ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪೊರೆಯುತ್ತಿರುವುದು ಯಾವ ‘ದೈವಬಲ’?

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ದ ಕುರಿತಂತೆ ದೈವಬಲದ ಮಾತುಗಳು ಹೆಚ್ಚು ಚಲಾವಣೆಯಲ್ಲಿವೆ. ದೈವಬಲ ಇರುವ ಸರ್ಕಾರವನ್ನು ಯಾರೂ ಅಲ್ಲಾಡಿಸಲಾಗದು ಎಂದು ದೇವೇಗೌಡರು ಹೇಳಿದರೆ, ಸರ್ಕಾರ ಉರುಳಿಸಿದರೆ ದೈವದ್ರೋಹ ಆದೀತೆಂದು ಎಚ್ಚರಿಸುತ್ತಾರೆ ನಿರ್ಮಲಾನಂದನಾಥ ಸ್ವಾಮೀಜಿ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಅಸ್ತಿತ್ವದ ಜೊತೆಗೇ ಅಸ್ಥಿರತೆಯನ್ನು ಕಂಕುಳಲ್ಲಿಟ್ಟುಕೊಂಡು ಸಾಗುತ್ತಿದೆ. ಜೀವ ಚೆಲ್ಲದೆ ಹೇಗೋ ಮುನ್ನಡೆಯುತ್ತಿದೆ ಎನ್ನುವ ಕಾರಣಕ್ಕೊ ಏನೋ ಈ ಸರ್ಕಾರದ ಕುರಿತಂತೆ ‘ದೈವಬಲ’ದ ಮಾತುಗಳು ಹೆಚ್ಚು ಚಲಾವಣೆಯಲ್ಲಿವೆ. “ದೈವಬಲ ಇರುವ ಕಾರಣಕ್ಕೆ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಯಾರಿಗೂ ಸುಲಭಕ್ಕೆ ಕೆಡವಲಾಗದು,’’ಎನ್ನುವ ವಿಶ್ವಾಸದ ಜೊತೆಗೆ, “ಉರುಳಿಸುವ ದ್ರೋಹ ಬಗೆದರೆ ಅದು ದೈವದ್ರೋಹವಾಗುತ್ತದೆ,’’ ಎನ್ನುವಂಥ ಎಚ್ಚರಿಕೆಯನ್ನೂ ತೇಲಿಬಿಡಲಾಗುತ್ತಿದೆ. ಸರ್ಕಾರಕ್ಕೆ ಇರಬಹುದಾದ ಈ ಪರಿಯ ದೈವಬಲವನ್ನು ಋಜು ಮಾಡಲೆನ್ನುವಂತೆ ಮುಖ್ಯಮಂತ್ರಿ ಮತ್ತು ಅವರ ಪರಿವಾರದವರು, ಪ್ರಭಾವಿ ಸಚಿವರು ಮಠ-ಮಂದಿರಗಳನ್ನು ಎಡತಾಕಿ ದೈವ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದಾರೆ. ಜನ ಬಲ, ಜಾತಿ ಬಲ, ಹಣ ಬಲ, ತೋಳ್ಬಲ ಸಹಿತ ಸರ್ವ ಬಲಗಳನ್ನು ರಾಜಕೀಯದಲ್ಲಿ ಪ್ರದರ್ಶಿಸಿ ಪ್ರಭಾವಿಗಳೆನಿಸಿಕೊಂಡ ಕೆಲವು ಜನನಾಯಕರೂ ಅಧಿಕಾರದಲ್ಲಿ ಉಳಿಯಲೆಂದು ಅಂತಿಮವಾಗಿ ‘ದೈವಬಲ’ದ ಮೊರೆಹೋಗುತ್ತಿದ್ದಾರೆ. ಹಾಲಿ ಸರ್ಕಾರವನ್ನು ಉರುಳಿಸಿ ಅಧಿಕಾರ ಸ್ಥಾಪಿಸುವ ಪ್ರಯತ್ನ ನಡೆಸುತ್ತಿರುವ ಪ್ರತಿಪಕ್ಷದವರಿಗೂ ‘ದೈವದ್ರೋಹ’ ಎಚ್ಚರಿಕೆಯ ರೂಪದಲ್ಲಿ ಕಾಡತೊಡಗಿದೆ.

