‘ತ್ರಿಕೂಟ’ ಒಡೆಯುವುದು ಜಾರಕಿಹೊಳಿ ಸಹೋದರರ ಆಂತರ್ಯವೇ?

ಆಡಳಿತಾತ್ಮಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಜಾರಕಿಹೊಳಿ ಸಹೋದರರಿಗೆ ಎಚ್‌ಡಿಕೆ ಮಾತು ಕೊಟ್ಟಿದ್ದಾರೆ. ಇದಕ್ಕೆ ಹೂಂಗುಟ್ಟಿರುವ ಅವರು, ಸರ್ಕಾರದಲ್ಲಿ ಸೃಷ್ಟಿಯಾಗಿರೋ ತ್ರಿಕೂಟ ಭೇದಿಸಲು ಪಕ್ಷ ಮಟ್ಟದಲ್ಲಿ ಯತ್ನ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆ ಕೂಟ ಯಾವುದು?

ಪಕ್ಷ ಮತ್ತು ಸರ್ಕಾರದಲ್ಲಿ ಪ್ರಭಾವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ವಾರಗಳಿಂದ ಹಲವು ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿರುವ ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಹತ್ತಿಕ್ಕುವ ಕೆಲಸವನ್ನು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮಂಗಳವಾರ ಮಾಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಾರಕಿಹೊಳಿ ಸಹೋದರರ ಜೊತೆ ಚರ್ಚಿಸಿದ ಮಾರನೇ ದಿನ ಕುಮಾರಸ್ವಾಮಿ ಅವರು ಖಾಸಗಿ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದ್ದು, ಸರ್ಕಾರದ ವತಿಯಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ, ರಾಜಕೀಯ ಅಸ್ಥಿರತೆ ಕೊನೆಗಾಣಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ತಮ್ಮ ಅನುಮತಿಯಿಲ್ಲದೆ ಬೆಳಗಾವಿಗೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಜಾರಕಿಹೊಳಿ ಸಹೋದರರು ಪಕ್ಷ ಮತ್ತು ಸರ್ಕಾರವನ್ನು ಮಂಡಿಯೂರುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಇದರಿಂದ ಉದ್ಭವವಾದ ರಾಜಕೀಯ ಸನ್ನಿವೇಶಗಳು ಜಾರಕಿಹೊಳಿ ಸಹೋದರರಿಗೆ ವರದಾನವಾಗಿ ಪರಿಣಮಿಸಿವೆ. ಬಿಜೆಪಿ ರಂಗಪ್ರವೇಶ ಹಾಗೂ ಮಾಧ್ಯಮಗಳ ಸುದ್ದಿಯ ದಾಹವು ಸರ್ಕಾರದ ವರ್ಚಸ್ಸಿಗೆ ಉಂಟುಮಾಡುತ್ತಿರುವ ಹಾನಿ ತಡೆಯಲು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸಹೋದರ ಸತೀಶ ಜಾರಕಿಹೊಳಿ ಹಾಗೂ ಶಾಸಕ ಟಿ ನಾಗೇಂದ್ರ ಅವರ ಜೊತೆ ಸುಮಾರು ಒಂದು ತಾಸು ಚರ್ಚಿಸಿದ ಕುಮಾರಸ್ವಾಮಿ ಅವರು, ಬೆಳಗಾವಿಯಲ್ಲಿ ಆಡಳಿತಾತ್ಮಕವಾಗಿ ಉದ್ಭವವಾಗಿರುವ ಸಮಸ್ಯೆಗಳು ಹಾಗೂ ಅವರ ನಿಷ್ಠರಿಗೆ ಎಲ್ಲ ರೀತಿಯ ಸಹಕಾರ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ. ಇದರಿಂದ ಸಂತುಷ್ಟರಾಗಿರುವಂತೆ ಕಂಡುಬಂದಿರುವ ಜಾರಕಿಹೊಳಿ ಸಹೋದರರು, ಪಕ್ಷದಲ್ಲಿ ತಮ್ಮ ಪ್ರಭಾವ ಖಾತ್ರಿಪಡಿಸಿಕೊಳ್ಳುವ ಕೆಲಸ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸಂಪುಟ ವಿಸ್ತರಣೆ, ನಿಗಮ ಮತ್ತು ಮಂಡಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರ ನೇಮಕ ಹಾಗೂ ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತು ಚರ್ಚಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂ ರಾವ್‌ ಅವರು ಬುಧವಾರ ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲಿದ್ದಾರೆ. ಆನಂತರ ಜಾರಕಿಹೊಳಿ ಸಹೋದರರ ಜೊತೆಯೂ ಕಾಂಗ್ರೆಸ್‌ ವರಿಷ್ಠರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಬೆಳಗಾವಿ ಭಾಗದಲ್ಲಿ ಪಕ್ಷದ ಮುಖವಾಣಿಗಳಾಗಿ ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರನ್ನು ಕಾಂಗ್ರೆಸ್‌ ಕಳೆದುಕೊಳ್ಳಲು ಸಿದ್ಧವಿಲ್ಲ. ಅದೇ ರೀತಿ, ಜಾರಕಿಹೊಳಿ ಸಹೋದರರಿಗೂ ಬಿಜೆಪಿ ಸೇರ್ಪಡೆಯಾಗಿ ಹಿಂದಿನ ಪ್ರಾಬಲ್ಯ ಉಳಿಸಿಕೊಳ್ಳುವುದು ಕಷ್ಟ. ಇದನ್ನು ಅರಿತು ಭಿನ್ನಮತ ಶಮನಗೊಳಿಸಲು ಕಾಂಗ್ರೆಸ್‌ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ರಾಜಕೀಯ ಮೇಲುಗೈಗೆ ಯತ್ನಿಸುತ್ತಿದ್ದಾರೆಯೇ ಜಾರಕಿಹೊಳಿ ಸಹೋದರರು?

