ರಾಜಕೀಯ ಮೇಲಾಟದಿಂದ ವೈಯಕ್ತಿಕ ಲಾಭಕ್ಕೆ ಇಳಿದ ಕಾಂಗ್ರೆಸ್‌ ನಾಯಕರಿಗೆ ಸಿದ್ದು ಮದ್ದೇನು?

ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಆಂತರಿಕ ಭಿನ್ನಮತ ನಿವಾರಿಸುವುದರ ಜೊತೆಗೆ ಸ್ಥಾನಮಾನಗಳನ್ನು ಸಮಾನವಾಗಿ ಹಂಚಿಕೆ ಮಾಡುವ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲೇರಿದೆ. ಸಿದ್ದರಾಮಯ್ಯ ಕೈಗೊಳ್ಳುವ ನಿರ್ಧಾರಗಳು ಬಿಜೆಪಿಯ ಸರ್ಕಾರ ರಚಿಸುವ ಕನಸಿನ ಭವಿಷ್ಯ ನಿರ್ಧರಿಸಲಿವೆ

ಪ್ರತಿಷ್ಠೆ, ಮೇಲಾಟಕ್ಕಾಗಿ ಆರಂಭವಾದ ಕಾಂಗ್ರೆಸ್ ನಾಯಕರ‌ ಆಂತರಿಕ ಕಲಹವು ವೈಯಕ್ತಿಕ ಲಾಭ ಗಳಿಸುವ ಕಡೆಗೆ ತಿರುಗಿದೆ. ಸ್ಥಾನಮಾನಕ್ಕಾಗಿ ಹವಣಿಸುತ್ತಿರುವ ಅಸಮಾಧಾನಿತರ ಜೊತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಸರಣಿ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್‌ ಜೊತೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಜಾರಕಿಹೊಳಿ ಸಹೋದರರು ಹಾಗೂ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವೆ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಾರಕಕ್ಕೇರಿದ ಭಿನ್ನಾಭಿಪ್ರಾಯಗಳ ನಂತರ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹದ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸಿದ್ದು, ಸರ್ಕಾರ ಉರುಳಿಸುವ ಮಾತುಗಳೂ ಕೇಳಿಬಂದಿವೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕಾಂಗ್ರೆಸ್‌, ಸಿದ್ದರಾಮಯ್ಯ ಅವರು ಯುರೋಪ್‌ ಪ್ರವಾಸದಿಂದ ಹಿಂದಿರುಗುತ್ತಿದ್ದಂತೆ ಅವರಿಗೆ ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ವಹಿಸಿದೆ. ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ ಶಾಸಕರು, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಮಾತಿಗೆ ಮಾನ್ಯತೆ ದೊರೆಯುತ್ತಿಲ್ಲ ಎಂಬ ದೂರು, ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ಹಾಗೂ ಮಾಧ್ಯಮಗಳು ನಡೆಸುತ್ತಿರುವ ವ್ಯಾಪಕ ಅಪಪ್ರಚಾರದ ಕುರಿತು ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ವರದಿ ಒಪ್ಪಿಸಲಿದ್ದಾರೆ. ಸಿದ್ದರಾಮಯ್ಯ ಅವರು ಕೈಗೊಳ್ಳುವ ನಿರ್ಧಾರಗಳ ಮೇಲೆ ಬಿಜೆಪಿಯ ಸರ್ಕಾರ ರಚಿಸುವ ಆಸೆ ನಿಂತಿದೆ. ಕಲಕಿದ ನೀರಿನಂತಾಗಿರುವ ರಾಜ್ಯ ರಾಜಕೀಯದ ಸ್ಥಿತಿಯನ್ನು ಸಿದ್ದರಾಮಯ್ಯ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, ಬಿಜೆಪಿಯ, ವಿಶೇಷವಾಗಿ ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗುವ ಕನಸು ನಿರ್ಧಾರವಾಗಲಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ೨೨ ಸಚಿವ ಸ್ಥಾನ ಹಂಚಿಕೆಯಾಗಿದ್ದು, ಈ ಪೈಕಿ ಇನ್ನೂ ಆರು ಸಚಿವ ಸ್ಥಾನ ಖಾಲಿ ಇವೆ. ನಿಗಮ ಮತ್ತು ಮಂಡಳಿಗಳ ಪೈಕಿ ಕಾಂಗ್ರೆಸ್‌ಗೆ ಮೂರನೇ ಎರಡು ಭಾಗ ದೊರೆಯಲಿವೆ. ಇವುಗಳಿಗೆ ಸಾಮಾಜಿಕ ನ್ಯಾಯದಡಿ ಅವಕಾಶ ಕಲ್ಪಿಸುವ ಕುರಿತು ಈಗಾಗಲೇ ಸಿದ್ದರಾಮಯ್ಯ ಅವರು ಪಕ್ಷದ ಮುಖಂಡ ಜೊತೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ದಿನೇಶ್‌ ಗುಂಡೂ ರಾವ್‌ ಅವರು ಮಂಗಳವಾರ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ ಸಿ ವೇಣುಗೋಪಾಲ್‌ ಅವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಹಿನ್ನಡೆಯನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಜಾರಕಿಹೊಳಿ ಸಹೋದರರಿಗೆ ಕಾಂಗ್ರೆಸ್‌ ನಾಯಕತ್ವ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ರಾಜಕೀಯ ಮೇಲುಗೈಗೆ ಯತ್ನಿಸುತ್ತಿದ್ದಾರೆಯೇ ಜಾರಕಿಹೊಳಿ ಸಹೋದರರು?