ಸರ್ಕಾರದ ಸ್ಥಿರತೆ ವಿಷಯದಲ್ಲಿ ಮತ್ತೊಮ್ಮೆ ಬಿಕ್ಕಟ್ಟು ಎದುರಾಗಿರುವಾಗ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಾಲಿ ಮೈತ್ರಿ ಸರ್ಕಾರದ ‘ಪಿತಾಮಹ’ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು, “೩೭ ಶಾಸಕ ಬಲ ಹೊಂದಿದ ಪಕ್ಷವೊಂದರ ನಾಯಕ ಮುಖ್ಯಮಂತ್ರಿಯಾಗಿದ್ದು ದೇಶದ ಇತಿಹಾಸದಲ್ಲೇ ವಿಶಿಷ್ಟ ವಿದ್ಯಮಾನ. ಇದಕ್ಕೆ ಗುರುಬಲ,ದೈವಬಲವೇ ಕಾರಣ. ಆ ದೈವಶಕ್ತಿ ಸರ್ಕಾರವನ್ನು ಕಾಪಾಡುತ್ತದೆ. ಯಾರು ಎಷ್ಟೇ ಪ್ರಯತ್ನಿಸಿದರೂ ಸರ್ಕಾರ ಅಸ್ಥಿರವಾಗದು,’’ ಎಂದಿದ್ದಾರೆ. ಸರ್ಕಾರದ ‘ರಾಜಗುರು’ವಿನ ಸ್ಥಾನದಲ್ಲಿರುವ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರದ್ದೂ ಇಂಥದೇ ಹೇಳಿಕೆ. “೩೭ ಶಾಸಕರನ್ನು ಹೊಂದಿದ ವ್ಯಕ್ತಿ ರಾಜ್ಯ ಆಳುತ್ತಿದ್ದಾರೆ ಎಂದರೆ ಆಶ್ಚರ್ಯ. ದೈವಶಕ್ತಿ ಇಲ್ಲದೆ ಇಂಥದು ಸಾಧ್ಯವಿಲ್ಲ. ಇದಕ್ಕೆ ವಿರುದ್ಧ ಏನೇ ಮಾಡಿದರೂ ಅದು ಒಬ್ಬರಿಗೆ ಮಾಡುವ ದ್ರೋಹವಲ್ಲ, ದೈವದ್ರೋಹ ಮಾಡಿದಂತಾಗುತ್ತೆ,’’ ಎನ್ನುವುದು ಸ್ವಾಮೀಜಿ ಎಚ್ಚರಿಕೆ. ಮಾತ್ರವಲ್ಲ, “ದೇವೇಗೌಡರ ಕುಟುಂಬದ ಮೇಲೆ ಮಠದ ಆಶೀರ್ವಾದ ಯಾವತ್ತೂ ಇದೆ,” ಎಂದಿದ್ದಾರೆ.

ಒಂದೇ ಬತ್ತಳಿಕೆಯಿಂದ ಹೊರಟಂತಿರುವ ಈ ಎರಡು ಮಾತಿನ ಬಾಣಗಳ ಹಿಂದಿರುವ ಧ್ವನಿ-ಸಾಮ್ಯವನ್ನು ಗಮನಿಸಿ. ಜೆಡಿಎಸ್ ಅಗ್ರನಾಯಕ ದೇವೇಗೌಡರ ಪ್ರಕಾರ, ದೈವಬಲ ಅಚಲವಾಗಿರುವ ಕುಮಾರಸ್ವಾಮಿ ಸರ್ಕಾರವನ್ನು ಅಲುಗಾಡಿಸಲು, ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ಸದ್ಯ, ಗೌಡರ ಕುಟುಂಬದ ರಾಜಕೀಯ ಶಕ್ತಿಯನ್ನು ಪೊರೆಯುತ್ತಿರುವ ‘ಪರಮದೈವ’ ಚುಂಚನಗಿರಿ ಮಠ ಮತ್ತು ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಎಂದುಕೊಂಡರೆ, ಆ ‘ದೈವ’ ಕೂಡ ಕುಮಾರಸ್ವಾಮಿ ಸರ್ಕಾರದ ರಕ್ಷಣೆಗೆ ಟೊಂಕ ಕಟ್ಟಿರುವುದು ಸ್ವಾಮೀಜಿ ಮಾತಿನಲ್ಲಿ ಎದ್ದುಕಾಣುತ್ತದೆ.