ಇದೆಲ್ಲದರ ಮಧ್ಯೆ, ಪಕ್ಷ ಮತ್ತು ಸರ್ಕಾರದ ವಿರುದ್ಧ ಜಾರಕಿಹೊಳಿ ಸಹೋದರರು ಸಿಡಿದೇಳಲು ಮತ್ತೊಂದು ಪ್ರಮುಖ ಕಾರಣವಿದೆ ಎಂದು ಹೇಳಲಾಗುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ, ಪರಮೇಶ್ವರ್‌ ಹಾಗೂ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಪ್ರಬಲ ಗುಂಪು ರಚಿಸಿದ್ದು, ಉಳಿದವರ ಮಾತಿಗೆ ಪ್ರಾಮುಖ್ಯತೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಇದು ನಿರ್ದಿಷ್ಟವಾಗಿ ಕಾಂಗ್ರೆಸ್‌ ಪಕ್ಷದೊಳಗೆ ಅಧಿಕಾರದ ಸಮತೋಲನವನ್ನು ಕದಡಿದೆ. ಅದರಲ್ಲಿಯೂ, ಸಿದ್ದರಾಮಯ್ಯನವರ ಜೊತೆ ಗುರುತಿಸಿಕೊಂಡಿದ್ದ ಶಾಸಕರು, ಮುಖಂಡರಿಗೆ ತೀವ್ರ ಹಿನ್ನಡೆಯನ್ನು ಉಂಟುಮಾಡಿದೆ. ಈ ತ್ರಿಕೂಟವನ್ನು ಭೇದಿಸುವ ಹಾಗೂ ಸರ್ಕಾರದಲ್ಲಿ ಮತ್ತೆ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುವ ಉದ್ದೇಶವನ್ನು ‘ಜಾರಕಿಹೊಳಿ ಬಂಡಾಯ’ದ ಮೂಲಕ ಈಡೇರಿಸಿಕೊಳ್ಳಲು ಸಿದ್ದರಾಮಯ್ಯನವರ ಆಪ್ತ ಬಳಗವೂ ಹವಣಿಸುತ್ತಿದೆ. ಡಿಸಿಎಂ ಹುದ್ದೆಯ ವಿಚಾರಗಳು ಪ್ರಸ್ತಾಪವಾಗುವುದರ ಹಿಂದೆಯೂ ಮೈತ್ರಿ ಸರ್ಕಾರದೊಳಗಿನ ‘ತ್ರಿಕೂಟ’ವನ್ನು ಮುರಿಯುವ ಲೆಕ್ಕಾಚಾರ ಪ್ರಮುಖವಾಗಿದೆ. ಆದರೆ, ಹೈಕಮಾಂಡ್‌ ಈ ಸನ್ನಿವೇಶವನ್ನು ಹೇಗೆ ನಿಭಾಯಿಸಲಿದೆ. ಪರಮೇಶ್ವರ್‌ ಹಾಗೂ ಡಿ ಕೆ ಶಿವಕುಮಾರ್‌ ಅವರಿಗೆ ಏನು ನಿರ್ದೇಶನ ನೀಡಲಿದೆ ಎನ್ನುವುದರ ಹಿನ್ನೆಲೆಯಲ್ಲಿ ಮುಂದಿನ ದಿನಗಳ ರಾಜಕೀಯ ವಿದ್ಯಮಾನಗಳು ನಿರ್ಧಾರವಾಗಲಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More