ಈ ಮಧ್ಯೆ, ರಾಜ್ಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಮಾಧ್ಯಮ ಸೃಷ್ಟಿ ಎಂದು ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡರು ಈಚೆಗೆ ಹೇಳಿದ್ದರು. ರಾಜ್ಯ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡಿಗೂ ಇಲ್ಲಿನ ಪರಿಸ್ಥಿತಿ ಮಾಧ್ಯಮಗಳು ಬಿಂಬಿಸುತ್ತಿರುವಷ್ಟು ಜಟಿಲವಾಗಿಲ್ಲ ಎಂಬುದು ತಿಳಿದಿದೆ. ವಿವಾದದ ಕೇಂದ್ರಬಿಂದವಾಗಿರುವ ಜಾರಕಿಹೊಳಿ ಸಹೋದರರು ಆರಂಭದಿಂದಲೂ ಪಕ್ಷ ತೊರೆಯುವ ವಿಚಾರವನ್ನು ಸಾರಾಸಗಟಾಗಿ ತಿರಸ್ಕರಿಸುತ್ತ ಬಂದಿದ್ದಾರೆ. ದೂರದೃಷ್ಟಿಯಿಂದ ನೋಡಿದರೆ, ಪಕ್ಷಾಂತರದ ನಂತರ ಸಿಗುವ ರಾಜಕೀಯ ಲಾಭ ತಾತ್ಕಾಲಿಕವಾಗಷ್ಟೇ ಇರಬಲ್ಲದೇ ವಿನಾ ದೀರ್ಘಕಾಲದಲ್ಲಿ ಹಿನ್ನಡೆಗೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು ಎನ್ನುವ ಅರಿವು ಜಾರಕಿಹೊಳಿ ಸಹೋದರರಿಗೂ ಇದೆ. ಇದೇ ಕಾರಣಕ್ಕೆ ಹೈಕಮಾಂಡ್‌ ಅವರ ಸದ್ಯದ ಸ್ಥಾನಮಾನಗಳ ಬೇಡಿಕೆ ಕುರಿತಾದ ವಿಚಾರದ ಬಗ್ಗೆಯಷ್ಟೇ ತಲೆಕೆಡಿಸಿಕೊಂಡಿದೆಯೇ ಹೊರತು ಸರ್ಕಾರ ಬೀಳುವ ಸಾಧ್ಯತೆಯನ್ನು ಗಂಭೀರವಾಗಿಯೇನೂ ಪರಿಗಣಿಸಿಲ್ಲ ಎನ್ನಲಾಗುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More