ನಿಜ, ದೇವೇಗೌಡರು ವ್ಯಕ್ತಿಯಾಗಿ ತಮ್ಮದೇ ನಂಬಿಕೆ ಹೊಂದಲು ಮತ್ತು ಮಂತ್ರ, ತಂತ್ರಗಳ ಮೊರೆಹೋಗಲು ಸ್ವತಂತ್ರರು. ಆದರೆ, ದೇಶದ ಪ್ರಧಾನಿ ಹುದ್ದೆಯಂಥ ಪ್ರಜಾತಂತ್ರದ ಘನಸ್ಥಾನವನ್ನು ಅಲಂಕರಿಸಿದ್ದ ಮುತ್ಸದ್ಧಿ ರಾಜಕಾರಣಿಯಾಗಿ ಅವರು ಪ್ರಜಾತಂತ್ರದ ಸರ್ಕಾರವೊಂದನ್ನು, “ಇದು ದೈವಬಲದ ಸರ್ಕಾರ,’’ ಎಂದು ಹೇಳುವುದು, ದೈವಶಕ್ತಿಯ ಕೃಪೆ ಇರುವವರೆಗೆ ಈ ಸರ್ಕಾರವನ್ನು ಅಲುಗಾಡಿಸಲು ಆಗದೆನ್ನುವುದು ಅತಾರ್ಕಿಕ. ಜನತಂತ್ರ ವ್ಯವಸ್ಥೆಯನ್ನು ಅವಮಾನಿಸುವ ಮೂರ್ಖತನದ ಮಾತೆಂದರೂ ಆದೀತು. ಹಾಗೆ ನೋಡಿದರೆ, ಪಕ್ಷದ ಸಂಖ್ಯಾಬಲ ನಗಣ್ಯ ಎನ್ನುವಷ್ಟು ಕಡಿಮೆ ಇದ್ದರೂ ಎರಡೂವರೆ ದಶಕದ ಹಿಂದೆ ಗೌಡರು ಪ್ರಧಾನಿ ಪಟ್ಟ ಅಲಂಕರಿಸಿದ್ದು ದೇಶದ ರಾಜಕೀಯ ವಲಯವನ್ನು ಅಚ್ಚರಿಗೆ ಕೆಡವಿತ್ತು. ಈ ಬಗ್ಗೆ ಅವರನ್ನು ಕೇಳಿದರೆ ಅದು ಕೂಡ ‘ದೈವಬಲ’ದ ಚಮತ್ಕಾರವೇ ಎಂದಾರು. ಆದರೆ, ಮಿತ್ರಪಕ್ಷಗಳ ‘ಸಮ್ಮಿಶ್ರ’ ಸಂಖ್ಯಾಬಲ ಇಲ್ಲದೆ ಅವರು ಆ ಉನ್ನತ ಸ್ಥಾನವನ್ನು ಏರುವುದು ಸಾಧ್ಯವಿರಲಿಲ್ಲ. ಮುಂದಿನ ೧೧ ತಿಂಗಳಲ್ಲಿ ಸಂಖ್ಯಾಬಲ ಕುಸಿದಾಗ ಯಾವ ದೈವಬಲವೂ ಅವರನ್ನು ಪ್ರಧಾನಿ ಸ್ಥಾನದಲ್ಲಿ ಮುಂದುವರಿಸಿರಲಿಲ್ಲ.

ಅಂತೆಯೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ‘ಒಳ ಒಪ್ಪಂದ’ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಅದೇ ಕಾಂಗ್ರೆಸ್ ಪಕ್ಷದ ಮೈತ್ರಿ ಪ್ರಸ್ತಾಪಕ್ಕೆ ಮಣೆ ಹಾಕಿ ಬಿಜೆಪಿಯನ್ನು ಅಧಿಕಾರದ ಹೊಸ್ತಿಲಲ್ಲಿ ಎಡವುವಂತೆ ಮಾಡಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಹೆಣೆದ ಮಹಾನ್ ರಾಜಕೀಯ‌ ತಂತ್ರಗಾರಿಕೆಯಾಗಿತ್ತು ಎನ್ನುವುದು ನಿಸ್ಸಂಶಯ. ಹಾಗಿದ್ದೂ, ಕಾಂಗ್ರೆಸ್‌ನ ೭೮ ‘ಸಂಖ್ಯಾಬಲ’ದ ಬೆಂಬಲ ಇಲ್ಲದೆ ಯಾವ ದೈವಬಲದಿಂದಲೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸಾಧ್ಯವಿರುತ್ತಿರಲಿಲ್ಲ ಎನ್ನುವುದು ಗೌಡರು ಅರಿಯದ ಸಂಗತಿಯೇನಲ್ಲ. ಚತುರ ರಾಜಕಾರಣಿಯಾದ ಗೌಡರು, ಪಕ್ಷದ ‘ಅಲ್ಪಶಕ್ತಿ’ಯನ್ನು ಅಧಿಕಾರದ ಶಕ್ತಿಪೀಠಕ್ಕೆ ಏರಿಸಲು ಜಾತಿ, ಧರ್ಮ, ದೈವಬಲ ಸಹಿತ ಎಲ್ಲ ಬಗೆಯ ದಾಳಗಳನ್ನು ಆಯಾ ಸಮಯಕ್ಕೆ ತಕ್ಕಂತೆ ಉರುಳಿಸುತ್ತಲೇ ಇರುವವರು.

ಆದರೆ, ಒಕ್ಕಲಿಗ ಸಮುದಾಯದ ಬಹುಪಾಲು ಜನರು ಮತ್ತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಆಧರಿಸುವ ಆದಿಚುಂಚನಗಿರಿ ಮಠದ ಪೀಠಾಧಿಪತಿಯಾಗಿ ನಿರ್ಮಲಾನಂದನಾಥರು ರಾಜ್ಯ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಹಿಸುತ್ತಿರುವ ಪಾತ್ರ, ನೀಡುತ್ತಿರುವ ‘ದೈವದ್ರೋಹ’ ಇತ್ಯಾದಿ ಹೇಳಿಕೆಗಳು ಚರ್ಚೆಗೆ, ಟೀಕೆ-ಟಿಪ್ಪಣಿಗೆ ಗ್ರಾಸ ಒದಗಿಸಿವೆ. ಮಾಜಿ ಸಚಿವ ಎ ಮಂಜು ಸಹಿತ ಕೆಲವು ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರು ಸ್ವಾಮೀಜಿಯ ನಡೆ, ನುಡಿಯನ್ನು ವಿಮರ್ಶೆಗೆ ಒಡ್ಡಲಾರಂಭಿಸಿದ್ದಾರೆ. “ನಾವು ಮಠದ ಭಕ್ತರಲ್ಲವೇ? ದೇವೇಗೌಡರ ಕುಟುಂಬದ ಪರ ಮಾತ್ರ ಯಾಕೆ ವಕಾಲತ್ತು ವಹಿಸುತ್ತೀರಿ?’’ ಎನ್ನುವಂಥ ಪ್ರಶ್ನೆಗಳು ಕೇಳಿಬರುತ್ತಿವೆ. ಮಠದ ಹಿಂದಿನ ಪೀಠಾಧಿಪತಿ ಬಾಲಗಂಗಾಧರನಾಥರ ಜೊತೆ ಮುನಿಸಿಕೊಂಡಿದ್ದ ದೇವೇಗೌಡರು, ಆದಿಚುಂಚನಗಿರಿ ಪೀಠಕ್ಕೆ ಪರ್ಯಾಯವಾಗಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಎನ್ನುವ ಪರ್ಯಾಯ ಪೀಠವನ್ನು ಕಟ್ಟಿ, ಬೆಳೆಸಲು ಮುಂದಾಗಿದ್ದನ್ನು ಕೆಲವರು ನೆನಪಿಗೆ ತರುತ್ತಿದ್ದು, ಇದು ‘ದೈವದ್ರೋಹ’ ಆಗಿರಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.

