ಪರಿಕ್ಕರ್ ಅನಾರೋಗ್ಯ; ಮಹತ್ತರ ರಾಜಕೀಯ ಬೆಳವಣಿಗಳಿಗೆ ಸಾಕ್ಷಿ ಆಗುತ್ತಿದೆ ಗೋವಾ

ಸಿಎಂ ಮನೋಹರ್‌ ಪರ್ರಿಕರ್‌ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾದ ನಂತರ ಗೋವಾ ರಾಜಕಾರಣ ಮಹತ್ತರ ತಿರುವುಗಳಿಗೆ ಸಾಕ್ಷಿಯಾಗುತ್ತಿದೆ. ಗೋವಾದಲ್ಲಿ ನೂತನ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ರಾಜ್ಯಪಾಲರಿಗೆ ಮನವಿ ಮಾಡಿದೆ 

ಗೋವಾದಲ್ಲಿ ನೂತನ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ರಾಜ್ಯಪಾಲ ಮೃದುಲಾ ಸಿನ್ಹಾ ಅವರಿಗೆ ಕಾಂಗ್ರೆಸ್‌ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕರಾವಳಿ ರಾಜ್ಯದಲ್ಲಿ ರಾಜಕೀಯ ಬೆಳವಣಿಗಳು ಗರಿಗೆದರಿವೆ. ಕಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ಸಿಎಂ ಮನೋಹರ್‌ ಪರಿಕ್ಕರ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾದ ನಂತರ ಗೋವಾ ರಾಜಕಾರಣ ಮಹತ್ತರ ತಿರುವುಗಳಿಗೆ ಸಾಕ್ಷಿಯಾಗುತ್ತಿದೆ.

ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಪರಿಕ್ಕರ್ ಅವರು ಫೆಬ್ರವರಿಯಲ್ಲಿ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು, ಪ್ಯಾಂಕ್ರಿಯಾಟಿಕ್‌ ಕಾನ್ಸರ್‌ನಿಂದ ಬಳಲುತ್ತಿರುವ ಅವರು‌ ಮೂರನೇ ಬಾರಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಗೋವಾ ಸಿಎಂ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ ಪೈಪೋಟಿ ನಡೆಯುತ್ತಿದ್ದು, ಮೈತ್ರಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿದೆ. ಅಷ್ಟೇ ಅಲ್ಲದೆ, ಸಿಎಂ ಸ್ಥಾನದ ವಿಚಾರವಾಗಿ ಬಿಜೆಪಿಯಲ್ಲಿಯೇ ಭಿನ್ನಮತ ಭುಗಿಲೇಳುವ ಸಾಧ್ಯತೆ ಹೆಚ್ಚಿದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ.

ಗೋವಾ ರಾಜಕಾರಣವನ್ನು ಪ್ರತಿ‍ಷ್ಠೆಯಾಗಿ ತೆಗೆದುಕೊಂಡಿರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌, ತಮ್ಮದೇ ಆದ ವಾದಗಳನ್ನು ಮುಂದಿಡುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಗೋವಾ ಬೆಳವಣಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕರಾವಳಿ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ತುರ್ತಾಗಿ ಅವಲೋಕಿಸಿ ವರದಿ ನೀಡುವಂತೆ ಹಿರಿಯ ನಾಯಕರಾದ ರಾಮ್‌ ಲಾಲ್, ಬಿ ಎಲ್‌ ಸಂತೋಷ್‌ ಮತ್ತು ವಿನಯ್‌ ಪುರಾಣಿಕ್‌ ಅವರಿಗೆ ಅಮಿತ್‌ ಶಾ ಸೂಚಿಸಿದ್ದಾರೆ.

ಈ ಬೆಳವಣಿಗಳ ನಡುವೆಯೇ ಗೋವಾದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ತಮ್ಮ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಬೇಕೆಂಬ ಮನವಿಯನ್ನು ಕಾಂಗ್ರೆಸ್‌ ರಾಜ್ಯಪಾಲರ ಮುಂದಿಟ್ಟಿದೆ. ಈಗ ಗೋವಾದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಅದರ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

