರ್ ಮೇಲೆ ಅಶೋಕ್‌ಗೆ ಗುಮಾನಿ ಬಂದಿತ್ತಂತೆ; ಅದು ಈಗ ನಿಜ ಆಗುತ್ತಿದೆಯಂತೆ. ಅಶೋಕ್, ರಾಜ್ಯ ಬಿಜೆಪಿಯಲ್ಲಿ ಅನಂತ ಕುಮಾರ್ ಗ್ಯಾಂಗಿನವರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದಕ್ಕಾಗಿ ಚಾಲಾಕಿ ಸಿ ಪಿ‌ ಯೋಗೇಶ್ವರ್, ಯಡಿಯೂರಪ್ಪ ಬಣಕ್ಕೆ ಜಿಗಿದಿದ್ದಾರಂತೆ. ದಿನದಿಂದ ದಿನಕ್ಕೆ ಯಡಿಯೂರಪ್ಪ ಮತ್ತು ಯೋಗೇಶ್ವರ್ ಸಂಬಂಧ ಗಟ್ಟಿ ಆಗುತ್ತಿದೆಯಂತೆ. ಇದರಿಂದ ಕಂಗೆಟ್ಟಿರುವ ಅಶೋಕ್, ಈಗ ಯೋಗೇಶ್ವರ್ ಅವರ ರೆಕ್ಕೆಪುಕ್ಕ ಕತ್ತರಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರಂತೆ.

ಯೋಗೇಶ್ವರ್ ಈಗ ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಮುಂದಿನ‌ ಸಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಿ ಕೆ ಸುರೇಶ್ ವಿರುದ್ದ ಅವರೇ ಅಭ್ಯರ್ಥಿಯಂತೆ. ಈಗಾಗಲೇ ಯಡಿಯೂರಪ್ಪ ಹಸಿರು ನಿಶಾನೆ ತೋರಾಗಿದೆಯಂತೆ. ಯೋಗೇಶ್ವರ್ ಅವರಿಗೆ ಟಿಕೆಟ್ ತಪ್ಪಿಸಬೇಕೆಂದು ಅಶೋಕ್ ಲಾಬಿಗಿಳಿದಿದ್ದಾರಂತೆ. “ಬೆಂಗಳೂರಿನ ಜಯನಗರ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಗಳಲ್ಲಿ ನನ್ನನ್ನು ಉಪೇಕ್ಷೆ ಮಾಡಿದ್ದರಿಂದ ಪಕ್ಷ ಸೋತಿದೆ. ಮುಂದೆ ಈ ಭಾಗದ ಲೋಕಸಭಾ ಟಿಕೆಟ್‌ಗಳನ್ನು ಕೊಡುವಾಗ ನನ್ನ ಸಲಹೆ ಪಡೆಯಿರಿ,” ಎಂಬ ಸಂದೇಶವನ್ನು ಯಡಿಯೂರಪ್ಪ ಅವರಿಗೆ ರವಾನಿಸಿದ್ದಾರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More