ನಿರ್ಮಲಾನಂದನಾಥರು ಎಂಜಿನಿಯರಿಂಗ್‌ ಪದವೀಧರ. ಅಧ್ಯಾತ್ಮ, ಧರ್ಮದ ಕುರಿತ ತಿಳಿವಳಿಕೆಯಷ್ಟೇ ಆಧುನಿಕ ಶಿಕ್ಷಣವನ್ನೂ ಪಡೆದವರು. “ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ರಚನೆಗೆ ಸಂಖ್ಯಾಬಲವಷ್ಟೆ ಮುಖ್ಯ. ಜನರಿಂದ ಆಯ್ಕೆಯಾದ ಶಾಸಕರು ಯಾರನ್ನು ತಮ್ಮ ನಾಯಕ ಎಂದು ಬಹುಮತದಿಂದ ಆಯ್ಕೆ ಮಾಡಿಕೊಳ್ಳುತ್ತಾರೋ ಅವರು ಮುಖ್ಯಮಂತ್ರಿಯಾಗುತ್ತಾರೆ,’’ ಎನ್ನುವುದು ಅವರ ಜ್ಞಾನಪರಿಧಿಯಿಂದ ಆಚೆಗಿರುವ ವಿಷಯವೇನಲ್ಲ. ಈ ಹಂತದಲ್ಲಿ ಹಣಬಲ, ತೋಳ್ಬಲ, ಖರೀದಿ, ಬಿಕರಿಯಂಥ ರಾಜಕೀಯ ಅಪಸವ್ಯಗಳು ಘಟಿಸುವುದು ಮತ್ತು ಇಂಥೆಲ್ಲವನ್ನು ಬಳಸಿ ವಾಮಮಾರ್ಗದಲ್ಲಿ ಅಧಿಕಾರ ಕಬಳಸುವ ಸಾಧ್ಯತೆ ಇರುವುದು ಮತ್ತು ಇಂಥದನ್ನೆಲ್ಲ ಮೀರಿ ಯಾವ ದೈವಬಲವೂ ಸದನದಲ್ಲಿ ‘ಸಂಖ್ಯಾಬಲ’ ನಿರೂಪಿಸದು ಎನ್ನುವುದು ರಾಜಕೀಯ ಆಸಕ್ತಿ ಇರುವ ಎಲ್ಲರೂ ಅರಿತಿರುವ ಕನಿಷ್ಠ ಜ್ಞಾನ. ದಶಕದ ಹಿಂದೆ ಈ ಬಗೆಯ ‘ಭಿನ್ನ ದಾರಿ’ ಮೂಲಕವೇ ಅಂದಿನ ಸರ್ಕಾರವನ್ನು ಉರುಳಿಸಿ ಕುಮಾರಸ್ವಾಮಿ ಸಿಎಂ ಆಗಿದ್ದು ಮತ್ತು ೨೦ ತಿಂಗಳ ಬಳಿಕ ಅಸ್ತಿತ್ವಕ್ಕೆ ಬರಬೇಕಿದ್ದ ಯಡಿಯೂರಪ್ಪ ಸರ್ಕಾರಕ್ಕೆ ತೊಡರುಗಾಲು ಹಾಕಿ ವಚನಭ್ರಷ್ಟತೆಯ ಆರೋಪ ಹೊತ್ತಿದ್ದರೆನ್ನುವುದು ನಿರ್ಮಲಾನಂದನಾಥರಿಗೂ ಗೊತ್ತಿರುವ ಸಂಗತಿ. ಈ ಬಾರಿ ಕೂಡ, ಅತಂತ್ರ ವಿಧಾನಸಭೆ ಎದುರಾದಾಗ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್‌ ಮಧ್ಯದ ರಾಜಕೀಯ ವೈರವನ್ನು ಶಮನಗೊಳಿಸಿ, ಎಚ್‌ಡಿಕೆ ಮುಖ್ಯಮಂತ್ರಿ ಪದವಿಗೆ ಏರುವ ಮಾರ್ಗವನ್ನು ‘ಸುಸೂತ್ರ’ಗೊಳಿಸಿದ್ದರಲ್ಲಿ ಅವರ ಪಾತ್ರ ಇತ್ತೆನ್ನುವ ಮಾತೂ ಕೇಳಿಬಂದಿತ್ತು.