ಗೋವಾ ವಿಧಾನಸಭೆಯಲ್ಲಿ ಒಟ್ಟು 40 ಸ್ಥಾನಗಳಿದ್ದು, ಕಾಂಗ್ರೆಸ್‌ ಪಕ್ಷವು 16 ಸ್ಥಾನ ಹೊಂದಿದೆ. ಬಿಜೆಪಿಗೆ 14 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಮೈತ್ರಿಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಂತಕ್‌ ಪಕ್ಷ ಮತ್ತು ಗೋವಾ ಪಾರ್ವರ್ಡ್‌ ಪಕ್ಷಗಳಿಗೆ ತಲಾ ಮೂರು ಸ್ಥಾನ ದೊರೆತಿದೆ. ಇನ್ನು ಮೂರರಲ್ಲಿ ಪಕ್ಷೇತರರು ಆಯ್ಕೆಯಾಗಿದ್ದರೆ, ಎನ್‌ಸಿಪಿ ಒಂದು ಸ್ಥಾನದಲ್ಲಿ ಜಯ ಸಾಧಿಸಿದೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಆಪ್ತರೆನ್ನಲಾದ ಮಹಾರಾಷ್ಟ್ರ ಗೋಮಂತಕ್‌ ಪಕ್ಷದ ಮುಖಂಡ ರಾಮಕೃಷ್ಣ ಧವಳಿಕರ್‌ ಅವರನ್ನು ಮೈತ್ರಿಕೂಟ ಸರ್ಕಾರದಲ್ಲಿ ಕಡೆಗಣಿಸಲಾಗಿದೆ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿದ್ದವು. ಪರಿಕ್ಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ನಿತಿನ್‌ ಗಡ್ಕರಿಯವರು ಹಲವು ಭಾರಿ ಗೋವಾ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ರಾಮಕೃಷ್ಣ ಧವಳಿಕರ್‌ ಅವರು ಕಾಣಿಸಿಕೊಂಡಿರಲಿಲ್ಲ. ಧವಳಿಕರ್‌ ಈ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರ ಬೇಡಿಕೆಗಳಿಗೆ ಮೈತ್ರಿಪಕ್ಷಗಳಲ್ಲಿ ಮಾನ್ಯತೆ ದೊರೆತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಧವಳಿಕರ್‌, ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿರುವ ಅತ್ಯಂತ ಹಿರಿಯ ಮುಖಂಡನಿಗೆ ಸಿಎಂ ಸ್ಥಾನ ನೀಡಬೇಕೆಂದು ಹೇಳುತ್ತಿದ್ದಾರೆ. ಆ ಮೂಲಕ, ಮೈತ್ರಿಕೂಟದಲ್ಲಿ ತಾವೇ ಹಿರಿಯ ಮುಖಂಡರಾಗಿದ್ದು, ತಮಗೆ ಸಿಎಂ ಸ್ಥಾನ ನೀಡುವಂತೆ ಪರೋಕ್ಷವಾಗಿ ಬಿಜೆಪಿಗೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ : ಗೋವಾ ಸಿಎಂ ಪರಿಕ್ಕರ್‌ಗೆ ಹಿಂದಿನ ಪತ್ರಗಳನ್ನು ನೆನಪಿಸಿದ ಸಿಎಂ ಸಿದ್ದರಾಮಯ್ಯ

ಒಂದು ವೇಳೆ, ತಮ್ಮ ಬೇಡಿಕೆಗೆ ಬಿಜೆಪಿ ಹೈಕಮಾಂಡ್‌ ಒಪ್ಪದೆ ಇದ್ದರೆ ಧವಳಿಕರ್‌ ಅವರು ಕಾಂಗ್ರೆಸ್‌ ಜೊತೆ ಕೈಜೋಡಿಸುವ ಸಾಧ್ಯತೆಗಳು ಹೆಚ್ಚಿವೆ. 40 ವಿಧಾನಸಭಾ ಸ್ಥಾನ ಹೊಂದಿರುವ ಗೋವಾದಲ್ಲಿ ಸರ್ಕಾರ ರಚಿಸಲು ಕನಿಷ್ಠ 20 ಸ್ಥಾನ ಬೇಕು. 3 ಸ್ಥಾನ ಹೊಂದಿರುವ ಎಮ್‌ಜಿಪಿ, ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟದ ಜೊತೆ ಕೈಜೋಡಿಸಿದರೆ, ಗೋವಾದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಉಳಿಯುವುದು ಕಷ್ಟಸಾಧ್ಯ.

2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸ್ಪಷ್ಟತೆ ಇರದಿದ್ದ ಕಾರಣ ಕಾಂಗ್ರೆಸ್ ಪಕ್ಷವು‌ ಅಧಿಕಾರ ಹಿಡಿಯಲು ವಿಫಲವಾಗಿತ್ತು. ಪ್ರಸ್ತುತ ಸನ್ನಿವೇಶದಲ್ಲಿಯೂ ಕಾಂಗ್ರೆಸ್‌ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಸ್ಪಷ್ಟಪಡಿಸದೆ, ಕೇವಲ ಬಹುಮತ ಸಾಬೀತುಪಡಿಸಲು ಅವಕಾಶ ಕಲ್ಪಿಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕಾಂಗ್ರೆಸ್‌ ಪಕ್ಷವು ಈ ಬಾರಿಯೂ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸ್ಪಷ್ಟ ನಿಲುವು ತಳೆಯದೆ ಇರುವುದರಿಂದ ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆಯಾಗಲಿದೆ ಎಂಬ ಮಾತುಗಳೂ ಕೇಳಿಬಂದಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More