ಇದನ್ನೂ ಓದಿ : ಕರಾವಳಿಗೆ ಬಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿರಿಸಿ ಹೋದರೇ ಕುಮಾರಸ್ವಾಮಿ?

ಇಷ್ಟೆಲ್ಲ ಇದ್ದಾಗ್ಯೂ, ‘ದೈವಬಲ’ ಮತ್ತು ‘ದೈವದ್ರೋಹ’ದಂಥ ಕಪಟ ತಂತ್ರಗಳನ್ನು ಯಾಕೆ ಬಿತ್ತರಿಸಿ ಭಯ ಸೃಷ್ಟಿಸಲಾಗುತ್ತಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈಗಿರುವ ಮಾಹಿತಿ ಪ್ರಕಾರ, ಎಚ್ಡಿಕೆ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಸಂಚು ಮತ್ತು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಆ ಪಕ್ಷದಲ್ಲೂ ಹಲವು ಪ್ರಭಾವಿ ಒಕ್ಕಲಿಗ ಮುಖಂಡರಿದ್ದು, ಅವರಲ್ಲಿ ‘ದೈವದ್ರೋಹ’ದ ಭಯ ಹುಟ್ಟಿಸಿದರೆ, ಸರ್ಕಾರ ಉರುಳಿಸುವ ಕಾರ್ಯಾಚರಣೆಯಿಂದ ಅವರು ದೂರ ಉಳಿಯಬಹುದು ಎನ್ನುವುದು ಒಂದು ತಂತ್ರ. ರಾಜಕೀಯವಾಗಿ ದೇವೇಗೌಡ, ಕುಮಾರಸ್ವಾಮಿ ಮುಂತಾದವರನ್ನು ಎದುರಿಸಬಹುದು; ಆದರೆ, ‘ಶಕ್ತಿಶಾಲಿ’ಯಾದ ಮಠ ಮತ್ತು ಮಠಾಧಿಪತಿಯನ್ನು ಎದುರುಹಾಕಿಕೊಂಡು, ‘ದೈವದ್ರೋಹಿ’ಗಳೆನಿಸಿಕೊಳ್ಳಲು ಬಿಜೆಪಿಯ ಒಕ್ಕಲಿಗ ಮುಖಂಡರಷ್ಟೇ ಅಲ್ಲ, ಆ ಪಕ್ಷ ಕೂಡ ಸಿದ್ಧವಿದ್ದಂತಿಲ್ಲ. ಅಲ್ಲದೆ, ಕಳೆದ ಚುನಾವಣೆಯಲ್ಲಿ ‘ಒಕ್ಕಲಿಗ ವಿರೋಧಿ’ ಪಟ್ಟ ಕಟ್ಟುವ ಮೂಲಕವೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಿಮ್ಮೆಟ್ಟಿಸುವಲ್ಲಿ ಗೌಡರ ಪಡೆ ಯಶಸ್ವಿಯಾಗಿತ್ತು. ಈಗ ಸರ್ಕಾರದ ವಿರುದ್ಧ ಬಂಡೆದ್ದಿದ್ದಾರೆ ಎನ್ನುವವರ ಪಟ್ಟಿಯಲ್ಲಿ ಸಿದ್ದು ಬೆಂಬಲಿಗರೇ ಹೆಚ್ಚಿದ್ದಾರೆ. ಗೌಡರ ‘ದೈವಾಸ್ತ್ರ’ ಪ್ರಯೋಗ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರನ್ನು ಗುರಿ ಮಾಡಿಕೊಂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಎಲ್ಲ ಚಿತಾವಣೆಗಳನ್ನು ನಿಭಾಯಿಸಿಕೊಂಡು ಕುಮಾರಸ್ವಾಮಿ ಸರ್ಕಾರ ಉಳಿದಲ್ಲಿ ಅದಕ್ಕೆ ಆರೋಪಿಸಿರುವ ‘ದೈವಬಲ’ ಇನ್ನಷ್ಟು ಗಟ್ಟಿಯಾಗುತ್ತದೆ. ಒಂದೊಮ್ಮೆ ಉರುಳಿಬಿದ್ದರೆ ಕಾರಣವಾದವರೆಲ್ಲ ‘ದೈವದ್ರೋಹಿ’ ಗಳಾಗುತ್ತಾರೆ. ‘ದೈವ’ ಯಾರ ಬಾಬ್ತಿಗೆ ಒಲಿಯುತ್ತದೋ ಬೇರೆ ಮಾತು. ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುವ ಗೌಡರ ನಿಸ್ಸೀಮ ರಾಜಕೀಯ ಐಡಿಯಾಗಳ ಸಾಲಿಗೆ ಈ ‘ದೈವ-ಲೀಲೆ’ ನಿಶ್ಚಿತವಾಗಿ ಸೇರಲಿದೆ. ಮಾತ್ರವಲ್ಲ, ಗೌಡರ ಮಾತು ನಾಳೆಗೆ ಇನ್ನೊಂದು ಅರ್ಥ ಅಥವಾ ಅರ್ಥಾಂತರವನ್ನು ಪಡೆಯಬಹುದು. ಆದರೆ, ಪೀಠಾಧಿಪತಿ ನಿರ್ಮಲಾನಂದರ ಹೇಳಿಕೆ ವಿಷಯದಲ್ಲಿ ಹಾಗಾಗದು. ಅಧಿಕಾರದಲ್ಲಿರುವ ತನ್ನವರನ್ನು ಪೊರೆದುಕೊಳ್ಳುವ ಭರದಲ್ಲಿ ಮಠ, ಧರ್ಮದ ಚೌಕಟ್ಟು ಮೀರಿ ‘ದೈವದ್ರೋಹ’ದ ಭಯ ಹುಟ್ಟಿಸುವ ಮಟ್ಟಕ್ಕೆ ಜಾರಿದ ಅವರ ಒಲವು-ನಿಲುವು, ಆ ಸಮುದಾಯದ ಕೆಲವು ರಾಜಕಾರಣಿಗಳ ಕಟಕಿಗೆ ತುತ್ತಾಗುವ ಸಾಧ್ಯತೆ ಇದೆ. “ದೈವ ಏಕಪಕ್ಷೀಯವಾಗಿ ಮತ್ತು ಒಂದೇ ಕುಟುಂಬದ ಹಿತಕ್ಕೆ ಪೂರಕವಾಗಿ ಹೇಗೆ ಇದ್ದೀತು?’’ ಎಂದು ಯಾರೇ ಪ್ರಶ್ನಿಸಿದರೂ ತಕ್ಕ ಉತ್ತರ ನೀಡಬೇಕಾದ ಸವಾಲನ್ನು ಅವರು ಎದುರಿಸಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More